Sunday, October 28, 2012

ಬೆಂಗಳೂರಿಗನಾಗಿರುವ ಭರಿಸಲಾಗದ ಹಗುರ ಭಾವ


ಜಾನಕೀ ನಾಯರ್ ಅವರ ಪುಸ್ತಕ ""The Promise of a Metropolis - Bangalore's Twentieth Century" ಸುಮಾರು ದಿನಗಳ ಹಿಂದೆಯೇ ನಾನು ಖರೀದಿಸಿದ್ದೆ. ನಗರಗಳ ಬಗ್ಗೆ ಬರುತ್ತಿರುವ ಅನೇಕ ಪುಸ್ತಕಗಳ ಮಾಲಿಕೆಯಲ್ಲಿ ಇದೂ ಸೇರಿದೆಯಾದರೂ, ಈ ಪುಸ್ತಕಕ್ಕಾಗಿ ಜಾನಕೀ ಮಾಡಿರುವ ಸಂಶೋಧನೆಯಿಂದಾಗಿ, ಹಾಗೂ ಅದನ್ನು ಪ್ರಸ್ತುತ ಪಡಿಸಿರುವ ರೀತಿಯಿಂದಾಗಿ ಈ ಪುಸ್ತಕ ಮುಖ್ಯವಾಗುತ್ತದೆ. ನನಗೆ ಒಂದೇ ನಗರದೊಂದಿಗೆ ಗಟ್ಟಿಯಾದ ಸಂಬಂಧವನ್ನು ಕಾಯ್ದಿಡಲು ಸ್ವಲ್ಪ ಕಷ್ಟ. ನಾನು ನನ್ನ ಅರ್ಧಾಯುವನ್ನು ಬೆಂಗಳೂರಿನಲ್ಲಿ ಕಳೆದಿದ್ದೇನೆ, ಮಿಕ್ಕ ಭಾಗ ಉಡುಪಿ, ಮೈಸೂರು, ಹೈದರಾಬಾದು ಮತ್ತು ಗುಜರಾತಿನ ಆನಂದ್ ಮತ್ತು ಅಹಮದಾಬಾದುಗಳ ನಡುವೆ ಹಂಚಿಹೋಗಿದೆ. ಕೆಲಸದ ನಿಮಿತ್ತ ಆಗಾಗ ಭೇಟಿಕೊಡುವ ಮುಂಬಯಿ ಮತ್ತು ದೆಹಲಿಗಳ ಬಗೆಗೂ ನನಗೆ ಸಾಕಷ್ಟು ಆಸಕ್ತಿಯಿದೆ. ಆದರೂ ನನ್ನ ಹೆಚ್ಚಿನ ಆಸಕ್ತಿಯನ್ನು ಗ್ರಹಿಸಿಟ್ಟಿರುವ ಎರಡು ನಗರಗಳೆಂದರೆ ಬೆಂಗಳೂರು ಮತ್ತು ಹೈದರಾಬಾದು. ಆದ್ದರಿಂದ ಬೆಂಗಳೂರಿನ ಇಪ್ಪತ್ತನೆಯ ಶತಮಾನದ ಚರಿತ್ರೆಯಬಗ್ಗೆ ಪುಸ್ತಕ ಬಂದಾಗ ನನ್ನ ಆಸಕ್ತಿ ಅದರತ್ತ ತಿರುಗಿದ್ದು ಸಹಜವೇ ಆಗಿತ್ತು. ಆಕೆಯ ಪುಸ್ತಕ ಗಂಭೀರ ಸಂಶೋಧನೆಯಿಂದಾಗಿ ಅಲ್ಲದೇ ನನ್ನಂತಹವರಿಗೆ ಬೆಂಗಳೂರಿಗನ ನೆನಪನ್ನು ತಾಜಾ ಮಾಡಲು ಸಹಾಯ ಮಾಡುವುದರಿಂದಲೂ ಮುಖ್ಯವಾಗಿದೆ. ಜೊತೆಗೆ ಪುಸ್ತಕದಲ್ಲಿ ಬೆಂಗಳೂರಿನ ಅನೇಕ ಆತ್ಮೀಯ ಚಿತ್ರಗಳೂ ಇವೆ.

ಪುಸ್ತಕ ಮೂಲತಃ ಇಪ್ಪತ್ತನೆಯ ಶತಮಾನದ ಬೆಂಗಳೂರಿನ ಬಗ್ಗೆ ತನ್ನ ಆಸಕ್ತಿಯನ್ನು ಕೇಂದ್ರೀಕರಿಸಿಟ್ಟಿದ್ದರೂ, ಭೂತ, ವರ್ತಮಾನ ಮತ್ತು ಭವಿಷ್ಯಗಳಿಂದ ತಪ್ಪಿಸುಕೊಂಡು ಬರುವುದು ಕಷ್ಟವೇ. ಅತ್ಯಂತ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾದ, ಒಂದು ಯೋಜನಾಕೇಂದ್ರಿತವಾಗಿ ಬೆಳೆಯಬೇಕೆಂದು ಆಶಿಸಿದ ನಗರವಾಗಿದ್ದರಿಂದ, ಹಾಗೂ, ಅನೇಕ ವರ್ಷಗಳಿಂದಲೂ ವಿವಿಧ ಹಿನ್ನೆಲೆಯ ಜನರಿಂದ ಕೂಡಿರುವ ಬೆಂಗಳೂರು ಎಸೆಯುವ ಸವಾಲುಗಳೂ ವೈವಿಧ್ಯತೆಯಿಂದ ಕೂಡಿರುತ್ತದೆ. ಜಾನಕೀ ನಾಯರ್ ಈ ನಗರವನ್ನ ಬ್ಯಾಂಗಲೂರ್-ಬೆಂಗಳೂರು ಗಳ ನಡುವಿರುವ ಅಂತರವನ್ನು ವಿಶ್ಲೇಶಿಸುತ್ತಾ ಪ್ರಾರಂಭ ಮಾಡುತ್ತಾರೆ. ನಗರದ ಹಳೆಯ ಭಾಗ ಸ್ಥಳೀಯರಿಂದ ತುಂಬಿದ್ದು ಅದು ಬೆಂಗಳೂರು ಆದರೆ, ಹೊರಗಿನವರು ಮುಖ್ಯವಾಗಿ ಆಗಿನ ಸೈನ್ಯಕ್ಕೆ ಸಂಬಂಧಿಸಿದವರು ವಾಸ್ತವ್ಯ ಹೂಡಿದ್ದ ಕಂಟೋನ್‌ಮೆಂಟ್ ಭಾಗವನ್ನು ಬ್ಯಾಂಗಳೂರ್ ಎಂದೂ ನಾಯರ್ ಕರೆಯುತ್ತಾರೆ. ಹೈದರಾಬದು, ಅಹಮದಾಬಾರು, ದೆಹಲಿಗಳಂತೆ ಬೆಂಗಳೂರಿಗೆ ಕೋಟೆಯಾಚೆಗಿನ ಗೋಡೆಯಂತರವಿರುವ [walled, old city] ಹಳೇ ಭಾಗವಿಲ್ಲ. ಬೆಂಗಳೂರಿನ ಎರಡೂ ಭಾಗಗಳು ಸಮಾನಾಂತರವಾಗಿ ಬೆಳೆಯುತ್ತಿದ್ದವು. ಹೀಗಾಗಿಯೇ ಜಾನಕೀ ನಾಯರ್ "ನಾಲ್ಕೂವರೆ ಶತಮಾನಗಳಿಗೂ ಮಿಂಚಿ ಅಸ್ತಿತ್ವದಲ್ಲಿರುವ ಈ ಜನವಾಸ್ತವ್ಯಕ್ಕೆ ಕಾಲಾಂತರದಿಂದ ಬಂದ, ಹೆಮ್ಮೆಯಿಂದ ಹೇಳಿಕೊಳ್ಳುವ ಸ್ಥಾವರಗಳು ಅಷ್ಟಾಗಿ ಕಾಣಸಿಗುವುದಿಲ್ಲ" ಅನ್ನುವ ಮಾತಿನಲ್ಲಿ ಅರ್ಥವಿದೆ. ದೆಹಲಿಯ ಕುತ್ಬ್ ಮಿನಾರ್, ಹೈದರಾಬಾದಿನ ಚಾರ್‌ಮಿನಾರ್‌ನಂತೆ ಹಳೆಯ ಸ್ಥಾವರಗಳು ಬೆಂಗಳೂರಿನ ಅಸ್ತಿತ್ವವನ್ನು ಒತ್ತಿ ಹೇಳುವುದಿಲ್ಲ. ಬದಲಿಗೆ ಈ ಊರಿನ ಅಸ್ತಿತ್ವಕ್ಕೆ ನಿಶಾನೆಗಳಾಗಿ ನಿಲ್ಲುವ ಇಮಾರತುಗಳು - ವಿಧಾನ ಸೌಧ ಮತ್ತು ಪಬ್ಲಿಕ್ ಯೂಟಿಲಿಟಿ ಬಿಲ್ಡಿಂಗ್. ಹೊಸ ಹೈದರಾಬಾದಿನ ಪ್ರತೀಕವಾಗಿ ನಿಲ್ಲುವ ಮತಕ್ಕೆ ಸಂಬಂಧಿಸಿದ ಬಿರ್ಲಾ ಮಂದಿರ ಚಾರ್ಮಿನಾರ್‌ನ ಪ್ರಾಮುಖ್ಯತೆಗೆ ಸವಾಲೊಡ್ಡಿದರೆ ಬೆಂಗಳೂರಿನ ಅಸ್ತಿತ್ವ ಘೋಷಿಸಲು ಇರುವ ಇಮಾರತುಗಳೆಲ್ಲಾ ಧರ್ಮನಿರಪೇಕ್ಷವಾದವುಗಳೇ [ಅದರಿಂದ ಏನಾದರೂ ಪ್ರಯೋಜನವಿದೆಯೇ ಅಂದರೆ, ತಿಳಿಯದು ಅಂತಲೇ ಉತ್ತರಿಸಬೇಕಾಗುತ್ತದೆ]. ಯೋಜಿಸಿ ಕಟ್ಟಿದ ಉದ್ಯಾನ ನಗರಿ ಬೆಂಗಳೊರಿಗೆ ಒಂದು ಭೌತಿಕ ಅಸ್ತಿತ್ವವನ್ನು ನಾವು ನೀಡುವುದಾದರೂ, ಅಥವಾ ಅದನ್ನು ನಿರ್ದೇಶಿಸುವುದಾದರೂ ಹೇಗೆ?

ಅದೇನೇ ಇರಲಿ, ಜಾನಕೀ ನಾಯರ್ ಕಂಟೋನ್‌ಮೆಂಟ್ ಮತ್ತು ಪೇಟೆಯ ನಡುವಿನಲ್ಲಿರುವ ಸಾಂಸ್ಕೃತಿಕ ಅಂತರವನ್ನು ಚೆನ್ನಾಗಿಯೇ ಗ್ರಹಿಸಿದ್ದಾರೆ. ಪೇಟೆಯಲ್ಲಿ ತುಸು ಮಡಿವಂತಿಕೆ ಹೆಚ್ಚು, ಸ್ಥಳೀಯ ರಿವಾಜುಗಳೂ ಹೆಚ್ಚು. ಕಂಟೋನ್‌ಮೆಂಟ್ ಭಾಗ ಹೊರಗಿನಿಂದ ಬಂದವರಿಂದ ತುಂಬಿದೆ. ಹೆಚ್ಚಿನಂಶ ಬ್ರಿಟಿಷರು, ಆದರೆ ಅವರ ಜೊತೆಜೊತೆಯಲಿ ದೇಶದ ಇತರೆ ಭಾಗಗಳಿಂದ ಬಂದಿರುವ ಬಹುಸಂಸ್ಕೃತಿಯ ಜನರು. ಪೇಟೆಯ ಭಾಗದಲ್ಲಿ ಹೆಚ್ಚಿನಂಶ ಕನ್ನಡದವರು [ಕೆಲ ತೆಲುಗರನ್ನೂಳಗೊಂಡು] ವಾಸವಿದ್ದರೆ, ಕಂಟೋನ್‌ಮೆಂಟ್ ಭಾಗದಲ್ಲಿ ಕನ್ನಡ ಕಾಣುವುದು ವಿರಳ. ಇದು ಇಂದಿನ ಮಾತಲ್ಲ, ಬದಲಿಗೆ ಇಪ್ಪತ್ತನೆಯ ಶತಮಾನದುದ್ದಕ್ಕೂ ಕಂಡಿರುವ ಅಂಶ. ಹೀಗಾಗಿಯೇ ಆಕೆ ಹೇಳುತ್ತಾರೆ:
"ಪೇಟೆಯಲ್ಲಿ ದೇಶದ ಇತರೆ ಭಾಗಗಳಿಂದ ಭಿನ್ನ ಭಾಷೆ ನುಡಿಗಟ್ಟನ್ನು ಪ್ರತಿನಿಧಿಸುವ ಜನ ಬಂದು ವಾಸ್ತವ್ಯ ಹೂಡಿದರಾದರೂ ಅಲ್ಲಿನ ಸಂಸ್ಕೃತಿ ಕನ್ನಡಮಯವಾಗಿತ್ತು. ಹೆಚ್ಚೆಂದರೆ ಒಂದಷ್ಟು ಉರ್ದುವನ್ನು ಚಿಮುಕಿಸಿದಹಾಗಿತ್ತು ಅಷ್ಟೇ. ಆದರೆ ಕಂಟೋನ್‌ಮೆಂಟ್ ಭಾಗದಲ್ಲಿ ಹೊಸದಾಗಿ ಉಂಟಾದ ನೌಕರಿ ಮತ್ತು ವ್ಯಾಪಾರದ ಅವಕಾಶಗಳ ಲಾಭ ಪಡೆಯಲು ಮದರಾಸು ಪ್ರೆಸಿಡೆನ್ಸಿಯ ಅನೇಕ ಭಾಗಗಳಿಂದ ಬಂದ ಜನ ತಮ್ಮ ವಾಸ್ತವ್ಯ ಹೂಡಿದ್ದರು. ಇದಕ್ಕೆ ಇಂಗ್ಲೀಷು ಬೃಹದಾಕಾರವಾಗಿ ನಿಂತಿದ್ದು ಆಡಳಿತ ಭಾಷೆಯಾಗಿದ್ದದ್ದೇ ಕಾರಣವಿರಬಹುದು. ಹೀಗಾಗಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದ ತಮಿಳರು ಮತ್ತು ಇತರೆ ಭಾಷಿಕರು ತಮ್ಮ ಮನೆಯ ಹಾಗೂ ಸಂಸ್ಕೃತಿಕ ವಿಷಯಗಳಿಗೆ ತಮ್ಮ ಮಾತೃಭಾಷೆಯನ್ನೇ ಉಳಿಸಿಕೊಂಡರು. ಜೊತೆಗೆ ಉರ್ದು ಮತ್ತು ತೆಲುಗಿನ ವಿಸ್ತೃತ ಬಳಕೆಯೂ ನಮಗೆ ಕಾಣಸಿಗುತ್ತಿತ್ತು. ಆದರೂ ನಾಡಿನ ಭಾಷೆ ಕನ್ನಡ ಕಂಟೋನ್‌ಮೆಂಟ್ ಪ್ರಾಂತದಲ್ಲಿ ಕಂಡದ್ದು ಕಡಿಮೆ. ಇದಕ್ಕೆ ಇನ್ನೂ ಒಂದು ಕಾರಣವೆಂದರೆ ಅಲ್ಲಿನ ಕೂಲಿವರ್ಗದವರೂ ಹಳೇ ಮೈಸೂರಿನ ಪ್ರಾಂತದಾಚೆಯಿಂದ ಬಂದವರೇ ಅಗಿದ್ದದ್ದು."

