Sunday, August 26, 2012

ಬದಲಾದ ಬೆಂಗಳೂರಿಗೆ ಬರಲಾಗಿ...


ಬೆಂಗಳೂರಿಗೆ ವಾಪಸ್ಸಾಗಿ ಇಲ್ಲಿ ತಳವೂರುವುದು ನನಗಿದ್ದ ಕನಸುಗಳಲ್ಲಿ ಒಂದಾಗಿತ್ತು. ಹಾಗೆ ನೋಡಿದರೆ ನಿಜವಾದ ಬೆಂಗಳೂರಿಗ ವಲಸೆ ಹೋಗುವುದೇ ಇಲ್ಲ. ಇಲ್ಲಿಯೇ ಪಿಂಚನಿ ದೊರೆಯಬಹುದಾದ ಒಳ್ಳೆಯ ಕೆಲಸ ಸಿಕ್ಕರೆ, ಹೊರಗೆ ದೊರೆಯಬಹುದಾದ ತುಸು ಹೆಚ್ಚು ಹಣ, ಅಥವಾ ಹುದ್ದೆಯನ್ನು ನಾವು ತಿರಸ್ಕರಿಸುವವರೇ. ಸುಮ್ಮನೆ ಯಾಕೆ ರಿಸ್ಕ್ ತೆಗೆದುಕೊಳ್ಳಬೇಕು? ಇದ್ದಹಾಗೆ ಇರಲು ಸಾಧ್ಯವಾದರೆ ಅದಕ್ಕಿಂತ ಹೆಚ್ಚಿನ ತೃಪ್ತಿ ಬೇರೇನಿದೆ. ಹೀಗಾಗಿಯೇ ಬೆಂಗಳೂರಿಗರ ಮನಸ್ಥಿತಿಯನ್ನು ವಿವರಿಸಲು ಸರಿಯಾದ ವಿಶೇಷಣವೆಂದರೆ ಅಡ್ಜಸ್ಟ್ಅನ್ನವ ಪದವೇ ಇರಬಹುದು. ಬೆಂಗಳೂರಿಗೆ ಆಗಾಗ ಬಂದು ಹೋಗುತ್ತಿರುವ ನನಗೆ ಒಳ-ಹೊರಗಿನ ಎರಡೂ ನೋಟಗಳು ಸಿಕ್ಕಿರುವುದರಿಂದ ಇಲ್ಲಿನ ಬದಲಾವಣೆಗಳು ಯಾವ ದಿಗ್ಭ್ರಾಂತಿಯನ್ನೂ ಉಂಟುಮಾಡಿಲ್ಲ. ಊರು, ಒಂದು ರೀತಿಯಲ್ಲಿ ಹಿಂದಿನಷ್ಟೇ ಆರಾಮವಾಗಿ ಸೋಮಾರಿಯಾಗಿದೆ. ಆಗಾಗ ತಕ್ಷಣದ ಚಟುವಟಿಕೆ ಕಾಣುತ್ತದೆ. ಹಾಗೂ ಎಷ್ಟು ಅಸ್ತವ್ಯಸ್ತವಾಗಬಹುದೋ ಅಷ್ಟೂ ಅಸ್ತವ್ಯಸ್ತವಾಗಿದೆ. ಇಲ್ಲಿ ಸಹನಶೀಲತೆ, ಅಸಹನೆ, ಸಹಿಷ್ಣುತೆ ಎಲ್ಲವೂ ಏಕಕಾಲಕ್ಕೆ ಆಗುವುದನ್ನ ನಾವು ಕಾಣುತ್ತಿದ್ದೇವೆ. ನಮಗೆ ನಮ್ಮ ರಜನಿ ಸಾರ್ [ಹೆಸರು: ಶಿವಾಜಿರಾವ್ ಗಾಯಕ್ ವಾಡ್, ತಾಯ್ನುಡಿ: ಮರಾಠಿ, ಕನ್ನಡ ಚೆನ್ನಾಗಿ ಬಲ್ಲ ತಮಿಳು ಸಿನೇಮಾದ ಸೂಪರ್ ಹೀರೋ] ಸಿನೇಮಾಗಳೆಂದರೆ ಪ್ರೀತಿ. ಆತ ಬೆಂಗಳೂರಿಗ, ಕನ್ನಡಿಗ ಅನ್ನುವ ಹೆಮ್ಮೆ. ಆದರೂ ಆತನಿರುವ ನಾಡು ನೀರನ್ನು ಕೇಳಿದರೆ ನಾವು ಉರಿದೇಳುತ್ತೇವೆ. ನೀರು ಕನ್ನಡತನದ ಪ್ರತೀಕವಾದಾಗ ಊರೆಲ್ಲ ಹಳದಿ-ಕೆಂಪು ಬಾವುಟಗಳು ಹಾರಾಡುತ್ತವೆ. ಈ ಬಣ್ಣ ಮತ್ತು ಈ ಬಣ್ಣದ ಬಾವುಟಗಳು ಅಪಾಯಕಾಲದ ಕವಚಗಳಾಗಿ ಇರುತ್ತವೆ.

