Sunday, July 15, 2012

ಆತಂಕವಾದದ ಕಾಲದಲ್ಲಿ ಐಶಾರಾಮದ ಆತಂಕಲೇಖಕರು ತಾಜ್ ನಿಂದ ತೆಗೆದ ಗೇಟ್ ವೇ ಚಿತ್ರ
"ಶ್ರೀಮಂತರ ಹಾಗೂ ಮೇಲ್ಮಧ್ಯಮವರ್ಗದವರ ಕೊಳಕು ಸಂಸ್ಕೃತಿಯ ದೊಡ್ಡ ಅಡ್ಡೆ ಲಿಯೋಪೋಲ್ಡ್ ಕೆಫೆ. ಬಿಯರಿನ ಅಮಲು ಇಳಿದು ಹೋದರೂ, ಐಶಾರಾಮಿ ಸಂಸ್ಕೃತಿಯ ಅಮಲು ಇಳಿಯುವಂತಿಲ್ಲ. ಸಿ. ಎಸ್. ಟಿ. ಯಿಂದ ಹೊರಡುವ ರೈಲು ಗಾಡಿಗಳಲ್ಲಿ ಮಲ್ಲಿಕಾ ಸಾರಾಭಾಯಿ, ಅಮೃತಾ ಪಟೇಲ್ ಹಾಗೂ ಎನ್.ಡಿ.ಡಿ.ಬಿಯ ಎಂಡಿ, ಟಿಕ್ಕು - ಯಾರೂ ಕಾಣಸಿಗುವುದಿಲ್ಲ. ಆ ಕರಾಳ ರಾತ್ರಿಯಂದು ರೈಲು ನಿಲ್ದಾಣದಲ್ಲಿದ್ದು ವಿವಿಧ ರೀತಿಯಲ್ಲಿ ತಪ್ಪಿಸಿ ಬಂದಿರುವ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಹೆಸರಿಲ್ಲದ ಜನರ ಮುಖದಲ್ಲಿ ನಗೆಯಿದೆಯೋ ಇಲ್ಲವೋ ಗೊತ್ತಿಲ್ಲ. ಲಿಯೋಪೋಲ್ಡ್ ಕೆಫೆಯ ಅಮಲಿನ ರುಚಿಯಂತೂ ಅವರಿಗೆ ತಿಳಿದಿಲ್ಲ...." [ಅನಾಮಿಕ ಅತಿಥಿ]


ಈ ಹಿಂದೆ ನಾನು ತಾಜ್ ಬಗ್ಗೆ ಬರೆದಾಗಲೂ ಇಂಥದೊಂದು ಪ್ರತಿಕ್ರಿಯೆ ಬರಬಹುದು ಅನ್ನುವ ಅನುಮಾನವಿತ್ತು. ಸಾಮಾಜಿಕ/ಆರ್ಥಿಕ ಸ್ಥರದಲ್ಲಿ ಭಿನ್ನತೆಯಿರುವ ಸಮಸಮಾಜದ ಉಟೋಪಿಯಾದಲ್ಲಿ ಬದುಕದಿರುವ ನಿಜಜಗತ್ತಿನಲ್ಲಿ ಈ ರೀತಿಯಾದಂತಹ ಪ್ರತಿಕ್ರಿಯೆ ಬರುವುದು ಸಹಜವೂ ಹೌದು, ಸಮಂಜಸವೂ ಹೌದು. ಈ ಮಾತು, ಅದರ ಹಿನ್ನೆಲೆಗೆ, ಪ್ರತಿಕ್ರಿಯೆಯಾಗಿ ನಾನು ಯಾವ ಸ್ಪಷ್ಟ ನಿಲುವನ್ನೂ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಆದರೂ ಆ ಬಗ್ಗೆ ನನ್ನ ಅನುಮಾನಗಳನ್ನೂ, ಕಾಳಜಿಯನ್ನೂ, ಸಮಜಾಯಿಷಿಯನ್ನೂ, ಅಸಹಾಯಕತೆಯನ್ನೂ, ಅಷಾಢಭೂತಿತನವನ್ನೂ ಪ್ರಾಮಾಣಿಕವಾಗಿ ಮಂಡಿಸಲು ಸಿದ್ಧನಾಗಿದ್ದೇನೆ.


"ಇಷ್ಟುದಿನ ಆತಂಕ ನಮ್ಮನ್ನು ತಟ್ಟಿದಾಗ ಅದು ಒಂದು ಅಂಕಿಸಂಖ್ಯೆ ಮಾತ್ರವಾಗಿತ್ತು. ಈ ಬಾರಿ ಆ ಅಷ್ಟೂ ಅಂಕಿಗಳಿಗೆ ಒಂದು ಮುಖವೂ ಇದೆ. ಹೀಗಾಗಿಯೇ ಅದು ನಮ್ಮನ್ನು ಇನ್ನೂ ಹೆಚ್ಚಾಗಿ ತಟ್ಟುತ್ತಿದೆ." ಈ ವಾಕ್ಯ ನನ್ನ ಬರಹದ ಅಂತಿಮ ವಾಕ್ಯವಾಗಿತ್ತು. ಅದರಿಂದಲೇ ಪ್ರಾರಂಭಿಸುತ್ತೇನೆ. ಆ ಕರಾಳ ರಾತ್ರೆಯಂದು ಸಿ.ಎಸ್.ಟಿ.ಯಿಂದ ತಪ್ಪಿಸಿ ಬಂದ ಜನರ ಕಥೆಗಳು ನಮಗೆ ಪ್ರಾಪ್ತವಾಗಿಲ್ಲ. ಅಷ್ಟೇ ಏಕೆ ಅದಕ್ಕೆ ಮುನ್ನ ನಡೆದ ಅನೇಕ ಘಟನಾವಳಿಗಳ ಮುಖಚಹರೆ ನಮಗೆ ಗೊತ್ತೇ?


- ಮುಂಬಯಿಯ ಲೋಕಲ್ ರೈಲಿನಲ್ಲಿ ಬಾಂಬುಗಳು ಸ್ಫೋಟಗೊಂಡಾಗ ಬಹುಶಃ ಅಸುನೀಗಿದವರ ಸಂಖ್ಯೆ ತಾಜ್-ಒಬೆರಾಯ್‍ಗಿಂತ ಹೆಚ್ಚಿತ್ತು 

- ಅಹಮದಾಬಾದಿನಲ್ಲಿ ಸರಣಿಬಾಂಬುಗಳು ಸ್ಫೋಟಗೊಂಡಾಗ ನಮಗೆ ಹೀಗೇ ಅಸುನೀಗಿದವರ/ತಪ್ಪಿಸಿಕೊಂಡವರ ಕಥೆಗಳು ಬರಲಿಲ್ಲ.


