Saturday, July 28, 2012

ಶಾಂತಾರಾಮ್-ಆತಂಕರಾಮ್ಕಳೆದೆರಡು ವರುಷಗಳಿಂದ ನನ್ನ ಮುಂಬಯಿ ಯಾತ್ರೆಗಳು ಸುಮಾರು ತಿಂಗಳಿಗೊಮ್ಮೆ ಆಗುತ್ತಿದೆ. ಅಲ್ಲಿರುವ ಸಂಸ್ಥೆಯೊಂದರ ಬೋರ್ಡಿಗೆ ನನ್ನನ್ನು ಸೇರಿಸಿಕೊಂಡಿರುವುದರಿಂದ ಮೀಟಿಂಗಿಗಾಗಿ ಆಗಾಗ ಹೋಗಬೇಕಾಗುತ್ತದೆ. ಮೀಟಿಂಗು ಸಂಸ್ಥೆಯ ೧೬ನೇ ಮಹಡಿಯ ಆಫೀಸಿನಲ್ಲಾಗುತ್ತದಾದರೂ ಉಳಿದುಕೊಳ್ಳುವುದಕ್ಕೆ ಏರ್ಪಾಟು ಮುಖ್ಯತಃ ತಾಜ್ ಹೋಟೆಲಿನಲ್ಲಿ ಮಾಡುತ್ತಿದ್ದರು. ಮೊದಲಿಗೆ ಪಂಚತಾರಾ ಹೋಟೆಲ್ಲಿನಲ್ಲಾಗುವ ಎಲ್ಲ ಮುಜುಗರಗಳಿಗೂ ನಾನು ಒಳಗಾಗಿದ್ದೆನಾದರೂ, ಬರಬರುತ್ತಾ ಆ ಜಾಗ ನನಗೆ ಅಭ್ಯಾಸವಾಗಹತ್ತಿತ್ತು. ಹೀಗಾಗಿಯೇ ಎರಡು ತಿಂಗಳುಗಳ ಹಿಂದೆ ಆ ಹೋಟೆಲಿನಲ್ಲಿ ಹೆಚ್ಚು ಉಳಿದದ್ದರ ಪ್ರತೀಕವಾಗಿ ಅವರು ನನಗೆ ಗೋಲ್ಡ್ ಕಾರ್ಡ್ ಒಂದನ್ನು ಕೊಟ್ಟಿದ್ದನ್ನು ಜೋಪಾನವಾಗಿ ಉಳಿಸಿಕೊಂಡಿದ್ದೆ.

ತಾಜ್‍ನಲ್ಲಿ ಉಳಿದುಕೊಳ್ಳುವುದಕ್ಕೆ ಪ್ರಾರಂಭಿಸಿದಾಗ ಮೊದಲಿಗೆ ನನಗೆ ಕೊಡುತ್ತಿದ್ದ ಕೋಣೆ ಟವರಿನ ಆಚೆ ಬದಿಯಲ್ಲಿ ಸ್ಟಾಕ್ ಎಕ್ಸ್ಚೇಂಜು ಕಾಣಿಸುವ ಭಾಗದಲ್ಲಿತ್ತು. ಆದರೆ ಕ್ರಮೇಣ ಸಮುದ್ರ ಕಾಣುವ ಮುಖ್ಯ ದಿಕ್ಕಿನ ಕಡೆಗೆ ನನಗೆ ವರ್ಗಾವಣೆಯಾಯಿತು. ಬೆಳ್ಳಿ-ಗೋಲ್ಡ್ ಕಾರ್ಡುಗಳಿದ್ದವರಿಗೆ ಉತ್ತಮ ಕೋಣೆಯ ಸವಲತ್ತು ಸಿಗಬಹುದು ಅನ್ನುವುದು ನನಗೆ ಆ ನಂತರ ತಿಳಿಯಿತು. ಗೇಟ್‍ವೇ ಕಾಣಿಸುವ ರೂಮಿಗೆ ಬರುವವರೆಗೂ ನನಗೆ ತಾಜ್ ಬಗ್ಗೆ ಏನೂ ಖಾಸಾ ಭಾವನೆಗಳಿರಲಿಲ್ಲ. ರಾತ್ರೆ ತಲುಪುವ ವೇಳೆಗೆ ತಡವಾಗುತ್ತಿತ್ತು. ಬೆಳಿಗ್ಗೆ ಎದ್ದು ತಿಂಡಿ ಮಾಡಿ ಮೀಟಿಂಗಿಗೆ ಹೋದರೆ, ಅಲ್ಲಿಂದ ಹಾಗೇ ಪಲಾಯನ ಮಾಡುತ್ತಿದ್ದೆ. ಆದರೆ ಗೇಟ್‍ವೇ ದರ್ಶನವಾಗುವಂತಹ ಕೋಣೆ ಸಿಗಲು ಪ್ರಾರಂಭವಾದಾಗಿನಿಂದ ನಾನು ಒಂದು ವಿಚಿತ್ರ ಅಭ್ಯಾಸವನ್ನು ಹಾಗೂ ತಾಜ್ ಬಗ್ಗೆ ಒಂದು ಪ್ರೀತಿಯನ್ನೂ ಬೆಳೆಸಿಕೊಂಡಿದ್ದೆ - ನಾನು ಇದ್ದ ವಿವಿಧ ಕೋಣೆಗಳಿಂದ ಸುಮಾರು ೪೦-೫೦ ಗೇಟ್‍ವೇ ಫೋಟೋಗಳನ್ನು ನಾನು ತೆಗೆದಿದ್ದೆ. ಕೆಲವು ರಾತ್ರೆಯ ಕತ್ತಲಲ್ಲಿ ತೆಗೆದವು, ಕೆಲವು ಮುಂಜಾನೆಯ ಮಸುಕಿನಲ್ಲಿ ತೆಗೆದವು.

