Saturday, August 11, 2012

ಜೈ ಅಂತ - ವಾಹ್ ತಾಜ್


ಮುಂಬಯಿಗೆ ನಾನು ಅನೇಕ ಬಾರಿ ಹೋಗಿದ್ದರೂ, ಕೆಲವು ಯಾತ್ರೆಗಳು ಮಾತ್ರ ನೆನಪಿನಲ್ಲಿ ಉಳಿಯುಂವಥಹವಾಗಿವೆ. ಮೊದಲ ಬಾರಿಗೆ ನಾನು ಮುಂಬಯಿಗೆ ಹೋದಾಗ ನಾನು ಹದಿನಾರುವರುಷದವನಾಗಿದ್ದೆ. ಒಬ್ಬನೇ ಹೋಗಿ ಮುಲುಂದಿನ ನನ್ನ ಬಂಧುಗಳ ಮನೆಯಲ್ಲಿ ಉಳಿದು ಮುಂಬಯಿಯನ್ನು ನೋಡಿಬಂದಿದ್ದೆ. ಗೇಟ್‌ವೇ, ವಿಟಿ, ಲೋಕಲ್ ರೈಲು ಎಲ್ಲದರ ಅನುಭವವೂ ಆಗಿತ್ತು. ಪ್ರತಿದಿನ ನಾನು ಪೀಕ್ ಅವರ್ ತಪ್ಪಿಸಿ ಹೊರಗೆ ಹೋಗುವುದು, ಮತ್ತೆ ಯಾವ ಕಷ್ಟವೂ ಇಲ್ಲದೇ ವಾಪಸ್ಸಾಗುವುದು, ಒಟ್ಟಾರೆ ಮುಂಬಯಿ ಎಂದರೆ ಬಂದವರ ಭೀತಿಯೊಂದಿಗೆ ಅತಿಥೇಯರ ಭೀತಿಯೂ ಇರುತ್ತಿತ್ತು ಅನ್ನಿಸುತ್ತದೆ. ಮೊದಲ ಯಾವ ತೊಂದರೆಯೂ ಇಲ್ಲದೇ ಆಯಿತು. ಅನೇಕ ಸ್ಥಳಗಳನ್ನು ನೋಡಿದೆ ಹಾಗೂ ಒಂದು ವಿಚಿತ್ರ ಭಾವನೆಯೊಂದಿಗೆ ವಾಪಸ್ಸಾದೆ. ರಾಘವೇಂದ್ರ ಪಾಟೀಲರ ಅಜ್ಞಾತ ಮುಂಬಯಿ ಓದಿದಾಗ ನನ್ನ ಮೊದಲ ಭೇಟಿಯ ನೆನಪಾಯಿತು.

ಆ ನಂತರ ನಾನು ಆಣಂದದಲ್ಲಿ ಓದುತ್ತಿದ್ದುದರಿಂದ ಅನೇಕ ಬಾರಿ ಮುಂಬಯಿಯನ್ನು ದಾಟಿ ಹೋಗಬೇಕಿತ್ತು. ಆಗೆಲ್ಲಾ ಇದ್ದ ಲಗೇಜು ಪುಸ್ತಕಗಳನ್ನು ಹೊತ್ತು ರೈಲು ನಿಲ್ದಾಣಗಳನ್ನು ಬದಲಾಯಿಸುವ ಲೋಕಲ್ ರೈಲಿನಲ್ಲಿ ಲಗೇಜಿನೊಂದಿಗೆ ಹೋಗುವ ಟೆನ್ಷನ್ ತುಂಬಿರುತ್ತಿತ್ತು. ಆಣಂದಕ್ಕೆ ಹೋಗಲು ಮೊದಲು ಬೆಂಗಳೂರಿನಿಂದ ಮುಂಜಾನೆ ಮುಂಬಯಿಗೆ ಬರುತ್ತಿದ್ದ ಉದ್ಯಾನ್ ಎಕ್ಸ್‌ಪ್ರೆಸ್‌ನಲ್ಲಿ ಬಂದು ರಾತ್ರೆ ಸೆಂಟ್ರಲ್ ಸ್ಟೇಷನ್‌ನಿಂದ ಹೊರಡುವ ಗುಜರಾತ್ ಮೆಯಿಲನ್ನು ಹತ್ತಬೇಕಿತ್ತು. ವಿಟಿಯಿಂದ ಸೆಂಟ್ರಲ್‌ಗೆ ಟ್ಯಾಕ್ಸಿಯಲ್ಲಿ ಹೋಗಲು ಆಗುವ ಹದಿನೈದು ರೂಪಾಯಿಯನ್ನೂ ಉಳಿಸುವ ವಿಧಾನವನ್ನು ನಾವುಗಳು ಹುಡುಕುತ್ತಿದ್ದೆವು... ಹೀಗಾಗಿ ದಾದರಿನಲ್ಲಿ ಇಳಿದು ಆಚೆಬದಿಗೆ ಬಂದು ವೆಸ್ಟರ್ನ್ ಲೈನಿನಲ್ಲಿ ಮುಂಬಯಿ ಸೆಂಟ್ರಲ್‌ಗೆ ಹೋಗಿ ಸೇರುವ ಹರಸಾಹಸವನ್ನು ನಾವೆಲ್ಲ ಹೊರನಾಡಿಗರು ಮಾಡುತ್ತಿದ್ದೆವು. ಒಂದೆರಡು ಬಾರಿ ಈ ಪ್ರಕ್ರಿಯೆಯ ನಂತರ ನಮ್ಮ ರೊಟೀನನ್ನು ನಾವು ತೀಡಿತಿದ್ದಿದ್ದೆವು. ಮುಂಜಾನೆ ಸೆಂಟ್ರಲ್ ಸೇರುವುದು. [ಶುಭ್ರವಾಗಿ ಇರುತ್ತಿದ್ದ] ವೈಟಿಂಗ್ ರೂಮಿನ ಬಾತ್‌ರೂಮಿನಲ್ಲಿ ಸ್ನಾನಾದಿಗಳನ್ನು ಮಾಡುವುದು. ಲಗೇಜನ್ನು ಕ್ಲೋಕ್ ರೂಮಿನಲ್ಲಿ ಇಟ್ಟು ಹೊರಹೋಗಿ ಎದುರಿನ ಉಡುಪಿ ಹೊಟೆಲಿನಲ್ಲಿ ತಿಂಡಿತಿನ್ನುವುದು, ಮರಾಠಾಮಂದಿರದಲ್ಲಿ ಸಿನೆಮಾ ನೋಡುವುದು, ಮತ್ತೆ ರಾತ್ರೆಯ ಥಾಲಿಯನ್ನು ಉಡುಪಿಯಲ್ಲಿ ತಿಂದು ರೈಲು ಹತ್ತುವ - ಬೇಕಾದಷ್ಟುಮಾತ್ರ ಮುಂಬಯಿಯ ಅನುಭವವಾನು ಆವಾಹಿಸುವ ರೀತಿಯಲ್ಲಿ ಜಾಗರೂಕರಾಗಿ ಇರುತ್ತಿದ್ದೆವು. ಈ ನಡುವೆ ಪರ್ಸು ಕಳೆದುಕೊಂಡ ದುಡ್ಡೇ ಇಲ್ಲದ ದೊಡ್ಡ ನಗರಿಯ ಅನುಭವವೂ ಒಮ್ಮೆ ಆಯಿತೆನ್ನಿ. ಆದರೆ ಆ ಕಾಲಘಟ್ಟದಲ್ಲಿ, ಮುಂಬಯಿಯಿಂದ ಆದಷ್ಟೂ ದೂರವಿರುವ, ಆ ಊರನ್ನು ಮುಟ್ಟದೇ ಸಾಗುವ ಎಲ್ಲ ಮಾರ್ಗಗಳನ್ನೂ ನಾನು ಹುಡುಕುತ್ತಿದ್ದೆ. ಆಣಂದದಿಂದ [ವಿದ್ಯಾರ್ಥಿಯಾಗಿ] ಕೈಗೊಂಡ ಕಡೆಯ ಯಾತ್ರೆಯನ್ನುವಾರಕ್ಕೊಮ್ಮೆ ನೇರವಾಗಿ ನಂದೂರ್‌ಬಾರ್ ಮನ್‌ಮಾಡ್ ಕಡೆಯಿಂದ ಬರುವ ರೈಲಿನಲ್ಲಿ ಹತ್ತಿದ್ದೇ ಮುಂಬಯಿಯನ್ನು ಮುಟ್ಟದಿರಲು. ಹೀಗಾಗಿ ನನ್ನ ಮುಂಬಯಿ ಪ್ರೀತಿ ಅಷ್ಟಕ್ಕಷ್ಟೇ ಇತ್ತೆನ್ನಬಹುದು.