ಅನೇಕ ವರ್ಷಗಳಿಂದ ಮುಸುಕಿನಲ್ಲಿ ಕುಳಿತಿದ್ದ ತಿರುವಳ್ಳುವರ್ ಪುತ್ಥಳಿ ಇದ್ದಕ್ಕಿದ್ದಂತೆ ಬೆಳಕನ್ನು ನೋಡುತ್ತದೆ. ಅದಕ್ಕೆ ಮೂಲ ಎರಡು ರಾಜ್ಯಗಳ ನಡುವಿನ ಶಾಂತ ಸಂಬಂಧ, ಹಾಗೂ ಅಲ್ಲಿ ಅನಾವರಣಗೊಂಡ ಕವಿ ಸರ್ವಜ್ಞನ ಪುತ್ಥಳಿ. ಇದು ನಮಗೆ ಅ-ಶಾಂತ ಶಾಂತಿಯನ್ನು ನೀಡಿದೆ. ನಗರಕ್ಕೆ ಬೆಂಕಿಯಿಕ್ಕಬಹುದಾಗಿದ್ದ ಈ ಘಟನೆ, ಯಾವದೇ ತೊಂದರೆಯಿಲ್ಲದೇ 2009ರಲ್ಲಿ ಮತ್ತೊಂದು "ನಗರದ ಕಾರ್ಯಕ್ರಮ"ವಾಗಿ ಸರಳವಾಗಿ ಏನೂ ಆಗದೇ ನಡೆದು ಹೋಯಿತು. ಬೆಂಗಳೂರಿಗನಾಗಿ ನನಗೆ ಮುಂಚಿದ್ದ ಕೋಪವೂ, ಈಗಿನ ಪ್ರಶಾಂತತೆಯೂ ಅರ್ಥವೇ ಆಗಿಲ್ಲ. ತಮಿಳು ಕನ್ನಡ ಸಂಬಂಧದಲ್ಲಿನ ತಿರುವನ್ನು ಇದು ಸೂಚಿಸುತ್ತದೆಯೇ? ನನಗಿನ್ನೂ ಗೊತ್ತಿಲ್ಲ.

ಹೊರನಾಡಿಗರ ಒಳವಲಸೆ ನಡೆಯುತ್ತಿರುವಂತೆಯೇ ಕನ್ನಡಿಗರು ಒಂದು ವಿಚಿತ್ರ ಆತ್ಮಾಭಿಮಾನದ ಠೀವಿಯಿಂದ ಮುನ್ನಡೆಯುತ್ತಿರುವಂತಿದೆ. ಈ ಆತ್ಮಾಭಿಮಾನ ಮತ್ತು ಠೀವಿ ಈಚೆಗೆ ಬೆಂಗಳೂರಿನಲ್ಲಿ ಭವ್ಯವಾಗಿ ನಡೆದ 77ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವ್ಯಕ್ತವಾಗಿತ್ತು. ಇಡೀ ನಗರವೇ ಆ ಹಬ್ಬಕ್ಕಾಗಿ ಅರಶಿನ ಕುಂಕುಮದ ಬಣ್ಣದಿಂದ ರಾರಾಜಿಸುತ್ತಿತ್ತು. 98 ವರ್ಷ ವಯಸ್ಸಿನ ಪ್ರೊ.ವೆಂಕಟಸುಬ್ಬಯ್ಯನವರು ನಲವತ್ತರ ಮಧ್ಯವಯಸ್ಕರ ಯೌವನೋತ್ಸಾಹದಲ್ಲಿ ಈ ಹಬ್ಬದಲ್ಲಿ ಪಾಲ್ಗೊಂಡಿದ್ದರು.

ನಮಗವರ ವಯಸ್ಸೂ ಕಾಣಲಿಲ್ಲ. ಅವರಿಗೆ ಅದರ ಅನುಭವವೂ ಆದಂತಿರಲಿಲ್ಲ. ಆತ, ಯಾವುದೇ ಸಂಕೋಚವಿಲ್ಲದೇ ಹೇಳಬೇಕಾದ್ದನ್ನು, ಮುಖ್ಯವಾಗಿ ಸರಕಾರದಲ್ಲಿರುವ ಭ್ರಷ್ಟಾಚಾರದ ವಿಚಾರವನ್ನೂ ಮಂಡಿಸಿದರು. ಅದರ ಫಲ ಮುಖ್ಯಮಂತ್ರಿಗಳು ಆ ಮಾತನ್ನು ಗಮನಿಸಿ ಪ್ರತಿಕ್ರಿಯಿಸುವ ಪ್ರಮೇಯ ಬಂತು. ಸಮ್ಮೇಳನದ ಪುಸ್ತಕದಂಗಡಿಗಳು ಜನಜಂಗುಳಿಯಿಂದ ತುಂಬಿ, ಪುಸ್ತಕ ಮಾರಾಟ ಬಿರುಸಿನಿಂದ ನಡೆಯಿತು. ಇಪ್ಪತ್ತು ವರ್ಷಗಳ ಕೆಳಗೆ ಕನ್ನಡ ಭಾಷೆ ಕುಂದುತ್ತಿದೆ ಅದನ್ನು ರಕ್ಷಿಸಬೇಕು ಅನ್ನುವ ಕಾತರವನ್ನು ನಾವು ತೋರಿದ್ದೆವು. ನಮ್ಮ ಪ್ರಮುಖ ಲೇಖಕರೊಬ್ಬರು ಆಂಗ್ಲ ಟೈಪ್ ರೈಟರುಗಳನ್ನು ಅರಬ್ಬೀ ಸಮುದ್ರಕ್ಕೆ ಎಸೆಯಬೇಕೆನ್ನುವ ಕರೆಯನ್ನು ನೀಡಿದ್ದರು. ಆಡಳಿತದಲ್ಲಿ ಕನ್ನಡಕ್ಕೇ ಪ್ರಾಮುಖ್ಯತೆ ಇರಬೇಕೆನ್ನುವ ಕರೆಯಿತ್ತು. ಆದರೆ ಇಂದು ಭಾಷೆ ಎಷ್ಟು ಜೀವಂತಿಕೆ ತೋರಿಸುತ್ತಿದೆಯೆಂದರೆ ಬೆಂಗಳೂರಿಗ-ಕನ್ನಡಿಗ ಹೆಚ್ಚು ತಾಳ್ಮೆಯನ್ನೂ, ಆತ್ಮಾಭಿಮಾನವನ್ನೂ ತೋರಿಸುತ್ತಿರುವಂತಿದೆ. ಹೀಗಾಗಿಯೇ ಹೆಚ್ಚು ಸಹನಶೀಲತೆಯೂ ಇದೆಯೇನೋ. ಈ ಸಮ್ಮೇಳನವನ್ನು ಬಸವನಗುಡಿಗೆ ಬದಲು ಫ್ರೇಜರ್ ಟೌನಿನಲ್ಲೋ ಬಾನಸವಾಡಿಯಲ್ಲೋ ನಡೆಸಿದ್ದರೆ ಅದು ಇಷ್ಟೇ ಯಶಸ್ವಿಯಾಗುತ್ತಿತ್ತೇ? ಈ ಬಗ್ಗೆ ನಾನು ಯೋಚಿಸುತ್ತೇನೆ: ಬಹುಶಃ ಬೆಂಗಳೂರಿನಲ್ಲಿ ಭೂಗೋಳದೊಳಿಗಿನ ಭೂಗೋಳ, ಮಹಾನಗರದೊಳಗಿನ ಪೇಟೆಗಳು ಇವೆಯೆಂಬುದನ್ನ ನಾವು ಗುರುತಿಸಬೇಕೇನೋ..