ತಾಜ್‍ನಲ್ಲಿ ಮೇಲಿನ ಮಹಡಿಗಳಲ್ಲಿ ಬಾಲ್ಕನಿಗೆ ಹೋಗುವ ಗಾಜಿನ ಬಾಗಿಲನ್ನು ಸೀಲ್ ಮಾಡಿದ್ದರು. ಯಾರೂ ಅಲ್ಲಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳದಿರಲು ಇದು ಮುಂಜಾಗ್ರತಾ ಕ್ರಮವಿದ್ದಿರಬೇಕು. ಕೆಳಗಿನ ಅಂತಸ್ತಿನಲ್ಲಿ ಗಾಜಿನ ಬಾಗಿಲು ತೆರೆದು ಹೊರಬರಬಹುದಿತ್ತಾದರೂ ಹೊರಗೆ ಜಾಲಿಯೊಂದನ್ನು ಬಿಗಿದಿದ್ದರು. ಆ ಜಾಲಿಯ ಮೂಲಕವೇ ಗೇಟ್‍ವೇ ಮತ್ತು ಸಮುದ್ರ-ದೋಣಿಗಳ ದರ್ಶನ ಮಾಡಿಕೊಳ್ಳಬಹುದಿತ್ತು. ತಾಜ್ ಟವರಿನ ಹಲವು ಅಂತಸ್ತುಗಳನ್ನು ನೋಡಿದ್ದರೂ, ಹಳೆಯ ಹೆರಿಟೇಜ್ ಕಟ್ಟಡದಲ್ಲಿ ಇರುವ ಭಾಗ್ಯ ಒಮ್ಮೆಯೂ ಉಂಟಾಗಿಲ್ಲ ಅನ್ನುವುದು ಈ ಎಲ್ಲ ಘಟನಾವಳಿಗಳ ನಡುವೆ ನನ್ನನ್ನು ತಟ್ಟಿತು.