ಮುಂಬಯಿಯ ಬಗ್ಗೆ ನನ್ನ ಭಾವನೆಗಳು ಬದಲಾಗುವಂತಹ ಯಾತ್ರೆಯೂ ಕಡೆಗೆ ನನಗೆ ಪ್ರಾಪ್ತವಾಯಿತು. ಆ ಯಾತ್ರೆ ನನಗೆ ಮುಂಬಯಿನ ಪ್ರತೀಕವನ್ನು ಲೋಕಲ್ ರೈಲಿನಿಂದ, ಪಿಕ್ ಪಾಕೆಟ್ ಆಗುವ ಬಡಪಾಯಿ ಓಡಾಡುವ ಮಾಯಾನಗರಿಯಿಂದ, ತಾಜ್ ಹೋಟೇಲು ಗೇಟ್‌ವೇಯಿಂದ, ಮತಲಬಿತನದಿಂದ, ಬದಲಾಯಿಸಿಬಿಟ್ಟಿತು. ಆ ಯಾತ್ರೆಯ ನಂತರ ನನಗೆ ಮುಂಬಯಿನ ಪ್ರತೀಕವೆಂದರೆ ಚಿತ್ತಾಲ, ಜಯಂತ ಕಾಯ್ಕಿಣಿ, ಜಹಾಂಗೀರ್ ಗ್ಯಾಲರಿ, ಆರ್ಟ್ ಪ್ಲಾಜಾ, ಮುಕುಂದ ಜೋಶಿ, ಬೆಸ್ಟ್ ಬಸ್ಸು, ಮುಲುಂದದ ಆಟೊರಿಕ್ಷಾ, ಹಾಗೂ ಲೇಡೀಸ್ ಬಾರ್ ಇರಾನೀ ಹೋಟೆಲಿನ ಪಿಲ್ಸ್‌ನರ್ ಬಿಯರು - ಚಪಟ್ ಚನಾ, ಇವುಗಳಲ್ಲವೂ ಆದುವು. ಇದ್ದ ಜಾಗದಲ್ಲಿ ಗೋಡೆಯಿಂದ ಕೆಳಗಿಳಿಯುವ ಟೇಬಲ್ಲು - ಸೋಫಾದಿಂದ ಉದ್ಭವವಾಗುವ ಬೆಡ್ಡು - ವಡಾಪಾವ್, ಜ್ಯೂಸ್ ಸೆಂಟರಿನ ಮೂಸಂಬಿ ಜ್ಯೂಸು, ಹಾಗೂ ರಸ್ತೆಬದಿಯ ಬನಾರಸಿ ಪಾನು. ಇದ್ದಕ್ಕಿದ್ದಂತೆ ನನಗೆ ಮುಂಬಯಿನ ಅರ್ಥವೇ ಬದಲಾದಂತೆ ಆಗಿತ್ತು. ಇದಕ್ಕೆ ಕಾರಣ ಜಯಂತ ಕಾಯ್ಕಿಣಿ. ನಾನು ಮತ್ತು ಕೆಲ ಗೆಳೆಯರು ಸೇರಿ ಜಯಂತನ "ದಗಡೂ ಪರಬನ ಅಶ್ವಮೇಧ" ಪುಸ್ತಕವನ್ನು ಪ್ರಕಟಿಸಿದ್ದೆವು. ಆ ಪುಸ್ತಕದ ಪ್ರತಿಗಳನ್ನು ತೆಗೆದು ನಾನು ಅವನ ಮನೆಗೆ ಹೋಗಿದ್ದೆ. ಅಲ್ಲೇ ಉಳಿದುಕೊಂಡೂ ಇದ್ದೆ. ಮತ್ತು ಜಯಂತನ ಶಿಫ್ಟಿಗನುಸಾರವಾಗಿ ಅವನು ನನಗೆ ಮುಂಬಯಿನ ದರ್ಶನ ಮಾಡಿಸಿದ್ದ.

