Saturday, August 25, 2012

ಎರಡು ವರ್ಷಗಳ ನಂತರ... ಮುಚ್ಚಿದ ಪ್ರೀಮಿಯರ್


ಇಪ್ಪತ್ತೈದು ವರ್ಷಗಳ ಹಿಂದೆ, ಬಿ.ಕಾಂ ವಿದ್ಯಾರ್ಥಿಯಾಗಿ ನಾನು ನನ್ನ ಜ್ಞಾನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಸಹಾಯಕ ಕೋಚಿಂಗಿಗೆ ಹೋಗುತ್ತಿದ್ದಾಗ ಒಂದು ದಿನ ಅಲ್ಲಿ ಪಾಠ ಮಾಡುತ್ತಿದ್ದ ವಿಶ್ವನಾಥ್ ಹೇಳಿದ್ದರು: "ನಮ್ಮ ವಿತ್ತೀಯ ನಿರ್ಮತಿಯ ತಲ್ಲಣಗಳನ್ನು ಹೆಚ್ಚು ಅರ್ಥಮಾಡಿಕೊಳ್ಳಬೇಕಾದರೆ, ನೀನು ಶೂಮೇಕರನ ಸ್ಮಾಲ್ ಇಸ್ ಬ್ಯೂಟಿಫುಲ್ ಓದು. ನಾನು ಪ್ರೀಮಿಯರ್ ಬುಕ್ ಷಾಪಿನ ಶಾನ್‌ಭಾಗಿಗೆ ಹೇಳಿದ್ದೇನೆ. ನಮ್ಮವರಿಗೆ ಆತ ೧೫% ರಿಯಾಯಿತಿಯಲ್ಲಿ ಪುಸ್ತಕಗಳನ್ನು ಮಾರುತ್ತಾರೆ". ಹೀಗೆ ಸ್ಮಾಲ್ ಇಸ್ ಬ್ಯೂಟಿಫುಲ್ ಅನ್ನುವ ಪುಸ್ತಕವನ್ನು ಹುಡುಕಿ ಹೊರಟ ನನಗೆ ಆ ಪುಸ್ತಕದ ಟೈಟಲ್ಲಿನ ಅರ್ಥದ ಪದರ-ಮಜಲುಗಳು ಶಾನಭಾಗರ ಪ್ರೀಮಿಯರ್ ಬುಕ್ ಷಾಪ್ ನೋಡಿದಾಗ ತಟ್ಟಿತು. ಪುಟ್ಟ ಅಂಗಡಿಯಲ್ಲಿ ಎಷ್ಟೊಂದು ಭಂಡಾರವನ್ನು ಅಡಕಮಾಡಿ ಇಡಬಹುದು ಅನ್ನುವುದಕ್ಕೆ ಪ್ರೀಮಿಯರ್ ಸಂಕೇತವಾಯಿತು. ಆದರೆ ಅದನ್ನು ಬ್ಯೂಟಿಫುಲ್ ಎಂದು ಕರೆಯುವುದಕ್ಕೆ ಮಾತ್ರ ಸಾಧ್ಯವಾಗಿರಲಿಲ್ಲ. ಅದರ ಆತ್ಮ ಬ್ಯೂಟಿಫುಲ್ ಆದರೂ ಆ ಅಂಗಡಿಯಲ್ಲಿ ಪುಸ್ತಕಗಳನ್ನು ಆಯುವುದಕ್ಕೆ ಪಳಗಿದ ಕೈಗಳೇ ಬೇಕಾಗಿದ್ದುವು.