-ಹೈದರಾಬಾದಿನ ಗೋಕುಲ್ ಚಾಟ್ ಭಂಡಾರದಲ್ಲಿ/ಲುಂಬಿಣಿ ಪಾರ್ಕಿನಲ್ಲಿ/ ಮಕ್ಕಾ ಮಸೀದಿಯಲ್ಲಿ ನಮಗೆ ಸಿಕ್ಕದ್ದು ಅಂಕಿಸಂಖ್ಯೆಯೇ ಹೊರತು ಮುಖಗಳಲ್ಲ.ಹಾಗೆ ನೋಡಿದರೆ ತಾಜ್/ಒಬೇರಾಯ್ ಹೋಟೆಲಿನಲ್ಲಿ ಅಸುನೀಗಿದವರೆಲ್ಲರೂ ಐಷಾರಾಮಿ ಅಮಲಿನ ಶ್ರೀಮಂತರಲ್ಲ. ಅವರ ಹೆಸರುಗಳು ನಮಗೆ ತಿಳಿದಿಲ್ಲ. ಹಿಂದೂಸ್ತಾನ್ ಟೈಮ್ಸ್ ನಲ್ಲಿ ಈ ಹಲ್ಲೆಯಲ್ಲಿ ಅಸುನೀಗಿದವರ ಹೆಸರುಗಳ ಯಾದಿಯೊಂದಿಗೆ ಶ್ರದ್ಧಾಂಜಲಿಯೂ ಇತ್ತು. ಅಲ್ಲಿದ್ದ ಅನೇಕ ಹೆಸರುಗಳನ್ನು ನಾವು ಗುರುತಿಸಲು ಸಾಧ್ಯವಾಗಿಲ್ಲವಷ್ಟೇ ಅಲ್ಲ, ಅನೇಕರನ್ನು ‘ಅನಾಮಿಕ' ಎಂದೇ ಹೆಸರಿಸಲಾಗಿತ್ತು. ಅದೇ ರೀತಿಯಲ್ಲಿ ಅಮೃತಾ ಪಟೇಲ್ ಸಿ.ಎಸ್.ಟಿ.ಯಿಂದ ತಪ್ಪಿಸಿ ಬಂದಿದ್ದರೆ, ಅದು ಅವರ ಬಗ್ಗೆ ಈಗ ಉಂಟಾಗಿರುವ ಸುದ್ದಿಗಿಂತ ಹೆಚ್ಚಿನ ಸುದ್ದಿ ಮಾಡುತ್ತಿತ್ತು - ಆಕೆ ತಪ್ಪಿಸಿ ಬಂದ ಪರಿಯನ್ನು ವಿವರಿಸುವುದಲ್ಲದೇ, ಆಕೆ ಯಾಕೆ ಸಿ.ಎಸ್.ಟಿಯಲ್ಲಿದ್ದರು ಅನ್ನುವ ಕಥೆಯೂ ಸುದ್ದಿಗೆ ಗ್ರಾಸವಾಗುತ್ತಿತ್ತು.


ಇದು ಯಾಕೆ ಹೀಗೆ? ಒಂದು ಕ್ಷಣ ಆಲೋಚಿಸಿ ನೋಡೋಣ. ತಾಜ್, ಸಿ.ಎಸ್.ಟಿ, ಕಾಮಾ ಆಸ್ಪತ್ರೆ, ಒಬೆರಾಯ್ ಎಲ್ಲ ಜಾಗಗಳಲ್ಲೂ ಜನರನ್ನು ರಕ್ಷಿಸುವ, ಆತಂಕವಾದಿಗಳನ್ನು ಹಿಡಿಯುವ/ಕೊಲ್ಲುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದವರೆಷ್ಟು? ಅಸುನೀಗಿದವರೆಷ್ಟು? ಅವರುಗಳಲ್ಲಿ ನಮಗೆ ತಿಳಿದಿರುವ ಹೆಸರುಗಳು ಯಾವುವು? - ಕರ್ಕರೆ, ಕಾಮ್ಟೆ, ಸಲಸ್ಕರ್, ಉನ್ನಿಕೃಷ್ಣನ್..... ಇವರೆಲ್ಲರೂ ತಾವಿದ್ದ ಘಟಕದ ಮಟ್ಟಿಗೆ ನಾಯಕತ್ವದ ಜವಾಬ್ದಾರಿ ಹೊತ್ತವರು. ಅನಾಮಿಕನಾಗಿರಬಹುದಾದ ನನಗೂ, ಅನಾಮಿಕ ಅತಿಥಿಗೂ, ಪತ್ರಿಕೆ ಓದುವ - ಸುದ್ದಿ ಗ್ರಹಿಸುವ ಅನೇಕರಿಗೆ ‘ಪರಿಚಯ'ವಾಗಿರಬಹುದಾದ ಜನರ ಬಗ್ಗೆ ಸುದ್ದಿಯಾಗುತ್ತದೆ. ಹೀಗಾಗಿಯೇ ಅಮಿತಾಭ್ ಬಚ್ಚನ್‍ಗೆ ಹೊಟ್ಟೆನೋವಾದರೆ ಅದು ಸುದ್ದಿ. ಕಾಲರಾ/ಪ್ಲೇಗಿನಿಂದ ಸಾವಿರಾರು ಮಂದಿ ಸತ್ತಾಗ ಅದು ಅಂಕಿ-ಸಂಖ್ಯೆ.


ಒಂದು ಮಾನವ ಜೀವ, ಒಂದು ಮಾನವ ಜೀವವೇ. ಮತ್ತೊಂದು ಜೀವ ಇನ್ನೊಂದಕ್ಕಿಂತ ಹೆಚ್ಚಿನ ಕಿಮ್ಮತ್ತಿನದಲ್ಲ ಅನ್ನುವುದನ್ನು ನಾವೆಲ್ಲರೂ ನಂಬುತ್ತೇವೆ, ಹಾಗೂ ಆ ಬಗ್ಗೆ ಭಾಷಣ ಕುಟ್ಟುತ್ತೇವೆ. ಆದರೆ ಇದು ನಿಜವೇ? ಇದು ನಿಜವೇ ಆಗಿದ್ದಲ್ಲಿ ‘ಬಾಡಿಗಾರ್ಡ್' ಅಥವಾ ‘ರಕ್ಷಕ'ರ ದಳಗಳೇ ಇರುತ್ತಿರಲಿಲ್ಲ. ಎಲ್ಲೋ ನಾವು ‘ಜೀವ'ದ ಸಮಾನತೆಯನ್ನು ಒಪ್ಪಿದರೂ, ಕೆಲವರ ಜೀವನ ಹೆಚ್ಚು ಕಿಮ್ಮತ್ತಿನದಾಗಿರುತ್ತದೆ ಅನ್ನುವುದನ್ನೂ ಚರ್ಚೆಯಿಲ್ಲದೇ ಸ್ವೀಕರಿಸಿದ್ದೇವೆ. ಹೆಚ್ಚು ಬಹಿರಂಗವಾಗಿ ಚರ್ಚಿಸಲು ಇದು ಮುಜುಗರದ ಮಾತಾಗುತ್ತದೆ. ಯಾರದೋ ಕೆಲವರ ಜೀವಕ್ಕೆ ಇತರರ ಜೀವನವನ್ನು ಅಡ್ಡವಾಗಿಟ್ಟು ರಕ್ಷಣೆಯನ್ನು ಈ ಸಮಾಜ ಒದಗಿಸುತ್ತದೆ. ಇದು ಯಾಕಿದ್ದಿರಬಹುದು? ಬಹುಶಃ ಇಂಥ ಕೆಲವು ಜೀವಗಳು ಬದುಕಿದ್ದರೆ ಒಟ್ಟಾರೆ ಸಮಾಜಕ್ಕೆ ಆಗುವ ಲಾಭವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಸಮಾಜ ಅವರಿಗೆ ರಕ್ಷಣೆಯನ್ನು ಒದಗಿಸುತ್ತದೆ ಅನ್ನುವ ವಾದಸರಣಿಯನ್ನು ಒಪ್ಪಬೇಕಾಗುತ್ತದೇನೋ. ಕೆಲ ಮಾಜಿ ಪ್ರಧಾನ ಮಂತ್ರಿಗಳ/ರಾಜಕಾರಣಿಗಳ ಸ್ಪಷ್ಟ ಉದಾಹರಣೆಗಳನ್ನು ಕೊಟ್ಟು ಈ ರಕ್ಷಣೆಯ ವಾದವನ್ನು ತಳ್ಳಿಹಾಕುವುದು ಸಾಧ್ಯವಾಗಬಹುದಾದರೂ, ಈ ವಾದಸರಣಿಯನ್ನು ಪರಿಶೀಲಿಸುವುದು ಆಸಕ್ತಿಯ ವಿಷಯ. ಗಾಂಧೀಜಿಯನ್ನು ಬಡವರಾಗಿಡಲು ದೇಶ ಬಹಳಷ್ಟು ಖರ್ಚುಮಾಡಬೇಕಾಗಿದೆ ಎಂದು ಸರೋಜಿನೀ ದೇವಿ ಮಹಾತ್ಮನ ಕಾಲೆಳೆದಿದ್ದರಂತೆ. ಯೋಚಿಸಿ ನೋಡಿ, ಜನವರಿ ೩೦, ೧೯೪೮ರಂದು ಮಹಾತ್ಮನ ಜೀವ ಉಳಿದಿದ್ದರೆ ಅದರಿಂದ ಭಾರತದ ಹೆಚ್ಚಿನಂಶ ಜನತೆಗೆ ಕೆಡುಕಿಗಿಂತ ಒಳಿತೇ ಆಗುತ್ತಿತ್ತೇನೋ. ಅಕಸ್ಮಾತ್ ಮಹಾತ್ಮನ ಜೀವವನ್ನು ಉಳಿಸುವ ಯತ್ನದಲ್ಲಿ ಒಬ್ಬ ‘ಕಮಾಂಡೋ' ಶಹೀದನಾಗಿದ್ದರೆ - ಅವನ ತ್ಯಾಗ ಮೆಚ್ಚಿ ಬರೆಯಲ್ಪಡುತ್ತಿತ್ತಾದರೂ - ಆ ಜೀವಕ್ಕೆ ಮಹಾತ್ಮನ ಜೀವದಷ್ಟೇ ಕಿಮ್ಮತ್ತನ್ನು ಸಮಾಜ ಕಟ್ಟುತ್ತಿತ್ತೇ? ಗೊತ್ತಿಲ್ಲ.