ಸದಾ ಹೋರಾಟದಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆ ಸಮ್ಮೇಳನವನ್ನು ನಿರ್ವಹಿಸುವುದರಲ್ಲಿ ಮುಖ್ಯಪಾತ್ರ ವಹಿಸಿತ್ತು. ಹೋರಾಟಗಾರರು ಮುಖ್ಯವಾಹಿನಿಯಲ್ಲಿ ಸೇರಿಹೋದರೇ ಎನ್ನುವ ವಾದಸರಣಿಯನ್ನೂ ಇದು ತೆರೆಯಿತು. ಕರಾವೇ ತಮ್ಮ ಭೂಮಿಕೆಯನ್ನು ಪುನಃಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆಯೇ? ನಮಗೆ ಭಾಷೆಯ ಬಗೆಗೆ ಇನ್ನೂ ಆತಂಕವಿದೆಯೇ? ಯಾವುದೇ ಭಾನುವಾರ ಬೆಳಿಗ್ಗೆ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ ಕಲ್ಚರ್ ನ ವಾಡಿಯಾ ಹಾಲಿಗೆ ಹೋದರೆ ನಮಗೆ ಭಾಷೆಯ ಬಗ್ಗೆ ಯಾವುದೇ ಆತಂಕವಿರಬಾರದು ಅನ್ನುವ ಭಾವನೆ ಬರುತ್ತದೆ. ನಿಧಾನವಾಗಿ ಭಾನುವಾರ ಬೆಳಿಗ್ಗೆ ಅಲ್ಲಿಗೆ ಹೋದಲ್ಲಿ ಒಂದು ಮುಫತ್ತು ತಿಂಡಿ-ಕಾಫಿ ಸಿಗುವುದಲ್ಲದೇ ವೇದಿಕೆಯ ಮೇಲೊಬ್ಬ ಬರಹಗಾರ ಮೂರು ಅತಿಥಿಗಳು, ಹೊರಗೊಂದು ಪುಸ್ತಕ ಮಳಿಗೆ ಕಾಣಸಿಗುತ್ತದೆ. ನಮ್ಮ ಬರಹಗಾರರನ್ನೂ ಪ್ರಕಾಶಕರನ್ನೂ ಹಿಡಿದಿಡಲು ಯಾರಿಗೂ ಸಾಧ್ಯವಾಗಿಲ್ಲ. ಅಲ್ಲೆಲ್ಲೋ ಹಿನ್ನೆಲೆಯಲ್ಲೊಬ್ಬ ಓದುಗ ಚಪ್ಪಾಳೆ ತಟ್ಟುತ್ತ ಪುಸ್ತಕವನ್ನು ಕೊಳ್ಳುತ್ತಿರಬೇಕು.



ಬೆಂಗಳೂರು ಯಾವಗಲೂ ಹಲವು ಲೋಕಗಳಲ್ಲಿ, ಹಲವು ಮಜಲುಗಳಲ್ಲಿ ಬೆಳೆದಿದೆ. ಟೈಂಸ್ ಪ್ರಕಾಶಕರು ಜನಪ್ರಿಯ ಪತ್ರಿಕೆ ವಿಜಯ ಕರ್ನಾಟಕವನ್ನು ಕೊಂಡ ಕೆಲಕಾಲದಲ್ಲೇ ಈವರೆಗೂ ಗುಜರಾತು ಮತ್ತು ಆರ್ಥಿಕ ದೈನಂದಿನ ಪತ್ರಿಕೆಗಳಿಗೆ ಮೀಸಲಾಗಿದ್ದ ಕಾರ್ಯವನ್ನು ಕನ್ನಡಿಗರ ಮೇಲೆ ಎಸಗಿದರು: ಟೈಂಸ್ ಆಫ್ ಇಂಡಿಯಾ ಪತ್ರಿಕೆಯನ್ನು ಕನ್ನಡಾನುವಾದದಲ್ಲಿ ಪ್ರಕಟಿಸಲು ನಿರ್ಧರಿಸಿದ್ದು ಅನೇಕರಿಗೆ ಸೋಜಿಗವುಂಟುಮಾಡಿತು. ನಮ್ಮ ಪ್ರಮುಖ ಲೇಖಕರಾದ ಡಾ. ಯು.ಆರ್. ಅನಂತಮೂರ್ತಿಯವರಿಗಂತೂ ಇದರಿಂದ ವಿಪರೀತ ಸಿಟ್ಟೇ ಬಂತು. ಕನ್ನಡದ ಸೊಗಡನ್ನು ಮೆಚ್ಚಿ ಬೆಳೆದ, ಆ ಸೊಗಡನ್ನು ಬೆಂಗಳೂರಿನ ಪುನರ್ನಾಮಕರಣದ ಮೂಲಕ ಹೊರನಾಡಿಗರಿಗೂ ಹಬ್ಬಬೇಕು ಅನ್ನುವ ಆಶಯವಿದ್ದ ಅನಂತಮೂರ್ತಿಯವರಿಗೆ ಸಿಟ್ಟು ಬರುವುದರಲ್ಲಿ ಆಶ್ಟರ್ಯವೇನೂ ಇರಲಿಲ್ಲ.