ಈ ವಿಷಯದ ಪ್ರತೀಕಗಳನ್ನು ನಾವು ಪೇಟೆ ಮತು ಕಂಟೋನ್‌ಮೆಂಟ್ ಪ್ರಾಂತದಲ್ಲಿ ಕಾಣಬಹುದು. ಪೇಟೆಯ ಸುತ್ತ ಹಮ್ಮಿದ ಜಾಗಗಳಿಗೆ ಸ್ಥಳೀಯ ಹೆಸರುಗಳ ನಾಮಕರಣವಾದರೆ [ಅರಳೇಪೇಟೆ, ಬಳೇಪೇಟೆ, ನಗರ್ತಪೇಟೆ, ಚಿಕ್ಕಪೇಟೆ] ಆ ಬದಿಯಲ್ಲಿನ ಹೆಸರುಗಳೆಲ್ಲಾ ಹೆಚ್ಚಿನಂಶ ಆಂಗ್ಲ ಮೂಲದವು - ಫ್ರೇಸರ್ ಟೌನ್, ಕಾಕ್ಸ್ ಟೌನ್, ಕೂಕ್ ಟೌನ್ .. ಹೀಗೆ. [ಉದಾಹರಣೆಗೆ ದೇಶಕಾಲ ನಡೆಸುವ ವಿವೇಕ ಶಾನಭಾಗನ ವಿಳಾಸ ಇಂತಿದೆ: ವಿಕ್ಟೋರಿಯನ್ ವಿಲ್ಲಾ, ಅಲೆಕ್ಸಾಂಡ್ರಾ ಸ್ಟ್ರೀಟ್, ರಿಚ್‌ಮಂಡ್ ಟೌನ್.. ಬೆಂಗಳೂರು ಅನ್ನದಿದ್ದರೆ ಇದು ಯಾವುದೇ ಯೂರೋಪಿನ ದೇಶಕ್ಕೋ ರಫ್ತು ಮಾಡಬಹುದಿತ್ತೇನೋ!!] ಹೀಗಾಗಿ ನಾಯರ್ ಅವರ ಪುಸ್ತಕ ಓದುತ್ತಿದ್ದಂತೆ ನಮಗೆ ಮನವರಿಕೆಯಾಗುವುದು "ಹೊರಗಿನವರು" ಇಲ್ಲಿನ ಅವಕಾಶಗಳನ್ನಾಕ್ರಮಿಸಿಕೊಳ್ಳುತ್ತಿದ್ದಾರೆನ್ನುವ ವಿಚಾರ ಇತ್ತೀಚಿನದ್ದೇನೂ ಅಲ್ಲ. ಅದು ಬೆಂಗಳೂರಿನ ಬೆಳವಣಿಗೆಯೊಂದಿಗೇ ಅವಿನಾಭಾವವಾಗಿ ಬೆಳೆದು ಬಂದಿರುವ ವಿಷಯ. ಹೀಗಾಗಿ ಈ ನಗರವನ್ನು ಅನಾದಿಕಾಲದಿಂದಲೂ ಹೆಚ್ಚಾಗಿ ಹೊರಗಿನವರು ಆಕ್ರಮಿಸಿಕೊಂಡಿರುವ ನಗರ ಎನ್ನಬೇಕೋ ಅಥವಾ ಬಹುಸಂಸ್ಕೃತಿಯ ಬೀಡು ಅನ್ನಬೇಕೋ ಅನ್ನುವ ಪ್ರಶ್ನೆ ಉದ್ಭವವಾಗುತ್ತದೆ.

ಆದರೆ ಹಳೆಯ ಪೇಟೆಗೂ, ಆಂಗ್ಲರಿದ್ದ ನಗರಕ್ಕೂ ನಡುವೆ ಭಾಗರೇಖೆ ಇದ್ದು ಅದು ಊರನ್ನು ಇಬ್ಭಾಗಿಸುತ್ತಿತ್ತೆಂದು ಜಾನಕೀ ವಾದಿಸುತ್ತಾರೆ. ಇಲ್ಲಿನ ಪೇಟೆಯ ಭಾಗದಿಂದ ನಗರದತ್ತ ಹೋಗುವುದೆಂದರೆ ಸಾಮಾಜಿಕ ಕಟ್ಟಳೆಗಳಿಂದ ಮುಕ್ತಿ ಪಡೆಯುವುದೆಂಬಂತಹ ಭಾವನೆಯಿತ್ತು. ಇಲ್ಲಿಂದ ಅಲ್ಲಿಗೆ ಹೋಗಿ ಮಿಲಿಟ್ರಿ ಹೊಟೇಲಿನಲ್ಲಿ ಮಾಂಸ ಮದ್ಯದ ರುಚಿ ನೋಡುವುದೋ, ಒಲ್ಲದ ಸಿನೇಮಾ ನೋಡುವುದೋ, ಅಥವಾ ಕಾಫಿ-ಟೀ ಕ್ಲಬ್ಬುಗಳಿಗೆ ಹೋಗುವುದೋ ಈ ಭಾಗರೇಖೆಯನ್ನು ದಾಟುವ ಪ್ರಕ್ರಿಯೆಯ ಪ್ರತೀಕವಾಗಿತ್ತು. ಪೇಟೆಯೆಂದರೆ ಸ್ವಲ್ಪ ಸ್ಥಳೀಯ ಸಂಸ್ಕೃತಿ ಮತ್ತು ಮಡಿವಂತಿಕೆಯ ಪ್ರತೀಕವಾಗಿತ್ತು. ಆದರೆ ಜಾನಕೀ ಡಿವಿಜಿಯವರನ್ನು ಉದ್ಧರಿಸುತ್ತಾ ಒಂದು ಗಮ್ಮತ್ತಿನ ವಿಷಯವನ್ನು ಹೇಳುತ್ತಾರೆ. ಪೇಟೆಯ ಭಾಗದಲ್ಲಿ ಹಿಂದೆ ಹೋಟೇಲುಗಳಲ್ಲಿ ತಿನ್ನುವುದು ಒಂದು ರೀತಿಯಿಂದ ನಿಷಿದ್ಧವಿತ್ತು. ಆದರೆ ಈ ನಿಷೇಧ ಬಹುಬೇಗನೇ ಮಾಯವಾದದ್ದು ಯಾಕೆ ಗೊತ್ತಾ? ಊರಿನಲ್ಲಿ ಪ್ಲೇಗಿನ ಮಹಾಮಾರಿ ಬಂದಾಗ ಬಹಳಷ್ಟು ಜನ ತಮ್ಮ ಮನೆಯ ಹೆಂಗಸರನ್ನೂ ಮಕ್ಕಳನ್ನೂ ಇಲ್ಲಿಂದ ದೂರ ಕಳಿಸಿಬಿಟ್ಟರಂತೆ. ಹೀಗಾಗಿ ಹೊರಗೆ ಊಟಮಾಡುವುದು ಗಂಡಸರಿಗೆ ಅನಿವಾರ್ಯವಾಯಿತು. ಅದೇ "ಬ್ರಾಹ್ಮಣರ ಹೋಟೇಲು" ಎಂಬಂಥಹ ಊಟದ ಜಾಗಗಳಿಗೆ ನಾಂದಿ ಹಾಡಿದಂತಾಯಿತು. ಬಹುಶಃ ಇಂದು ಬೆಂಗಳೂರಿಗೇ ವಿಶಿಷ್ಟವಾದ ಹೊರಗೆ ತಿಂಡಿ ತಿನ್ನುವ, ಬೈಟೂ ಕಾಫಿ ಕುಡಿಯುವ ವ್ಯಸನ ಆಗಿನಿಂದ ಅವಶ್ಯಕತೆಗನುಸಾರವಾಗಿ ಬಂದ ಬಳುವಳಿ. ಈಗ ಇದು ಬೆಂಗಳೂರಿಗರ ಸಹಜ ಪ್ರವೃತ್ತಿಯಾಗಿಬಿಟ್ಟಿದೆಯೇನೋ.

೧೯೪೯ರಲ್ಲಿ ಪೇಟೆ ಮತ್ತು ಕಂಟೋನ್‌ಮೆಂಟ್ ಭಾಗಗಳ ನಗರಪಾಲಿಕೆಗಳು ಒಂದೇ ಮಹಾನಗರಪಾಲಿಕೆಯಾಗಿ ಎರಡೂ ಭಾಗಗಳ ನಡುವಿನ ಅಂತರವನ್ನು ಆಡಳಿತಾತ್ಮಕವಾಗಿಯಾದರೂ ಒಂದು ಬೆಸುಗೆ ಬಿತ್ತು. ಬೆಂಗಳೂರಿನ ಬೆಳವಣಿಗೆಯಲ್ಲಿ ತದನಂತರ ಬಂದ ಮುಖ್ಯಘಟ್ಟವೆಂದರೆ ಸರಕಾರಿ ಉದ್ದಿಮೆಗಳ ಉದ್ಭ್ಹವ. ಇವೆಲ್ಲವೂ ಹೆಚ್ಚಿನಂಶ ಕೇಂದ್ರಸರಕಾರದ ಉದ್ದಿಮೆಗಳಾಗಿದ್ದುವು. ಈ ಉದ್ದಿಮೆಗಳ ಎರಡು ಲಕ್ಷಣಗಳು ನಮಗೆ ಮುಖ್ಯವಾಗಿ ಕಾಣಿಸುತ್ತವೆ: ಒಂದು ಇವು ಮುಂಬಯಿ ಅಹಮದಾಬಾದಿನ ಬಟ್ಟೆ ಗಿರಣಿಗಳಂತೆ ಹೊಗೆಯುಗುಳುವ ಉದ್ದಿಮೆಗಳಾಗಿರಲಿಲ್ಲ. ಎರಡು: ಈ ಉದ್ದಿಮೆಗಳು ಹೆಚ್ಚಿನಂಶ ಬೌದ್ಧಿಕ ಶಕ್ತಿಯನ್ನು ಆಧಾರವಾಗಿಟ್ಟುಕೊಂಡು ಕಟ್ಟಿದವಾಗಿದ್ದವು. ಎಚ್‌ಎಂಟಿ ಸಂಸ್ಥೆ ಟ್ರಾಕ್ಟರುಗಳಿಂದ ಹಿಡಿದು ಕೈಗಡಿಯಾರಗಳವರೆಗೆ ಏನೇನನ್ನೋ ತಯಾರು ಮಾಡಿದರೂ ಹೆಸರುವಾಸಿಯಾದದ್ದು ತಮ್ಮ ಕೈಗಡಿಯಾರಗಳಿಂದ. ಎಪ್ಪತ್ತರ ದಶಕದಲ್ಲಿ ಎಚ್.ಎಂ.ಟಿ ಕೈಗಡಿಯಾರ ಹೊಂದಿರುವುದು ಬಜಾಜ್ ಚೇತಕ್ ಸ್ಕೂಟರ್ ಇಟ್ಟಿರುವಷ್ಟೇ ಪ್ರತಿಷ್ಠೆಯ ಸಂಕೇತವಾಗಿತ್ತು. ಸರಕಾರೀ ಉದ್ದಿಮೆಗಳಾದ ಐಟಿ‌ಐ, ಬಿ‌ಇ‌ಎಲ್, ಬಿ‌ಎಚ್‌ಇ‌ಎಲ್ ನಮ್ಮ ಮನಸ್ಸಿನಲ್ಲಿದ್ದ ಸಾಧಾರಣ ಫ್ಯಾಕ್ಟರಿ ಅಥವಾ ಗಿರಣಿಯಾಗಿರಲಿಲ್ಲ. ಬಹುಶಃ ಇದೇ ಊರಿನಲ್ಲಿದ್ದ ಟಾಟಾ ಇನ್ಸ್‌ಟಿಟ್ಯೂಟ್‌ನಿಂದಾಗಿ ಸಂಶೋಧನಾ ಕೇಂದ್ರಕ್ಕೂ ಈ ಸಂಸ್ಥೆಗಳಿಗೂ ಒಂದು ಕೊಂಡಿಯಿದ್ದಿರಬಹುದೇ? ಹಾಗೆ ನೋಡಿದರೆ ಬೆಂಗಳೂರಿನ ಐ‌ಐ‌ಎಂ ಕೂಡಾ ಸರಕಾರೀ ಉದ್ದಿಮೆಗಳಿಗಾಗಿಯೇ ಸ್ಥಾಪಿಸಲಾಯಿತೆನ್ನುವುದನ್ನು ನಾವು ಮರೆಯಬಾರದು. ಐ‌ಐ‌ಎಂನಲ್ಲಿ ಆಗ ಕೃಷಿ, ವಿದ್ಯೆ, ಇಂಧನಶಕ್ತಿ, ನಗರಯೋಜನೆ ಮತ್ತು ನಾಗರೀಕತೆ, ಸಾರಿಗೆ, ಆರೋಗ್ಯ ಹೀಗೆ ಆರು ಮುಖ್ಯರಂಗಗಳಿಗಾಗಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ ಆ ವಿಭಾಗಗಳೊಂದಿಗೆ ಸ್ಥಾಪಿತವಾಗಿತ್ತು. [ಕೃಷಿಯ ವಿಭಾಗದಲ್ಲಿ ನಾನೇ ಕಡೆಯ ಸಂಶೋಧನಾ ವಿದ್ಯಾರ್ಥಿ, ನನ್ನನ್ನು ನೋಡಿದ ತಕ್ಷಣ ಆ ವಿಭಾಗವನ್ನೇ ಮುಚ್ಚಿ ಹಾಕಿದ್ದು ಯಾಕೆ ಅನ್ನುವುದು ಚಿದಂಬರ ರಹಸ್ಯ!] ಜಾನಕೀ ನಾಯರ್ ಉಪಯೋಗಿಸುವ ಅನೇಕ ಆಕರ ಗ್ರಂಥಗಳಲ್ಲಿ ಮುಖ್ಯವಾದದ್ದು ಐ‌ಐ‌ಎಂ ಬೆಂಗಳೂರಿನ ಪ್ರೊಫೆಸರ್ ವಿಕೆ ತಿವಾರಿ ಅವರ ಅಧ್ಯಯನವನ್ನ ಅನ್ನುವುದರಲ್ಲಿ ಬಹುಶಃ ಯಾವ ಆಶ್ಚರ್ಯವೂ ಇಲ್ಲವೇನೋ.