ತಾಜ್ ಹೋಟೆಲಿನ, ಒಬೆರಾಯ್ ಹೋಟೆಲಿನ ಘಟನಾವಳಿ ಸಿ.ಎಸ್.ಟಿಗಿಂತ ಪ್ರಾಮುಖ್ಯತೆ ಪಡೆಯುವುದು ಮತ್ತೊಂದು ಕಾರಣಕ್ಕಾಗಿ. ಅಲ್ಲಿದ್ದ ‘ಗುರುತಿಸಬಲ್ಲ' ಜನರಿದ್ದ ಪರಿಸ್ಥಿತಿಯಿತ್ತು. ಸಹಜವಾಗಿ ಅವರಿಗೆ ಶ್ರೀಸಾಮಾನ್ಯರಿಗಿಂತ ಹೆಚ್ಚಿನ ರಕ್ಷಣೆ ಸಿಗುವ ಸಾಧ್ಯತೆಯಿತ್ತು. ವಿಮಾನದಲ್ಲಿ ಪ್ರಯಾಣಿಸುವವರಿಗೆ ಸಿಗುವ ಸುರಕ್ಷತೆಯ ಮುಂದೆ ರೈಲಿನಲ್ಲಿ ಪ್ರಾಯಾಣಿಸುವವರಿಗೆ ಯಾವುದೂ ಸುರಕ್ಷತೆಯಿಲ್ಲವೆನ್ನಬೇಕು. ಬಸ್ಸಿನಲ್ಲಿ ಪ್ರಾಯಾಣಿಸುವವರಿಗೆ ಅದಕ್ಕೂ ಕಡಿಮೆ ಸುರಕ್ಷತೆ. ತಾಜ್ ಹೋಟೆಲಿನಲ್ಲಿ ಇರಬಹುದಾದ ‘ಐಷಾರಾಮಿ' ಜನರಿಗೆ ಈ ಸುರಕ್ಷತೆಯನ್ನು ಖಾಸಗಿಯಾಗಿ ಅಥವಾ ಸರಕಾರದಿಂದ ಪಡೆಯುವ ಸಾಧ್ಯತೆ ಸಾಮಾನ್ಯರಿಗಿಂತ ಹೆಚ್ಚೆನ್ನುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಅಂಥ ಜನರ ಮೇಲೆ ಹಲ್ಲೆ ನಡೆದಾಗ, ಅದು ಸಾಮಾನ್ಯಕ್ಕಿಂತ ದೊಡ್ಡ ಸುದ್ದಿಯಾಗುತ್ತದೆ. ಯಾಕೆಂದರೆ ಅಭೇದ್ಯ ಅನ್ನಿಸಿಕೊಳ್ಳುವ ಆ ಕೋಟೆಯಲ್ಲಿ ಕನ್ನ ಹಾಕುವುದು ಬಾಗಿಲೇ ಇಲ್ಲದ ಮನೆಯಲ್ಲಿ ಕಳ್ಳತನವಾಗುವುದಕ್ಕಿಂತ ದೊಡ್ಡ ಸುದ್ದಿಯಾಗುವುದು ಸಹಜವೇ ಇದೆ. ಹೀಗಾಗಿಯೇ ಆ ಚಹರೆಗಳು ಬರೇ ಚಹರೆಗಳಲ್ಲದೇ ತಪ್ಪಿಸಿಕೊಂಡವರ/ಬಲಿಯಾದವರ ಚಹರೆಗಳ ಪ್ರತೀಕವಾಗಿಬಿಡುತ್ತವೆ. ಇದು ಸಿ.ಎಸ್.ಟಿ ಮತ್ತು ತಾಜ್‍ ನಡುವೆ ಇರುವ ಅಂತರದ ಮಹಿಮೆ.


ಇನ್ನು ಲಿಯೋಪೋಲ್ಡ್ ಕಥೆಗೆ ಬರೋಣ. ಲಿಯೋಪೋಲ್ಡ್ ಕೆಫೆ ಅತೀ-ಶ್ರೀಮಂತರ ಅಡ್ಡಾ ಅಂತೂ ಅಲ್ಲವೇ ಅಲ್ಲ. ಅಲ್ಲಿ ಬರುವ ಹೆಚ್ಚಿನಂಶ ವಿದೇಶೀ ಪ್ರಯಾಣಿಕರು ಮತ್ತು ಭಾರತೀಯರು ಬಹುಶಃ ಮಧ್ಯಮವರ್ಗದ ಮೇಲಿನ ಸ್ಥರಕ್ಕೆ ಸೇರಿದವರಿರಬಹುದು. ಗಾಂಧೀಬಜಾರಿನ/ಜಯನಗರದ ಪಬ್ಬುಗಳಲ್ಲಿ ಕಾಣುವ ಜನರಂತಹ ಜನ. ಸಣ್ಣ ಹೋಟೆಲುಗಳಲ್ಲಿ ಇಳಿದುಕೊಂಡು, ಕಡಿಮೆದರದಲ್ಲಿ ಬ್ಯಾಕ್‍ಪ್ಯಾಕ್ ಮಾಡಿಕೊಳ್ಳುತ್ತಾ, ಟೂರಿಸ್ಟ್ ಗೈಡುಗಳ ಮೂಲಕ ದೇಶವನ್ನು ಕಾಣುವ ಜನರ ತಂಡ ಅಲ್ಲಿ ನಮಗೆ ಹೆಚ್ಚಿನಂಶ ಕಾಣುತ್ತದೆ. ತಾಜ್‍ನಲ್ಲಿರುವ ‘ಐಷಾರಾಮಿ' ಜನ ಸಾಮಾನ್ಯವಾಗಿ ಲಿಯೋಗೆ ಹೋಗುವ ಸಾಧ್ಯತೆ ಕಡಿಮೆ. ಹೀಗಾಗಿಯೇ ನಮಗೆ ಲಿಯೋ ಒಂದು ಸುದ್ದಿಯಾಯಿತೇ ವಿನಃ ಅಲ್ಲಿನ ಮುಖಗಳು ಕಾಣಲಿಲ್ಲ. ಲಿಯೋದಲ್ಲಿ ನಾನು ನನ್ನ ಸ್ವಂತ ದುಡ್ಡಿನಿಂದ ಬಿಯರು ಕುಡಿಯಬಹುದಾದರೂ, ತಾಜ್‍ನಲ್ಲಿ ಆ ಸಾಹಸವನ್ನು ಮಾಡಲು ನಾನು ಯತ್ನಿಸುವುದಿಲ್ಲ. ಹೀಗಾಗಿ ನಮ್ಮ ಅನಾಮಿಕ ಅತಿಥಿಗಳ ವಾದಸರಣಿಯನ್ನು ಹೆಚ್ಚು ಅರಿಯಲು ಲಿಯೋಪೋಲ್ಡ್ ಕೆಫೆ ‘ಐಷಾರಾಮ'ದಲ್ಲಿ ತಾಜ್‍ಗಿಂತ ಸಿ.ಎಸ್.ಟಿ.ಗೇ ಸಮೀಪ ಅಂದರೆ ತಪ್ಪಾಗಲಾರದು.