ತಾಜ್‍ನಲ್ಲಿ ತಿನ್ನಲು ಐದಾರು ಜಾಗಗಳಿದ್ದುವಾದರೂ, ನಾನು ಎಂದೂ ಅಲ್ಲಿ ಹೆಚ್ಚು ಉಂಡವನೇ ಅಲ್ಲ. ತಿಂದರೂ ಏನನ್ನಾದರೂ ರೂಮಿಗೇ ತರಿಸಿಕೊಳ್ಳುತ್ತಿದ್ದೆ, ಬೆಳಗಿನ ನಾಷ್ಟಾಕ್ಕೆ ಮಾತ್ರ ಶಾಮಿಯಾನಾ ಅನ್ನುವ ರೆಸ್ಟಾರೆಂಟಿಗೆ ಹೋಗಿ ಅಲ್ಲಿನ ಬಫೆಯಲ್ಲಿ ಸಿಗುತ್ತಿದ್ದ ಹಣ್ಣುಗಳನ್ನು - ಹಾಗೂ ಅದೃಷ್ಟವಶಾತ್ ಆ ದಿನದಂದು ಅಲ್ಲಿನ ಚೆಫ್ - ಮಸಾಲಾ ಉಪ್ಪಿಟ್ಟು ಮಾಡಿದ್ದರೆ ಅದನ್ನು, ತಿಂದು ಮುಂದುವರೆಯುತ್ತಿದ್ದೆ. ಒಂದೇ ಜಾಗದಲ್ಲಿ ಚೆನ್ನಾಗಿ ಬಿಡಿಸಿಟ್ಟ ಮನಸ್ಸಿಗೆ ಮುದನೀಡುವ ರೀತಿಯಲ್ಲಿ ಜೋಡಿಸಿಟ್ಟ ಹಣ್ಣುಗಳನ್ನು ಕಂಡರೇನೇ ಹೊಟ್ಟೆ ತುಂಬುತ್ತಿತ್ತು. ಸಾಮಾನ್ಯವಾಗಿ ಎಲ್ಲ ಪಂಚತಾರಾ ಹೋಟೆಲುಗಳಂತೆಯೇ ಇಲ್ಲೂ ಇಡ್ಲಿ ದೋಸೆ ಸಾಂಬಾರು ಅಷ್ಟಕ್ಕಷ್ಟೇ. ಆದರೆ ಅಲ್ಲಿನ ಉಪ್ಪಿಟ್ಟು ಮಾತ್ರ ಜಗತ್ತಿನಲ್ಲೇ ಅತ್ಯುತ್ತಮ ಎನ್ನುವ ರೀತಿಯದ್ದಾಗಿತ್ತು. ಇದನ್ನು ನನಗೆ ಉಣಬಡಿಸಿದ, ಎಂದೂ ಕಾಣದ ಚೆಫ್ ಈಚೆಯ ಘಟನೆಯ ನಂತರ ಬದುಕಿದ್ದಾನೋ ಇಲ್ಲವೋ ಅನ್ನುವ ವಿಚಾರ ಆಗಾಗ ಮನಸ್ಸಿನಲ್ಲಿ ಹಾಯ್ದುಹೋಗುತ್ತದೆ.

ಹೀಗೆ ಮುಜುಗರ ಪಡುತ್ತಲೇ ಇಷ್ಟಪಡಲಾರಂಭಿಸಿದ ತಾಜ್ ಮೇಲೆ ಹಲ್ಲೆಯಾಯಿತು ಅಂದಾಗ ಎಲ್ಲೋ ಈ ಹಲ್ಲೆ ನನ್ನನ್ನೇ ತಾಕಿತೇ - ಅಂದು ನಾನು ಅಲ್ಲಿಲ್ಲದಿದ್ದದ್ದು ನನ್ನ ಅದೃಷ್ಟವೇ ಅನ್ನುವ ವಿಚಾರಗಳೆಲ್ಲಾ ನನ್ನ ಮನಸ್ಸಿನಲ್ಲಿ ಹಾಯ್ದುಹೋಗುತ್ತದೆ. ನಿಜಕ್ಕೂ ಇದನ್ನು ಅರಗಿಸಿಕೊಳ್ಳುವುದು ಸುಲಭದ ಮಾತಲ್ಲ. ಹಾಗೆ ನೋಡಿದರೆ ಹೆಚ್ಚೂ ಕಮ್ಮಿ ಅಲ್ಲಿಗೆ ಹೋದಾಗಲೆಲ್ಲಾ ಸಂಜೆಯ ವೇಳೆ ಮುಂಬಯಿಯಲ್ಲಿರುವುದಾದರೆ, ತಾಜಿನ ಕೋಣೆಯಿಂದ ಜಾರಿಕೊಂಡು ಪಕ್ಕದ ಬೀದಿಯಲ್ಲಿದ್ದ ಲಿಯೋಪೋಲ್ಡ್ ಕೆಫೆಗೂ ಹೋಗಿ ಉದ್ದನೆ ಕೊಳವೆಯಾಕಾರದ ಬಿಯರಿನ ಕೊಪ್ಪರಿಗೆಯೊಂದನ್ನು ಖಾಲಿ ಮಾಡಿ ಬರುತ್ತಿದ್ದದ್ದೂ ತಾಜಾ ನೆನಪಿನಲ್ಲಿದೆ. ಪಕ್ಕದಲ್ಲೇ ತೆಂಡೂಲ್ಕರ್ಸ್ ಅನ್ನುವ ಸಚಿನ್ ತೆಂಡೂಲ್ಕರನ ರೆಸ್ಚುರಾ ಇದ್ದರೂ ಅಲ್ಲಿಗೆ ಹೋದದ್ದಿಲ್ಲ.