ಈ ಸರಕಾರಿ ಉದ್ದಿಮೆಗಳು ತಮ್ಮ ವ್ಯಾಪಾರ ಮಾಡುವುದಲ್ಲದೇ ಉದ್ಯೋಗಾವಕಾಶಗಳನ್ನೂ ಕಲ್ಪಿಸಬೇಕೆನ್ನುವ ಉದ್ದೇಶವನ್ನೂ ಅವುಗಳ ಮೇಲೆ ಹೇರಲಾಗಿತ್ತು. ಹೆಚ್ಚಿನಂಶ ಉದ್ದಿಮೆಗಳು ಕೇಂದ್ರಸರಕಾರದ ಉದ್ದಿಮೆಗಳಾಗಿದ್ದುದರಿಂದಲೇನೋ ಉದ್ಯೋಗಾವಕಾಶವನ್ನು ಕಲ್ಪಿಸುವಾಗ ಸ್ಥಳೀಯರಿಗಲ್ಲದೇ ವಿಭಿನ್ನ ಹಿನ್ನೆಲೆಯ ಜನರಿಗೆ ಕೆಲಸ ನೀಡಿದವು ಅನ್ನಿಸುತ್ತದೆ. ಹೀಗಾಗಿ ಈ ಸಂಸ್ಥೆಗಳು ನಗರದ ಬಹುಸಂಸ್ಕೃತಿಯ ಭಿನ್ನತೆಯನ್ನು ಪೋಷಿಸಿದವು. ಈ ಎಲ್ಲ ಸಂಸ್ಥೆಗಳು ರಾಜ್ಯದ ಉದ್ದಿಮೆಗಳಾಗಿದ್ದರೆ "ಮಣ್ಣಿನ ಮಕ್ಕಳಿಗೆ" ಉದ್ಯೋಗಾವಕಾಶ ಕಲ್ಪಿಸಬೇಕೆಂಬ ತುರ್ತು ಹೆಚ್ಚಾಗಿರುತ್ತಿತ್ತೇನೋ. ಈ ಅಂಶವನ್ನು ಜಾನಕೀನಾಯರ್ "ಪ್ರಾಂತೀಯ ಬೂರ್ಜ್ವಾ ಹೆಚ್ಚಾಗಿ ಕಾಣಿಸುತ್ತಿರಲಿಲ್ಲ" ಎಂದು ಗುರುತಿಸುತ್ತಾರೆ. ನಾಯರ್ ಮತ್ತೊಂದು ಆಸಕ್ತಿಕರ ವಿಷಯವನ್ನೂ ಪ್ರಸ್ತುತ ಪಡಿಸುತ್ತಾರೆ. ತಿವಾರಿ ಮತ್ತು ಪ್ರಕಾಶ ರಾವ್ ಅವರ ಅಧ್ಯಯನವನ್ನು ಆಧಾರವಾಗಿಟ್ಟುಕೊಂಡು ಆಕೆ ಹೇಳುವುದೇನೆಂದರೆ - ಹೊಗಿಯುಗುಳುವ ಗಿರಣಿಗಳ ಮೇಲೆ ಆಧಾರಿತವಾದ ಕೈಗಾರೀಕರಣವನ್ನು ದಾಟಿ ನೆಗೆದ ಉದ್ದಿಮೆಗಳನ್ನು ಸ್ಥಾಪಿಸಿದ್ದರಿಂದ ನಗರದಲ್ಲಿ ಕಾರ್ಮಿಕ ಸಂಘಗಳ ಸಂಸ್ಕೃತಿ ಗಟ್ಟಿಯಾಗಿ ಬೆಳೆಯಲಿಲ್ಲವೇನೋ ಅನ್ನುತ್ತಾರೆ. ಹೊಸ ಬೌದ್ಧಿಕ ಸಂಸ್ಥೆಗಳ ಹೆಚ್ಚಿನಂಶ ಕಾರ್ಮಿಕರನ್ನು ಬಡವರ್ಗವೆಂದು ವರ್ಗೀಕರಿಸುವುದಕ್ಕಿಂತ ಮಧ್ಯಮ ವರ್ಗವೆಂದೇ ಅನ್ನಬಹುದಾಗಿತ್ತಾದ್ದರಿಂದ ಅವರಿಗೆ ಬಹುಶಃ ಮುಂಬಯಿನ ಬಟ್ಟೆಗಿರಣಿಗಳ ಕಾರ್ಮಿಕರಿಗಿಂತ ಹೆಚ್ಚಾದ ಸವಲತ್ತುಗಳೇ ಬಹುಶಃ ಇದ್ದುವೇನೋ. ಹೀಗಾಗಿ ಬೆಂಗಳೂರಿನ ಬೆಳವಣಿಗೆ ಒಂದು: ಬೌದ್ಧಿಕತೆಯ ಮೇಲೆ ಆಧಾರವಾಗಿದ್ದ ಉದ್ದಿಮೆಗಳನ್ನು ಸಂಭಾಳಿಸುವ ಶಕ್ತಿ ಮತ್ತು ಎರಡು: ಹೊರಗಿನವರನ್ನು ಸುಲಭವಾಗಿ ನಮ್ಮ ನಡುವೆ ಸೇರಿಸಿಕೊಳ್ಳುವ ಪ್ರಕ್ರಿಯೆಯಿಂದ ಪ್ರೇರಿತವಾಗಿದೆಯೇ? ಹೀಗಾಗಿ ಬಹುರಾಷ್ಟ್ರೀಯ ಸಂಸ್ಥೆಗಳು ಉತ್ಸಾಹದಿಂದ ಬೆಂಗಳೂರನ್ನು ತಮ್ಮ ಮನೆ ಮಾಡಿಕೊಳ್ಳಲು ಉತ್ಸಾಹ ತೋರಿದರೇ ಅನ್ನುವುದು ಆಸಕ್ತಿಯ ವಿಚಾರಕೊಂಡಿಗಳು.

ಈ ಸರಕಾರಿ ಉದ್ದಿಮೆಗಳು ನಗರದ ಸುತ್ತಲೂ ಸ್ಥಾಪಿಸಲ್ಪಟ್ಟವು. ಎಲ್ಲ ಸಂಸ್ಥೆಗಳೂ ತಮ್ಮದೇ ಬಸ್ಸುಗಳನ್ನು ನಗರಾದ್ಯಂತ ಓಡಿಸುತ್ತಿದ್ದುವು. ಹೀಗಾಗಿ ಅಲ್ಲಿನ ನೌಕರಿಯಲ್ಲಿದ್ದವರಿಗೆ ಫ್ಯಾಕ್ಟರಿಯ ಬಳಿ ಮನೆ ಮಾಡುವ ತುರ್ತಿರಲಿಲ್ಲ. ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟ್ ಮತ್ತು ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್‌ನಂತಹ ಕೆಲವೇ ಜಾಗಗಳನ್ನ ಉದ್ದಿಮೆಗಳಿಗಾಗಿ ಮೀಸಲಿಡಲಾಗಿತ್ತು. ಬಹಳ ಕಾಲದವರೆಗೆ ಜಯನಗರ, ಕೆ.ಆರ್.ರಸ್ತೆಯಲ್ಲಿರುವಂತೆ ಬೆಂಗಳೂರಿಗೆ ತನ್ನದೇ ಛಾಪಿನ ಖಾಲೀ ಜಾಗಗಳು ಇದ್ದುವು. ಮನೆಯ ಬಳಿ ಒಂದು ಉದ್ಯಾನ ದಕ್ಷಿಣ ಬೆಂಗಳೂರಿನಲ್ಲಂತೂ ಇತ್ತು. ಈಗೀಗ ಈ ಜಾಗಗಳು ನಿಧಾನವಾಗಿ ಆಕ್ರಮಣಕ್ಕೊಳಗಾಗಿ, ಸಾರ್ವಜನಿಕ ಜಾಗದಲ್ಲಿರಬೇಕಾದ ಈ ಖಾಲೀ ಜಾಗಗಳು ಖಾಸಗೀ ವಲಯದಲ್ಲಿ ಏರ್ಪಾಟು ಮಾಡುಗ ತುರ್ತು ಉಂಟಾಗುತ್ತಿದೆ. ಈ ಬಗ್ಗೆ ನಾಯರ್ ಪುಸ್ತಕದಲ್ಲಿ ನಂತರದ ಭಾಗದಲ್ಲಿ ಚರ್ಚಿಸುತ್ತಾರೆ. ಅದಕ್ಕೆ ಮೊದಲು ತಿಂಡಿ ತೀರ್ಥದ ಮಾತು ಸ್ವಲ್ಪ ಮುಂದುವರೆಯಲಿ.

ವ್ಯವಸ್ಥಿತ ವಲಯದಲ್ಲಿ ಇಷ್ಟೊಂದು ಉಣ್ಣುವ ಸ್ಥಳಗಳು ಬೆಂಗಳೂರಿಗೆ ಬಂದದ್ದು ಹೇಗೆ ಎನ್ನುವ ಪ್ರಶ್ನೆಯನ್ನು ಒಂದು ಕ್ಷಣದ ಮಟ್ಟಿಗೆ ಚರ್ಚಿಸೋಣ. ವ್ಯವಸ್ಥಿತ ವಲಯವೆಂದಾಗ ನಾನು ರಸ್ತೆಯ ಬದಿಯ ತಳ್ಳುವಗಾಡಿಗಳಲ್ಲಿ ದೊರೆಯುವ ತಿಂಡಿತೀರ್ಥವನ್ನು ಪರಿಗಣಿಸುತ್ತಿಲ್ಲ. ವ್ಯವಸ್ಥಿತ ವಲಯವೆಂದರೆ ಒಂದು ಲೈಸೆನ್ಸ್ ಇದ್ದು ನಗರಪಾಲಿಕೆಯ ಪರವಾನಗಿಯಿಂದ ನಡೆಸುತ್ತಿರುವ ತಿಂಡಿಮನೆ ಅಂತ ಪರಿಗಣಿಸೋಣ. ನಾನು ನೋಡಿರುವ ಅನೇಕ ನಗರಗಳ ತುಲನೆಯಲ್ಲಿ ಬೆಂಗಳೂರಿನ ವೈವಿಧ್ಯತೆ ಅದ್ಭುತವಾದದ್ದು. ಅಗ್ಗಬೆಲೆಗೆ ತಿಂಡಿ ಸಿಗುವ ದರ್ಶಿನಿಗಳಿಂದ ಹಿಡಿದು ದುಬಾರೀ ಪೀಡ್ಜಾ ಹಟ್‌ನ ಪೀಡ್ಜಾದ ವರೆಗೆ ಅನೇಕ ರೀತಿಯ ತಿಂಡಿಮನೆಗಳು ನಮಗೆ ದೊರೆಯುತ್ತವೆ. ಆದರೆ ದರ್ಶಿನಿಗಳನ್ನು ತೆಗೆದುಕೊಂಡಾಗ ಇಷ್ಟು ಕಡಿಮೆಬೆಲೆಗೆ ತಿಂಡಿ ಮಾರುವುದನ್ನು ಬೆಂಗಳೂರಿನ ತಿಂಡಿಮನೆಗಳು ಸಾಧಿಸಿದ್ದು ಹೇಗೆ ಅನ್ನುವ ಪ್ರಶ್ನೆ ಕುತೂಹಲದ್ದು. ನಾಯರ್ ಈ ಬಗ್ಗೆ ನೇರವಾಗಿ ಚರ್ಚೆ ಮಾಡುವುದಿಲ್ಲವಾದರೂ ಅದರ ಸುಳುಹನ್ನು ನಾವು ಪಡೆಯಬಹುದೆನ್ನಿಸುತ್ತದೆ. ಮೊದಲನೆಯದಾಗಿ - ಮುಂಜಾನೆ ಆರರಿಂದಾರಭ್ಯ ಹೊರಗೆ ಹೋಗಿ [ಎಂಟಿ‌ಆರ್‌ನಲ್ಲಿ ಕಾಯುವುದನ್ನೊಳಗೊಂಡು] ತಿಂಡಿ ತಿನ್ನುವುದನ್ನು ಬೆಂಗಳೂರಿಗರು ಅಪರಾಧವೆಂದು ಪರಿಗಣಿಸುವುದಿಲ್ಲ. ಬದಲಿಗೆ ಅದು ಸಹಜವೆನ್ನುವಂತೆ ವರ್ತಿಸುತ್ತಾರೆ. ಹೀಗಾಗಿ ಈ ರೀತಿಯ ತಿಂಡಿಮನೆಗಳನ್ನು ನಡೆಸಲು ಬೇಕಾದ ಗ್ರಾಹಕರ ಬರ ಬೆಂಗಳೂರಿನಲ್ಲಿಲ್ಲ. [ಬೆಂಗಳೂರಿನಿಂದ ಆಣಂದಕ್ಕೆ ಬಂದಿದ್ದ ನಕ್ಷತ್ರಿಯವರು ಅಲ್ಲಿನ ದ್ವಾರಕಾ ಹೋಟೇಲು ತೆಗೆದಾಗ ಇದೇ ಲಾಜಿಕ್ಕನ್ನು ಒಡ್ಡಿ ಬೆಳಿಗ್ಗೆ ಬಸ್ಸಿಗೆ-ರೈಲಿಗೆ ಹೋಗುವವರು ತಿಂಡಿ-ಕಾಫಿಗೆಂದು ಬರುತ್ತಾರೆ ಅನ್ನುವ ನಂಬಿಕೆಯಲ್ಲಿ ತಮ್ಮ ತಿಂಡಿಮನೆಯನ್ನು ಬೇಗನೇ ತೆರೆದು ಕೂತಿರುತ್ತಿದ್ದರು.. ಆದರೆ ಒಂದು ವಾರದಲ್ಲೇ ಅವರಿಗೆ ಮನವರಿಕೆಯಾದ ಸತ್ಯವೆಂದರೆ ಮಧ್ಯಾಹ್ನ ಹನ್ನೆರಡಕ್ಕೆ ಮುನ್ನ ತಮ್ಮ ತಿಂಡಿಮನೆಯನ್ನು ತೆಗೆಯುವುದರಿಂದ ತಮಗೆ ಖರ್ಚಾಗುತ್ತದೆಯೇ ವಿನಃ ಆದಾಯವಿಲ್ಲವೆಂದು ಅವರು ಮನಗಂಡರು]. 