ಆಗ ಕಂಡ ಮುಂಬಯಿಯೇ ಭಿನ್ನ ಮುಂಬಯಿಯಾಗಿತ್ತು. ನಾನು ಹೋಗಲು ಹೆದರುತ್ತಿದ್ದ ಬೇಸರಗೊಳ್ಳುತ್ತಿದ್ದ ನಗರವನ್ನು ನಾನು ಬೇರೊಂದು ದೃಷ್ಟಿಯಿಂದ ಜಯಂತ ಮುಂಬಯಿಯನ್ನು ಕಾಣಿಸಿದ್ದ. ಆಗ ನಾವುಗಳು ಮುಂಬಯಿನ ಅನೇಕ ಮುಖಗಳನ್ನು ನೋಡಿದೆವು. ಕಮಲಾಕ್ಷ ಶಣೈ ಜೊತೆ ಇರಾಣಿ ಹೋಟೇಲಿನಲ್ಲಿ ಬಿಯರು ಕುಡಿದದ್ದು, ಸ್ಟ್ರಾಂಡ್ ಬುಕ್ ಸ್ಟಾಲಿಗೆ ಹೋದದ್ದು, ದಗಡೂದ ಪ್ರತಿಗಳನ್ನು ಮಾರಲು ವಿದ್ಯಾನಿಧಿ ಬುಕ್ ಷಾಪಿಗೆ ಹೋದದ್ದು, ಜಯಂತನ ಅಸಂಖ್ಯ ಗೆಳೆಯರನ್ನು ಕಂಡದ್ದು ಎಲ್ಲವೂ ನನಗೆ ಮುಂಬಯಿ ನಗರವನ್ನು ಭಿನ್ನರೀತಿಯಲ್ಲಿ ನೋಡಲು ಪ್ರೇರೇಪಿಸಿತ್ತು. ಒಂದುರೀತಿಯಲ್ಲಿ ಆನಂತರದ ಎಲ್ಲ ಭೇಟಿಗಳೂ ಜಯಂತನ ಮೂಲಕವೇ ಆದವು. ಕಳೆದ ಏಳೆಂಟು ವರ್ಷಗಳಿಂದ ಜಯಂತ ಮುಂಬಯಿಯಲ್ಲಿಲ್ಲ. ಹಾಗೂ ನನ್ನ ಯಾತ್ರೆಗಳೂ ಬಹಳ ಮತಲಬಿಯ - ರೈಲು ನಿಲ್ದಾಣ ಬಿಟ್ಟು ಏರ್‌ಪೋರ್ಟಿನ ಮೂಲಕ ಹಾದು ಹೋಗುವ, ಆಗಾಗ ಬಾಂದ್ರಾದಲ್ಲಿರುವ ಚಿತ್ತಾಲರನ್ನು ನೋಡುವ ಒಂದು ಪಾಸ್ ಥ್ರೂ ಆಗಿಬಿಟ್ಟಿದೆ.

ಆದರೆ ಗೇಟ್‌ವೇಯ ಮೇಲೆ ಕಣ್ಣಿಟ್ಟಿರುವ ತಾಜ್ ಹೋಟೇಲನ್ನು ನಾನು ತುಸು ಬೆರಗಿನಿಂದಲೇ ನೋಡುತ್ತಾ ಬಂದಿದ್ದೆ. ಮೊದಲ ಬಾರಿಗೆ ಒಂಟಿಯಾಗಿ ಹೋದಾಗ ಅಲ್ಲಿ ಬರೇ ಸಲಾಮು ಹೊಡೆಯುವ, ಕಾರಿನ ಬಾಗಿಲನ್ನು ತೆಗೆದು ಜನರನ್ನು ಬರಮಾಡಿಕೊಳ್ಳುವ, ಪುರಾತನ ಅರಮನೆಗಳಲ್ಲಿ ಧರಿಸುತ್ತಿದ್ದ ದಿರಿಸಿನಂತಹ ಬಟ್ಟೆಗಳನ್ನು ಧರಿಸಿರುವ ದ್ವಾರಪಾಲಕರನ್ನು ನೋಡಿ ಹೊಟ್ಟೆಯುರಿ ಆಗಿತ್ತು. ಒಂದೊಂದು ಸೆಲ್ಯೂಟಿಗೂ ಎರಡು, ಐದು, ಹತ್ತು ರೂಪಾಯಿ ಗಿಟ್ಟಿಸುತ್ತಿದ್ದ ಈ ದ್ವಾರಪಾಲಕರು ಕೆಲ ದೇವಸ್ಥಾನಗಳ ಅರ್ಚಕರು ಆರತಿಯ ಹಣವನ್ನು ಜೇಬಿಗೆ ಸೇರಿಸುವ ರೀತಿಯಲ್ಲಿಯೇ ಒಳಕ್ಕೆ ತಳ್ಳುತ್ತಿದ್ದುದು ನೋಡಿ, ಈ ಕೆಲಸವೇ ಛಲೋ ಅನ್ನಿಸಿತ್ತು. ಆದರೆ ಹೋಟೇಲಿನ ಸಮೀಪ ಹೋಗುವ ಧೈರ್ಯವಾಗಿರಲಿಲ್ಲ. ಆಗ ನನಗೆ ಹದಿನಾರು. ಜಯಂತನ ಜೊತೆ ಮತ್ತೆ ಆ ಇಲಾಖೆಯಲ್ಲಿ ಓಡಾಡಿದಾಗ ನಾವು ಗೇಟ್‌ವೇ, ತಾಜ್ ಹೋಟೆಲಿನ ಹಿಂದಿನ ಗಲ್ಲಿಯಲ್ಲಿ ಕ್ರೌನ್ ಅನ್ನುವ ಹೊಟೇಲಿಗೆ ಹೋಗಿ ಆ ಇಲಾಖೆಯಲ್ಲಿ ಓಡಾಡಿದೆವಾದರೂ ತಾಜನ್ನು ಹೊಕ್ಕುಬರುವ ಧೈರ್ಯವಾಗಲಿಲ್ಲ. ಆದರೂ ಜಯಂತನ ಧೈರ್ಯದ ಮೇರೆಗೆ ಅಲ್ಲಿದ್ದ ಒಂದು ಕೋಣೆಯಲ್ಲಿ ನಡೆಯುತ್ತಿದ್ದ ಇಮ್ತಿಯಾಜ್ ಧರ್ಕರಳ ಪೇಂಟಿಂಗ್ ಪ್ರದರ್ಶನವನ್ನು ನೋಡಿ ಬಂದಿದ್ದೆವು. ಆಗ ನನಗೆ ಇಪ್ಪತ್ತೈದು.

ಆ ನಂತರ ಅನೇಕ ಬಾರಿ ಮುಂಬಯಿಗೆ ಹೋಗಿದ್ದೇನೆ. ಏರಪೋರ್ಟಿನ ಬಳಿಯಿರುವ ಅತಿಥಿ ಹೋಟೇಲಿನಿಂದಾದಿಯಾಗಿ ಹೈಯಟ್ ವರೆಗೂ ಭಿನ್ನ ಹೋಟೇಲುಗಳಲ್ಲಿ ತಂಗುವ ಅವಕಾಶ ಸಿಕ್ಕಿದೆಯಾದರೂ ತಾಜ್ ನನಗೆ ದೂರವಾಗಿ ಇತ್ತು. ಹಾಗೆ ನೋಡಿದರೆ ನಾನೇನೂ ಅಮಿತಾಭ್ ಚಿತ್ರಗಳಲ್ಲಿ "ಒಂದು ದಿನ ಈ ಹೋಟೇಲಿನ ಮಾಲೀಕ ನಾನಾಗುತ್ತೇನೆ" ಎಂದು ಶಪಥ ಮಾಡುವಂತೆ ಶಪಥವೂ ಮಾಡಿರಲಿಲ್ಲ, ಅಲ್ಲಿ ಇರಬೇಕೆಂಬ ತಪನೆಯನ್ನೂ ಇಟ್ಟುಕೊಂಡಿರಲಿಲ್ಲ. ಆದರೆ ಕಳೆದ ವರ್ಷ ನನಗೆ ತಾಜ್ ಹೋಟೇಲಿನಲ್ಲಿ ತಂಗುವ ಅವಕಾಶ ಬಯಸದೆಯೇ ಬಂತು. ಆ ನಂತರ ಬಹುಶಃ ಆರೆಂಟುಬಾರಿ ತಾಜ್‌ನಲ್ಲಿ ತಂಗಿದ್ದೇನೆ. ಆದರೂ ಆ ಹೋಟೆಲಿನ ಬಗ್ಗೆ ನನಗೇನೂ ಅನ್ನಿಸಿರಲಿಲ್ಲ. ಬದಲಿಗೆ, ಬಾಗಿಲಲ್ಲಿ ಸೆಲ್ಯೂಟ್ ಹೊಡೆಯುವ ದ್ವಾರಪಾಲಕರಿಗೆ ಟಿಪ್ ನೀಡಬೇಕೇ? ನೀಡಿದರೆ ಎಷ್ಟು? ಹೊಟೇಲಿನ ಬಿಲ್ಲನ್ನು ಕಟ್ಟುವ ಮಹಾಶಯರು ಈ ಹಣವನ್ನು ನನಗೆ ಕೊಡುವುದಿಲ್ಲವಾದ್ದರಿಂದ ಈ ರೀತಿಯ ಜಾಗದಲ್ಲಿ ಇರುವುದು ನನಗೂ ತುಟ್ಟಿ ಅನ್ನಿಸತೊಡಗಿತ್ತು. ಒಮ್ಮೆ ದೆಹಲಿಯ ಹಯಾತ್‌ನಲ್ಲಿ ನನ್ನನ್ನು ತಂಗಲು ಏರ್ಪಾಟು ಮಾಡಿದ್ದ ಸಂಸ್ಥೆಯವರು ಊಟಕ್ಕೆ ಮಾತ್ರ ಡೈಲ ಅಲೋವೆನ್ಸ್ ಕೊಡುವುದಾಗಿ ಹೇಳಿ ನನ್ನನ್ನು ಪೀಕಲಾಟಕ್ಕಿಳಿಸಿದ್ದರು. ಮುಂಜಾನೆಯ ನಾಷ್ಟಾ ಮಾಡಲು ಮೆನು ನೋಡಿದರೆ ಮಸಾಲ ದೋಸೆಗೆ ಇನ್ನೂರು ರೂಪಾಯಿ... ನಾನು ಹೊಟೇಲಿನಿಂದ ಹೊರಗಡೆ ಬಂದು ಕನ್ನಡ ಸಂಘದ ಕ್ಯಾಂಟೀನಿನಲ್ಲಿ ತಿಂಡಿ ತಿಂದಿದ್ದೆ!! ಹೀಗಾಗಿ ದೊಡ್ಡ ಹೋಟೇಲುಗಳಲ್ಲಿ ಇರುವ ಅವಕಾಶ ನನಗೆ ಆಗೀಗ ಬಂದರೂ ಅದು ಖುಶಿಗಿಂತ ಮುಜುಗರವನ್ನೇ ಉಂಟು ಮಾಡುತ್ತದೆ.
ಇಷ್ಟುಬಾರಿ ಉಳಿದುಕೊಂಡಾಗಲೂ ನನ್ನ ಕೋಣೆಯಿಂದ ಕಾಣಿಸುತ್ತಿದ್ದದ್ದು ಶೇರುಬಜಾರಿನ ಕಟ್ಟಡ. ಆದರೆ ಹೋದಬಾರಿ ಮಾತ್ರ ಒಂದು ಚಮತ್ಕಾರವಾಯಿತು. ಜಯಂತ ಮಗಳು ಸೃಜನಾಳೊಂದಿಗೆ ಮುಂಬಯಿಯಲ್ಲಿ ಇರುತ್ತೇನೆ ಅಂದ. ನಾನೂ ಅಲ್ಲಿಗೆ ಹೋಗುವುದಿತ್ತಾದ್ದರಿಂದ ಇಬ್ಬರೂ ಭೇಟಿಮಾಡಿ ಕಮಲಾಕ್ಷ ಶಣೈ ನೆನಪಿಗೆ ಆತನ ಪ್ರಿಯವಾದ ಇರಾಣಿಯಲ್ಲಿ ಹೋಗಿ ಕಪ್ಪು ಬಾಟಲಿಯಿಂದ ಬಿಯರನ್ನು ಕುಡಿಯಬೇಕು ಅಂದುಕೊಂಡೆವು. [ಬಿಳಿ ಬಾಟಲಿಯಲ್ಲಿ ಬರುವ ಬಿಯರು ಡೂಪ್ಲಿಕೇಟ್ ಎನ್ನುವುದು ಶಣೈ ಅವರ ನಂಬಿಕೆಯಂತೆ!!] ನಾನು ಜಯಂತನನ್ನು