ಲಿಯೋ ಬಗ್ಗೆ ಬರೆಯಬೇಕೆಂದು ಅಲ್ಲಿನ ಚಿತ್ರವನ್ನೂ ತೆಗೆದಿಟ್ಟಿದ್ದೆ, ಹಾಗೂ, ಅದೇ ಲಿಯೋಪೋಲ್ಡ್ ಸುತ್ತಮುತ್ತಲೇ ಓಡಾಡುತ್ತ ಗ್ರೆಗರಿ ರಾಬರ್ಟ್ಸ್ ಬರೆದಿದ್ದ ಶಾಂತಾರಾಮ್ ಪುಸ್ತಕದ ಬಗೆಗೂ ಬರೆಯಬೇಕೆಂದು ಯೋಚಿಸಿದ್ದೆ. ಲೋನ್ಲಿ ಪ್ಲಾನೆಟ್ ಇತ್ಯಾದಿಗಳಲ್ಲಿ ಚರ್ಚಿತವಾಗಿದ್ದ ಲಿಯೋಪೋಲ್ಡ್ ಕೆಫೆಗೆ ತನ್ನದೇ ಗ್ರಾಹಕ ಬಳಗವಿತ್ತು. ಎಷ್ಟರ ಮಟ್ಟಿಗೆ ಅದು ವಿದೇಶೀ ಯಾತ್ರಿಗಳಲ್ಲಿ ಹೆಸರುಮಾಡಿತ್ತೆಂದರೆ, ಬಿಯರು, ಊಟ ಇತ್ಯಾದಿಗಳಲ್ಲದೇ ಲಿಯೋಪೋಲ್ಡ್ ನಲ್ಲಿ ಅವರದೇ ಟೀ ಷರ್ಟುಗಳೂ, ಶಾಂತಾರಾಮ್ ಪುಸ್ತಕದ ಆಟೋಗ್ರಾಫ್ ಕಾಪಿಗಳೂ ಮಾರಾಟಕ್ಕಿದ್ದುವು. ಗುಂಡಿನ ಗುರುತಿನ ಅನೇಕ ರಂಧ್ರಗಳನ್ನು ಹೊತ್ತ ಲಿಯೋಪೋಲ್ಡ್ ಕೆಫೆ ಮತ್ತೆ ಬಾಗಿಲು ತೆರೆದು ಮಾರಾಟ ಆರಂಭಮಾಡಿದೆ. ಅಲ್ಲಿ ಇನ್ನೂ ಶಾಂತಾರಾಮ್ ಪ್ರತಿಗಳು ಸಿಗುತ್ತವೆಯೇ? ಗೊತ್ತಿಲ್ಲ. ಶಾಂತಾರಾಮ್ ಹೆಸರು ಸರಿಯೇ?