ಬೆಂಗಳೂರಿಗೆ ವಿಶಿಷ್ಟವಾದ ಮತ್ತೊಂದು ಸಂಗತಿಯೆಂದರೆ ತುರ್ತು ಪರಿಸ್ಥಿತಿಯ ಕಾಲದಲ್ಲಿ ಹಾಕಿದ್ದ ಊಟಕ್ಕೆ ಸಂಬಂಧಿಸಿದ ನಿಯಮಾವಳಿಗಳಿಂದ ಖರ್ಚು ಕತ್ತರಿಸುವುದನ್ನು ನಮ್ಮವರು ಕಲಿತಿರಲಿಕ್ಕೆ ಸಾಕು. ತುರ್ತು ಪರಿಸ್ಥಿತಿಯ ದಿನಗಳಲ್ಲಿ ಹೊಟೇಲುಗಳಲ್ಲಿನ ಖಾದ್ಯ ಪದಾರ್ಥಗಳ ಅಂತಿಮ ಗ್ರಾಹಕ ಬೆಲೆಯನ್ನು ಸರಕಾರ ನಿಗದಿಮಾಡಿದ್ದಲ್ಲದೇ ಆ ಬೆಲೆಗೆ ಎಷ್ಟು ತೂಕದ ಆಹಾರ ನೀಡಬೇಕೆಂಬುದನ್ನೂ ನಿರ್ದಿಷ್ಟಗೊಳಿಸಿತ್ತು. ಬಹುಶಃ ಆಗಿನ ಕಾಲದಲ್ಲೇ ನಮ್ಮವರು ಖರ್ಚು ಕತ್ತರಿಸಿ ಕಡಿಮೆ ಬೆಲೆಗೆ ತಿಂಡಿ ಕೊಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಿರಬಹುದು. ದರ್ಶಿನಿಗಳ ವ್ಯಾಪಾರದ ವೈಖರಿಯನ್ನು ಉದಾಹರಣೆಯಾಗಿ ನೋಡಿ: ಸ್ವಸಹಾಯ ಪದ್ಧತಿ; ಕುಳಿತುಕೊಳ್ಳುಲು ಸ್ಥಳವಿಲ್ಲ - ಹೀಗಾಗಿ ತಿಂದ ಕೂಡಲೇ ಜಾಗ ಖಾಲಿ ಮಾಡಬೇಕಾದ ತುರ್ತು ಇದ್ದೇ ಇದೆ; ಹಾಗೂ ಆಹಾರ ತ್ವರಿತ ಗತಿಯಲ್ಲಿ ಒಲೆಯಿಂದ ಉದರಕ್ಕೆ ಹೋಗುತ್ತದೆ. ನನ್ನ ಊಹೆಯಂತೆ ಅವರುಗಳು ಅತಿ ಕಡಿಮೆ ತಟ್ಟೆ-ಲೋಟ-ಪಾತ್ರೆಗಳನ್ನು ಬಳಸುತ್ತಾರೆ. ಯಾಕೆಂದರೆ ದರ್ಶಿನಿ-ಉಡುಪಿಗಳಲ್ಲಿ ತಿಂದು ಮುಗಿಸುವುದಕ್ಕೆ ಒಂದು ಕ್ಷ್ಣಣ ಮುನ್ನವೇ ಕ್ಲೀನರ್ ಹಾಜರಾಗಿ ಕಾಯುತ್ತಿರುತ್ತಾನೆ - ನೀವು ಮುಗಿಸದಿದ್ದರೆ ಮುಂದಿನ ಗ್ರಾಹಕ ಉಪವಾಸದಿಂದ ಸಾಯಬಹುದು ಅನ್ನುವಂತಹ ತುರ್ತು ಆ ಕ್ಲೀನರುಗಳಲ್ಲಿರುತ್ತವೆ! ಹೀಗಾಗಿಯೇ ನಾಯರ್ ಪುಸ್ತಕದಲ್ಲಿ ತಿಂಡಿಮನೆಗಳಲ್ಲಿ ತಿನ್ನುವ ಮಾತು ಅನೇಕಬಾರಿ ಮರುಕಳಿಸುತ್ತದೆ.. ನಮ್ಮ ದಿನದಲ್ಲಿ ಬೈಟೂ ಕಾಫಿ ಮರುಕಳಿಸುವ ಹಾಗೆ!

ಸಾರ್ವಜನಿಕ ಸ್ಥಳಗಳನ್ನು ನಗರ ಅಳವಡಿಸಿಕೊಂಡಿರುವರೀತಿಯ ಬಗ್ಗೆಯೂ ನಾಯರ್ ಚರ್ಚಿಸುತ್ತಾರೆ. ಹಾಗೆ ನೋಡಿದರೆ ಬೆಂಗಳೂರಿನಲ್ಲಿ ಸಾರ್ವಜನಿಕ ಜಾಗಗಳಲ್ಲಿ ಉದ್ಭವವಾಗಿರುವ ದೇವಸ್ಥಾನಗಳ ಸಂಖ್ಯೆ ಅಪಾರ. ನಾನು ಸಣ್ಣವನಿದ್ದಾಗ ನೆಟ್ಟಕಲ್ಲಪ್ಪ ವೃತ್ತ ಒಂದು ಪುಟ್ಟ ಆಟದ ಮೈದಾನವಾಗಿತ್ತು. ಸಜ್ಜನ್‌ರಾವ್ ವೃತ್ತ ಒಂದು ಪುಟ್ಟ ಪಾರ್ಕ್ ಆಗಿತ್ತು. ಮಲ್ಲೇಶ್ವರದ ಬನ್‌ವರ್ಲ್ಡ್ ಮೂಲೆಯಲ್ಲಿದ್ದ ತ್ರಿಕೋನ ಹಾಲಿನ ಬೂತೊಂದನ್ನು ಬಿಟ್ಟರೆ ಖಾಲಿಯಾಗಿತ್ತು. ಅವೆಲ್ಲವೂ ಈಗ ಯಾತ್ರಾಸ್ಥಳಗಳು. ಈಗ ನಂದಾ ಥಿಯೆಟರ್ ಬಳಿಯ ಲಕ್ಷ್ಮಣರಾವ್ ಉದ್ಯಾನದಲ್ಲೂ, ಒಟ್ಟಾರೆ ಉದ್ಯಾನದ ಸೈಜಿಗೆ ಹೋಲಿಸಿದಾಗ ಸಣ್ಣದೆನ್ನಿಸುವ ಒಂದು ಮಿನಿ ದೇವಾಲಯ ಬಂದು ಬಿಟ್ಟಿದೆ! ಭಕ್ತಿ ವ್ಯಕ್ತಪಡಿಸುವ ಸಣ್ಣ ಪ್ರಯಾಸಗಳಂತೆ ಪ್ರಾರಂಭವಾಗುವ ಆ ಜಾಗಗಳು ಅಂದುಕೊಂಡದ್ದಕ್ಕಿಂತ ಬೃಹದಾಕಾರವಾಗಿ ಬೆಳೆದು ಸಾರ್ವಜನಿಕ ಸವಲತ್ತುಗಳಿಗೆ ಸವಾಲಾಗಿ ನಿಲ್ಲುತ್ತವೆ. ಸಾರ್ವಜನಿಕ ಸ್ಥಳದ ಮೇಲಾಗುವ ಮಿಕ್ಕ ರೀತಿಯ ಆಕ್ರಮಣ ಅತಿಕ್ರಮಣವನ್ನು ಮನಸ್ಸಿದ್ದಲ್ಲಿ ಮಾರ್ಗವೆಂಬಂತೆ ಎತ್ತಂಗಡಿ ಮಾಡಿಸಬಹುದಾದರೂ ನಂಬುಗೆಯಾಧಾರದ ಮೇಲೆ ನಿಂತಿರುವ ಈ ಇಮಾರತುಗಳನ್ನು ಅಲುಗಾಡಿಸುವುದು ಅಸಾಧ್ಯದ ಮಾತಾಗುತ್ತದೆ. ನಾಯರ್ ಈ ಮಾತನ್ನು ಉದ್ಧರಿಸಲು ಬಾಬಸನ್‌ಪಾಳ್ಯದಲ್ಲಿ ರಿಂಗ್ ರೋಡ್ ಮೇಲೆ ಇದ್ದ ಹೈವೇ ಆಂಜನೇಯನ ಮೂರ್ತಿ ತೆಗೆದ ಕಥೆಯನ್ನು ಹೇಳುತ್ತಾರೆ. ಅದನ್ನ ಅಲ್ಲಿಂದ ಎತ್ತಂಗಡಿ ಮಾಡಿಸಿದ ಕೂಡಲೇ ಅಪಘಾತಗಳು ಹೆಚ್ಚಿ ಆಂಜನೇಯನನ್ನು ವಾಪಸ್ಸು ಕರೆತರಬೇಕಾಯಿತಂತೆ!