ಆ ಪುಸ್ತಕದಂಗಡಿಗೆ ಹೋದ ಕೂಡಲೇ ನನಗೆ ಅರಿವಾದದ್ದು ಒಂದು ವಿಷಯ: ನಮ್ಮ ವಿಶ್ವನಾಥ್ ಅವರ ಹೆಸರನ್ನು ಹೇಳದಿದ್ದರೂ ಆ ಪುಸ್ತಕದ ಮೇಲೆ ನನಗೆ ರಿಯಾಯಿತಿ ಸಿಗುತ್ತಿತ್ತು ಅನ್ನುವ ಸತ್ಯ. ಪ್ರೀಮಿಯರ್‍ ಗೆ ಹೋದವರಿಗೆಲ್ಲಾ ಕನಿಷ್ಟ ೧೦% ರಿಯಾಯಿತಿಯನ್ನು ಶಾನಭಾಗ್ ಕೊಡುತ್ತಿದ್ದರು... ಮತ್ತು ನಮ್ಮಂತಹ ರೆಗ್ಯುಲರ್ ಗಳಿಗೆ ನಮ್ಮ ಒಟ್ಟಾರೆ ಬಿಲ್ಲು ಮತ್ತು ಅವರ ಮೂಡಿನನುಸಾರ ೧೫-೨೦ ಪ್ರತಿಶತ ರಿಯಾಯಿತಿ ಸಿಗುತ್ತಿತ್ತು. ಪ್ರೀಮಿಯರ್‍ ನಲ್ಲಿ ಇದ್ದ ಪುಸ್ತಕಗಳ ವಿಸ್ತಾರಕ್ಕೆ ಅವರು ಯಾವ ರಿಯಾಯಿತಿಯನ್ನೂ ಕೊಡದೆಯೇ ಅಂಗಡಿಯನ್ನು ನಡೆಸಬಹುದಿತ್ತು. ಹೀಗಾಗಿ ನಾನು ಪ್ರೀಮಿಯರ್ ಬುಕ್ ಷಾಪಿಗೆ ರಿಯಾಯಿತಿಗೆಂದೇ ಹೋದದ್ದು ನೆನಪಿಲ್ಲ. ಅಲ್ಲಿಗೆ ಹೋಗುವುದೇ ಒಂದು ಅನುಭವ. ಬೆಂಗಳೂರು ಬಿಟ್ಟು ಬಹಳಕಾಲದಿಂದ ಹೊರನಾಡಿಗನಾಗಿರುವ ನನಗೆ ಬೆಂಗಳೂರಿಗೆ ಬಂದಾಗಲೆಲ್ಲಾ ಪ್ರೀಮಿಯರ್ ಬುಕ್ ಷಾಪಿನ ಯಾತ್ರೆ ಅನಿವಾರ್ಯವಾಗಿಬಿಟ್ಟಿತ್ತು. ಮಿಕ್ಕ ಎಷ್ಟೋ ಪುಸ್ತಕದಂಗಡಿಗಳಿಗೆ ನಾನು ನನ್ನನ್ನು ಹೊಂದಿಸಿಕೊಳ್ಳಲು ಪ್ರಯತ್ನಿಸಿದರೂ, ಪ್ರೀಮಿಯರ್ ನ ಅನುಭವವೇ ವಿಚಿತ್ರ ವೈಶಿಷ್ಟ್ಯತೆಯನ್ನು ನೀಡುತ್ತಿತ್ತು.

ಮುಂಬಯಿನ ಸ್ಟ್ರಾಂಡ್ ಬುಕ್ ಸ್ಟಾಲ್ ನಡೆಸುವ ಹಿರಿಯ ಶಾನಭಾಗರ ಪುಸ್ತಕಜ್ಞಾನ ಅದ್ಭುತವಾದದ್ದು. ಅಲ್ಲಿಗೆ ಹೋದರೆ ಎರಡು ಪುಸ್ತಕಗಳನ್ನು ನೀವು ಆಯ್ದರೆ, ನಿಮ್ಮ ಅಭಿರುಚಿಯನ್ನು ಗ್ರಹಿಸಿ, ಅದಕ್ಕೆ ನಾಲ್ಕು ಪುಸ್ತಕಗಳನ್ನು ಜೋಡಿಸುವ, ಅಕಸ್ಮಾತ್ ನಿಮಗೆ ಯಾವುದೇ ಪುಸ್ತಕ ದೊರೆಯದಿದ್ದರೆ ಆ ವಿವರಗಳನ್ನು ಸಂಗ್ರಹಿಸಿ, ನಿಮಗಾಗಿ ಆ ಪುಸ್ತಕವನ್ನು ತರಿಸುವುದಲ್ಲದೇ ಆ ಬಗ್ಗೆ ನಿಮಗೆ ಸುದ್ದಿಯನ್ನೂ ಕೊಡುವ ಪರಿಪಾಠ ಹಿರಿಯ ಶಾನಭಾಗರಿಗಿತ್ತು. ಬಹುಶಃ ಪದ್ಮಶ್ರೀ ಪಡೆದ ಏಕೈಕ ಪುಸ್ತಕ ವ್ಯಾಪಾರಿ ಆತ ಇರಬಹುದು.