ಈ ವಾದಸರಣಿ ಸಾಮಾನ್ಯದ ಹಂತದ್ದು. ಇದನ್ನು ಖಾಸಗೀ ಸ್ಥರಕ್ಕೂ ಎಳೆದು ತರೋಣ. ತಾಜ್ ಭಾರತದ ಸರ್ವಶ್ರೇಷ್ಠ ಹೋಟೆಲುಗಳಲ್ಲಿ ಒಂದಾಗಿತ್ತು. ಅದನ್ನು ‘ಲಕ್ಷುರಿ' ಹೋಟೆಲ್ಲೆಂದು ತಾಜ್‍ನವರೇ ಕರೆಯುತ್ತಿದ್ದರು. ಹೀಗಾಗಿ ಅದು ಐಷಾರಾಮದ ಪ್ರತೀಕವಾಗುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ತಾಜ್‍ನಲ್ಲಿ ಉಳಿದುಕೊಳ್ಳುವವರೆಲ್ಲರೂ ಐಷಾರಾಮಿಗಳೇ? ಅಥವಾ ಐಷಾರಾಮಕ್ಕಾಗಿಯೇ ಅಲ್ಲಿಗೆ ಬರುವವರೇ? ಈ ವಾದ ತುಸು ಕುತೂಹಲದ್ದಾಗುತ್ತದೆ. ತಾಜ್ ಹೋಟೆಲಿನಲ್ಲಿ ಅಂದು ಇದ್ದವರಲ್ಲಿ ವಿತ್ತಶಾಸ್ತ್ರೀಯ ಪ್ರೊ.ವೈದ್ಯನಾಥನ್ ಕೂಡಾ ಒಬ್ಬರು. ಅವರನ್ನು ಬಲ್ಲವರು ಯಾರೂ ಆತನನ್ನು ಐಷಾರಾಮಿ ಎಂದು ಕರೆಯುವುದಿಲ್ಲ. ಮತ್ತೊಂದು ಭಿನ್ನಸ್ಥರದಲ್ಲಿ - ಲಕ್ಷಾಂತರ ಹಾಲು ಉತ್ಪಾದಕರ ಜೀವನವನ್ನು ಉತ್ತಮಗೊಳಿಸಿದ ಅಮುಲ್ ಸಂಸ್ಥೆಯ ಪಿತಾಮಹ ಕುರಿಯನ್ ಪ್ರತಿಬಾರಿಯೂ ‘ಐಷಾರಾಮ'ಕ್ಕಾಗಿಯೇ ಮುಂಬಯಿಯ ತಾಜ್‍ನಲ್ಲಿ ಉಳಿದುಕೊಳ್ಳುತ್ತಿದ್ದರು ಎಂದು ಅವರ ಆತ್ಮಕಥೆಯಲ್ಲಿ ಬರೆದುಕೊಂಡಿದ್ದಾರೆ. ಅದು ತಪ್ಪೇ? ಕುರಿಯನ್‍ರಂತಹ ನಾಯಕರು ತಾಜ್‍ನಲ್ಲಿ ಉಳಿದುಕೊಂಡ ಕಾರಣಕ್ಕಾಗಿ ಬಡ ಹಾಲು ಉತ್ಪಾದಕರಿಗೆ ಅಪ್ರಸ್ತುತರಾಗುತ್ತಾರೆಯೇ? ಈ ವಿರೋಧಾಭಾಸವನ್ನು ನಾವು ನಮ್ಮ ಮನದಲ್ಲಿ ಪರಿಷ್ಕರಿಸಿಕೊಳ್ಳುವ ಪರಿ ಏನು? ಅದೇ ಕ್ಷಣಕ್ಕೆ ತಾಜ್/ಒಬೆರಾಯ್‍ನಲ್ಲಿ  ಅನೇಕ ಇತರ ‘ಐಶಾರಾಮಿ'ಗಳೂ ಇದ್ದಿದ್ದಿರಬಹುದು.
ಕುರಿಯನ್ ಬಿಟ್ಟು ವೈದ್ಯನಾಥನ್ ಅಂತಹವರ ವಿರೋಧಾಭಾಸವನ್ನು ನೋಡೋಣ. ವೈದ್ಯನಾಥನ್ ಅವರು ಹೆಚ್ಚಿನ ಕೆಲಸವನ್ನು ಕೃಷಿ, ನೀರಾವರಿ, ಬಡತನದ ಅಧ್ಯಯನ, ಸಹಕಾರೀ ಕ್ಷೇತ್ರದ ಉದ್ಧಾರ, ಹಾಗೂ ಜನರ ಜೀವನವನ್ನು ಉತ್ತಮಪಡಿಸಲು ಬೇಕಾದ ವಿತ್ತೀಯ ಸೂತ್ರಗಳನ್ನು ಸರಕಾರ ರೂಪಿಸುವಂತೆ ತಮ್ಮ ಬರವಣಿಗೆ-ಅಧ್ಯಯನದ ಮೂಲಕ ಜೀವಮಾನ ಪರ್ಯಂತ ಮಾಡಿಕೊಂಡು ಬಂದಿದ್ದಾರೆ. ಹಾಗಾದರೆ ಅವರು ತಾಜ್‍ನಂತಹ ಜಾಗದಲ್ಲಿ ಇರದೇ ಸಿ.ಎಸ್.ಟಿಯಲ್ಲಿ ಇರಬೇಕಾಗಿತ್ತೇ? ಅವರು ಅಂದು ಸಿ.ಎಸ್.ಟಿಯಲ್ಲಿ ಇದ್ದಿದ್ದರೂ ಅದರಲ್ಲಿ ಆಶ್ಚರ್ಯವೇನೂ ಇಲ್ಲ ಅನ್ನುವುದನ್ನು ನಾವು ಮನಗಾಣಬೇಕು. ತಾಜ್‍ನಲ್ಲಿ ಇರುತ್ತ ಜನೋಪಯೋಗಿ ಕೆಲಸವನ್ನು ಮಾಡಲು ಸಾಧ್ಯವೇ ಇಲ್ಲವೇ? ಈ ವಿರೋಧಾಭಾಸವೇ ಕೆಲಸದ ತುರ್ತು, ಅವಶ್ಯಕತೆಗೂ ಐಷಾರಾಮಕ್ಕೂ ನಡುವಿನ ಗೆರೆಯನ್ನು ಕ್ಷೀಣಗೊಳಿಸುತ್ತದೆ.