ಸಮಯ ಕಳೆದಂತೆ ಭಕ್ತಿ-ನಂಬಿಕೆಗಳಷ್ಟೇ ಅಲ್ಲದೇ ವಾಣಿಜ್ಯದ ತುರ್ತುಗಳೂ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಬಿಡುತ್ತವೆ. ಪರಿಸರದಲ್ಲಿನ ಸಮತೋಲನ ಮತ್ತು ಜನಹಿತಕ್ಕೆ ಬೇಕಾದ ಸೇವೆಗಳನ್ನೂ ಖಸಗೀ ಕ್ಷೇತ್ರಕ್ಕೆ ತಳ್ಳಲಾಗುತ್ತದೆ. ಬೆಂಗಳೂರಿನ ಅನೇಕ ಕೆರೆಗಳು ಅದೃಶ್ಯವಾಗಿ ಅಲ್ಲಿ ಕಾನ್‌ಕ್ರೀಟ್ ಸ್ಥಾವರಗಳು ಬೆಳೆದು ನಿಂತುಬಿಟ್ಟಿವೆ. ಒಟ್ಟಾರೆ ನೀರಿನ ಅಭಾವ ಕಾಣಿಸುತ್ತಿದೆ. ಶುದ್ಧವಾದ ಗಾಳಿ ಸೇವಿಸುವುದೂ ಒಂದು ಸಮಸ್ಯೆಯೇ. ಹೀಗಿರುವಾಗ ಸರಕಾರಗಳು ಅತಿಕ್ರಮಣಗಳನ್ನು ತಡೆಯುವುದು ಬಿಟ್ಟು ಈ ಸಾರ್ವಜನಿಕ ಸಮಸ್ಯೆಗಳಿಗೆ ಖಾಸಗೀ ವಲಯದಲ್ಲಿ ಪರಿಹಾರಗಳನ್ನು ಹುಡುಕುತ್ತಿವೆ. ಖಾಸಗೀ ಪರಿಹಾರಗಳೇನು? ಪ್ರತಿ ಮನೆಯಲ್ಲೂ ನೀರಿಗಾಗಿ ಒಂದು ಸಂಪನ್ನು ನಿರ್ಮಿಸುವುದು, ಅದರಿಂದ ನೀರೆಳೆಯಲು ವಿದ್ಯುತ್ತು ಹೀರುವ ಒಂದು ಪಂಪನ್ನು ಹಾಕುವುದು, ಮನೆಯ ಆವರಣದಲ್ಲಿಯೇ ಒಂದು ಬೋರ್‌ವೆಲ್ ಕೊರೆಯುವುದು ಅದಕ್ಕೂ ಒಂದು ವಿದ್ಯುತ್ ಹೀರುವ ಪಂಪನ್ನು ಹಾಕುವುದು. ಈ ಎಲ್ಲದರ ನಡುವೆ ಹೊಸ ಇಮಾರತುಗಳು ಬಂದಾಗ ಅಲ್ಲಿ ಬಿಡಲೇಬೇಕಾದ ಖಾಲಿ ಜಾಗ, ಅಲ್ಲಿರಬೇಕಾದ ಮಳೆ ನೀರಿನ ಸಂಗ್ರಹದ ಪದ್ಧತಿಗಳ ಬಗ್ಗೆ ಸರಕಾರ ನಿಯಮಗಳನ್ನು ಮಾಡಿ ತನ್ನ ಜವಾಬ್ದಾರಿಯನ್ನು ನಿಭಾಯಿಸಿಬಿಟ್ಟಂತೆ ಧನ್ಯವಾಗಿ ಕೂತುಬಿಡುತ್ತದೆ! ಈ ರೀತಿಯ ನಿಯಮಗಳನ್ನು ಮಾಡುವುದರಲ್ಲಿ ತಪ್ಪೇನೂ ಇಲ್ಲ.. ಆದರೆ ಇವೆಲ್ಲಾ ಅನೇಕ ಸರಕಾರಗಳು ಪೇರಿಸಿಟ್ಟ ತಪ್ಪುಗಳಿಗೆ ಕಟ್ಟುತ್ತಿರುವ ಖಾಸಗೀ ಬೆಲೆಯಲ್ಲವೇ? ಕೆರೆಗಳ ಮೇಲಿನ ಖಾಸಗೀ ಮತ್ತು ಸರಕಾರೀ ಅತಿಕ್ರಮಣವನ್ನು ತಡೆದು ಅದಕ್ಕೂ ಮಿಂಚಿ ಈ ನಿಯಮಗಳನ್ನು ಹೇರಿದ್ದರೆ ಆಗೆ ಸರಕಾರವನ್ನು ಒಂದು ಜವಾಬ್ದಾರಿಯುತ ಸರಕಾರ ಎಂದು ಕರೆಯಬಹುದಿತ್ತೇನೋ. ಇದೇ ರೀತಿಯಾದ ಮತ್ತೊಂದು ಅನಾವಶ್ಯಕ ಹೂಡಿಕೆಯನ್ನು ಇನ್ವರ್‌ಟರ್‌ ಮತ್ತು ಬ್ಯಾಟರಿಯ ರೂಪದಲ್ಲಿ ನಾವು ಪ್ರತಿ ಮನೆಯಲ್ಲೂ ನೋಡುತ್ತೇವೆ. ಯಾಕೆಂದರೆ ವಿದ್ಯುತ್ತು ಯಾವಾಗ ಕತ್ತಲಿನಲ್ಲಿ ಅಡಗಲು ನಿರ್ಧರಿಸುತ್ತದೋ ನಮಗೆ ತಿಳಿಯದು. ಅಹಮದಾಬಾದಿನಲ್ಲಿ ನಾನು ಆರು ವರ್ಷಕ್ಕೂ ಹೆಚ್ಚು ಕಾಲಕಳೆದರೂ ಮನೆಯಲ್ಲಿ ಇನ್‌ವರ್‌ಟರ್ ಹಾಕುವ ತುರ್ತು ನನಗೆ ಕಂಡಿರಲಿಲ್ಲ. ಕಾರಣ: ಅಲ್ಲಿ ಮನೆಯಲ್ಲಿ ವಿದ್ಯುತ್ತು ಹೋಗಿದ್ದು ಸರಾಸರಿ ವರ್ಷಕ್ಕೆ ಒಮ್ಮೆ ಮಾತ್ರ!

ಪುಸ್ತಕದಲ್ಲಿ ನಾಯರ್ ಬೆಂಗಳೂರಿನ ಒಟ್ಟಾರೆ ಸೌಂದರ್ಯ ಪ್ರಜ್ಞೆಯ ಬಗ್ಗೆ ಚರ್ಚಿಸುತ್ತಾರೆ. ನಗರಕ್ಕೆ ಒಂದು ಐಡೆಂಟಿಟಿಯನ್ನು ಕೊಡಬಹುದಾದ ವಿಷಯವೇನಾದರೂ ಇದೆಯೇ? ಒಂದೇ ಸಾಮಾನ್ಯ ಸೂತ್ರದಿಂದ ನಗರವನ್ನು ಜೋಡಿಸುವ ಯಾವ ಅಂಶವೂ ನಮಗೆ ಕಾಣುವುದಿಲ್ಲ.ಉದಾಹರಣೆಗೆ ವಿಧಾನ ಸೌಧವಿರುವ ರಸ್ತೆಯಲ್ಲಿ ವಿಶ್ವೇಶ್ವರಯ್ಯ ಟವರ್‌ನಂತಹ ಇಮಾರತು ಏನು ಮಾಡುತ್ತಿದೆ-ಯಾಕಿದೆ? ವಿಧಾನ ಸೌಧವನ್ನೂ ಎದುರಿಗಿರುವ ಕೆಂಪು ಬಣ್ಣದ ಅಠಾರ ಕಛೇರಿಯನ್ನೂ ಹಿಡಿದಿಡುವ ಸಾಮಾನ್ಯ ಸೂತ್ರ ಯಾವುದು. ಅಥವಾ ವಿಧಾನ ಸೌಧದೆ ಎದುರಿಗಿರುವ ಜಿ.ಪಿ.ಒ. ವಿಧಾನ ಸೌಧಕ್ಕೆ ನಿಜಕ್ಕೂ ಪೂರಕವಾಗಿದೆಯೇ? ಇತರ ನಗರಗಳಲ್ಲಿನಂತೆ ಬೆಂಗಳೂರಿಗೆ ಚರಿತ್ರೆಯಂದ ಯಾವ ದೊಡ್ಡ ಸ್ಥಾವರವೂ ಬಳುವಳಿಯಾಗಿ ಬಂದಿಲ್ಲ. ಬೆಂಗಳೂರಿನ ಅರಮನೆ ಎಂದೂ ನಗರದ ಒಂದು ಮೂಲೆಯಲ್ಲಿ ಸುತ್ತ ಸುಮಾರಷ್ಟು ಭೂಮಿಯನ್ನಾಕ್ರಮಿಸಿಕೊಂಡು ದಿನನಿತ್ಯ ಓಡಾಡುವವರಿಗೆ ಕಾಣದಾಗಿ ಇತ್ತು. ಹೀಗಾಗಿ ಬೆಂಗಳೂರನ್ನು ದೃಶ್ಯ ರೂಪದಲ್ಲಿ ಪ್ರತಿನಿಧಿಸಲು ಇದ್ದದ್ದು ಆಧುನಿಕ ಕಟ್ಟಡಗಳು ಮಾತ್ರ. ಅದು ಹಾಗಿರಲಿ. ನಾವು ಬೆಂಗಳೂರಿನ ವಿಷಯಕ್ಕೆ ಬಂದಾಗ ಇಲ್ಲಿ ಜೈಪುರದಲ್ಲಿರುವಂತೆ ಹವಾ ಮಹಲಿರಬೇಕೆಂದೂ, ಹಾಗೂ ಜೈಪುರದಲ್ಲಿ ಮಾಡಿದಂತೆ ಹವಾಮಹಲಿನ ಸುತ್ತಲ ಪ್ರಾಂತವನ್ನು ಹೆರಿಟೇಜ್ ಜೋನ್ ಅಂತ ಕರೆದು ಅಲ್ಲಿ ಆ ಮಹಲಿನ ಮಹತ್ವಕ್ಕೆ ಪೂರಕವಾದಂತೆ ಮಾತ್ರ ಕಟ್ಟಡಗಳನ್ನು ಕಟ್ಟಬೇಕು ಎಂದು ಮಾಡಿರುವ ನಿಯಮದಂತಹ ನಿಯಮವನ್ನು ಇಲ್ಲಿ ಬಯಸುವುದು ಸಮಂಜಸವಲ್ಲ. ಆದರೆ ನಾವು ಆಧುನಿಕರಾಗುತ್ತಿರುವಂತೆಯೇ ನಮ್ಮ ಚರಿತ್ರೆಯ ತುಣುಕುಗಳನ್ನು ಹೇಗೆ ಉಳಿಸಿಕೊಳ್ಳಬಹುದೆನ್ನುವುದಕ್ಕೆ ನನಗೆ ಕ್ಯುಬೆಕ್ ನಗರದಲ್ಲಿ ಎರಡು ಉದಾಹರಣೆಗಳು ದೊರೆತವು. ಕ್ಯುಬೆಕ್ ನಗರದಲ್ಲಿ ನೀವು ಕುದುರೆ ಸಾರೋಟಿನ ಮೇಲೆ ಕೂತು ನಗರಯಾನ ಮಾಡಬಹುದು [ಈ ಗಾಡಿಗಳು ಮುಂಬಯಿನ ವಿಕ್ಟೋರಿಯಾಕ್ಕೆ ಸಮಾನವಾಗಿದ್ದುವು]. ಆದರೆ ಗಮ್ಮತ್ತಿನ ವಿಷಯ ಅಲ್ಲಿಗೆ ನಿಲ್ಲುವುದಿಲ್ಲ. ಆ ಯಾನಕ್ಕೆ ನೀವು ಕ್ರೆಡಿಟ್ ಕಾರ್ಡಿನ ಮೂಲಕ ದುಡ್ಡು ಕಟ್ಟಬಹುದು! ಆಧುನಿಕತೆ ಮತ್ತು ಚರಿತ್ರೆಯ ಸಮ್ಮಿಳನವೆಂದರೆ ಇದಲ್ಲವೇ? ಎರಡನೆಯ ಗಮ್ಮತ್ತಿನ ವಿಷಯವೆಂದರೆ ಅದು ಗಮ್ಮತ್ತಿನದ್ದಾಗಿರಲಿಲ್ಲ ಅನ್ನುವುದೇ. ಅಲ್ಲಿನ ಮೆಕ್‌-ಡೊನಲ್ಡ್ಸ್‌ನ ಬೋರ್ಡಿನ ಸೈಜು. ಅಮೇರಿಕಾ-ಕೆನಡಾದ ಇತರೆಡೆಗಳಲ್ಲಿ ಮೆಕ್‌ಡೊನಲ್ಡ್ಸ್‌ ಎಂದ ಕೂಡಲೇ ಎರಡು ಬಂಗಾರದ ಕಮಾನುಗಳು ದೊಡ್ಡದಾಗಿ ಕಂಡು ನಿಲ್ಲುತ್ತವೆ. ಆದರೆ ಕ್ಯೂಬೆಕ್‌ನ ಮೆಕ್‌ಡೊನಲ್ಡ್ಸ್‌‍ಗೆ ದೊಡ್ಡ ಬಂಗಾರದ ಕಮಾನುಗಳಿರಲಿಲ್ಲ! ಹಿನ್ನೆಲೆಯ ಕೆಂಪು ಬಣ್ಣವೂ ಇಲ್ಲ. ಅದರ ಫಲಕ ಇತರೇ ಸಾಮಾನ್ಯ ಅಂಗಡಿಗಳಂತಿತ್ತು. ಆ ಫಲಕವನ್ನು ಅವರು ಅಂಗಡಿಯ ಬಾಗಿಲಿಗಲ್ಲದೇ ಇನ್ನೆಲ್ಲೂ ಹಾಕುವಂತಿರಲಿಲ್ಲ. ಬೆಂಗಳೂರಿನ ಕೆಲವು ಭಾಗಗಳನ್ನಾದರೂ ನಾವು ಹೆರಿಟೇಜ್ ಜೋನ್ ಎಂದು ಉಳಿಸಿಕೊಳ್ಳಬಹುದಿತ್ತು. ಮಹಾತ್ಮಾ ಗಾಂಧಿ ರಸ್ತೆ, ಮತ್ತು ಕಮರ್ಶಿಯಲ್ ಸ್ಟ್ರೀಟ್ ತಕ್ಷಣ ನನ್ನ ಮನಸ್ಸಿಗೆ ಬರುತ್ತದೆ. ಹಾಗೆಯೇ ಅವೆನ್ಯೂ ರಸ್ತೆಯಲ್ಲಿ ನಿಜಕ್ಕೂ ವಾಹನ ಸಂಚಾರವನ್ನು ನಿಷೇಧಿಸಿ ಅದನ್ನು ಉಳಿಸಿಕೊಳ್ಳುವ ಅವಶ್ಯಕತೆ ಇದೆಯೇನೋ.

ಪುಸ್ತಕದಲ್ಲಿನ ಎರಡು ಭಿನ್ನ ಅಧ್ಯಾಯಗಳಲ್ಲಿ ಬೆಂಗಳೂರಿನ ಚಳವಳಿಗಳು ಮತ್ತು ಭಾಷಾ ರಾಷ್ಟ್ರೀಯತೆಯ ಬಗ್ಗೆ ನಾಯರ್ ಚರ್ಚಿಸುತ್ತಾರೆ. ಕನ್ನಡ ರಾಷ್ಟ್ರೀಯತೆಯ ಬಗೆಗೂ ಅವರ ವಿಚಾರಗಳು ಇದರಲ್ಲಿ ಇವೆ. ನನ್ನಂರಹ ಓದುಗನಿಗೆ ಇದರಿಂದ ಆದದ್ದು ಏನೆಂದರೆ ಎಷ್ಟೋ ವಿಚಾರಗಳಿಗೆ ಮೇಲ್ಮೈಯಲ್ಲಿರುವ ಕೊಂಡಿಗಳಿಗಿಂತ ಭಿನ್ನವಾದ ಸಂಬಂಧಗಳ ಕಾಣ್ಕೆ. ಆಕೆಯ ಸಂಶೊಧನೆಯಿಂದ ಇಂಥ ಕೊಂಡಿಗಳನ್ನು ಆಕೆಯೇ ನಿರೂಪಿಸಿದರೂ ನನ್ನಂತಹ ಓದುಗನಿಗೆ ಪಟ ಹಾರಿಸಲು ಒಂದೆರಡು ವಿಷಯಗಳನ್ನು ಬಿಟ್ಟುಕೊಟ್ಟಿದ್ದಾರೆ. ಆಕೆ ತುರ್ತು ಪರಿಸ್ಥಿತಿಯ ನಂತರ "ಸಮುದಾಯ" ದಿಂದ ಬೆಂಗಳೂರಿನ ಜನಪರ ವಿಚಾರಧಾರೆಯ ಮೇಲಿನ ಪ್ರಭಾವದ ಬಗ್ಗೆ ಆಕೆ ವಿಸ್ತಾರವಾಗಿ ಚರ್ಚಿಸುತ್ತಾರೆ. ತುರ್ತು ಪರಿಸ್ಥಿತಿಯ ಕಾಲದಲ್ಲಿ ಎಡ ಮತ್ತು ಬಲ ಪಂಥೀಯರ ಮೇಲೆ ದಬ್ಬಾಳಿಕೆ ನಡಿದಿತ್ತಾದರೂ, ಆ ದಬಾಳಿಕೆಯನ್ನು ಅತ್ಯಂತ ಸೃಜನಶೀಲವಾಗಿ ಎದುರಿಸಿದವರು ಎಡ ಪಂಥೀಯರು. ಸಮುದಾಯದ ಫಲವಾಗಿ ಕನ್ನಡ ರಂಗಕ್ಷೇತ್ರಕ್ಕೆ ಪುನಶ್ಚೇತನ ಬಂದಿದ್ದಲ್ಲದೇ ಅನೇಕ ಸೃಜನಶೀಲ ಕಲಾವಿದರು ಬೆಳಕಿಗೆ ಬರಲು ಸಾಧ್ಯವಾಯಿತು. ಈ ಕಲಾವಿದರು ಸಂಸ್ಕೃತಿಯನ್ನು ಆಂದೋಲನ ಮತ್ತು ವಿಚಾರಧಾರೆಯನ್ನು ಹಬ್ಬುವ ಮಾಧ್ಯಮವನ್ನಾಗಿ ಬಳಸಿದರು. ಕನ್ನಡ ರಾಷ್ಟ್ರೀಯತೆಯ ಮೂಲಸೆಲೆ ಇಲ್ಲಿಂದ ಪ್ರಾರಂಭವಾಗುವ ಸಾಧ್ಯತೆ ಇತ್ತಾದರೂ ಅದು ಹಾಗಾಗಲಿಲ್ಲ.

ಇದಕ್ಕೆ ಕಾರಣಗಳು ಹಲವಿರಬಹುದು. ಎಡಪಂಥೀಯರು ಹೆಚ್ಚಾಗಿ ಪ್ರತಿನಿಧಿಸಿದ್ದು ಉದ್ದಿಮೆಗಳ ಕಾರ್ಮಿಕವರ್ಗವನ್ನು. ಅವರು ಸಂವಹನಕ್ಕೆ ಉಪಯೋಗಿಸಿದ ಮಾಧ್ಯಮ ಕನ್ನಡ. ಹೀಗಾಗಿ ಒಂದು ಭಾಷೆಯಾಧಾರಿತವಾದ ಅಸ್ತಿತ್ವವನ್ನು ಅವರು ನಿರ್ಮಿಸುವ ಸಾಧ್ಯತೆಗಳನ್ನು ಅವರು ತೆರೆದಿಟ್ಟರು. ಆದರೆ ಹಾಗಾಗಲಿಲ್ಲ ಅಂತ ನಾಯರ್ ವಾದಿಸುತ್ತಾರೆ. ಆಕೆಯ ಮಾತುಗಳು ಇಂತಿವೆ: "ಎಲ್ಲವನ್ನೂ ಒಳಗೊಂಡು ಚಟುವಟಿಕೆಗಳಿಂದ ಜೀವಂತವಾಗಿದ್ದ ಈ ಆಂದೋಲನ ೧೯೮೦ರ ವೇಳೆಗೆ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಂಡು ಬಿಟ್ಟಿತು. ಆ ವೇಳೆಗೆ ಪ್ರಜಾಸತ್ತಾತ್ಮಕ ಕೋರಿಕೆಗಳನ್ನು ವ್ಯಕ್ತಪಡಿಸುವುದಕ್ಕೆ ಭಾಷೆಯ ಮಾಧ್ಯಮ ತನ್ನ ಮೂಲಭೂತ ಸ್ಥಾನವನ್ನ ಕಳೆದುಕೊಂಡುಬಿಟ್ಟಿತ್ತು.." ಹೀಗಾಗಿ ಕನ್ನಡ ಭಾಷೆಯ ಆಧಾರವಾಗಿ ಒಂದು ಅಸ್ತಿತ್ವ ರೂಪುಗೊಂಡದ್ದು ೧೯೮೨ರ ಗೋಕಾಕ್ ಚಳವಳಿಯ ನಂತರ ಎಂದು ಆಕೆ ವಾದಿಸುತ್ತಾರೆ. ಈ ವಾದವನ್ನು ಮಂಡಿಸುವಾಗ ನಾಯರ್‌‌‌ಗೆ ಕಾಣದ ಕೊಂಡಿ ಎಂದರೆ, ರಂಗಭೂಮಿಯಲ್ಲಿ, ಸಾಹಿತ್ಯದಲ್ಲಿ ಸಕ್ರಿಯರಾಗಿದ್ದ ಜನರೇ ಗೋಕಾಕ್ ಚಳವಳಿಯಲ್ಲೂ ಸಕ್ರಿಯತೆಯನ್ನು ತೋರಿಸಿದ್ದರು. ವಿದ್ಯೆಯಲ್ಲಿ ಭಾಷೆಯ ಮಾಧ್ಯಮದ ವಿಚಾರದಿಂದಾಗಿ ಗೋಕಾಕ್ ಚಳವಳಿ ವಿಭಿನ್ನ ವಿಚಾರಧಾರೆಯ ಅನೇಕರನ್ನು ಒಗ್ಗೂಡಿಸಿತ್ತು. ಆದರೆ ರಂಗಕರ್ಮಿಗಳೂ, ಸಾಹಿತಿಗಳೂ ಗೋಕಾಕ್ ಚಳವಳಿಯ ಮೆಟ್ಟಿಲಲ್ಲಿಯೇ ನಿಂತುಬಿಟ್ಟರು. ಕನ್ನಡ ಶಕ್ತಿ ಕೇಂದ್ರದ ಮೂಲಕ ಚಿದಾನಂದ ಮೂರ್ತಿಯಂಥವರು ಈ ಚಳವಳಿಯನ್ನ ಜೀವಂತವಾಗಿಟ್ಟಿದ್ದಲ್ಲದೇ ಅದನ್ನು ಮುಂದಿನ ಹಂತಕ್ಕೆ ಒಯ್ದರು. ವಿದ್ಯೆಯಲ್ಲಿ ಕನ್ನಡಕ್ಕೆ ಮೂಲಭೂತ ಸ್ಥಾನವನ್ನು ಕಾಯ್ದಿರಿಸುವುದಲ್ಲದೇ ಅವರುಗಳು ಕನ್ನಡಿಗರಿಗೆ ಆರ್ಥಿಕ, ಉದ್ಯೋಗಾವಕಾಶದ ಜಾಗದಲ್ಲೂ ತಮ್ಮ ಹಕ್ಕುಗಳು ದೊರೆಯಬೇಕೆಂಬ ಬೇಡಿಕೆಯ ಬೆನ್ನೇರಿ ಹೋದರು. ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಕ್ಕೆ ಮೀಸಲಾತಿಯಿರಬೇಕೆಂಬ ಮಾತನ್ನು ಹೇಳಿದ ಮಹಿಷಿ ಆಯೋಗ ಈ ನಿಲುವನ್ನು ಮತ್ತಷ್ಟು ಬಲಪಡಿಸಿತು.

ಕನ್ನಡಕ್ಕೆ ಪ್ರಾಮುಖ್ಯತೆ ನೀಡಬೇಕೆಂಬ ಬೇಡಿಕೆ ಮತ್ತು ಆಂದೋಲನಗಳನ್ನು ಮೊದಲಿಗೆ ಕನ್ನಡ ಶಕ್ತಿ ಕೇಂದ್ರ, ಆನಂತರ ಕನ್ನಡ ರಕ್ಷಣಾ ವೇದಿಕೆ ಕೈಗೊಳ್ಳುತ್ತಿರುವಾಗಲೇ [ಭಾಷೆಯಾಧಾರದ ಮೇಲಲ್ಲದೇ, ತನ್ನ ಬಹು ಸಂಸ್ಕೃತೀ ಸೆಲೆಯನ್ನು ಉಳಿಸಿಕೊಳ್ಳುತ್ತಲೇ] ಬೆಂಗಳೂರನ್ನು ಇನ್ನೂ ಉತ್ತಮನಗರವನ್ನಾಗಿ ಮಾಡುವು ಬಗ್ಗೆ ಬೇರೆಯೇ ಪ್ರಯತ್ನಗಳು ನಡೆದಿದ್ದವು. ಈ ವಿರೋಧಾಭಾಸವೆನ್ನಿಸಬಹುದಾದಂತಹ ವಿಚಾರವನ್ನ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಘಟಿಸಿದ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್‌ನ [ಬಿ‌ಎಟಿ‌ಎಫ್] ರೂಪುರೇಶೆಯಲ್ಲಿ ನಾವು ನೋಡಬಹುದು. ಬಿ‌ಎಟಿ‌ಎಫ್ ಒಂದುರೀತಿಯಿಂದ ಬೆಂಗಳೂರಿನ ಬಹುಭಾಷೀಯ, ಬಹುಸಂಸ್ಕೃತಿಯ ವೈವಿಧ್ಯತೆಯ ಪ್ರತೀಕವಾಗಿತ್ತು. ಬಿ‌ಎಟಿ‌ಎಫ್‌ನಲ್ಲಿದ್ದ ಹಲವು ಸದಸ್ಯರು ಹಾಗೆ ನೋಡಿದರೆ "ಕನ್ನಡಿಗ"ರಲ್ಲ, ಆದರೆ ಅವರೆಲ್ಲಾ ಅಪ್ಪಟ ಬೆಂಗಳೂರಿಗರಾಗಿದ್ದರು. ಅವರುಗಳು ಹೆಚ್ಚಿನಂಶ ಪ್ರತಿನಿಧಿಸುತ್ತಿದ್ದುದ್ದು ಬೆಂಗಳೂರಿನ ಆರ್ಥಿಕ ವಾಣಿಜ್ಯ ಜಗತ್ತನ್ನು ಎನ್ನುವುದನ್ನು ನಾವು ಗಮನಿಸಬೇಕು. ಅಲ್ಲಿ ಭಾಷೆ ಸಂಸ್ಕೃತಿಯನ್ನು ಪ್ರತಿನಿಧಿಸುವ ಒಬ್ಬರೂ - ಒಂದು ಥರದಲ್ಲಿ ಉದಾರವಾದೀ ಮನೋಭಾವ ತೋರುವ ಅನಂತಮೂರ್ತಿ, ಅಧವಾ ಕಾರ್ನಾಡ್ - ಇರಲಿಲ್ಲ ಅನ್ನುವುದು ಸೋಜಿಗದ ವಿಷಯವಲ್ಲವೇ? ಬಿ‌ಎಟಿ‌ಎಫ್‌ನಲ್ಲಿನ ಸದಸ್ಯರ ಯಾದಿ ನೋಡಿದಾಗ ನಮಗೆ ಮನವರಿಕೆಯಾಗುವುದು ಒಂದು ವಿಷಯ: ಬೆಂಗಳೂರು ನಗರ ಸ್ಥಳೀಯ ಪ್ರಾಂತೀಯ ವಸ್ತುವಿಷಯಗಳನ್ನು ಮೀರಿ ರಾಷ್ಟ್ರದನಗರವಾಗುತ್ತಿರುವ ಲಕ್ಷಣವನ್ನು ನಾವು ಇಲ್ಲಿ ನೋಡಬಹುದು. ಮುಂಬಯಿ, ಹಾಗೂ ಕೊಂಚ ಮಟ್ಟಿಗೆ ಹೈದರಾಬಾದಿಗೆ ಇದೇ ಲಕ್ಷಣಗಳಿವೆ. ದೆಹಲಿಯಂತೂ ಯಾವ ಭಾಷಿಕ ಪ್ರಾಂತಕ್ಕೂ ಸೇರಿಲ್ಲವಾದ್ದರಿಂದ ಈ ವಿಷಯ ದೆಹಲಿಯ ಮಟ್ಟಿಗೆ ಅನ್ವಯವಾಗುವುದಿಲ್ಲ. ಬಿ‌ಎಟಿ‌ಎಫ್‌ ಒಂದುರೀತಿಯಲ್ಲಿ ನಾಗರೀಕರನ್ನು ನಗರದ ಬೆಳವಣಿಗೆಯಲ್ಲಿ ಭಾಗಸ್ವಾಮಿಗಳಾಗಿ ಮಾಡಿ ಸರಕಾರಕ್ಕೂ ಅದರ ಯೋಜನೆಗಳಿಗೂ ಒಂದು ಸ್ಥಾಯಿ ಪ್ರಜ್ಞೆ ನೀಡುವ ನಿಟ್ಟಿನಲ್ಲಿ ಸಾಗಿತ್ತು. ಆದರೆ ಕೃಷ್ಣ ಸರಕಾರ ಬಿದ್ದಾಗ ಈ ದಾರಿ ಜನಪ್ರಿಯವಾಗಿ ಕಾಣಲಿಲ್ಲ. ಇದಕ್ಕೆ ಕಾರಣ ಬಹುಶಃ ಕೃಷ್ಣ ಸರಕಾರ ಬೆಂಗಳೂರಿನ ಸರಕಾರ ಅನ್ನುವ ಇಮೇಜನ್ನು ದಾಟಿ ಸಮಸ್ತ ಕರ್ನಾಟಕದತ್ತ ಕಾರ್ಯಕ್ರಮಗಳನ್ನು ಹಬ್ಬಿಕೊಂಡಿರುವ ಇಮೇಜನ್ನ ಮುಂದಿನ ಸರಕಾರಗಳು ಕೊಡಬಯಸಿದವೇನೋ.