ಇತ್ತೀಚೆಗೆ ಸ್ಟ್ರಾಂಡ್‍ನಲ್ಲಿದ್ದ ಹಿರಿಯ ಶಾನಭಾಗರ ವೈಶಿಷ್ಟ್ಯತೆ ನಮಗೆ ಸಿಗುತ್ತಿಲ್ಲ ಅನ್ನಿಸುತ್ತದೆ. ಏನೇ ಆದರೂ ಮುಂಬಯಿನ ಸ್ಟ್ರಾಂಡಿನಲ್ಲಿ ವ್ಯಾಪಾರವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆ ನಮಗೆ ಕಾಣಿಸುತ್ತಿತ್ತು. ಹೀಗಾಗಿಯೇ ಪುಸ್ತಕ ಜ್ಞಾನದ ಜೊತೆಗೆ ಹಿರಿಯ ಶಾನಭಾಗರದ್ದು ಒಪ್ಪ ಓರಣ. ನಮ್ಮ ಶಾನಭಾಗ್ ಮಿಕ್ಕ ಪುಸ್ತಕ ವ್ಯಾಪಾರಿಗಳಿಗಿಂತ ತುಂಬಾ ಭಿನ್ನ ಎಂದು ಹೇಳಬಹುದು. ನೀವು ಯಾವುದಾದರೂ ಪುಸ್ತಕ ಕೇಳಿದರೆ ತಕ್ಷಣಕ್ಕೆ ತರಿಸುತ್ತಾರೆ, ಆದರೆ ಅದು ಬಂದಿದೆ ಎಂದು ಫೋನ್ ಮಾಡುವ ಪರಿಪಾಠ ಆತನಿಗಿದ್ದಂತಿರಲಿಲ್ಲ. ಮುಂದಿನ ಬಾರಿ ಹೋದಾಗ ಆ ಪುಸ್ತಕ ನಿಮಗೆ ದೊರೆತರೆ ಅದು ನಿಮ್ಮ ಅದೃಷ್ಟ.


ಪ್ರೀಮಿಯರ್ ನಲ್ಲಿ ಮೂರ್ನಾಲ್ಕು ಪದರದ ಪುಸ್ತಕಗಳ ರಾಶಿಯ ಷೆಲ್ಫುಗಳ ನಡುವೆ ತೆಳುವಾಗಿ ಅಡ್ಡಡ್ಡವಾಗಿ ನಡೆದುಕೊಂಡು ಹೋಗಬೇಕಾದಂತಹ ಪುಟ್ಟ ಜಾಗ - ಮೊಣಕೈ ತಾಕಿದರೆ ಒಂದು ರಾಶಿ ಪುಸ್ತಕಗಳು ದೊಪ್ಪೆಂದು ಕೆಳಕ್ಕೆ ಬೀಳುವ ಗ್ಯಾರೆಂಟಿ, ಆದರೆ ಕೇಳಿದ ಪುಸ್ತಕವನ್ನು ಯಾವುದೋ ಕಂಡರಿಯದ ಮೂಲೆಯಿಂದ ಹೆಕ್ಕಿ ಕೊಡಬಲ್ಲ ವಿಶಿಷ್ಟ ಕಲೆಯನ್ನು ಶಾನಭಾಗ್ ಮತ್ತು ಅವರ ಸಹಾಯಕರು ಕರವಶಮಾಡಿಕೊಂಡಿದ್ದರು. "ಓ ಅಲ್ಲಿ ಉಂಟು ನೋಡು, ಆಕ್ಸ್ ಫರ್ಡ್‍ನಿಂದ ಬಂದ ಹೈದರಾಬಾದಿನ ಪುಸ್ತಕ" ಎಂದು ಆತ ಹೇಳಿದ್ದೇ, ಜಾದೂವಿನಂತೆ ನಮಗೆ ಬೇಕಾದ ಪುಸ್ತಕ ಪ್ರತ್ಯಕ್ಷವಾಗುತ್ತಿತ್ತು. ಅಂಗಡಿಯಲ್ಲಿ ಒಂದು ಸುತ್ತು ಹಾಕಿ ಬಂದರೆ ಪುಸ್ತಕದ ರಾಶಿಯಿರುವ ಮೇಜಿನ ಹಿಂದೆ ಕಂಡೂ ಕಾಣದಂತೆ ಶಾನಭಾಗ್ ಕೂತಿರುತ್ತಿದ್ದರು. ಎಲ್ಲಿಂದಲೋ ಬಿಲ್ ಪುಸ್ತಕವನ್ನು ಹೆಕ್ಕಿ ತಮ್ಮ ಕಾಗೆಬರಹದಲ್ಲಿ ಗೀಚಿ ನಿಮ್ಮ ಕೈಗೆ ಒಂದು ಹಳದಿ ಚೀಟಿಯನ್ನು ಹಚ್ಚುತ್ತಿದ್ದರು. ಅದರಲ್ಲಿ ಪುಸ್ತಕದ ಹೆಸರು ಯಾವುದು ರಿಯಾಯಿತಿ ಯಾವುದಕ್ಕೆ - ದೇವರೇ ಬಲ್ಲ. ನಾನು ಮೊದಲ ಬಾರಿಗೆ ಹೋದಾಗಿನಿಂದಲೂ ಬಿಲ್ಲಿನ ಬಣ್ಣ ಮತ್ತು ಶಾನಭಾಗರ ಕೈಬರಹ ಒಂದಿನಿತೂ ಬದಲಾಗಿರಲಿಲ್ಲ.