ತಾಜ್‌ಗೆ ಆಹ್ವಾನಿಸಿದೆ. ಈ ಬಾರಿ ನನ್ನ ಕೋಣೆಯಿಂದ ಗೇಟ್‌ವೆ ಕಾಣಿಸುತ್ತಿತ್ತು!! ಜಯಂತ ಬಂದ, ಮತ್ತು ಮೊದಲಬಾರಿಗೆ ಅವನು ಕರ್ಟನ್ ಎಳೆದು ಗೇಟ್‌ವೇಯ ಇಂಥ ಅದ್ಭುತ ವಿಹಂಗಮ ನೋಟ ತಾನು ನೋಡಿಯೇ ಇಲ್ಲ ಅಂದ. ನಾನೂ ನೋಡಿರಲಿಲ್ಲ. ತಾಜ್‌ನ ಹದಿನಾರನೇ ಮಹಡಿಯಿಂದ ಕಂಡ ದೃಶ್ಯವನ್ನು ಮೂರೂ ಜನ ಚಪ್ಪರಿಸಿದೆವು. ನಂತರ ಇರಾಣಿಯಲ್ಲಿ ಬಿಯರು, ಒಂದು ಬನಾರಸಿ ಪಾನು, ಮತ್ತೆ ಕೋಣೆಗೆ ಬಂದು ರಾತ್ರೆಯ ಕತ್ತಲಲ್ಲಿ ಬೆಳಗಿ ನಿಂತಿದ್ದ ಗೇಟ್‌ವೇ!! ತಾಜ್ ಒಳಗಿನಿಂದಲೂ ಮುಂಬಯಿಯನ್ನು ಮೆಚ್ಚಲು ಕಾರಣನಾಗಿದ್ದವನು ಜಯಂತನೇ ಎಂಬುದು ನನಗೆ ಥಟ್ಟನೆ ಹೊಳೆಯಿತು...

ಜಯಂತ ಸೃಜನಾ ಹೊರಟುಹೋದರು. ಬಿಯರು ಕುಡಿದಿದ್ದೆನೇ ಹೊರತು ಊಟ ಆಗಿರಲಿಲ್ಲ. ಏನಾದರೂ ತಿನ್ನೋಣವೆಂದು ಮೆನು ತಿರುವಿ ಹಾಕಿದೆ. ಕಿಚಡಿ ಮುನ್ನೂರೈವತ್ತು ರೂಪಾಯಿ, ಮೊಸರನ್ನ ಐನೂರು ರೂಪಾಯಿ, ಥಾಲಿ ಏಳುನೂರೈವತ್ತು ರೂಪಾಯಿ. ದುಡ್ಡು ನನ್ನ ಜೇಬಿನಿಂದ ಹೋಗುವುದಿಲ್ಲವಾದರೂ ಬೇರೆಯವರಿಂದ ಖರ್ಚು ಮಾಡಿಸಲು ಕೂಡಾ ಇದು ಹೆಚ್ಚೆನ್ನಿಸಿತು. ಹೊರಗೆ ಮತ್ತೆ ಹೋಗುವ ಮನಸ್ಸಾಗಲಿಲ್ಲ. ಗೇಟ್‌ವೇ ನೋಡುತ್ತಾ ಸ್ವಲ್ಪ ಹೊತ್ತು ಕತ್ತಲಲ್ಲಿ ಕೂತೆ. ಹಾಗೆಯೇ ನಿದ್ದೆ ಅಂಟಿಬಿಟ್ಟಿತು. ಮಧ್ಯರಾತ್ರಿ ಎಚ್ಚರವಾದಾಗ ನಾನು ಸೋಫಾದಲ್ಲೇ ವಾಲಿದ್ದೆ. ತಾಜ್‌ನ ಊಟವಿಲ್ಲದಿದ್ದರೇನು ಕನಿಷ್ಟ ಪಲ್ಲಂಗವಾದರೂ ಇರಲಿ ಅನ್ನಿಸಿ ಮತ್ತ ಹಾಸಿಗೆಯ ಮೇಲೆ ಅಡ್ಡಾದೆ.

೧೧-ಸೆಪ್ಟೆಂಬರ್-೨೦೦೭

No comments:

Post a Comment