೨೬ರ ಸಂಜೆ ಮನೆಯಲ್ಲಿ ಕೂತು ಕ್ರಿಕೆಟ್ ಮ್ಯಾಚು ನೋಡುತ್ತಿದ್ದೆ. ಭಾರತ ಐದನೆಯ ಬಾರಿಗೆ ಇಂಗ್ಲೆಂಡನ್ನು ಚಚ್ಚಿ ತನ್ನ ಶ್ರೇಷ್ಠತೆಯನ್ನು ಮೆರೆಯುತ್ತಿದ್ದಾಗ, ಲಿಯೋಪೋಲ್ಡ್ ನಲ್ಲಿ ‘ಗನ್ ಬ್ಯಾಟಲ್' ಆಗುತ್ತಿದೆ ಅನ್ನುವ ವಾರ್ತೆ ಬಂದಿತ್ತು. ಅಲ್ಲಿನ ಪರಿಸರದಲ್ಲಿ ಜಗಳ ಪ್ರಾರಂಭವಾಗಿ, ಯಾವನೋ ತನ್ನ ಬಂದೂಕಿನ ಕುದುರೆಯನ್ನೆಳೆದಿರಬಹುದು ಅಂದುಕೊಂಡೆನಾದರೂ, ಅದೇ ನನ್ನನ್ನು ವಿಚಲಿತಗೊಳಿಸಲು ಸಾಕಾಗಿತ್ತು. ಮುಂಜಾನೆ ನಾಲ್ಕಕ್ಕೆ ನಾನು ಏರ್‍ಪೋರ್ಟಿಗೆ ಹೋಗಬೇಕಾಗಿದ್ದದ್ದರಿಂದ ಟಿವಿಯನ್ನು ಆರಿಸಿ ಮಲಗಿಬಿಟ್ಟೆ. ಬೆಳಿಗ್ಗೆ ಏಳುವ ವೇಳೆಗೆ ನನ್ನ ಮೊಬೈಲಿನಲ್ಲಿ ೨ ಎಸ್.ಎಮ್.ಎಸ್ ಮತ್ತು ಮೂರು ಮಿಸ್ ಕಾಲುಗಳಿದ್ದುವು. ಎಲ್ಲವೂ ಕಳೆದಬಾರಿ ನನ್ನ ಜೊತೆಗೆ ಲಿಯೋಪೋಲ್ಡ್ ನಲ್ಲಿ ಕೂತು ಬಿಯರು ಹಾಕಿದ್ದ ಹಳೆಯ ವಿದ್ಯಾರ್ಥಿಯಿಂದ. ಮೊದಲನೆಯದು - ಹೋಪ್ ಯು ಆರ್ ಅಲೈವ್ [ನೀನು ಬದುಕಿದ್ದೀಯ ಅಂತ ಆಶಿಸುತ್ತಿರುವೆ] ಎರಡನೆಯದು - ‘ತಾಜ್ ಇಸ್ ಆನ್ ಪೈರ್' ನನಗೆ ನಂಬಲಾಗಲಿಲ್ಲ. ಯಾಕೆಂದರೆ ಹೋದಬಾರಿ ಅಲ್ಲಿಗೆ ಹೋದಾಗ ನಮ್ಮನ್ನು ರಸ್ತೆಯಲ್ಲೇ ಇಳಿಸಿ ಸೂಟ್‍ಕೇಸುಗಳನ್ನು ಎಕ್ಸ್ ರೇ ಮಾಡಿ, ಕೈಯಲ್ಲಿದ್ದ ಬ್ಯಾಗನ್ನು ತೆಗೆದು ಪರೀಕ್ಷಿಸಿ ಒಳಕ್ಕೆ ಕಳಿಸಿದ್ದರು. ಪಾಕಿಸ್ತಾನದ ಮ್ಯಾರಿಯಟ್ ಹೋಟೆಲಿನ ಘಟನೆಯ ನಂತರ ತಾಜ್‍ನಲ್ಲಿನ ಸೆಕ್ಯೂರಿಟಿ ತುಸು ಅತಿಯಾಯಿತೋ ಅಂತಲೂ ಅನ್ನಿಸಿತ್ತು.