ಹಾಗೆ ನೋಡಿದರೆ ಶಾನಭಾಗರ ಬಗ್ಗೆ ನನಗೆ ಹೆಚ್ಚೇನೂ ಗೊತ್ತೇ ಇಲ್ಲ. ಹೆಚ್ಚು ಮಾತೇ ಆಡದ ಆತನ ಜೊತೆ ಬಲವಂತವಾಗಿ ನಾಲ್ಕಾರು ಮಾತಾಡಿದರೂ ಅವರು ಸಂಭಾಷಣೆಯನ್ನು ತಾವಾಗಿಯೇ ಎಂದೂ ಮುಂದುವರೆಸುತ್ತಿರಲಿಲ್ಲ. ಆದರೆ ಅವರ ಅಂಗಡಿಯಲ್ಲಿ ಕನ್ನಡ ಪುಸ್ತಕಗಳನ್ನು ಮಾರಿಸಿದ ಹೆಮ್ಮೆ ನನಗಿದೆ ಎಂದು ನಾನು ಎದೆ ತಟ್ಟಿ ಹೇಳಿಕೊಳ್ಳಬೇಕು... ಜಯಂತ ಕಾಯ್ಕಿಣಿಯ ದಗಡೂ ಪರಬನ ಅಶ್ವಮೇಧ ಪುಸ್ತಕವನ್ನು ನಾವು ಗೆಳೆಯರು ಪ್ರಕಟಿಸಿದಾಗ ಅದರ ಹತ್ತು ಪ್ರತಿಗಳನ್ನೂ ನನ್ನ ಮಾಯಾದರ್ಪಣದ ಐದು ಪ್ರತಿಗಳನ್ನೂ ಶಾನಭಾಗ್ ತಮ್ಮ ಅಂಗಡಿಯಲ್ಲಿ ಮಾರಿದ್ದರು! ಅದನ್ನು ಇಂಗ್ಲೀಷ್ ಪುಸ್ತಕಗಳ ರಾಶಿಯ ನಡುವೆ ಅಡಕವಾಗಿಟ್ಟರೂ, ಯಾರೋ ಅದನ್ನು ಕೊಂಡಿದ್ದರು ಎನ್ನುವುದು ನನಗೆ ಹೆಮ್ಮೆಯ ವಿಷಯವಾಗಿತ್ತು.

ಶಾನಭಾಗ್ ಮಿಕ್ಕ ಪುಸ್ತಕ ವ್ಯಾಪಾರಿಗಳಿಗಿಂತ ತುಂಬಾ ಭಿನ್ನರಾಗಿದ್ದರು. ಅವರಿಗೆ ವ್ಯಾಪಾರದಿಂದ ದುಡ್ಡು ಮಾಡಬೇಕು ಅನ್ನುವ ಇರಾದೆಗಿಂತ, ಪುಸ್ತಕಗಳ ನಡುವೆ ಕೂತು, ಮನೆಗಾಗುವಷ್ಟು ಹಣ ಸಂಪಾದಿಸಿದರೆ ಸಾಕು ಅನ್ನುವ ಮನಸ್ಥಿತಿ ಇದ್ದಂತಿತ್ತು. ಹೀಗಾಗಿ, ಅವರ ಖರ್ಚಿಗೆ ಬೇಕಾದಷ್ಟು ಹಣವನ್ನು ಅವರು ತೆಗೆದುಕೊಂಡು, ಮಿಕ್ಕ ಲಾಭವನ್ನೆಲ್ಲಾ, ಪುಸ್ತಕದಂಗಡಿಯಲ್ಲಿ ಹೆಚ್ಚು ಪುಸ್ತಕಗಳನ್ನು ಸೇರಿಸಿಡುವುದರಲ್ಲಿ ತೊಡಗಿಸುತ್ತಿದ್ದರು ಅಂತ ನನಗನ್ನಿಸುತ್ತದೆ. ಅವರ ಹಿರಿಯ ಸ್ಟ್ರಾಂಡ್ ಶಾನಭಾಗರಿಂದ ಅವರು ಕಲಿಯದಿದ್ದ ಮತ್ತೊಂದು ಪಾಠವೆಂದರೆ "ಸೇಲ್"ಗಳನ್ನು ಏರ್ಪಾಡು ಮಾಡುವುದು.

ನಾನು ಕಂಡಿರುವ ಇತರ ಪುಸ್ತಕವ್ಯಾಪಾರಿಗಳಲ್ಲಿರುವ ತೀವ್ರತೆಯನ್ನು ನಾನು ಶಾನಭಾಗರಲ್ಲಿ ಕಂಡೇ ಇಲ್ಲ. ಎಲ್ಲವನ್ನೂ ಒಂದೇ ರೀತಿಯಲ್ಲಿ ಸ್ವೀಕರಿಸುವ ಬುದ್ಧನಂತೆ ಯಾವಾಗಲೂ ಹಸನ್ಮುಖಿಯಾಗಿ ಮೌನವಾಗಿ ಆತ ಕೂತಿರುತ್ತಿದ್ದರು.

