Sunday, August 26, 2012

ಕನ್ನಡ ರಾಷ್ಟ್ರೀಯತೆ, ಭಾಷಾ ಹೋರಾಟ ಬ್ಯಾಂಗಲೋರ್ ಮತ್ತು ಸಿಂಗರ್


ಕನ್ನಡಿಗರಿಗೇ ಕನ್ನಡವ ಕಲಿಸಿದವ ಫರ್ಡಿನಂಡ್ ಕಿಟ್ಟಲ್
ಇದು ನಿನ್ನದಲ್ಲವೇ ಮಾಯೆ ಪುರಂದರ ವಿಠ್ಠಲ್?
-ಚಿಂತಾಮಣಿ ಕೂಡ್ಲಕೆರೆ



ಕನ್ನಡನಾಡಿನಿಂದ ದೂರವಿರುವುದು, ಸಾಹಿತ್ಯಕ್ಷೇತ್ರದಲ್ಲಿ ಅಲ್ಲದೇ ಬೇರೊಂದು ಕಾಯಕದಿಂದ ಜೀವನ ನಡೆಸುವುದು, ಮಾತೃಭಾಷೆ ಕನ್ನಡವಲ್ಲವಾಗಿರುವುದು, ಬೆಂಗಳೂರಿನಲ್ಲಿ ಮನೆಯಿದ್ದೂ ಹೈದರಾಬಾದಿನಲ್ಲಿ ನೆಲೆಸಬಯಸಿ ಅಲ್ಲಿ ಫ್ಲಾಟ್ ಕೊಂಡಿರುವುದು, ಕನ್ನಡ ಸಾಹಿತ್ಯ ಓದಿದಷ್ಟೇ ಉತ್ಸಾಹದಿಂದ ವಿಶ್ವ ಸಾಹಿತ್ಯವನ್ನು ಅಭ್ಯಾಸ ಮಾಡುವುದು, ಕನ್ನಡದಷ್ಟೇ ಸರಾಗವಾಗಿ ತೆಲುಗಿನಲ್ಲಿ ಮಾತನಾಡಬಲ್ಲದ್ದು, ಹಾಗೆ ಮಾತನಾಡಲು ಇಷ್ಟಪಡುವುದು, ತೆಲುಗಿನ ಸಿನೇಮಾ ನೋಡುವುದು, ಪತ್ರಿಕೆ ಓದುವುದು, ಮನೆ ಮಾತು ತೆಲುಗಾಗಿದ್ದು ಹಿರಿಯರೊಂದಿಗೆ ಆ ಭಾಷೆಯನ್ನು ಮಾತನಾಡಿದಾಗ್ಯೂ ಹೆಂಡತಿ ಮಗನೊಂದಿಗೆ ಕನ್ನಡ ಮಾತನಾಡುವುದು. ಹೊರನಾಡಿಗನಾದ್ದರಿಂದ ಮಗನಿಗೆ ಸ್ಕೂಲಿನಲ್ಲಿ ಹಿಂದಿ ಭಾಷೆ ಕೊಡಿಸಿದ್ದ ಚಾರಿತ್ರಿಕ ಸತ್ಯವನ್ನು ಅವನು ಬೆಂಗಳೂರಿನ ಶಾಲೆಗೆ ಸೇರಿದಾಗಲೂ ಹಾಗೇ ಬಿಟ್ಟಿರಿವುದು...

ಈ ಇಂಥ ಹಿನ್ನೆಲೆಯಿರುವ ನಾನು ತೆಗೆದುಕೊಳ್ಳುವ ನಿಲುವು ಬಹುಶಃ ಜನಪ್ರಿಯ ನಿಲುವಲ್ಲ. ಎಲ್ಲ ಬಂಧನಗಳನ್ನೂ ಮೀರಿ ನಿಲ್ಲಬೇಕಾದ ಸಮಯದಲ್ಲಿ ಕನ್ನಡ ರಾಷ್ಟ್ರೀಯತೆಯಂತಹ ವಿಷಯಗಳನ್ನು ಚರ್ಚಿಸಬೇಕೇ ಅನ್ನುವುದೇ ನನ್ನ ಒಂದು ಮೂಲಭೂತ ಪ್ರಶ್ನೆ. ಹೀಗಾಗಿ ಭಾಷಾಹೋರಾಟವೆಂಬ ಪದಪ್ರಯೋಗವೇ ನನಗೆ ಸೋಜಿಗವನ್ನುಂಟುಮಾಡುತ್ತದೆ. ಒಂದು ನಿಟ್ಟಿನಲ್ಲಿ ನೋಡಿದರೆ ಬ್ರಾಹ್ಮಣ, ಶೂದ್ರ, ಒಕ್ಕಲಿಗ, ಹಿಂದೂ, ಜೈನ್, ಬೌದ್ಧ, ಮುಸಲ್ಮಾನ, ಕ್ರೈಸ್ತ, ಸಿಖ್ಖ ಹೀಗೆಲ್ಲಾ ವಿಂಗಡಣೆಯಾಗಿರುವುದಕ್ಕೂ - ತುಳುವ, ಕೊಡವ, ಕೊಂಕಣಿ, ಕನ್ನಡಿಗ, ತಮಿಳ, ತೆಲುಗ, ಪಂಜಾಬಿ ಎಂದು ವಿಂಗಡಣೆಯಾಗಿರುವುದಕ್ಕೂ ನನಗೆ ಹೆಚ್ಚು ವ್ಯತ್ಯಾಸ ಕಾಣುವುದಿಲ್ಲ. ಇದೆಲ್ಲಾ ನಮ್ಮ ಅಸ್ತಿತ್ವವನ್ನು ನಿರ್ದೇಶಿಸುವ ವಿಧಾನಗಳು. ನಾನು ಇಂಥವರ ಮಗ, ಇಂಥ ಜಾತಿಯಲ್ಲಿ ಹುಟ್ಟಿದೆ, ಇಂಥ ಭಾಷೆಯನ್ನು ಮಾತನಾಡಿದೆ, ಇಂಥ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವೆ, ಇಂಥ ಕಥೆ ಬರೆಯುವೆ ಎಂಬ ಈ ಸೂಚಿಗಳನ್ನು ನಮ್ಮ ದಿನನಿತ್ಯದ ವಿದ್ಯಮಾನಗಳನ್ನು ಮುಂದುವರೆಸಲು ಉಪಯೋಗಿಸಬೇಕೇ ಹೊರತು - ಇದನ್ನೇ ಒಂದು ಉದ್ಯಮವಾಗಿ ಮಾಡುವುದರಲ್ಲಿ ನನಗೆ ಅರ್ಥ ಕಾಣುವುದಿಲ್ಲ. ಕನ್ನಡ ಭಾಷೆಯ ಅಸ್ತಿತ್ವ, ಬೆಳವಣಿಗೆ, ಭವ್ಯ ಪರಂಪರೆ - ಕನ್ನಡತನದ ಸಂಭ್ರಮ ಈ ಎಲ್ಲವೂ ಬೇರೆ ಭಾಷೆ, ಸಂಸ್ಕೃತಿಗಳನ್ನು ಒಳಗೊಳ್ಳುವುದರಿಂದಲೇ ಬೆಳೆಯಲು ಸಾಧ್ಯ. ಒಂದು ಭಿನ್ನ ಅಸ್ತಿತ್ವವನ್ನು ಶೋಧಿಸುತ್ತಾ, ಹೊರಗಿನದನ್ನು ಹೊರಹಾಕುತ್ತಾ ಹೋದಷ್ಟಕ್ಕೂ ನಾವು ಬಡವಾಗುತ್ತಾ ಹೋಗುತ್ತೇವೆ. ಒಂದು ವಿಪರೀತ ನಿಲುವಿನಿಂದ ಕನ್ನಡದ ಅಸ್ತಿತ್ವದ ಶುದ್ಧ ತಳಿಯನ್ನು ಹುಡುಕಿ ಹೊರಟರೆ ನಮಗೆ ನಷ್ಟವಾಗುವ ಮಹನೀಯರ ಯಾದಿ ಇಂತಿರಬಹುದು: ಮಾಸ್ತಿ, ಬೇಂದ್ರೆ, ಕಾರ್ನಾಡ್, ಚಿತ್ತಾಲ, ದೇವುಡು, ತರಾಸು, ಪುಟ್ಟಣ್ಣ ಕಣಗಾಲ್, ಜಿವಿ ಅಯ್ಯರ್, ಸಿವಿರಾಮನ್, ಸರ್ ಎಂ. ವಿಶ್ವೇಶ್ವರಯ್ಯ, ರಾಹುಲ್ ದ್ರವಿಡ್ ... ಹೀಗೆ ಎಲ್ಲರನ್ನೂ ಹೊರಹಾಕಿ ಶುದ್ಧ ತಳಿಯನ್ನು ಗುರುತಿಸುತ್ತಾ ಹೋದರೆ ಕಡೆಗೆ ಉಳಿಯುವುದು ಏನು? ಕನ್ನಡದ ಅಸ್ಮಿತೆಯ ಶೋಧ ಈರುಳ್ಳಿ ಬಿಡಿಸಿದಂತೆ.. ಪದರ ಪದರವಾಗಿ ತೆಗೆಯುತ್ತಾ ಹೋದಂತೆ ಕಡೆಗೆ ಉಳಿಯುವುದು ಕೇವಲ ಕಣ್ಣೀರಷ್ಟೆ.