ಇನ್ನಷ್ಟು ಸುದ್ದಿ: ಅಂದು ಅಮೃತಾ ಪಟೇಲ್ ತಾಜ್ ಹೋಟೇಲಿನಲ್ಲಿದ್ದದ್ದು ಸರ್ ದೊರಾಬ್ಜಿ ಟಾಟಾ ಟ್ರಸ್ಟಿನ ಬೋರ್ಡ್ ಮೀಟಿಂಗಿನಲ್ಲಿ ಪಾಲ್ಗೊಳ್ಳಲು. ಸರ್ ರತನ್ ಟಾಟಾ ಟ್ರಸ್ಟ್ ಮತ್ತು ಸರ್ ದೊರಾಬ್ಜಿ ಟಾಟಾ ಟ್ರಸ್ಟ್, ಟಾಟಾ ಸಂಸ್ಥೆಗಳಲ್ಲಿ ಹೆಚ್ಚಿನ ಬಂಡವಾಳ ಹಾಕಿರುವ ಟಾಟಾ ಸನ್ಸ್ ನ ಪ್ರಮುಖ ಬಂಡವಾಳದಾರ ಸಂಸ್ಥೆಗಳು. ಬಹಳಷ್ಟು ಜನರಿಗೆ ಈ ಸತ್ಯ ತಿಳಿಯದಿರಬಹುದು. ಮಿಕ್ಕ ಭಾರತೀಯ ಬಂಡವಾಳಶಾಹೀ ಸಂಸ್ಥೆಗಳಿಗೂ ಟಾಟಾ ಸಂಸ್ಥೆಗೂ ಇರುವ ವ್ಯತ್ಯಾಸ ಇಲ್ಲಿದೆ. ಟಾಟಾ ಸಂಸ್ಥೆಗಳ ಮುಖ್ಯ ಬಂಡವಾಳಗಾರ ರತನ್ ಟಾಟಾ ಅಲ್ಲ. ಬದಲಿಗೆ ರತನ್ ಟಾಟಾ ಕೇವಲ ನಿರ್ವಹಿಸುತ್ತಿರುವ, ಲಾಭವನ್ನು ಯಾರಿಗೂ ಹಂಚಲಾರದ ಟಾಟಾ ಸಂಸ್ಥಾನದ ಟ್ರಸ್ಟುಗಳು. ಅತ್ಯಂತ ಹೆಚ್ಚಿನ ಬಂಡವಾಳ ಹೂಡಿರುವ ಖಾಸಗೀ ವ್ಯಕ್ತಿ ಶಾಪೂರ್‍ಜಿ ಪಾಲೊಂಜಿ ಮಿಸ್ತ್ರಿ. ಟಾಟಾ ಸಂಸಾರಕ್ಕೆ ಸೇರಿದವನಲ್ಲವೇ ಅಲ್ಲ. ದೊರಾಬ್ಜಿ/ರತನ್ [ಈ ಸರ್ ರತನ್ ಟಾಟಾ ನಮಗೆ ತಿಳಿದಿರುವ ಬದುಕಿರುವ ರತನ್ ಟಾಟಾ ಅಲ್ಲ, ಬದಲಿಗೆ ಆತನ ಹಿಂದಿನ ತಲೆಮಾರಿಗೆ ಸಂದವರು] ಟಾಟಾ ಸಂಸ್ಥಾನಗಳು ಟಾಟಾ ಸಂಸ್ಥೆಯಿಂದ ಬಂದ ಲಾಭ ಮತ್ತು ಹಣವನ್ನು ಹೂಡಿರುವುದು ಎಲ್ಲಿ ಗೊತ್ತೇ? ದೇಶ ಹೆಮ್ಮೆ ಪಡಬಹುದಾದಂತಹ ಅನೇಕ ಸಂಸ್ಥೆಗಳಲ್ಲಿ... ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಸೈನ್ಸ್, ಮುಂಬಯಿಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್, ಹಾಗೂ ನೊಬೆಲ್ ಪ್ರಶಸ್ತಿ ಪಡೆದ ಇಂಟರ್‍ ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್‍ನ ಮುಖ್ಯಸ್ಥ  ರಾಜೇಂದ್ರ ಪಚೌರಿ ತಮ್ಮ ಮೂಲ ಕೆಲಸವನ್ನು ಮಾಡಿದ್ದ ಟಾಟಾ ಸಂಸ್ಥೆ ಮೂಲಧನ ಕೊಟ್ಟು ಸಂಸ್ಥಾಪಿಸಿದ್ದ ಟಾಟಾ ಎನೆರ್ಜಿ ರಿಸರ್ಚ್ ಇನ್ಸ್ಟಿಟ್ಯೂಟಿನಂಥ ಸಂಸ್ಥೆಗಳಲ್ಲಿ [ಈಗ ಆ ಸಂಸ್ಥೆಯ ಹೆಸರನ್ನು ದ ಎನರ್ಜಿ ಇನ್ಸ್ಟಿಟ್ಯೂಟ್ ಎಂದು ಬದಲಾಯಿಸಿ ಟಾಟಾ ಹೆಸರಿಗೆ ಟಾಟಾ ಹೇಳಿ ಟೆರಿ ಎಂಬ ಮೂಲ ಹೆಸರನ್ನು ಉಳಿಸಿಕೊಂಡಿದ್ದಾರೆನ್ನುವುದು ಬೇರೆಯ ಮಾತು]. ಮೊನ್ನೆ ಶಿಂಗೂರಿನಲ್ಲಿ ಟಾಟಾ ಸಂಸ್ಥೆಯ ನ್ಯಾನೋ ಫ್ಯಾಕ್ಟರಿಯ ವಿರುದ್ಧ ಪ್ರತಿಭಟಿಸುತ್ತಿದ್ದ ಮೇಧಾ ಪಾಟ್ಕರಳನ್ನೊಳಗೊಂಡ ಅನೇಕರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ನಲ್ಲಿ ತರಬೇತಿ ಪಡೆದವರು. ಕೆಲವರು ತಮ್ಮ ಸಮಾಜ ಸೇವೆಗೆ ಟಾಟಾ ಟ್ರಸ್ಟುಗಳಿಂದ ಈಗಲೂ ಹಣ ಪಡೆಯುತ್ತಿರುವ ಸ್ವ-ಸಹಾಯ ಸಂಸ್ಥೆಯ ಪ್ರತಿನಿಧಿಗಳು! ಈ ಎಲ್ಲವನ್ನೂ ನೆನೆದರೆ ದೊರಾಬ್ಜಿ/ರತನ್ ಟಾಟಾ/ ಜೆ.ಆರ್.ಡಿ ಟಾಟಾ ಮತ್ತು ಟಾಟಾರ ಇತರ ಸಂಸ್ಥಾನಗಳ ಯೋಗದಾನದ ಅಂದಾಜು ನಮಗೆ ಸಿಗುತ್ತದೆ.


ಇಂಥಹ ಸಂಸ್ಥೆಯ ಬೋರ್ಡ್ ಮೀಟಿಂಗಿಗೆ ಹೋದ ಅಮೃತಾ ಪಟೇಲ್ ಎಲ್ಲಿ ಉಳಿದುಕೊಳ್ಳಬಹುದಿತ್ತು? ಅಂದು ಬೋರ್ಡ್ ಮೀಟಿಂಗಿನಲ್ಲಿ ಏನು ಚರ್ಚಿಸಿರಬಹುದು? ಬಿಹಾರದ ಮೂಲೆಯಲ್ಲಿ ಕೆಲಸ ಮಾಡುತ್ತಿರುವ ಪುಟ್ಟ ಸ್ವಸಹಾಯ ಸಂಸ್ಥೆಗೆ ದೇಣಿಗೆ ನೀಡುವ, ಛತ್ತೀಸ್ ಗಢದಲ್ಲಿ ಗಿರಿಜನರಿಗೆ ಸಹಾಯವಾಗುವಂತಹ ಯಾವುದಾದರೂ ಆರೋಗ್ಯಯೋಜನೆಗೆ ದೇಣಿಗೆ ನೀಡುವ ಠರಾವಿನ ಚರ್ಚೆ ಅಂದು ಇದ್ದಿರಬಹುದೇ? ಟಾಟಾ ಸಂಸ್ಥಾನವೇ ನಡೆಸುತ್ತಿರುವ ಟಾಜ್ ಹೋಟೆಲಿನಲ್ಲಿ ಆಕೆ ಇಳಿದುಕೊಳ್ಳುವುದರಲ್ಲಿ ವಿರೋಧಾಭಾಸವಿತ್ತೇ? ತಾಜ್ ಗುಂಪಿನ ಹೋಟೆಲುಗಳು ಆರ್ಜಿಸುವ ಲಾಭದ ಹೆಚ್ಚಿನಂಶವನ್ನು ಸಮಾಜಕ್ಕೇ ಅಂಕಿತಗೊಳಿಸಿರುವ ಈ ಸಂಸ್ಥೆ ‘ಐಷಾರಾಮಿ' ಜೀವನವನ್ನು ಮಾರಾಟ ಮಾಡುತ್ತಾ ಆರ್ಜಿಸಿದ ಲಾಭದ ಹೆಚ್ಚಿನಂಶ ಹೀಗೆ ದೇಶಕ್ಕೆ ಉಪಯೋಗುವಾಗುವ ಕಾರ್ಯದಲ್ಲಿ ತೊಡಗಿಸಿದಾಗ ನಾವು ಕಪ್ಪು ಬಿಳುಪಿನ ನಡುವಿನ ನಡುವಿನ ರೇಖೆಯನ್ನು ಎಲ್ಲಿ ಎಳೆಯುವುದು?