ಭಾಷೆ ರಾಜ್ಯದಾದ್ಯಂತ ಇರುವ ವಿಚಾರವಾದರೂ, ರಾಜಧಾನಿಯಲ್ಲಿ ಇದರ ಮಹತ್ವವೇ ಬೇರೆ. ಭಾಷೆಯ ಬಗ್ಗೆ ಕಳಕಳಿಯಿರುವ ಮೇಧಾವಿಗಳೂ, ಬುದ್ದಿಜೀವಿಗಳೂ ಇಲ್ಲೇ ಇರುವುದರಿಂದ ಭಾಷೆಯ ಬಾವುಟವನ್ನು ಇಲ್ಲಿ ಎತ್ತಿ ಹಿಡಿಯುವುದು ಮುಖ್ಯವಾಗುತ್ತದೆ. ಔಟ್ ಲುಕ್ ಪತ್ರಿಕೆಗೆ ಬರೆವ ಸುಗತ ಶ್ರೀನಿವಾಸರಾಜು ಕನ್ನಡದ ಆತಂಕದ ಬಗ್ಗೆ ಆಗಿಂದಾಗ್ಗೆ ಬರೆಯುತ್ತಿರುತ್ತಾರೆ. ಕನ್ನಡವೇ ಉಚ್ಚರಿಸದ ರಾಮಚಂದ್ರ ಗುಹಾ ತನ್ನನ್ನು ಹೆಮ್ಮೆಯ ಕನ್ನಡಿಗನೆಂದು ವಿವರಿಸಿಕೊಂಡಾಗ ಆತನನ್ನು ನಮ್ಮ ನಡುವಿನಲ್ಲಿರಿಸಿಕೊಂಡು ಸಂಜೆಯ ಹರಟೆಯನ್ನು ಕೋಶೀಸ್ ನಲ್ಲಿ ನಡೆಸಲು ನಾವು ತಯಾರೇ. ಹೀಗಾಗಿ ಇಲ್ಲಿನ ಆತಂಕ ಕೇವಲ ಕನ್ನಡ ಭಾಷೆಯದ್ದಲ್ಲದೇ ಅದ್ದಕ್ಕೂ ಮೀರಿದ್ದು ಅನ್ನುವುದನ್ನ ನಾವು ಗಮನಿಸಬೇಕಿದೆ.