ನಾವು ಬೆಂಗಳೂರಿನಿಂದ ನಮ್ಮ ದೃಷ್ಟಿ ಸರಿಸಿದಂತೆ ಕನ್ನಡ ಭಾಷೆಗೆ ಸಮೀಪವಾಗುತ್ತಾ ಹೋಗುತ್ತೇವೆ. ಹೀಗಾಗಿ ನಮಗೆ ಕಾಣಿಸುವ ಈ ವಿಭೇದ ಕರ್ನಾಟಕದ ಇತರ ಭಾಗಗಳಿಗೂ ಬೆಂಗಳೂರಿಗೂ ಇರುವ ಅಂತರವಷ್ಟೇ ಅಲ್ಲದೇ ಕನ್ನಡಿಗರಿಗೂ ಇತರರಿಗೂ ಇರುವ ಅಂತರದಲ್ಲೂ ಅಡಕವಾಗಿದೆ. ಆದರೆ ನಾವು ಬೆಂಗಳೂರಿನಿಂದ ರಾಜ್ಯದ ಮಿಕ್ಕ ಭಾಗಗಳತ್ತ ಹೋದಾಗ, ಕನ್ನಡಿಗ-ಹೊರನಾಡಿಗ ಅನ್ನುವ ಅಂತರ ದೊಡ್ಡ ವಿಷಯವಾಗಿ ಕಾಣುವುದಿಲ್ಲ. ಹೀಗಾಗಿ ಕಾಲಾಂತರದಲ್ಲಿ ನಾವು ಬೆಂಗಳೂರಿನಲ್ಲಿ ಹೆಚ್ಚೆಚ್ಚು ಕನ್ನಡ ರಾಷ್ಟ್ರೀಯತೆಯ ಧ್ವನಿಯನ್ನು ಗಟ್ಟಿಯಾಗಿ ಕೇಳಲಿದ್ದೇವೆ. ಆರ್ಥಿಕ ಅವಕಾಶಗಳು ಹೆಚ್ಚಾದಂತೆ ಬಡವ-ಬಲ್ಲಿದರ ನಡುವಿನ ಅಂತರವೂ ಹೆಚ್ಚಾಗಿ ಜನ ಇಬ್ಬದಿಯಲ್ಲಿ ಧೃವೀಕರಿಸುವುದು ಸಹಜವಾಗುತ್ತದೆ. ಕನ್ನಡಿಗರಿಗೆ ಈ ಆರ್ಥಿಕ ಅವಕಾಶಗಳು ದೊರಕುವವಾದರೂ, ಹಾಗೆ ಅದನ್ನು ಪಡೆದುಕೊಂಡವರು ಹೊರಗಿನವರ ನಡುವೆ ತಮ್ಮ ಕನ್ನಡದ ಅಸ್ತಿತ್ವವನ್ನು ಕಳೆದುಕೊಂಡುಬಿಡುತ್ತಾರೆ. ಆದರೆ ಆ ಅವಕಾಶಗಳ ಸವಲತ್ತಿಲ್ಲದವರು ಮಾತ್ರ ಕನ್ನಡದವರೇ ಆಗುವುದರಿಂದ ಭಾಷೆ ಐಡೆಂಟಿಟಿಯೇ ಅವರ ಎಲ್ಲ ಚಡಪಡಿಕೆಗಳ ಸಂವಹನ ಮಾಧ್ಯಮವಾಗುತ್ತದೆ ಎಂದು ನಾನು ಹಿಂದೆ ಬರೆದಿದ್ದೆ.

ಕನ್ನಡ ರಾಷ್ಟ್ರೀಯತೆಯ ಬಗ್ಗೆ ಚರ್ಚಿಸುತ್ತಾ ಆಕೆ ಡಿ.ಆರ್.ನಾಗರಾಜ್ ಅವರ ಬರಹಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಡಿ.ಆರ್. ಪ್ರಕಾರ ಕನ್ನಡ ರಾಷ್ಟ್ರೀಯತೆಯ ಹುಡುಕಾಟದಲ್ಲಿ ಎರಡು ಭಿನ್ನ ಸೆಲೆಗಳಿದ್ದುವು. ಒಂದು ಆಲೂರು ವೆಂಕಟರಾಯರ ಮಾದರಿಯದ್ದು. ಅದನ್ನು ಧಾರ್ಮಿಕ ರಾಷ್ಟ್ರೀಯತೆ ಎಂದು ಆಕೆ ಕರೆಯುತ್ತಾರೆ. ಆ ಸೆಲೆಯಲ್ಲಿ ವೆಂಕಟರಾಯರು ಎಲ್ಲ ಭಾಷೆಗಳನ್ನು ಒಳಗೊಳ್ಳುತ್ತಲೇ ಕನ್ನಡಕ್ಕೆ ಪ್ರಾಮುಖ್ಯತೆ ಇರಬೇಕೆಂದು ವಾದ ಮಾಡುತ್ತಾರಂತೆ. ಎರಡನೆಯ ಸೆಲೆ ಚಿದಾನಂದಮೂರ್ತಿ ಮತ್ತು ಕನ್ನಡ ಶಕ್ತಿಕೇಂದ್ರದ ವೈಖರಿಯಿಂದ ಬಂದದ್ದು. ಇದನ್ನು ಬೆದರಿಸುವ ರಾಷ್ಟ್ರೀಯತೆ [fear centred nationalism] ಎಂದು ಅವರು ಕರೆಯುತ್ತಾರೆ. ಬೆಂಗಳೂರು ಭಿನ್ನ ಭಾಷೆಯನ್ನಾಡುವ ವಿವಿಧ ಹಿನ್ನೆಲೆಯ ಜನರನ್ನು ಬಹಳ ಹಿಂದಿನಿಂದಲೇ ಒಳಗೊಳ್ಳುತ್ತಾ ಬೆಳೆದಿದೆ. ಇದರಲ್ಲಿ ನಾಲ್ಕು ಬೃಹತ್ ಸರಕಾರಿ ಉದ್ದಿಮೆಗಳಲ್ಲಿದ್ದ ಕನ್ನಡೆತರ ಕಾರ್ಮಿಕರೂ ಸೇರಿದ್ದಾರೆ. ನಾಯರ್ ಪ್ರಕಾರ ಬೆಂಗಳೂರಿಗೆ ಆಗಿರುವ ಒಳವಲಸೆ ಹೆಚ್ಚಿನಂಶ ಪ್ರೆಸಿಡನ್ಸಿ ಪ್ರದೇಶಗಳಿಂದಾಗಿದೆಯೇ ಹೊರತು ವಿಶಾಲ ಕರ್ನಾಟಕದ ಗ್ರಾಮೀಣ ಭಾಗಗಳಿಂದಲ್ಲ. ಆದರೆ ಬೆಂಗಳೂರು ವಿಶಾಲ ಕರ್ನಾಟಕದ ರಾಜಧಾನಿಯಾದ್ದರಿಂದ ಭಾಷೆಯ ವಿಷಯಕ್ಕೆ ಬಂದಾಗ ಅದು ಒಂದು ನಾಜೂಕು ವಿಷಯವಾಗುತ್ತದೆ. ಒಟ್ಟಾರೆ ಇದು ಇರುವ ಸ್ಥಳಗಳನ್ನು-ಅವಕಾಶಗಳನ್ನು ಆಕ್ರಮಿಲಿಕೊಳ್ಳುವ, ಅದನ್ನು ಇತರರಿಂದ ಪಡೆಯುವ ಪ್ರಕ್ರಿಯೆಗೆ ಸಂಬಂಧಿಸಿದ್ದಾಗಿದೆ.

ಕಾಲಾಂತರದಲ್ಲಿ ಮೂಲತಃ ಭಾಷೆಗೆ ಸಂಬಂಧವಿಲ್ಲದ ವಿಷಯಗಳೂ ಭಾಷಾದೋಲನದ ಮೂಲಕವೇ ವ್ಯಕ್ತವಾಗುವುದನ್ನು ನಾವು ಕಾಣುತ್ತೇವೆ. ಗೋಕಾಕ್ ಚಳವಳಿಗೆ - ಕನ್ನಡ ಹೋರಾಟಗಾರರಿಂದ ಹಿಡಿದು ಬುದ್ಧಿಜೀವಿಗಳ ವರೆಗೆ - ಎಲ್ಲ ವಲಯಗಳಿಂದಲೂ ಬೆಂಬಲ ದೊರೆತಿತ್ತು. ಆದರೆ ಆ ಆಂದೋಲನವೇ ಹೋರಾಟದ-ಬೆದರಿಕೆಯ ಕನ್ನಡ ರಾಷ್ಟ್ರೀಯತೆಯ ಬೀಜವನ್ನೂ ಬಿತ್ತಿತ್ತೆನ್ನಿಸುತ್ತದೆ. ಇದೇ ಮೂಲಸೆಲೆ ನಂತರ ಚರ್ಚುಗಳಲ್ಲಿ ಕನ್ನಡದ ಬಳಕೆಯತ್ತ ಹರಿಯಿತು, ಮತ್ತು ಕಾವೇರಿ ನೀರಿನ ಬಗ್ಗೆಯೂ, ದೂರದರ್ಶನದಲ್ಲಿನ ಉರ್ದು ವಾರ್ತಾ ಪ್ರಸಾರದ ಬಗ್ಗೆಯೂ ಹಬ್ಬಿತು. ಕಾವೇರಿ ನೀರು ಭಾಷೆಗಿಂತ ಹೆಚ್ಚಾಗಿ ಒಂದು ಭೌಗೋಳಿಕ ವಿಷಯವಾದರೂ ಅದು ಭಾಷೆಯ ಮೂಲಕವೇ ತನ್ನ ಅಭಿವ್ಯಕ್ತಿಯನ್ನು ಕಂಡುಕೊಂಡಿತು. ತಿರುವಳ್ಳುವರ್ ಪ್ರತಿಮೆಯ ಸ್ಥಾಪನೆಯ ಬಗ್ಗೆಯೂ ಅನೇಕ ವರ್ಷಗಳಿಂದ ಚರ್ಚೆ ನಡೆದಿದ್ದು ಅದು ತಮಿಳುನಾಡು-ಕರ್ನಾಟಕ ಸರಕಾರಗಳ ನಡುವಿನ ಲೇಣ್-ದೇಣ್ ವಿಷಯವಾಗಿಬಿಟ್ಟಿದೆ! ತಮಾಷೆಯೆಂದರೆ ದಂತಚೋರ ವೀರಪ್ಪನ್ ಕೂಡಾ ಇದನ್ನು ರಾಜ್‌ಕುಮಾರ್ ಅಪಹರಣದೆ ವೇಳೆಯಲ್ಲಿ, ಒಂದು ಬೇಡಿಕೆಯಾಗಿ ಮಂಡಿಸಿದ್ದು! ಆ ಅಪಹರಣದ ಕಾಲದಲ್ಲಿ ದೊಡ್ಡ ಭಾಷಾಧಾರಿತ ಗಲಭೆಯಾಗಲಿಲ್ಲವಾದರೂ, ಆಗಿನ ಭಾವನೆಗಳು ಕನ್ನಡ ಮತ್ತು ತಮಿಳು ಭಾಷೆಗಳ ನಡುವಿನ ಅಂತರವನ್ನು ಹಿಗ್ಗಿಸುವ ಕಾರ್ಯ ಮಾಡಿತು.

ಮಾಹಿತಿ ತಂತ್ರಜ್ಞಾನದ ಆಧಾರಿತವಾಗಿ ಉದ್ಭವವಾಗುತ್ತಿರುವ ಆರ್ಥಿಕ ಅವಕಾಶಗಳು ಭಾಷೆ-ಜಾತಿಗೆ ಸಂಬಂಧಿಸದೇ ಕನ್ನಡಿಗರನ್ನೊಳಗೊಂಡು ಸರ್ವರಿಗೂ ಲಭ್ಯವಾಗುತ್ತಿದ್ದರೂ, ಈ ಅವಕಾಶಗಳಿಂದ ವಂಚಿತರಾಗಿ ಇಲ್ಲಿಯೇ ಉಳಿಯುವವರು ಕೇವಲ ಕನ್ನಡಿಗರಾದ್ದರಿಂದ ಬಲ್ಲಿದ-ಬಡವರ ನಡುವಿನ ಧೃವೀಕರಣದ ಅಭಿವ್ಯಕ್ತಿ ಭಾಷೆಯಾಧಾರಿತ ಆಂದೋಲನಕ್ಕೆ ಮೂಲಕ ಹೊರಹೊಮ್ಮುತ್ತದೆ. ಇದು ಭಾಷಾಪ್ರೀತಿಯ ಮತ್ತು ಅದನ್ನು ವ್ಯಕ್ತಪಡಿಸಲು ಉಪಯೋಗಿಸಬಹುದಾದ ಒಂದು ಶಕ್ತಿಶಾಲೀ ಹಾಗೂ ಸಾಂಕೇತಿದ ಅಸ್ತ್ರವಾಗಿಬಿಡುತ್ತದೆ. ಇದು ಜಟಿಲವಾದ ವಿಷಯವಾದರೂ, ನಾಯರ್ ಈ ಬಗೆಗೆ ತಮ್ಮ ಸಂಶೋಧನಾತ್ಮಕ ಶೈಲಿಯಲ್ಲಿ ಎರಡೂ ಬದಿಯ ದೃಷ್ಟಿಕೋನಗಳನ್ನು ಪ್ರಸ್ತುತ ಪಡಿಸುವಲ್ಲಿ ಸಫಲರಾಗುತ್ತಾರೆ. ಈ ಬಗ್ಗೆ ನಾನೂ ಸಹ ಈಚಿನ ದೇಶಕಾಲದ ಸಂಚಿಕೆಯಲ್ಲಿ ಬರೆಯುವ ಪ್ರಯತ್ನವನ್ನು ಮಾಡಿದ್ದೆ.