ದೆಹಲಿಯ ಕನಾಟ್ ಪ್ಲೇಸಿನಲ್ಲಿರುವ ಬುಕ್ ವರ್ಮ್ ಪುಸ್ತಕದಂಗಡಿಯ ಮಾಲೀಕ ನೀವು ಕೇಳಿದ ಪುಸ್ತಕವನ್ನು ಎತ್ತಿ ಕೊಡುವುದಲ್ಲದೇ ಇಲ್ಲದಿರಬಹುದಾದ ಪುಸ್ತಕಗಳನ್ನು ತರಿಸಿಕೊಡುವುದರಲ್ಲಿ ನಿಷ್ಣಾತ. ಜೊತೆಗೇ, ಕೆಲವು ಹಳೆಯ ಪುಸ್ತಕಗಳನ್ನು ನೀವು ಕೇಳಿದರೆ "ಓ ಅದಾ, ೧೯೮೩ರ ಪುಸ್ತಕ, ಅದ್ಭುತವಾದದ್ದು. ನಾನು ಓದಿದ್ದೇನೆ, ಈಗ ಔಟ್ ಆಫ್ ಪ್ರಿಂಟ್, ನನ್ನ ಮನೆಯಲ್ಲಿ ಒಂದು ಕಾಪಿಯಿದೆ, ನಿಮಗೆ ಸಿಗುವುದಿಲ್ಲ" ಎಂದು ಹೇಳಿ ಹೊಟ್ಟೆಉರಿಯುಂಟು ಮಾಡಬಹುದಾದ ನಿಷ್ಣಾತ.

ಖಾನ್ ಮಾರ್ಕೆಟ್ಟಿನಲ್ಲಿರುವ ಬಾಹರಿ ಸನ್ಸ್ ನಿಮ್ಮನ್ನು ಬೇಕಾದ ಹಾಗೆ ಓಡಾಡಲು ಬಿಟ್ಟು ನಿಮ್ಮ ಪ್ರಶ್ನೆಗಳಿಗೆ ಯೋಚಿಸಿ, ಫೋನು ಫಿರಾಯಿಸಿ ಜವಾಬು ಕೊಡುವ ಚಾಣಾಕ್ಷ.

ಬೆಂಗಳೂರಿನ ಶಂಕರ್‍ ಪುಸ್ತಕಗಳನ್ನು ಓರಣವಾಗಿಟ್ಟು ಕೇಳಿದ್ದನ್ನು ಮಾತ್ರ ತೆಗೆದುಕೊಡುವ, ಎಷ್ಟುಬೇಕೋ ಅಷ್ಟು ಮಾತನಾಡುವ ಮಿತಭಾಷಿ.

ಚೆನ್ನೈ-ಬೆಂಗಳೂರುಗಳ ಲ್ಯಾಂಡ್‍ಮಾರ್ಕ್ ಅಂಗಡಿಗಳು ರಾಶಿರಾಶಿ ಪುಸ್ತಕಗಳನ್ನು ಪೇರಿಸಿರುವ, ಆದರೆ ಆ ಪುಸ್ತಕಗಳ ಮೌಲ್ಯವೇನೆಂದು ತಿಳಿಯದ ಅನಾಮಿಕ ಸೇಲ್ಸ್ ಮನ್‍ಗಳ ಮೂಲಕ ನಡೆಯುತ್ತಿರುವ ಮಳಿಗೆಗಳು.

ಕ್ರಾಸ್‍ವರ್ಡ್ ಅಂಗಡಿಗಳು ವ್ಯಾಪಾರೀ ಮನೋಭಾವದ ಉತ್ತುಂಗ ತೋರುವ ಮಳಿಗೆ-ಮಾಲೆ, ಹೀಗಾಗಿ ಅಲ್ಲಿ ಅನೇಕ ಬೆಸ್ಸ್ಟ್ ಸೆಲ್ಲರುಗಳು [ಫಿಕ್ಷನ್, ನಾನ್ ಫಿಕ್ಷನ್, ಮಕ್ಕಳ ಪುಸ್ತಕಗಳು, ಸೆಲ್ಫ್ ಹೆಲ್ಪ್.. ಇತ್ಯಾದಿ ಯಾದಿಗಳ ಜಾಗ] - ಜೊತೆಗೆ ಬಹಳಕಾಲದ ವರೆಗೂ ಆರ್.ಶ್ರೀರಾಮ್ ರೆಕಮಂಡ್ಸ್ಅನ್ನುವ ಮಳಿಗೆಯ ಮುಖ್ಯಾಧಿಕಾರಿಯ ಶಿಫಾರಸ್ಸಿನ ಅಂಟುಚೀಟಿ ಹೊತ್ತ ಕೆಲವು ಪುಸ್ತಕಗಳು. ಈ ಆರ್.ಶ್ರೀರಾಮ್ ಅನ್ನುವ ಮಹಾತ್ಮನ ಶಿಫಾರಸ್ಸಿನ ಹಮ್ಮು ವ್ಯಾಪಾರೀಕರಣದ ಉತ್ತುಂಗ ಅಂತ ನನಗನ್ನಿಸಿತ್ತು. ಅವರ ಶಿಫಾರಸ್ಸಿನ ಪುಸ್ತಕಗಳ ಯಾದಿ ನೋಡಿದರೆ ಅವರಿಗೊಂದು ವ್ಯಕ್ತಿತ್ವ ಮತ್ತು ಸ್ವಂತ ಅಭಿಪ್ರಾಯವಿದೆ ಅನ್ನುವ ಭಾವನೆಯೇ ನಮಗೆ ಬರುತ್ತಿರಲಿಲ್ಲ.