ಹೊಸದಾಗಿ ಹುಟ್ಟಿಕೊಂಡ ಲ್ಯಾಂಡ್ ಮಾರ್ಕ್, ಕ್ರಾಸ್ ವರ್ಡ್ ಪುಸ್ತಕದಂಗಡಿಗಳನ್ನು ಅಪ್ಪಿಕೊಳ್ಳುತ್ತಲೇ, ಶ್ಯಾನಭಾಗರ ಪ್ರೀಮಿಯರ್ ಮುಚ್ಚಿ ಹೋದಬಗ್ಗೆ ಕೊರಗುವುದನ್ನು ಹೇಗೆ ವಿವರಿಸಬೇಕು.. ವಾರಾಂತ್ಯದಲ್ಲಿ ನೂರಾರು ರೂಪಾಯಿ ತೆತ್ತು ದೆಹಲಿಯ ಅಜಯ ಬಿಜ್ಲಿ ನಡೆಸುವ ಪಿವಿ‌ಆರ್ ನ ಪರದೆಯ ಮೇಲೆ ಮುಂಗಾರು ಮಳೆ ನೋಡುವುದಕ್ಕೆ ಏನನ್ನಬೇಕು.. ಅಥವಾ ನಮ್ಮ ಹೃದಯಾಂತರಾಳದಲ್ಲಿ ಬೆಂಗಳೂರಿನ ಮೂಲದ್ರವ್ಯವನ್ನಿಟ್ಟುಕೊಂಡೇ ಮಹಾನಗರದ ಛದ್ಮವನ್ನು ನಾವು ಧರಿಸಿದ್ದೇವೇಯೇ? ಹಳೆಯ ಜಾಗಗಳಾದ ಚಾಮರಾಜಪೇಟೆ, ಬಸವನಗುಡಿ, ಜಯನಗರ, ಗಾಂಧಿಬಜಾರುಗಳನ್ನೇ ತೆಗೆದುಕೊಳ್ಳೋಣ. ಊರ ತುಂಬ ಇರುವ ಹೊಳೆವ ಮಾಲ್-ಮಲ್ಟಿಪ್ಲೆಕ್ಸುಗಳು ಇಲ್ಲೆಲ್ಲಿ? ಗಾಂಧಿಬಜಾರಿನ ಮುಖ್ಯರಸ್ತೆಯಲ್ಲಿನ ತರಕಾರಿ ಮಳಿಗೆ ಬಿರುಸಿನಿಂದ ವ್ಯಾಪಾರ ಮುಂದುವರೆಸುತ್ತಿದ್ದಾಗಲೇ ಅಲ್ಲಿನ ಸೂಪರ್ ಸ್ಟೋರ್ ಗಳು ಮುಚ್ಚಿರುವುದನ್ನು ಸೊರಗಿರುವುದನ್ನ ನಾವು ಕಂಡಿದ್ದೇವೆ. ಕೆಲದಿನ ಮುಚ್ಚಿ ಹೆಚ್ಚು ವ್ಯತ್ಯಾಸವೇ ಇಲ್ಲದೇ ಮತ್ತೆ ತೆರೆದಿರುವ ವಿದ್ಯಾರ್ಥಿ ಭವನದ ಬಣ್ಣೆ ದೋಸೆಗಾಗಿ ನಾವುಗಳು ಒಂದರ್ಧ ಘಂಟೆ ಶಾಂತಿಯಿಂದ ಕಾಯಲು ತಯಾರು. ಎದುರಿಗೆ ತುಸುದೂರದಲ್ಲಿ ಉಡುಪಿ ಶ್ರೀ ಕೃಷ್ಣಭವನವೂ ಅವತರಿಸಿದೆ. ಅಲ್ಲಿಯೇ ತುಸುದೂರದಲ್ಲಿ ಅತ್ಯಂತ ಜನಪ್ರಿಯ ಎಸ್.ಎಲ್.ವಿ ಎದುರಿಗೆ ಕೆ.ಎಫ್.ಸಿಯ ಅಂಗಡಿಯೂ, ಪಾಪಡೀವಾಲಾ ಚಾಟ್ ಭಂಡಾರವನ್ನು ಎತ್ತಂಗಡಿ ಮಾಡಿದ ವಿದೇಶಿ ಮೆಕ್ ಡೊನಾಲ್ಡೂ ಇದೆ. ರೀಟೈಲ್ ವ್ಯಾಪಾರಕ್ಕೆ ದೊಡ್ಡ ಅಂಗಡಿಗಳು ಬಂದಾಗ್ಯೂ ನನ್ನ ಕಿರಾಣಿಯಂಗಡಿಯವನ ವ್ಯಾಪಾರವೇನೂ ಕಡಿಮೆಯಾದಂತಿಲ್ಲ. ದೊಡ್ಡ ಅಂಗಡಿಗಳು ಅನೇಕ ಬಂದು ಹೋದುವಾದರೂ ಕಿರಾಣಿಯಂಗಡಿಯೊಂದೂ ಮುಚ್ಚಿಲ್ಲ. ನಾಗಶ್ರೀ ಮತ್ತು ಪ್ರಿಸಂ ತಮ್ಮ ವ್ಯಾವಾರ ಮುಂದುವರೆಸುತ್ತಿರುವಂತೆಯೇ ಜಯನಗರದ ಒಡಿಸ್ಸೀ ದೆಹಲಿಗೆ ಪಯಣ ಬೆಳೆಸಿಬಿಟ್ಟಿತು!


ಬೆಂಗಳೂರಿನಂತಹ ಬೆಳೆಯುತ್ತಿರುವ ಮಹಾನಗರ ತನ್ನ ಉಡುಪಿ, ದರ್ಶಿನಿಗಳೊಂದಿಗೇ ತಂದೂರಿ ಮುಘಲಾಯಿಗಳನ್ನೂ ಅಂತರ್ಗತ ಮಾಡಿಕೊಂಡು ಮುನ್ನಡೆಯಬೇಕಾದದ್ದು ಸಹಜವೇ ಏನೋ. ಆದರೆ ನಾವು ಯಾವುದನ್ನು ನಮ್ಮದಾಗಿಸಿಕೊಳ್ಳುತ್ತೇವೆ, ಯಾವುದನ್ನು ಹೊರಗಟ್ಟುತ್ತೇವೆ ಅನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ. ದರ್ಶಿನಿಗಳಲ್ಲಿ ಬೈಟೂ ಕಾಫಿ ಕುಡಿಯುವ ನಾವೇ ಪ್ರೀತಿಯಿಂದ ನಮ್ಮದೇ ಆದ ಕೆಫೆ ಕಾಫಿ ಡೇ ಅನ್ನೂ ನಮ್ಮದಾಗಿಸಿಕೊಂಡಿದ್ದೇವೆ. ಅದೇ ಅಣಬೆಗಳಂತೆ ಹೆಗ್ಗಡೆಯವರ ಕಾಲದಲ್ಲಿ ಬೆಳೆದ ಪಬ್ಬುಗಳೆಲ್ಲಿ? ಎಲ್ಲೋ ಒಂದು ಪಬ್ ವರ್ಲ್ಡ್ ಇನ್ನೂ ಇದೆಯಾದರೂ, ನಾಸಾ, ಓಕನ್ ಕ್ಯಾಸ್ಕ್, ಅಂಡರ್ ಗ್ರೌಂಡ್ ಮತ್ತು ಊರಸುತ್ತಲೂ ಹಬ್ಬಿದ್ದ ರಮದಾ ಪಬ್ಸ್ ಇಲ್ಲವಾಗಿವೆ. ಒಂದು ಡ್ರಾಫ್ಟ್ ಬಿಯರು ಹೀರುವುದು, ಒಂದು ಪಿಚ್ಚರಿಗೆ ಹೇಳುವುದು ಹಿನ್ನಲೆಗೆ ಹೋಗಿ, ಅನೇಕ ಫೈನ್ ಡೈನಿಂಗ್, ಡಿಸೈನರ್ ಖಾನಾವಳಿಗಳು ಉದ್ಭವವಾಗಿವೆ.


ಶತಮಾನ ಜೀವಿಸಿದ ಸಸ್ಯಾಹಾರಿ ನಿಟ್ಟೂರು ಶ್ರೀನಿವಾಸರಾಯರ ಮನೆ ಇದ್ದಕ್ಕಿಂದ್ದಂತೆ ದೊಡ್ಡದೊಂದು ಪಾಸ್ಟಾ, ಮೆಡಿಟರೇನಿಯನ್ ಊಟವನ್ನು ಉಣಿಸುವ ಒಳ್ಳೆಯ ಗುಣಮಟ್ಟದ ವೈನ್ ಕುಡಿಸುವ ಎಕ್ಸ್ ಕ್ಲೂಸಿವ್ ರೆಸ್ಟುರಾ ಆಗಿಬಿಟ್ಟಿದೆ. ಇದನ್ನೂ ನಾವು ನಗರದ, ಜೀವನದ ಒಂದು ಭಾಗವಾಗಿ ಒಪ್ಪಿಬಿಟ್ಟಿದ್ದೇವೆ. ನಿಚಾನಿಯವರು ಬೆಂಗಳೂರಿನ ಉದ್ದಗಲಕ್ಕೂ ತಮ್ಮ ಥೀಮ್ ರೆಸ್ಟುರಾಗಳನ್ನು ಪ್ರಯೋಗಿಸಿ (ಸಾಹಿಬ್ ಸಿಂದ್ ಸುಲ್ತಾನ್, ಸಮರ್ಕಂಡ್, ಹಿಪ್ನೋಸ್, ಅಂಗೀಠಿ...) ಅದನ್ನು ಬೇರೆ ನಗರಗಳಿಗೆ ಒಯ್ದಿದ್ದಾರೆ. ಇದರಿಂದ ನಮಗೆ ಬೇಸರವೇ? ಒಂದು ರೀತಿಯಲ್ಲಿ ಹೌದು. ಸಂಜೆಯ ಸಮಯಕ್ಕೆ ಒಂದು ದಕ್ಷಿಣ ಭಾರತೀಯ ಪ್ಲೇಟ್ ಮೀಲನ್ನು ಆರ್ಡರ್ ಮಾಡಲು ಪ್ರಯತ್ನಿಸಿ ನೋಡಿ.. ಬೆಂಗಳೂರಿನ ಉಡುಪಿ-ದರ್ಶಿನಿಗಳು ದ್ವಂದ್ವದ ಬದುಕನ್ನು ಜೀವಿಸಲು ತೀರ್ಮಾನಿಸಿದಂತಿದೆ.. ದಿನಬೆಳಕಿನಲ್ಲಿ ದಕ್ಷಿಣ ಭಾರತೀಯ, ಸಂಜೆಯಾಗುತ್ತಿದ್ದಂತೆ ತಂದೂರಿ!


ಈಗ ಬೆಂಗಳೂರಿಗರನ್ನು ಕಾಡುತ್ತಿರುವುದು ನಮ್ಮ ಮೆಟ್ರೋ. ಅದರ ನಿರ್ಮಾಣದ ಮುಕ್ತಾಯ ಕಾಣುತ್ತಲೇ ಇಲ್ಲ. ಭೂಗತವಾಗಿರುವ ಜಗತ್ತಿನ ಮಿಕ್ಕ ಮೆಟ್ರೋಗಳಿಗಿಂತ ಭಿನ್ನವಾಗಿ ಈ ಮಟ್ರೋ ನಮ್ಮ ತಲೆಯ ಮೇಲೆ ಹೊರೆಯಾಗಿದೆ. ಹೊರೆ. ಮೆಟ್ರೋ ಪ್ರಾರಂಭವಾಗುವ ಸ್ಟೇಷನ್ನಿನ ಹಸರು ಬೈಯ್ಯಪ್ಪ-ನಹಳ್ಳಿ. ಇದರಲ್ಲೂ ಏನಾದರೂ ಗೂಢಾರ್ಥವಿದೆಯೇ? ಮೆಟ್ರೋ ಪ್ರಾರಂಭವಾಗುವುದನ್ನೇ ನಾವು ಕಾತರದಿಂದ ಕಾಯುತ್ತಿದ್ದೇವೆ. ಮೆಟ್ರೋದಲ್ಲಿ ಓಡಾಡಬೇಕೆಂಬ ಬಯಕೆಯಿಂದಲ್ಲ ಬದಲಿಗೆ ಈ ಕೆಲಸ ಮುಗಿದು ನಮ್ಮ ಜೀವನ ಸರಾಗವಾದರೆ ಸಾಕು. ಅಷ್ಟೇ. ಇದೇ ಸಮಯಕ್ಕೆ ಬಿ.ಎಂ.ಟಿ.ಸಿ ಯ ಆತ್ಮಾಭಿಮಾನ ಎಷ್ಟು ಹಿರಿದೆಂದರೆ, ಆಗಾಗ ಆ ಸಂಸ್ಥೆ ಬಸ್ ದಿನವನ್ನು ಘೋಷಿಸಿ ನಿಮ್ಮ ಖಾಸಗೀ ವಾಹನಗಳನ್ನು ಮನೆಯಲ್ಲೇ ಇಟ್ಟು ಬಂದರೆ, ಎಲ್ಲರನ್ನೂ ಬಸ್ಸಿನಲ್ಲೇ ಒಯ್ಯುವ ಸವಾಲನ್ನು ಹಾಕುತ್ತಿದ್ದಾರೆ. ಈ ಆತ್ಮಾಭಿಮಾನವನ್ನು ಮೆಚ್ಚಿಕೊಂಡರೂ, ಎಲ್ಲರೂ ಬಸ್ಸಿಗೆ ಮುಗಿಬಿದ್ದರೆ ಆಗುವ ಗತಿಯೇನು ಅನ್ನುವುದನ್ನು ನಾವು ಊಹಿಸಿಲ್ಲ.