ತಾಜ್ ಹೋಟೆಲ್ ಸ್ಥಾಪಿತವಾದದ್ದೇ ಒಂದು ರಾಷ್ಟ್ರೀಯತೆಯ ಪ್ರತೀಕವಾಗಿ. ಬ್ರಿಟಿಷರು ನಡೆಸುತ್ತಿದ್ದ ಹೋಟೆಲುಗಳಲ್ಲಿ ತಮಗೆ ಇರಲು ಅವಕಾಶವಾಗಲಿಲ್ಲವೆಂದು ಜಮ್‍ಶೇಡ್‍ಜಿ ಟಾಟಾ ಮುಂಬಯಿಯಲ್ಲಿ ಈ ಹೋಟೆಲನ್ನು ಕಟ್ಟಿಸಿದರು. ಈ ಹೋಟೆಲಿನ ನಿರ್ಮಾಣದ ಉಸ್ತುವಾರಿಯನ್ನು ಅವರೇ ಸ್ವತಃ ವಹಿಸಿದ್ದಲ್ಲದೇ, ಅವರು ಅಸುನೀಗುವುದಕ್ಕೆ ಮುನ್ನ ಅದು ಪೂರ್ಣವಾಗುವುದನ್ನೂ ಕಂಡಿದ್ದರು. [ಟಾಟಾ ಸ್ಟೀಲ್‍ನ ನಿರ್ಮಾಣ ಕೂಡಾ ಅವರ ಜೀವನಕಾಲದಲ್ಲಿ ಮುಗಿದಿರಲಿಲ್ಲವೆಂದು ಪ್ರತೀತಿ]. ಹೀಗೆ ಪ್ರಾರಂಭವಾದ ತಾಜ್ ಹೋಟೆಲಿನ ಅಸ್ತಿತ್ವ ಭಾರತದಲ್ಲಲ್ಲದೇ ನ್ಯೂಯಾರ್ಕ್ ನಗರದ ಪಿಯರ್ ಹೋಟೆಲನ್ನೊಳಗೊಂಡು ಜಗತ್ತಿನ ಅನೇಕ ಭಾಗಗಳಲ್ಲಿ ಹಬ್ಬಿದೆ. ಐಷಾರಾಮಿ ತಾಜ್ ಅಲ್ಲದೇ ಕಡಿಮೆ ದರದಲ್ಲಿ ಇರಬಹುದಾದ ಜಿಂಜರ್ ಹೋಟೆಲುಗಳೂ ತಾಜ್ ಸಂಸ್ಥೆಗೆ ಸೇರಿದವೇ. 


ನಾವು ‘ಐಷಾರಾಮಿ'ಗಳೆಂದು ಕರೆವ ಜನ ತಮ್ಮ ಐಷಾರಾಮಕ್ಕೆ ಹಣವನ್ನು ಎಲ್ಲಿಂದ ಸಂಪಾದಿಸಬಹುದು? ಆ ಹಣವನ್ನು ಸಂಪಾದಿಸುವುದಕ್ಕೆ ದಿನದಲ್ಲಿ ಎಷ್ಟು ಗಂಟೆ ಕಾಲ ಕೆಲಸ ಮಾಡಬಹುದು? ಅವರು ಮಾಡುವ ಕೆಲಸದಿಂದ ಎಷ್ಟು ಜನರಿಗೆ ನೌಕರಿ ಸಿಗಬಹುದು? ಸಮಾಜಕ್ಕೆ ಅದರಿಂದ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಎಷ್ಟು ಉಪಯೋಗವಾಗಬಹುದು? ಈ ಪ್ರಶ್ನೆಗಳನ್ನು ನಾವು ಉತ್ತರಿಸಲು ಪ್ರಯತ್ನಿಸಿದರೆ ಐಷಾರಾಮಿಗಳಿಗೊ ಶ್ರೀಸಾಮಾನ್ಯರಿಗೂ ಇರುವ ಅವಿನಾಭಾವ ನಂಟು ನಮಗೆ ಕಾಣಸಿಗುತ್ತದೆ. ಐಷಾರಾಮಿಗಳು ಭಿನ್ನ ರೀತಿಯಾದ ಜೀವನವನ್ನು ಜೀವಿಸಬಹುದೇ? ತಾಜ್/ಒಬೆರಾಯ್‍ನಲ್ಲಿ ಉಳಿದು ಅಲ್ಲಿನ ಷಾಮಿಯಾನ/ಗೋಲ್ಡನ್ ಡ್ರಾಗನ್/ಸೂಕ್/ಕಂದಹಾರ್/ಟಿಫಿನ್ ಎನ್ನುವ ಜಾಗಗಳಲ್ಲಿ ಸಿಂಗಲ್ ಮಾಲ್ಟ್ ವಿಸ್ಕಿ ಕುಡಿಯದೇ ಲಕ್ಷಾಂತರ ರೂಪಾಯಿ ಸಂಬಳ ಪಡೆವ ಚೆಫ್‍ಗಳು ಉಣಬಡಿಸುವ ಗೊರ್ಮೆ ಊಟವನ್ನು ಮಾಡದೆಯೇ ಜೀವಿಸಬಹುದೇ? ಅಥವಾ ಅವರು ಮಾಡುತ್ತಿರುವ/ದುಡಿಯುತ್ತಿರುವ ಸಂದರ್ಭದಲ್ಲಿ ಇವು ಅತ್ಯಾವಶ್ಯಕವೇ ಅನ್ನುವ ಪ್ರಶ್ನೆ ಸಹಜದ್ದು. ಅಮಲಿಗೆ ಸಿಂಗಲ್ ಮಾಲ್ಟೇ ಆಗಬೇಕೆಂದೇನೂ ಇಲ್ಲ. ಸಾರಾಯಿ ಕೂಡಾ ಸಾಕಾಗಬಹುದು ಅನ್ನುವುದು ನಮ್ಮ ವಾದ. ಆದರೆ ಅಮಲಿಗೆ ಸಾರಾಯಿಯನ್ನೇ ಕುಡಿಯಬೇಕೋ, ಸಿಂಗಲ್ ಮಾಲ್ಟನ್ನೇ ಕುಡಿಯಬೇಕೋ ಎಂದು ನಿರ್ಧರಿಸುವವರು ಯಾರು?


ನಮಗೆಲ್ಲರಿಗೂ ಜೀವನವನ್ನು ಉತ್ತಮಗೊಳಿಸಿಕೊಳ್ಳಬೇಕೆಂಬ ಆಸೆ ಇರುತ್ತದೆ. ಬಡವರು ಬಡವರಾಗಿರಬಾರದು. ಬೈಕಿನಲ್ಲಿ ಓಡಾಡುವವರಿಗೆ ಕಾರು ಕೊಳ್ಳುವ ಅವಕಾಶ ಬಂದರೆ ಬೇಡ ಅನ್ನುವವರು ಎಷ್ಟು ಜನ? ಕಾರು ‘ಐಷಾರಾಮ'ವಾದರೆ ಅದು ಕೊಳಕು ಸಂಸ್ಕೃತಿಯೇ? ಹೌದು ಶ್ರೀಮಂತಿಕೆಯನ್ನು ಪ್ರದರ್ಶಿಸುವ ರೀತಿಯಲ್ಲಿ ಒಂದು ಕೊಳಕುತನ ಇದೆ ಅನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಆ ಗೆರೆಯನ್ನು ನಾವು ಎಲ್ಲಿ ಎಳೆಯಬೇಕು?