ಇನ್ನು ಸೆಲೆಕ್ಟ್ ಬುಕ್ ಷಾಪಿನ ಮೂರ್ತಿಯಂತೂ ತಮ್ಮ ಗ್ರಾಹಕರನ್ನು ಅರ್ಥಮಾಡಿಕೊಳ್ಳಬೇಕೆನ್ನುವ, ಅವರೊಂದಿಗೆ ಚರ್ಚಿಸಿ ಅವರ ಅಭಿರುಚಿಗನುಸಾರ ನಿಧಾನವಾಗಿ ಒಳಗಿನಿಂದ ಸುಪ್ತ ಖಜಾನೆಯನ್ನು ತೆಗೆದುಕೊಡುವಂತ ಹಂತ ಹಂತವಾಗಿ ಗ್ರಾಹಕರನ್ನು ಕೈವಶ ಮಾಡಿಕೊಳ್ಳುವ ಗಾರುಡಿಗ. ಮೂರ್ತಿಯವರು ಎಷ್ಟು ಬಾರಿ ತಮ್ಮ ಮೇಜಿನ ಕೆಳಕ್ಕೆ ಕೈ ಹಾಕಿ ಜಾದೂವಿನಂತೆ ನನಗೆ ಬೇಕಾದ ಪುಸ್ತಕವನ್ನು ನನ್ನ ಮುಂದೆ ತುಂಟತನದಿಂದ ಹಿಡಿದಿದ್ದಾರೋ ಲೆಕ್ಕವಿಲ್ಲ.

ಹೈದರಾಬಾದಿನ ವಾಲ್ಡೆನ್ ನಲ್ಲಿ ಪರಿಚಾರಕರು ಹೆಚ್ಚಿಲ್ಲ. ಆದರೂ ಆ ಅಂಗಡಿಗೆ ಅದರದೇ ವ್ಯಕ್ತಿತ್ವವಿದೆ. ಹೀಗಾಗಿ ಅಲ್ಲಿ ಅಡ್ಡಾಡುವುದೂ ಒಂದು ಖುಷಿಯ ವಿಷಯವೇ. ರಾತ್ರೆ ಎಂಟಕ್ಕೆ ಮುಂದಿನ ಬಾಗಿಲನ್ನು ಮುಚ್ಚಿ ಐದು ನಿಮಿಷಕ್ಕೊಮ್ಮೆ ಒಂದಷ್ಟು ದೀಪಗಳನ್ನು ಆರಿಸಿ ಸಂಜೆಯ ಗ್ರಾಹಕರನ್ನು ಹೊರಹಾಕುವ ವಾಲ್ಡೆನ್ ನ ಪರಿ ಅದ್ಭುತವಾದದ್ದು.

ಅಬೀಡ್ಸಿನಲ್ಲಿನ ಎ.ಎ.ಹುಸೇನ್ ಹಳೆಯ ಕಾಲದ ಎಲ್ಲ ಪುಸ್ತಕಗಳನ್ನೂ ಗಾಜಿನ ಕಪಾಟಿನಲ್ಲಿಟ್ಟು ಮಾರಾಟ ಮಾಡುವ ಜಾಗರೂಕತೆ ತೋರುತ್ತಿದ್ದರೂ ಹೈದರಾಬಾದ್ ಸಂಬಂಧಿತ ಪುಸ್ತಕಗಳಿಗೆ ಒಂದು ಅದ್ಭುತ ಜಾಗ.