ಬೆಂಗಳೂರು ಭಾರತೀಯ ನಗರಗಳಲ್ಲೇ ಅತ್ಯಂತ ಅಮೆರಿಕನ್ ನಗರ ಅಂತ ನಾವು ಹೇಳಿಕೊಳ್ಳಬಹುದು. ನಗರದಲ್ಲಿ ಕನಿಷ್ಟ ಮೂರು ರಸ್ತೆಗಳಲ್ಲಿ ನಮ್ಮ ವಾಹನಗಳು ಕಾನೂನಿನನ್ವಯ ರಸ್ತೆ ಬಲಬದಿಯಲ್ಲಿ ಓಡುತ್ತವೆ. ಯೋಜನಾರಹಿತ ಕೆಳಸೇತುವೆ, ಮೇಲ್ಸೇತುವೆಗಳು ಕೆಟ್ಟ ಕಟ್ಟಡತಂತ್ರದ ಹೆಮ್ಮೆಯನ್ನು ನಮ್ಮದಾಗಿಸುವಂತೆ ಮಾಡಿವೆ. ಸದ್ಯಕ್ಕೆ ರಿಚ್ಮಂಡ್ ರಸ್ತೆಯ ಕತ್ತರಿ ಮೇಲ್ಸೇತುವೆಯ ರಸ್ತೆಯನ್ನು ತುಸು ಅಡ್ಜಸ್ಟ್ ಮಾಡಿ ಒಂದು ಬದಿಯಲ್ಲಾದರೂ ಎರಡು ಬದಿ ವಾಹನ ಚಾಲನೆ ಪ್ರಾರಂಭಮಾಡಿದ್ದಾರೆ...!

ಬೆಂಗಳೂರಿನ ವಿಮಾನ ನಿಲ್ದಾಣವನ್ನು ಕಂಡರೆ ನನಗೆ ಎಲ್ಲಿಲ್ಲದ ಅಭಿಮಾನ. ಹಳೆಯ ವಿಮಾನ ನಿಲ್ದಾಣವನ್ನು ಮರೆಯದಂತೆ ಮಾಡುವ ಹಳೆತಕ್ಕೂ ಹೂಸತಕ್ಕೂ ಕೊಂಡಿಯಾಗಿರುವ ಈ ಕಟ್ಟಡವನ್ನು ಕಂಡು ಅಭಿಮಾನ ಪಡದಿರುವುದು ಹೇಗೆ? ಹೊಸ ವಿಮಾನ ನಿಲ್ದಾಣದಲ್ಲಿನ ಅನುಭವ ಹಳೆಯದಕ್ಕಿಂತ ಭಿನ್ನವಲ್ಲ. ಚೆಕ್ ಇನ್ ಗೆ ಉದ್ದನೆ ಸಾಲು, ಸೆಕ್ಯೂರಿಟಿಗೆ ಮತ್ತೊಂದು ಸಾಲು..ನಮ್ಮ ಮೂಲಾನುಭವವನ್ನು ನಾವು ಮರೆಯುವುದು ಹೇಗೆ? ಹಾಗಾದರೆ ಬದಲಾವಣೆಯೇ ಇಲ್ಲವೇ? ಖಂಡಿತವಾಗಿಯೂ ಇದೆ ಸ್ವಾಮಿ, ಇದೇ ಅನುಭವ ಪಡೆಯಲು ಸರಾಸರಿ 40 ಕಿಲೋಮೀಟರುಗಳ ಪ್ರಯಾಣ ಮಾಡಬೇಕು ಅನ್ನುವುದನ್ನು ನಾವು ಮರೆಯಬಾರದು. ಅಂತರರಾಷ್ಟ್ರೀಯ ವಿಮಾನಾಶ್ರಯದ ಮುಂಚಿನ ಮೇಲ್ಸೇತುವೆ ತಳಭಾಗದಲ್ಲಿ ಕಟ್ಟುತ್ತಿರುವ ಟೋಲ್ ಪ್ಲಾಜಾ ತಯಾರಾಗುತ್ತದ್ದಂತೆ, ಕಾರುಗಳ ಸಾಲು-ಪಾವತಿಗೆಂದು ಇನ್ನಷ್ಟು ಸಮಯ ಕಳೆಯುವುದು ಸಹಜವೇ. ಗಣೇಶನ ಹಬ್ಬದಾದಿಯಿಂದ ಏರಪೋರ್ಟಿನ ಮೇಲ್ಸೇತುವೆಯವರೆಗೆ, ಚಂದಾ ವಸೂಲಿಗಾಗಿ ನಾವು ಸದಾ ರಸೀತಿ ಪುಸ್ತಕ ತಯಾರಿರಿಸಿಕೊಂಡಿರುತ್ತೇವೆ. ನೋಡಿ ಸ್ವಾಮಿ, ನಾವಿರೋದೇ ಹೀಗೆ.!