ಟಿವಿ ಹಚ್ಚಿ ನೋಡಿದರೆ ಅದೂ ನಿಜ. ಮುಂಬೈಯ ಮೂಲಕವೇ ಅಹಮದಾಬಾದಿಗೆ ಪ್ರಯಾಣ ಮಾಡಿದೆ. ಆದರೆ ಏರ್ಫೋರ್ಟಿನಿಂದ ಆಚೆ ಬರುವ ಅವಶ್ಯಕತೆ ಇರಲಿಲ್ಲ. ವಿದ್ಯಾರ್ಥಿಗೆ ಪೋನ್ ಮಾಡಿ ನನ್ನ ಕುಶಲ ತಿಳಿಸಿದೆ.
ತಾಜ್ ನಿಂದ ತೆಗೆದ ಗೇಟ್ ವೇ ಚಿತ್ರಮುಂಬಯಿ ಏರ್ ಪೋರ್ಟಿನಲ್ಲಿ ಅಹಮದಾಬಾದಿನ ಫ್ಲೈಟ್ ಹತ್ತುತ್ತಿರುವಾಗ ಮಲ್ಲಿಕಾ ಸಾರಾಭಾಯಿ, ಅಮೃತಾ ಪಟೇಲ್ ಹಾಗೂ ಎನ್.ಡಿ.ಡಿ.ಬಿಯ ಎಂಡಿ, ಟಿಕ್ಕು - ಎಲ್ಲರೂ ಕಂಡರು. ಯಾರ ಮುಖದಲ್ಲೂ ನಗೆಯಿಲ್ಲ. ಎಲ್ಲರೂ ಗರಬಡಿದವರಂತಿದ್ದರು. ಮಾರನೆಯ ದಿನದ ಪತ್ರಿಕೆ ಓದಿದಾಗಲೇ ತಿಳಿದದ್ದು ಅವರುಗಳೆಲ್ಲರೂ ತಾಜ್‍ನಲ್ಲಿ ಉಳಿದುಕೊಂಡು ವಿವಿಧ ರೀತಿಯಲ್ಲಿ ತಪ್ಪಿಸಿ ಬಂದಿದ್ದರು! ಅಹಮದಾಬಾದಿಗೆ ಬಂದ ನಂತರ ಆ ತಾಜ್ ಪ್ರಾಂತ್ಯದಲ್ಲೇ ವಾಸವಾಗಿರುವ ನನ್ನ ಹಳೆಯ ಸಹೋದ್ಯೋಗಿ ಸಂಜೀವ್ ಗೆ ಫೋನ್ ಹಚ್ಚಿದೆ. ‘ಹೇಗಿದ್ದೀಯ?' ಎಂದು ಕೇಳುತ್ತಿರುವಾಗಲೇ ಹಿಂದಿನಿಂದ ಗುಂಡಿನ ಶಬ್ದವೂ ಕೇಳಿಸುತ್ತಿತ್ತು. ‘ಯೋಚಿಸಬೇಡ.. ನಾರಿಮನ್ ಬಿಲ್ಡಿಂಗ್ ಪಕ್ಕದಲ್ಲೇ ಇದೆ. ಅಲ್ಲಿ ಕಮಾಂಡೋಗಳು ಇಳಿಯುತ್ತಿದ್ದಾರೆ, ನಾನು ಚೆನ್ನಾಗಿಯೇ ಇದ್ದೇನೆ. ನನ್ನ ಕುಶಲ ತಿಳಿಯಬೇಕಾದರೆ ಟಿವಿ ನೋಡುತ್ತಾ ಇರು' ಅಂದು ನಕ್ಕ!

ಈ ಪರಿಸ್ಥಿತಿಯಲ್ಲಿ ನಾವು ಮಾಡಬಹುದಾದದ್ದು ಇಷ್ಟೇ! ಹೋದಬಾರಿ ಮೀಟಿಂಗಿಗೆ ಹೋದಾಗ ಒಬೆರಾಯ್ ನಲ್ಲಿ ಊಟ, ತಾಜ್‍ನಲ್ಲಿ ವಸತಿ, ಲಿಯೋಪೋಲ್ಡ್ ನಲ್ಲಿ ಬಿಯರು ಹಾಕಿದ್ದಲ್ಲದೇ ರಾತ್ರೆ ರೀಗಲ್ ಸಿನೇಮಾದಲ್ಲಿ ತಶನ್ ನೋಡಿಬಂದದ್ದು ನೆನಪಾಯಿತು. ಈ ಬಾರಿ ಹೋದಾಗ ಇವುಗಳಲ್ಲಿ ಒಂದನ್ನೂ ಸಾಧಿಸಲು ನನಗಾಗುವುದಿಲ್ಲ. ಇಷ್ಟುದಿನ ಆತಂಕ ನಮ್ಮನ್ನು ತಟ್ಟಿದಾಗ ಅದು ಒಂದು ಅಂಕಿಸಂಖ್ಯೆ ಮಾತ್ರವಾಗಿತ್ತು. ಈ ಬಾರಿ ಆ ಅಷ್ಟೂ ಅಂಕಿಗಳಿಗೆ ಒಂದು ಮುಖವೂ ಇದೆ. ಹೀಗಾಗಿಯೇ ಅದು ನಮ್ಮನ್ನು ಇನ್ನೂ ಹೆಚ್ಚಾಗಿ ತಟ್ಟುತ್ತಿದೆ.

No comments:

Post a Comment