ಅದೇ ಊರಿನ ಓರಿಯಂಟ್ ಲಾಂಗ್ಮನ್ ನಡೆಸುವ ಬುಕ್ ಪಾಯಿಂಟ್ ಕೂಡಾ ಸ್ವ-ಸಹಾಯ ಮಾಡಿಕೊಳ್ಳುವವರಿಗೆ ಒಂದು ಖಜಾನೆಯೇ. ಹಾಗೂ ಭಾನುವಾರಗಳಂದು ಅಬೀಡ್ಸ್ ಮತ್ತು ನಾಂಪಲ್ಲಿರಸ್ತೆಯ ಗುಂಟ ಹಬ್ಬಿಹರಡಿರುವ ಹಳೆಯ ಪುಸ್ತಕಗಳಲ್ಲಿ ಕೆಲ ಅಪರೂಪದ ಪುಸ್ತಕಗಳನ್ನು ನಾನು ಹೆಕ್ಕಿ ತಂದಿದ್ದೇನೆ. ೮೦ರ ದಶಕದಲ್ಲಿ ನಾನು ಹೈದರಾಬಾದಿನಲ್ಲಿದ್ದಾಗ ಬೆಳಿಗ್ಗೆ ಎದ್ದು ಅಬೀಡ್ಸಿನಲ್ಲಿ ಪುಸ್ತಕ ವ್ಯಾಪಾರ, ಇರಾಣಿ ಚಹಾ ಮತ್ತು ಸಂತೋಷ್/ಸಪ್ನಾ ಚಿತ್ರಮಂದಿರಗಳಲ್ಲಿ ಸಿನೇಮಾದ ಪರಿಪಾಠವಿತ್ತು.

ವಾಷಿಂಗ್ಟನ್ನಿನಲ್ಲಿ ನಾನು ಕ್ರೇಮರ್ ಬುಕ್ಸ್ ಆಂಡ್ ಆಫ್ಟರ್ ವರ್ಡ್ಸ್ ಅನ್ನುವ ಅಂಗಡಿಗೆ ಭೇಟಿ ನೀಡಿದ್ದೆ. ಅಂಗಡಿಯಲ್ಲಿ ಪುಸ್ತಕಗಳನ್ನು ತೆಗೆದು ಓದಬಹುದು. ಪುಸ್ತಕದಂಗಡಿಯಲ್ಲೇ ಒಂದು ಕಾಫಿ, ತಿಂಡಿ, ಬಿಯರು ಸಿಗುವ ಜಾಗವಿದೆ. ಎಲ್ಲಿಂದ ಎಲ್ಲಿಗೆ ಬೇಕಾದರೂ ಓಡಾಡುತ್ತಾ ಪುಸ್ತಕ ತಿರುವಿಹಾಕುತ್ತಾ ಒಂದು ಬಿಯರನ್ನೂ ಹೀರಬಹುದು. ನನ್ನಬಳಿ ವಿಪರೀತ ದುಡ್ಡು ಬಂದು ಮಾಡಲೇನೂ ತೋಚದಿದ್ದರೆ, ಇಂಥದೊಂದು ಅಂಗಡಿಯನ್ನು ತೆರೆಯಬೇಕು ಅನ್ನುವುದು ನನ್ನ ಆಸೆ.