ಈಚೆಗೆ ನಮ್ಮ ಸಂಸ್ಥೆಯಲ್ಲಿ ಸಮಾಜ-ಸೇವಾ ಸಂಸ್ಥೆಗಳ ಬಗೆಗಿನ ಒಂದು ಕೋರ್ಸಿನಲ್ಲಿ ನಮ್ಮ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ನಾನು ಇಬ್ಬರು ಭಿನ್ನ ವ್ಯಕ್ತಿಗಳನ್ನು ಕರೆದಿದ್ದೆ. ಮಜದೂರ್ ಕಿಸಾನ್ ಸೇವಾ ಸಂಸ್ಥಾನದ ನಿಖಿಲ್ ಡೇ ವಿದ್ಯಾರ್ಥಿಗಳನ್ನು ಉದ್ದೇಶಿಸುತ್ತಾ ಹೇಳಿದ್ದು ತಾವು ತಮ್ಮ ಸಂಸ್ಥೆಯಿಂದ ಬಡವರಿಗೆ ಅನ್ವಯವಾಗುವ ‘ನ್ಯೂನತಮ ದೈನಿಕ ಕೂಲಿ" ಯಷ್ಟೇ [ದಿನಕ್ಕೆ ನೂರು ರೂಪಾಯಿ] ಪಡೆಯುತ್ತಿರುವುದಾಗಿಯೂ, ತಾವು ಮಾಡುತ್ತಿರುವ ಕೆಲಸದಲ್ಲಿ ಅಷ್ಟರಲ್ಲಿ ಬದುಕುವುದನ್ನು ಕಲಿಯಬೇಕೆಂದೂ - ‘ನನ್ನಿಂದ ಯಾರೂ ಏನೂ ಕಸಿಯಲಾರದಷ್ಟು ಕಡಿಮೆ ಸಂಪನ್ಮೂಲಗಳಲ್ಲಿ ಬದುಕುವ ಸಾಧ್ಯತೆಯಿದ್ದಾಗಲೇ ಪ್ರತಿಭಟನೆಯ ಜೀವನವನ್ನು ನಡೆಸಲು ಸಾಧ್ಯ' ಎಂದು ಗಾಂಧೀವಾದವನ್ನು ಪ್ರತಿಪಾದಿಸಿದರು. ಮುಂದಿನ ವಾರ ಬಂದು ಮಾತನಾಡಿದ ರಮೇಶ್ ರಾಮನಾಥನ್ ತಮ್ಮ ಕೆಲಸದ ಮೊದಲ ಹದಿನೈದು ವರ್ಷಗಳಲ್ಲಿ ಅದ್ಭುತ ಸಂಪಾದನೆ ಮಾಡಿ - ಜೀವನದಲ್ಲಿ ಮತ್ತೆ ಸಂಪಾದಿಸುವ ಅವಶ್ಯಕತೆಯಿಲ್ಲವೆನ್ನಿಸಿದ ಕ್ಷಣಕ್ಕೆ ತಮ್ಮ ‘ಐಷಾರಾಮಿ' ಕೆಲಸವನ್ನು ಬಿಟ್ಟು ಜನಾಗ್ರಹ ಪ್ರಾರಂಭಿಸಿದ ಕಥೆಯನ್ನು ಹೇಳಿದರಲ್ಲದೇ ಹೇಗೆ ಅವರ ಹಿಂದಿನ ಸಂಪಾದನೆ ಮತ್ತು ಅದರಲ್ಲಿ ಅವರು ಮಾಡಿರುವ ಉಳಿತಾಯ ತಮ್ಮ ‘ಐಷಾರಾಮಿ' ಬದುಕಿನ ಸ್ಥರದಲ್ಲಿ ಯಾವು ಕುಂದೂ ಬರದಂತೆ ಜೀವನವನ್ನು ನಡೆಸುತ್ತಾ ತಮ್ಮ ಸೇವಾಕೆಲಸವನ್ನೂ ಮಾಡಲು ಸಾಧ್ಯವಾಯಿತು ಎನ್ನುವುದನ್ನ ಹೇಳಿದರು. ಇದರಲ್ಲಿ ಯಾವುದು ಸರಿ ಯಾವುದು ತಪ್ಪಾದ ಮಾರ್ಗ? ಎಲ್ಲಿ ಇದರ ಎಲ್ಲೆ?


ಈ ಪ್ರಶ್ನೆಗಳನ್ನು ನಾವು ಕೇಳುತ್ತಲೇ ನಾವು ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸಿ.ಎಸ್.ಟಿ.ಗೂ ಹೋಗಲಾರದ ವರ್ಗದವರು ನಮ್ಮ ದೇಶದಲ್ಲಿದ್ದಾರೆ. ಸಿ.ಎಸ್.ಟಿಯ ರೈಲುಗಳಲ್ಲಿ ದಿನವೂ ಜೀವ ತೇಯುವ ಜನರಿದ್ದಾರೆ. ಲಿಯೋಪೋಲ್ಡ್ ನಲ್ಲಿ ಬಿಯರು ಕುಡಿವ ಜನರಿದ್ದಾರೆ. ತಾಜ್‍ನ ಐಷಾರಾಮಿಗಳಿದ್ದಾರೆ. ತಾಜ್‍ನ ಐಷಾರಾಮಿಗಳು ಐಷಾರಾಮ ಮಾಡುವುದರಲ್ಲಿ ಜೀವನದ ಅರ್ಥ ಕಂಡುಕೊಂಡಾರು. ಆದರೆ ಅವರುಗಳು ಸಿ.ಎಸ್.ಟಿಗೆ ಹೋಗಲಾರದ ಜನರಮೇಲೆ ದಬ್ಬಾಳಿಕೆ ಮಾಡಿ, ಸಿ.ಎಸ್.ಟಿಯಲ್ಲಿ ಜೀವ ತೇಯುವ ಜನರ ಬೆವರಿನ ಶೋಷಣೆಯ ಮೇಲೆ ಐಷಾರಾಮ ಮಾಡಿದರೆ - ಐಷಾರಾಮದ ಮೂಲಾಧಾರ ಈ ಅಂತರದಲ್ಲಿದ್ದರೆ ಅಲ್ಲಿ ಅಪಾಯವಿದೆ ಎನ್ನುವುದನ್ನು ನಾವು ಮನಗಾಣಬೇಕು. ಹೀಗಾಗಿಯೇ ಟಾಟಾರಂಥಹ ಟಾಟಾರಿಗೇ, ತಮ್ಮ ದೇಣಿಗೆಯನ್ನು ಪಡೆದ ಜನರಿಂದಲೇ ಪ್ರತಿಭಟನೆ ಎದುರಿಸುವ ಪರಿಸ್ಥಿತಿ ಉಂಟಾಯಿತು. ಅದರ ರಾಜಕಾರಣವೇನೇ ಇದ್ದರೂ ಅದರ ಮೂಲಾಧಾರವನ್ನು ನಾವು ಮರೆಯುವಂತಿಲ್ಲ.


ಉದಾರೀಕರಣದ ಪರಿಣಾಮವಾಗಿ ದೇಶದ ಆರ್ಥಿಕ ಬೆಳವಣಿಗೆ ೯%ದ ವೇಗದಲ್ಲಿ ಆಗುತ್ತಿದೆ. ಆದರೆ ೭೦% ಜನಜೀವನದ ಆಧಾರವಾಗಿರುವ ಕೃಷಿ ಕ್ಷೇತ್ರ ೨-೪%ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಈ ಹದಿನೇಳು ವರ್ಷಗಳಲ್ಲಿ ಕಂಡಿಲ್ಲ. ಇದು ಉದಾಹರಣೆ ಮಾತ್ರ. ಮೂಲತಃ ದೇಶ ಆರ್ಥಿಕವಾಗಿ ಬೆಳೆಯುತ್ತಿದ್ದರೂ ಅದರ ಪರಿಣಾಮ ಸಮಾಜದಲ್ಲಿ ಅಂತರವನ್ನು ಹೆಚ್ಚಿಸುತ್ತ ಬಂದಿದೆ. ತಾಜ್‍ನಲ್ಲಿ ಉಳಿಯುವ ‘ಐಷಾರಾಮಿ'ಗಳು ಈ ಬಗ್ಗೆ ತಲೆ ಕೆಡಿಸಿಕೊಳ್ಳದಿದ್ದರೆ ತಮ್ಮ ಐಷಾರಾಮಕ್ಕೆ ಸವಾಲಾಗಿರುವ ಅನೇಕ ಆತಂಕಗಳನ್ನು ಎದುರಿಸಬೇಕಾಗುತ್ತದೆ.


ಈ ಆತಂಕಗಳ ಮೂಲ ಭಿನ್ನರೀತಿಯಲ್ಲಿ ಹೊರಹೊಮ್ಮುತ್ತದೆ. ೨೦೦೧ರಲ್ಲಿ ನಕ್ಸಲ್ ಚಳುವಳಿ ದೇಶದ ಪೂರ್ವಭಾಗದಲ್ಲಿನ ಆಂಧ್ರಪ್ರದೇಶದಿಂದ ಹಿಡಿದು - ಮಧ್ಯಪ್ರದೇಶವನ್ನೊಳಗೊಂಡು - ಬಿಹಾರದ ವರೆಗೂ ಒಂಬತ್ತು ರಾಜ್ಯಗಳಲ್ಲಿ ಹಬ್ಬಿತ್ತು. ೨೦೦೫ರ ವೇಳೆಗೆ ಆ ಚಳುವಳಿ [ಕರ್ನಾಟಕ, ಮಹಾರಾಷ್ಟ್ರ, ಕೇರಳ, ಉತ್ತರಾಖಂಡ್ ಒಳಗೊಳ್ಳುತ್ತಾ] ಹದಿಮೂರು ರಾಜ್ಯಗಳಲ್ಲಿ ೧೬೫ ಜಿಲ್ಲೆಗಳಲ್ಲಿ ಹಬ್ಬಿತ್ತು. ಇದು ಬೆಳೆಯುತ್ತಿರುವ ಚಳುವಳಿ. ಬೆಂಗಳೂರಿನಂತಹ ನಗರದಲ್ಲಿ ಕನ್ನಡ ರಾಷ್ಟ್ರೀಯತೆಗೆ ಸಂಬಂಧಿಸಿದ ಹಿಂಸಾಚಾರ, ನೆರೆದೇಶಗಳಿಂದ ಬರುವ ಕೋಮು ಹಿಂಸಾಚಾರಕ್ಕೆ ಸ್ಥಳೀಯ ‘ಸ್ಲೀಪರ್ ಸೆಲ್ಲು'ಗಳ ಸಹಕಾರ, ಕೇರಳದ ಮಲ್ಲಪುರಂ ಜಿಲ್ಲೆಯಿಂದ ನಿರ್ಯಾತ ಗೊಳ್ಳುತ್ತಿರುವ ನಿರುದ್ಯೋಗಿ ಜಿಹಾದಿಗಳು - ಈ ಎಲ್ಲವುಗಳ ಮೂಲಸೆಲೆ ಇರುವುದೇ ಸಿ.ಎಸ್.ಟಿಗೂ ತಾಜ್‍ಗೂ ಇರುವ ಅಂತರದಲ್ಲಿ. ಹೀಗಾಗಿ ನಮ್ಮ ಅನಾಮಿಕ ಅತಿಥಿಗಳ ಸಿಟ್ಟಿನ ಹಿಂದಿರುವ ‘ಅಸಮಾನತೆ'ಯ ಮೂಲಸೆಲೆಗಳನ್ನು ನಾವು ಗುರುತಿಸದೇ ಹೋದರೆ ಭವಿಷ್ಯವೂ ಭೀಕರವಾಗುತ್ತದೆ. ಹೀಗಾಗಿಯೇ ತಾಜ್ ಕಾಂಡದ ನಂತರ ದೇಶದ ಒಳಭದ್ರತೆಗೆ ನಾವು ಎಷ್ಟು ಆರ್ಥಿಕ ಸವಲತ್ತುಗಳನ್ನು ಒದಗಿಸಬೇಕೋ ಅಷ್ಟೇ ಮುಖ್ಯವಾಗಿ ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ವಿಕಾಸದ ಸೂತ್ರಗಳತ್ತ ನಮ್ಮ ಧ್ಯಾನವನ್ನು ಕೇಂದ್ರೀಕರಿಸಬೇಕಾಗಿದೆ. ಹೀಗಾಗಿಯೇ ಮಾರುಕಟ್ಟೆಯ ಸೂತ್ರಗಳ ಮೇಲೆಯೇ ಅತಿಯಾಗಿ ಆಧಾರಿತವಾಗಿರುವ ನಮ್ಮ ಆರ್ಥಿಕ ನೀತಿಯನ್ನು ಸ್ವಲ್ಪ ಮಟ್ಟಿಗಾದರೂ ಸಾಮಾಜಿಕ ಸೂತ್ರಗಳತ್ತ ಎಳೆಯುವುದು ಅವಶ್ಯಕ ಅನ್ನುವ ಪರಿಸ್ಥಿತಿಗೆ ನಾವು ಬರುತ್ತಿದ್ದೇವೆ.


ಈ ಕಾಂಡ ನಡೆಯುತ್ತಿದ್ದಾಗ ಹೆಚ್ಚಿನ ಸದ್ದಿಲ್ಲದೇ-ಸುದ್ದಿಯಿಲ್ಲದೇ ಅಸುನೀಗಿದ ಹಿಂದುಳಿದ ಜಾತಿಗಳ ‘ರಾಜ' ವಿ.ಪಿ.ಸಿಂಗ್ ಅವರನ್ನು ನಾವೆಲ್ಲ ಈ ಆತಂಕದ ನಡುವೆ ಮರೆತೇ ಬಿಟ್ಟೆವು. ಅವರ ಸಾವು ಅವರು ಪ್ರತಿಪಾದಿಸಿದ ವಿಚಾರಗಳನ್ನು ನಾವು ಪುನರಾವಲೋಕನ ಮಾಡಲೂ ಸಾಧ್ಯವಾಗದಷ್ಟು ಮರೆಗುಳಿತನವನ್ನು ನಮಗೆ ದಯಪಾಲಿಸದಿರಲಿ. ಅವರು ಪ್ರತಿಪಾದಿಸಿದ ಕೆಲವು ಸೂತ್ರಗಳನ್ನು ಈ ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಮತ್ತೆ ವಿಚಾರ ಮಾಡೋಣ. ಗಾಂಧಿ, ನೆಹರೂ, ಇಂದಿರಾ, ಲೋಹಿಯಾರ ಅರ್ಥಸೂತ್ರದ ನಿಲುವುಗಳನ್ನು ಮರುಪರಿಶೀಲಿಸೋಣ. ದೂರದ ಪುಟ್ಟ ಹಳ್ಳಿಯಿಂದ ಬಸ್ಸು ಅಲ್ಲಿಂದ ರೈಲು ಹತ್ತಿ ಸಿ.ಎಸ್.ಟಿ ಸೇರಿ, ಬೇಸರವಾದಾಗ ಲಿಯೋಪೋಲ್ಡ್ ನಲ್ಲಿ ತಂಪಾದ ಬಿಯರು ಕುಡಿಯುವ, ತಾಜ್‍ನ ಐಷಾರಾಮವನ್ನು ಅನುಭವಿಸುವ ಕನಸನ್ನು ಕಾಣುವ ಅವಕಾಶವನ್ನಾದರೂ ನಾವು ನಿರ್ಮಾಣ ಮಾಡೋಣ. ಆ ಕನಸು ಇಲ್ಲದ ದಿನ ಆ ಕನಸಿನ ಪ್ರತೀಕವಾದ ಸ್ಥಾವರಗಳನ್ನು ಧ್ವಂಸ ಮಾಡುವ ಕೆಲಸ ಆರಂಭವಾಗುತ್ತದೆ. ನಾವು ಈಗಾಗಲೇ ಆ ಪ್ರಕ್ರಿಯೆ ಪ್ರಾರಂಭವಾಗಿರುವುದನ್ನು ಕಂಡಿದ್ದೇವಾದ್ದರಿಂದ, ನಮ್ಮ ಆತಂಕದ ಕಾಲ, ಆತಂಕವಾದದ ಕಾಲ ಸಧ್ಯದಲ್ಲೇ ಮುಗಿಯುವಂತೆ ಕಾಣುತ್ತಿಲ್ಲ.


No comments:

Post a Comment