ಬೆಳೆಯುತ್ತಿರುವ ನಗರಕ್ಕೆ ಹೊರನಾಡಿನವರು ವಲಸೆ ಬರುವುದು ಸಹಜವೇ. ಈ ವಲಸೆ ತನ್ನದೇ ಆತಂಗಳನ್ನೂ ತರುತ್ತಿದೆ. ಈ ಆತಂಕ ಒಳವಲಸೆಯ ಪ್ರಮಾಣದ ಬಗ್ಗೆ ಇರುವ ಆತಂಕವಲ್ಲ. ಈ ಆತಂಕ ಕೌಶಲ್ಯದ ಅವಶ್ಯಕತೆಯಿಲ್ಲದ ಕೆಲಸಗಳಿಗೂ ಹೊರನಾಡಿನಿಂದ ವಲಸೆ ಬರುತ್ತಿರವ ಪ್ರವೃತ್ತಿಯ ಬಗೆಗಿರುವ ಆತಂಕವಾಗಿದೆ. ಈ ಆತಂಕ ನಮ್ಮ ಸ್ಥಳೀಯ ಕಾರ್ಮಿಕರ ಮೇಲೆ ಯಾವ ಪರಿಣಾಮ ಬೀರಬಹುದು ಅನ್ನುವುದರ ಬಗೆಗಿನದು. ಬೆಳವಣಿಗೆ ಬೆಂಗಳೂರಿಗರಿಗೆ ಚಿನ್ನದ ಗಣಿಯಾಗಿ ಪರಿವರ್ತಿತವಾಗಿ ಉದ್ಯೋಗಾವಕಾಶ ಉಂಟುಮಾಡಿದೆಯೇ ಅಥವಾ ವಲಸೆಗಾರರ ಸ್ವರ್ಗವಾಗಿದೆಯೇ ಅನ್ನುವುದೇ ಪ್ರಶ್ನೆ. ಮೊನ್ನೆ ಉತ್ತರ ಭಾರತದ ನನ್ನ ಗೆಳೆಯನೊಬ್ಬ ಹೊಸದಾಗಿ ನಿರ್ಮಾಣವಾದ ಬಹುಮಹಡಿ ಅಪಾರ್ಟ್ ಮಂಟಿನ ಸೆಕ್ಯೂರಿಟಿ ಗಾರ್ಡಿಗೆ ನಾವು ಯಾರ ಮನೆಗೆ ಹೋಗಬೇಕು ಅನ್ನುವುದನ್ನ ತನಗೆ ತಿಳಿದ ತಾನು ಈಚೆಗಷ್ಟೇ ಕಲಿತ ಎರಡಕ್ಷರ ಕನ್ನಡದಲ್ಲಿ ಹೇಳಲು ತಿಣುಕುತ್ತಿದ್ದಾಗ ಸೆಕ್ಯುರಿಟಯವನೇ ಅವನನ್ನು ರಕ್ಷಿಸಿದ. ಅವನಿಗೇ ಕನ್ನಡ ಗೊತ್ತಿರಲಿಲ್ಲವಾದ್ದರಿಂದ ಇಬ್ಬರೂ ಸಹಜವಾಗಿ ಖುಷಿಯಿಂದ ಹಿಂದಿಗೆ ರವಾನೆಯಾದರು. ಅಲ್ಲಿಂದ ಮುಂದಕ್ಕೆ ಸಹಾಯ ಬೇಕಾದದ್ದು ಕನ್ನಡಿಗನಾದ ನನಗೆ

ನಾವು ಈ ಬಗ್ಗೆ ಗೊಣಗಬಾರದೇನೋ. ಬಹುಶಃ ನಾವು ಸಮಾಧಾನಕ್ಕಾಗಿ ಮುಂಬೈಯನ್ನು ನೋಡಬೇಕೇನೋ. ಅಥವಾ ನ್ಯೂಯಾರ್ಕನ್ನು. ಅಥವಾ ನಾವು ರಾಜ್ಯದ ಒಳಭಾಗಕ್ಕೆ ಹೋಗಿ ಖುಷಿ ಪಡಬೇಕೇನೋ. ರಾಜಧಾನಿ ಪ್ರಗತಿ ಸಾಧಿಸಿದಷ್ಟೂ ಭಾಷೆಗೆ ಕುತ್ತು ತಪ್ಪಿದ್ದಲ್ಲ. ಸ್ಥಳೀಯ ವ್ಯಾಪಾರಕ್ಕೆ ಕುತ್ತೂ-ಅವಕಾಶವೂ ಕಾಣುತ್ತದೆ. ನಮ್ಮ ಸಿನೇಮಾಗಳು ಭೀತಿಯಿಂದ ನಡುಗುತ್ತವೆ. ಆದರೂ ಕಾಸರವಳ್ಳಿಯವರ ಸಿನೇಮಾಕ್ಕೆ ಯಾವುದೋ ಮಲ್ಟಿಪ್ಲೆಕ್ಸ್ ನಲ್ಲಿ ದಿನಕ್ಕೊಂದು ಆಟ, ಒಂದೇ ಪರದೆ, ವಾರಾಂತ್ಯವಿಲ್ಲದ ಐದು ದಿನಗಳ ಪ್ರದರ್ಶನ ದೊರೆಯುತ್ತದೆ. ದೂರದರ್ಶನದ ಹೃದಯವಂತಿಕೆಯ ಮುಲಾಜಿಲ್ಲದೇ ಈ ಸಿನೇಮಾ ತೆರೆ ಕಾಣಬಹುದು. ಬದಲಾವಣೆ ಕಾಣುತ್ತಿದೆ. ಆದರೆ ಇದು ಯಾವ ದಿಕ್ಕಿನ ಬದಲಾವಣೆ ಅನ್ನುವುದರ ಬಗ್ಗೆ ದಿಕ್ಕು ತೋಚದಾಗಿದೆ. ಎಲ್ಲವನ್ನೂ ನಾವು ನಮ್ಮ ಜೀವನದಲ್ಲಿ ಅಡ್ಜಸ್ಟ್ ಮಾಡಿಕೊಳ್ಳುವುದನ್ನು ಕಲಿತಿದ್ದೇವೆ.




No comments:

Post a Comment