ಈ ಎಲ್ಲ ಪುಸ್ತಕದಂಗಡಿಗಳೂ, ಕಲಕತ್ತಾದ ಆಕ್ಸ್ ಫರ್ಡ್ ಬುಕ್ ಸ್ಟೋರು, ಮದರಾಸಿನ ಫೌಂಟನ್‍ಹೆಡ್ ಎಲ್ಲವನ್ನೂ ಅವಲೋಕಿಸಿದರೂ ಪ್ರೀಮಿಯರ್ ಬುಕ್ ಷಾಪಿನ ಆತ್ಮೀಯತೆ ಮತ್ತು ವೈಶಿಷ್ಟ್ಯತೆ ನನಗೆ ಎಲ್ಲೂ ಕಂಡಿಲ್ಲ. ಮಿಕ್ಕ ಪುಸ್ತಕದಂಗಡಿಯವರಂತೆ ಶಾನಭಾಗರು ಎಂದೂ ತಮ್ಮ ಜ್ಞಾನವನ್ನು ಪದರ್ಶಿಸಿದವರಲ್ಲ. ಎಷ್ಟೋ ಬಾರಿ ನಾನು ಪುಸ್ತಕಗಳ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿದ್ದಿದೆ. "ಚೆನ್ನಾಗಿ ಮಾರಾಟವಾಗುತ್ತಿದೆ" ಅನ್ನುವ ಮಾತನ್ನು ಹೇಳುತ್ತಿದ್ದರೇ ವಿನಃ ತಮ್ಮ ಅಭಿಪ್ರಾಯವನ್ನು ಎಂದೂ ನೀಡಿದವರಲ್ಲ. ಆದರೆ ಮಿಕ್ಕ ಪುಸ್ತಕ ವ್ಯಾಪಾರಿಗಳಿಗೆ ಹೀಗೆ ಮುಫತ್ತಿನ ರೆಕಮಂಡೇಷನ್ ಕೊಡುವ ತೆವಲು ಇದ್ದೇ ಇರುತ್ತದೆ. ಶಾನಭಾಗರಿಗೆ ತಮ್ಮ ವ್ಯಾಪಾರವನ್ನು ಬೆಳೆಸಬೇಕೆಂಬ ಆಕಾಂಕ್ಷೆಯೂ ಇರಲಿಲ್ಲ. ಮಿಕ್ಕ ಪುಸ್ತಕದಂಗಡಿಗಳು ಬೆಳೆಯುತ್ತಾ ಹೋದರೂ ಅವರು ತಮ್ಮ ಮೂಲೆಯಲ್ಲೇ ಅವಿತು ಕೂತಿದ್ದರು. ಕಡೆಗೆ ಶಾನಭಾಗರಿಗೆ ಅಂಗಡಿ ಮುಚ್ಚುವುದರಲ್ಲೂ ದುಃಖ ಆದಂತಿಲ್ಲ. ತಾವು ತಮ್ಮ ಕೆಲಸ ಮುಗಿಸಿ ಮುಂದುವರೆಯುತ್ತಿರುವಂತೆ ಸ್ಥಿತಪ್ರಜ್ಞರಾಗಿ ಅವರು ತಮ್ಮ ಟ್ರೇಡ್ ಮಾರ್ಕ್ ಕಿರುನಗೆಯನ್ನು ಬೀರಿ ಸುಮ್ಮನಾಗುವರು. ಪ್ರೀಮಿಯರ್ ಮುಚ್ಚಿಹೋಗುತ್ತಿರುವುದಕ್ಕೆ ಅವರಿಗಿಂತ ಹೆಚ್ಚಿನ ದುಃಖ ಅವರ ಗ್ರಾಹಕರಿಗಾಗುತ್ತಿರಬಹುದು. ಸಾಮಾನ್ಯವಾಗಿ ವ್ಯಾಪಾರಗಳು ಕೈ ದಾಟುತ್ತವೆ, ಕ್ಷೀಣಿಸುತ್ತವೆ, ಏಟುತಿನ್ನುತ್ತವೆ, ಬೆಳೆಯುತ್ತವೆ. ಆದರೆ ಮೊದಲ ಬಾರಿಗೆ ಒಂದು ಪುಸ್ತಕದಂಗಡಿ ರಿಟೈರಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಕ್ರಿಕೆಟ್ಟಿನಲ್ಲಿ ಹೇಳುವಂತೆ, ಶಾನಭಾಗ್ ವೈ [ಯಾಕೆ?] ಎನ್ನುವ ಪ್ರಶ್ನೆ ಕೇಳುತ್ತಿರುವಾಗಲೇ ರಿಟೈರಾಗಿ ವೈನಾಟ್ [ಯಾಕಾಗಬಾರದು] ಅನ್ನುವ ಪ್ರಶ್ನೆಗೆ ಅವಕಾಶವಿಲ್ಲದಂತೆ ಮಾಡುತ್ತಿದ್ದಾರೆ.


ಕಳೆದ ವಾರ ಶಾನಭಾಗರನ್ನು ಭೇಟಿ ಮಾಡಲೆಂದು ಪ್ರೀಮಿಯರ್ ಗೆ ಹೋದೆ, ಆತ ಕಣ್ಣಿನ ಆಪರೇಶನ್ ಮಾಡಿಸಿಕೊಳ್ಳಲು ಹೋಗಿದ್ದಾರೆ, ಈ ವಾರ ಇಲ್ಲ ಎಂದು ಅಂಗಡಿಯಿಂದ ತಿಳಿಯಿತು. ಮತ್ತೆ ಬೆಂಗಳೂರಿಗೆ ಬರುವ ವೇಳೆಗೆ ಶಾನಭಾಗ್ ಅಂತರ್ಧಾನರಾಗಿರುತ್ತಾರೆ. ಹೀಗೆ ಇಪ್ಪತ್ತೈದು ವರ್ಷಗಳ ಪರಿಚಯದ ಶಾನಭಾಗ ಒಂದು ಫೋನ್ ನಂಬರು, ವಿಳಾಸ, ಯಾವುದೂ ಇಲ್ಲದೇ ನನ್ನ ಸಂಪರ್ಕದಿಂದ ಕೈಜಾರುತ್ತಿದ್ದಾರೆ. ಅವರು ತಮ್ಮ ಮಕ್ಕಳ ಜೊತೆಗೆ ಆಸ್ಟ್ರೇಲಿಯಾದಲ್ಲಿ ಶೇಷಜೀವನವನ್ನು ಕಳೆಯುತ್ತಾರಂತೆ. ಅವರ ಅಂಗಡಿಯ ಪುಸ್ತಕದ ರಾಶಿಯನಡುವೆ ಕಾಣೆಯಾಗಿಯೇ ಇದ್ದ ಶಾನಭಾಗ ಮತ್ತು ಪ್ರೀಮಿಯರ್ ಬೆಂಗಳೂರಿನ ಚರಿತ್ರೆಯ ಒಂದು ಭಾಗವಾಗಿ ಕಾಣೆಯಾಗುತ್ತಿದ್ದಾರೆ. ಗುಡ್ ಬೈ ಶಾನಭಾಗ್. ಟೇಕ್ ಕೇರ್.

No comments:

Post a Comment