ಪುಸ್ತಕದಂತ್ಯದಲ್ಲಿ ಈ ಇಡೀ ನಗರದ ಇಪ್ಪತ್ತನೆಯ ಶತಮಾನದ ಚರಿತ್ರೆಯನ್ನು ಒಂದು ಸ್ತ್ರೀವಾದಿ ದೃಷ್ಟಿಕೋನದಿಂದ ನಾಯರ್ ನೋಡುತ್ತಾರೆ. ಅದಕ್ಕೆ ಅವರು ನಗರದ ಕೈನೆಟಿಕೀಕರಣ ಎಂಬಂತಹ ನಾಮಕರಣವನ್ನೂ ಮಾಡಿದ್ದಾರೆ. ಮಿಸ್.ವರ್ಲ್ಡ್ ಸ್ಪರ್ಧೆಯ ಸಮಯದಲ್ಲಿ ಆದ ಸ್ತ್ರೀವಾದಿ ಆಂದೋಲನವನ್ನು ಅವರು ಅದ್ಭುತವಾಗಿ ವಿಶ್ಲೇಶಿಸುತ್ತಾರೆ. ಈ ಬಗ್ಗೆ ಹೆಚ್ಚು ಚರ್ಚಿಸಲು ನನಗೆ ಅರ್ಹತೆಯಿಲ್ಲವೆನ್ನಿಸಿ ಅದನ್ನು ಇಲ್ಲಿಗೇ ಬಿಡುತ್ತಿದ್ದೇನೆ.

ಈ ಅದ್ಭುತ ಪುಸ್ತಕವನ್ನು ನಾಯರ್ ಬಿ‌ಎಟಿ‌ಎಫ್‌ನ ಪಾತ್ರದ ರೂಪುರೇಷೆಯ, ಖಾಸಗೀ-ಸಾರ್ವಜನಿಕ ಭಾಗೀಧಾರಿಯ ಚರ್ಚೆಯೊಂದಿಗೆ ಮುಗಿಸುತ್ತಾರೆ. ಅಪ್ಪಟ ಬೆಂಗಳೂರಿಗನಾಗಿರುವ ನನಗೆ ಈ ಪುಸ್ತಕವನ್ನು ಓದುವುದು ಒಂದು ಅದ್ಭುತ ಅನುಭವವಾಗಿತ್ತು. ನಾನು ಕೂತು ಬೆಂಗಳೂರು ಬದಲಾಗಿರುವ ರೀತಿಯ ಬಗ್ಗೆ ಕೆಲ ಸಮಯ ಚಿಂತಿಸುವುದಕ್ಕೆ ಈ ಪುಸ್ತಕ ನನ್ನನ್ನು ಪ್ರೇರೇಪಿಸಿತು. ಎಷ್ಟೋಬಾರಿ ದಿನನಿತ್ಯದ ತರಾತುರಿಯಲ್ಲಿ, ನಗರ ಹೇಗಿ ಮೂಲಭೂತವಾಗಿ ಬದಲಾಗುತ್ತಿದೆ ಅನ್ನುವುದನ್ನ ಗಮನಿಸುವುದಕ್ಕೇ ಸಾಧ್ಯವಿರುವುದಿಲ್ಲ. ಅಂತಹ ಬದಲಾವಣೆಗಳನ್ನು ಎಳೆದು ನಾಯರ್ ನಮ್ಮ ಕಣ್ಣಿಗೆ ಕಟ್ಟುತ್ತಾರೆ. ನಗರದ ಸೌಂದರ್ಯ ಪ್ರಜ್ಞೆಯಬಗ್ಗೆ ನಾಯರ್ ಮಾತಾಡುತ್ತಾರಾದರೂ, ಒಂದು ಅಂಶ ಅವರ ಗಮನವನ್ನು ತಪ್ಪಿ ನಿಂತು ಬಿಡುತ್ತದೆ. ಬಹುಶಃ ಅತಿ ಕಳಪೆಯಾಗಿ ಯೋಜಿಸಿದ ಫ್ಲೈ ಓವರ್ ಮತ್ತು ಅಂಡರ್‌ಪಾಸ್‌ಗಳಿಗೆ ಬೆಂಗಳೂರು ವಿಶ್ವ ರೆಕಾರ್ಡ್ ಸ್ಥಾಪಿಸಬಹುದೇನೋ. ಡಬಲ್ ರೋಡ್ ಮೇಲಿರುವ ಫ್ಲೈ ಓವರ್ ಮೇಲೆ ಮಧ್ಯದಲ್ಲಿ ಟ್ರಾಫಿಕ್ ಪೋಲೀಸನ್ನು ನಿಲ್ಲಿಸಬೇಕಾದ, ಇಬ್ಬದಿಯ ವಾಹನಗಳು ಕತ್ತರಿಯಂತೆ ವಿರುದ್ಧ ದಿಕ್ಕಿನಲ್ಲಿ ಹೋಗಬೇಕಾದಂತೆ ಯೋಜಿಸಿರುವ ಮೇಧಾವಿಗಳಿಗೆ ಇಗ್‌ನೋಬಲ್ ಅಥವಾ ಡಾರ್ವಿನ್ ಪ್ರಶಸ್ತಿಯನ್ನು ನೀಡಬೇಕು. ಸ್ಥಳೀಯರ ಒಕ್ಕೊರಲಿನ ವಿರೋಧವನ್ನೂ ಲೆಕ್ಕಿಸದೇ ನ್ಯಾಶನಲ್ ಹೈಸ್ಕೂಲಿನ ಬಳಿ ಫ್ಲೈ ಓವರ್ ಮಾಡಿ ಉತ್ತರಾದಿ ಮಠದ ರಸ್ತೆ, ಪಂಪ ಮಹಾಕವಿ ರಸ್ತೆ ಮತ್ತು ವಾಸವೀ ವಿದ್ಯಾನಿಕೇತನದ ಬಳಿಯಿರುವ ಮೂರು ರಸ್ತೆಗಳನ್ನು ಡೆಡ್ ಎಂಡ್ ಮಾಡಿ ಮುಚ್ಚಿಸಿದ್ದಲ್ಲದೇ, ಕೆಳಗೆ ಡಯಾಗನಲ್ ರಸ್ತೆಯ ಕಡೆಗೆ ಡಿವೈಡರನ್ನು ಡಿವೈಡ್ ಮಾಡಿ ಎರ್ರಾಬಿರ್ರಿ ವಾಹನ ಚಾಲನೆಯಾಗುವಂತೆ ರೂಪಿಸಿದ ದೈವೀ ಸಂಭೂತನಾದ ಮೇಧಾವಿಯ ಡಿವೈನ್ ಕಾಮೆಡಿಯ ಬಗ್ಗೆ ಏನು ಹೇಳೋಣ? ಬಿಡಿ, ಒಂದು, ಎರಡು ತಪ್ಪುಗಳೆಂದರೆ ನಾವು ರಾಹುಲ್ ದ್ರಾವಿಡ್ ಇರುವ ನಗರಕ್ಕೆ ದ್ರೋಹವೆಸಗಿದಂತೆ ಆಗುತ್ತದೆ.. ಎಷ್ಟಾದರೂ ನಮ್ಮ ಕಂಸಿಸ್ಟನ್ಸಿಯನ್ನ ಉಳಿಸಿಕೊಳ್ಳಬೇಕಲ್ಲವೇ? ಹೀಗಾಗಿ ನಮಗೆ ಆನಂದರಾವ್ ಸರ್ಕಲ್ ಬಳಿಯ ಫ್ಲೈ‌ಓವರ್ ಮತ್ತೊಂದು ಉದಾಹರಣೆಯಾಗಿ ದೊರಕುತ್ತದೆ. ಆ ನಂತರ ಬಸ್ ಸ್ಟಾಂಡಿನಿಂದ ಮಲ್ಲೇಶ್ವರದ ಕಡೆಗೆ ಹೋಗುವ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುವ ಅಂಡರ್‌ಪಾಸ್ ಇದೆ. ಇಲ್ಲಿ ವಾಹನಗಳು ರಸ್ತೆಯ ಬಲಬದಿಗೆ ಚಲಿಸುವುದರಿಂದ ಇದನ್ನು ಅಮೆರಿಕೀಕರಣ ಅನ್ನಬಹುದೇನೋ. ಎಲ್ಲಿ ನಗರದ ಕೆಲವು ಭಾಗಗಳ ಜನರಿಗೆ ಮಾತ್ರ ಈ ಥರದ ಫ್ಲೈ ಓವರುಗಳ ಭಾಗ್ಯ ಸಿಕ್ಕಿ ಮಿಕ್ಕವರು ವಂಚಿತರಾಗುತ್ತಾರೋ ಅನ್ನುವಂತೆ ಜಯದೇವ ಹೃದ್ರೋಗ ಸಂಸ್ಥೆಯ ಬಳಿ, ಭಾರೀ ವಾಹನಗಳು ಹೋಗದಂತಹ ಪ್ಲೈ ಓವರನ್ನು ನಿರ್ಮಿಸಲಾಗಿದೆ. ಮಲ್ಲೇಶ್ವರದವರು ಈ ಚಮತ್ಕಾರದಿಂದ ವಂಚಿತರಾಗಬಾರದೆಂದು ಈಗ ಅಲ್ಲಿನ ಜನರ ವಿರೋಧವನ್ನು ಕಡೆಗಣಿಸಿ ಅಲ್ಲಿಗೆ ಗ್ರೇಡ್ ಸಪರೇಟರ್ ಹಾಕಲಾಗುತ್ತಿದೆ. ಇನ್ನು ಕೆಸಿ ಆಸ್ಪತ್ರೆಗೆ ತುರ್ತಾಗಿ ಹೋಗಬೇಕಾದ ರೋಗಿಗಳಿಗೆ ದೇವರೇ ಗತಿ.... ಬಹುಶಃ ನಾಯರ್ ಈ ಬಗ್ಗೆ ಬರೆಯದಿರಲು ಇಂಥ ಅದ್ಭುತಗಳು ಆಕೆ ಪುಸ್ತಕ ಮುಗಿಸಿದ ನಂತರ ಹೆಚ್ಚು ನಿಯಮಿತವಾಗಿ ಆಗುತ್ತಿರುವುದೇ ಕಾರಣವಿರಬಹುದು..
 
ಅನೇಕ ವರ್ಷಗಳ ನಂತರ ಬೆಂಗಳೂರಿನಲ್ಲಿ ವಾಸವಾಗಿರಲು ವಾಪಸ್ಸಾಗಿರುವ ನನಗೆ, ಈ ಎಲ್ಲ ಅನಾಹುತದ ನಡುವೆ ಈಗಲೂ ಲಾಲ್‍ಬಾಗ್‌ನಲ್ಲಿ ಬೆಳಗಿನ ವಾಯುವಿಹಾರ ಮಾಡಲು ಸಾಧ್ಯವಿದೆ, ಉಪಹಾರ ದರ್ಶಿನಿಯಲ್ಲಿ ದುಬಾರಿಯಲ್ಲದ ತಿಂಡಿ ತಿನ್ನಬಹುದಾಗಿದೆ, ವಿದ್ಯಾರ್ಥಿ ಭವನಕ್ಕೆ ಆಗಾಗ ಭೇಟಿ ನೀಡುವ ಸಾಧ್ಯತೆಯಿದೆ, ಹಾಗೂ ತುಂಬಾ ಬೆವರು ಸುರಿಸದೇ [ಆದರೆ ಸಮಯ ಹಾಳುಮಾಡಿ] ನನ್ನ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತದೆ. ೪೦ ಡಿಗ್ರಿಗಳಿಗಿಂತ ಹೆಚ್ಚಿನ ಉಷ್ಣಾಂಶ ತಲುಪುವ ಮಳೆಯಾಗದ ಅಹಮದಾಬಾದಿಗಿಂತ ಇದು ವಾಸಿ. ಇಂದಿಗೂ ಬೆಂಗಳೂರು ಸುಂದರವಾಗಿದೆ, ಹಾಗೂ ಅದನ್ನು ಹಾಗೇ ಉಳಿಸಿಕೊಳ್ಳಬಹುದೆಂಬ ಆಸೆಯನ್ನಿಟ್ಟುಕೊಳ್ಳುವುದು ಅಸಮಂಜಸವಾಗಲಾರದು. ಇಷ್ಟಲ್ಲಾ ಸುದೀರ್ಘವಾಗಿ ಬರೆದ ನಂತರ ನನ್ನದೊಂದೇ ಮನವಿ. ಸ್ವಲ್ಪ ಬನ್ನೇರುಘಟ್ಟ ರಸ್ತೆಯಲ್ಲಿ ಬೆಳಿಗ್ಗೆ ಒಂಭತ್ತು ಘಂಟೆಗೆ ವಾಹನಗಳು ಮುಂದಕ್ಕೆ ಚಲಿಸುವಂತಹ ಏರ್ಪಾಟನ್ನು ಯಾರಾದರೂ ಮಾಡಲು ಸಾಧ್ಯವೇ??
No comments:

Post a Comment