ಹೀಗಾಗಿ ಕನ್ನಡ ರಾಷ್ಟ್ರೀಯ ಪ್ರಜ್ಞೆಯ ಜಾಗೃತಿಯ ಅಗತ್ಯವಿದೆಯೇ ಎಂದಾಗ ನನ್ನ ಮನಸ್ಸಿಗೆ ಹೊಳೆಯುವ ಉತ್ತರ "ಇಲ್ಲ" ಎಂಬುದೇ. ಹಾಗಾದರೆ ಕನ್ನಡ ಭಾಷೆ, ಸಂಸ್ಕೃತಿ ಉಳಿಯುವುದಾದರೂ ಹೇಗೆ? ಅಥವಾ ಅದೂ ಉಳಿಯದಿದ್ದರೆ ಪರವಾಗಿಲ್ಲ ಎಂಬ ನಿಲುವನ್ನು ನಾನು ತೆಗೆದು ಕೊಳ್ಳುತ್ತೇನೆಯೇ? ಇಲ್ಲ. ಆದರೆ ಅದು ನಾಪತ್ತೆಯಾಗುವ ಅಪಾಯಕಾರಿ ಸ್ಥಿತಿಯಲ್ಲಿ ಇಲ್ಲ. ಅದನ್ನ ಅನವಶ್ಯಕವಾಗಿ ಉಳಿಸಲು ಪ್ರಯತ್ನಿಸಿ ಶಹೀದರಾಗುವ ಅಗತ್ಯವಂತೂ ಇಲ್ಲ. ಕನ್ನಡ ಭಾಷೆ, ಕನ್ನಡತನ, ಸಂಸ್ಕೃತಿ ತನ್ನದೇ ರೀತಿಯಲ್ಲಿ ಮರುಸೃಷ್ಟಿಗೊಳ್ಳುತ್ತಾ ಹೋಗುತ್ತದೆ. ಈ ಮಥನವೇ ನಮ್ಮನ್ನು ಚಿರಂತನವಾಗಿ ಉಳಿಸುವುದು.. ಪ್ರಜಾಮತ, ಸುದ್ದಿ ಸಂಗಾತಿ, ಅಭಿಮಾನಿ, ಸಂಕೇತ, ಭಾವನಾ, ಅರಿವುಬರಹ, ಶೂದ್ರ, ರುಜುವಾತು, ಸಾಕ್ಷಿ -- ಹೀಗೆ ಅನೇಕ ಪತ್ರಿಕೆಗಳು ನಿಂತುಹೋಗಿವೆ, ಹೌದು - ಅದರ ಸ್ಥಾನದಲ್ಲಿ ವಿಜಯ ಕರ್ನಾಟಕ, ಸಂವಾದ, ಸಂಚಯ, ಹೊಸತು, ದೇಶಕಾಲದಂತಹ ಪತ್ರಿಕೆಗಳು ಹುಟ್ಟಿಕೊಳ್ಳುತ್ತಿವೆ. ಡಿವಿಕೆ ಮೂರ್ತಿ, ಗೀತಾ ಏಜೆನ್ಸೀಸ್, ಪುರೋಗಾಮಿ ಪ್ರಕಾಶನ ಹೆಚ್ಚು ಪುಸ್ತಕಗಳನ್ನು ಪ್ರಕಟಿಸದಿದ್ದರೇನಂತೆ? ಪ್ರಿಸಮ್, ಅಂಕಿತ ಮತ್ತು ಸಪ್ನಾ ಹೊಸ ಹಳೆಯ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಗುಜರಾತಿನಿಂದ ಬಂದು ಕನ್ನಡನಾಡಿನಲ್ಲಿ ನೆಲೆಸಿರುವ ಕನ್ನಡ ಬಾರದ ಸಪ್ನಾದ ಮಾಲೀಕರು ಕನ್ನಡದ ಅಸ್ಮಿತತೆಗಾಗಿಯಾಗಲೀ ಯಾರೊಬ್ಬರ ನಿರ್ದೇಶನದ ಮೇರೆಗಾಗಲೀ ಪುಸ್ತಕಗಳನ್ನು ಪ್ರಕಟಿಸುವವರಲ್ಲ.. ಹೀಗಾಗಿ ಕನ್ನಡಕ್ಕೆ ಅಪಾಯವಿದೆ ಎಂಬ ಭಯ ನನಗೆ ಸಹಜವೆನ್ನಿಸುತ್ತಿಲ್ಲ. ಈ ಮಾತುಗಳನ್ನು ನಾನು ಕನ್ನಡನಾಡಿನಲ್ಲಿಯೇ ಇದ್ದಿದ್ದರೆ ಬಹುಶಃ ಆಡುತ್ತಿರಲಿಲ್ಲವೇನೋ. ಕಾಲೇಜಿನಲ್ಲಿದ್ದಾಗ ಬಂದ ಗೋಕಾಕ್ ವರದಿ ಜಾರಿಗೆ ಬರಬೇಕು ಎಂಬುದು ಅಂದಿನ ನನ್ನ ನಿಲುವಾಗಿತ್ತು. ಆದರೆ ಇಂದು ನಾನು ಆ ನಿಲುವನ್ನು ತೆಗೆದುಕೊಳ್ಳುವುದಿಲ್ಲ. ಅನಿವಾಸಿ ಕನ್ನಡಿಗನಾಗಿ ನಾನು ನನ್ನದೇ ಅಸ್ತಿತ್ವವನ್ನು ಹೊರನಾಡಿನಲ್ಲಿ ಕಂಡುಕೊಳ್ಳಲು ಪ್ರಯತ್ನಿಸಿದ್ದೇನೆ. ಈ ಅಸ್ತಿತ್ವವನ್ನು ಕಂಡುಕೊಳ್ಳಲು ಹೊರನಾಡಿನಲ್ಲಿ ನನಗೆ ಅವಕಾಶ ಸಿಕ್ಕಿದೆ, ಹಾಗೂ ಅಂಥದೇ ಅವಕಾಶವನ್ನು ನನ್ನ ನಾಡೂ ಇತರರಿಗೆ ಒದಗಿಸಬೇಕೆಂಬುದು ನನ್ನ ಆಶಯ.

 ದೂರ ನಿಂತು ನೋಡಿದಷ್ಟೂ ನಮ್ಮ ಲೋಕ ಜಗತ್ತಿನ ಇತರ ವಿಷಯಗಳ ನಡುವೆ ಎಷ್ಟು ಪುಟ್ಟದು ಎಂಬ ಪರಿವೆ ನನಗೆ ಉಂಟಾಗುತ್ತದೆ. ಇದಕ್ಕೆ ನಾನು ಕೆಲ ಉದಾಹರಣೆಗಳನ್ನು ಕೊಡಲು ಇಷ್ಟಪಡುವೆ. ಬಹಳದಿನಗಳವರೆಗೆ ನಾನು ತೇಜಸ್ವಿಯವರ ಕರ್ವಾಲೋ ಕನ್ನಡದಲ್ಲಷ್ಟೇ ಅಲ್ಲ, ವಿಶ್ವ ಸಾಹಿತ್ಯದಲ್ಲೂ ನಿಲ್ಲಬಹುದಾದ ಅತ್ಯುತ್ತಮ ಕಾದಂಬರಿ ಎಂದು ನಂಬಿದ್ದೆ. ಆದರೆ ಕರ್ವಾಲೋ ಕಾದಂಬರಿಯನ್ನು ಇಂಗ್ಲೀಷಿನಲ್ಲಿ ಒದಿದಾಗ ಅದು ತುಂಬಾ ಸಾಧಾರಣವೆನ್ನಿಸುವಂತಹ ಕೃತಿ ಅನ್ನಿಸಿತು. ಅದಕ್ಕೆ ಶರ್ಮರ ಅನುವಾದ ಗುಣಮಟ್ಟವಿರಬಹುದೇ ಎಂಬ ಅನುಮಾನ ಬಂದರೂ, ಕಡೆಗೆ - ಅಲ್ಲವೆನ್ನಿಸಿತು. ಇಂಗ್ಲೀಷಿನಲ್ಲಿ ಓದಿದಾಗ ನನಗರಿವಿಲ್ಲದಂತೆಯೇ ನಾನು ಅದನ್ನು ವಿಶ್ವ ಸಾಹಿತ್ಯದ ಮಾನದಂಡದಲ್ಲಿ ಇಟ್ಟು ನೋಡುತ್ತಿದ್ದೆ - ಅಂದರೆ ಅದನ್ನು ವಿಶ್ಲೇಶಿಸುವ ಮಾನದಂಡಗಳು ಬೇರೆಯೇ ಆಗಿದ್ದವು... ಕನ್ನಡ ಸಂದರ್ಭದಲ್ಲಿ ಬೃಹತ್ತಾಗಿ ಕಾಣುವೆ ಎಷ್ಟೋ ವಿಚಾರಗಳು ನಾವು ನೋಡುವ ಚೌಕಟ್ಟನ್ನು ಬದಲಾಯಿಸಿದಾಗ ಬೇರೆಯಾಗಿಯೇ ಕಾಣುವುದು ಸೋಜಿಗದ ವಿಷಯವಾದರೂ ಸತ್ಯ. ಇತ್ತೀಚೆಗೆ ನಾನು ಪತ್ರಿಕೆಗಳ ಸ್ಥಳ ನಿಯಮಗಳ ಬಂಧನವನ್ನು ಮೀರಲು ಅಂತರ್ಜಾಲದಲ್ಲಿ ಎರಡು ಬ್ಲಾಗ್ (ಇದು, ಇಷ್ಟಬಂದಾಗ, ಇಷ್ಟವಾದಷ್ಟು, ಇಷ್ಟವಾದ ವಿಷಯದ ಬಗ್ಗೆ ಬರೆದು ಆನ್ಲೈನ್ ಪ್ರಕಟಿಸುವ ಪರಿಕರ, ಇದನ್ನ ಅಂತರ್ಜಾಲದಲ್ಲಿ ಯಾರಾದರೂ ಓದಬಹುದು) ಪ್ರಾರಂಭ ಮಾಡಿದೆ - ಎರಡೂ ಬ್ಲಾಗುಗಳು ಸಾಹಿತ್ಯಕ್ಕೆ ಸಂಬಂಧಿಸಿದವೇ. ವ್ಯತ್ಯಾಸ ನಾನು ಒಂದನ್ನ ಇಂಗ್ಲೀಷಿನಲ್ಲಿ ಬರೆಯುತ್ತೇನೆ, ಮತ್ತೊಂದನ್ನ ಕನ್ನಡದಲ್ಲಿ. ಸಹಜವಾಗಿ ನೋಡಿದರೆ ನನ್ನ ಇಂಗ್ಲೀಷ್ ಬ್ಲಾಗಿಗೆ [joy-of-books.blogspot.com] ಹಚ್ಚು ಓದುಗರಿರಬೇಕು. ಅಲ್ಲಿ ನಾನು ಕನ್ನಡ ಸಾಹಿತ್ಯದಬಗ್ಗೆ ಬರೆಯುವುದಿಲ್ಲ. ಕನ್ನಡದಲ್ಲಿ ಬ್ಲಾಗಿನಲ್ಲಿ ನಾನು ಹೆಚ್ಚು ಕನ್ನಡ ಸಂದರ್ಭಕ್ಕೆ ಹೊಂದುವ ಲೇಖನಗಳನ್ನು ಬರೆದರೂ, ಆಗಾಗ ಇತರ ಭಾಷೆಯ ಕೃತಿಗಳ ಬಗ್ಗ ಚರ್ಚಿಸುವುದುಂಟು. ಅಕ್ಟೋಬರ್ ನಲ್ಲಿ ಪ್ರಾರಂಭಿಸಿದ ಈ ಎರಡೂ ಬ್ಲಾಗುಗಳನ್ನ ನೋಡಿದರೆ, ಕನ್ನಡದ ಬ್ಲಾಗನ್ನು ಜನ ೯೦೦ ಬಾರಿ ವೀಕ್ಷಿಸಿದರೆ, ನನ್ನ ಇಂಗ್ಲೀಷ್ ಬ್ಲಾಗನ್ನ ೫೦೦ ಬಾರಿ ಮಾತ್ರ ಓದುಗರು ಓದಿದ್ದರು. ಇದಕ್ಕೆ ನನ್ನ ಬರವಣಿಗೆಯ ಗುಣಮಟ್ಟ ಕಾರಣವಾಗಿರಲಿಕ್ಕಿಲ್ಲ ಬದಲಿಗೆ ಇದು ನಾವು ಮಾತನಾಡುತ್ತಿರವ ಸಂದರ್ಭಕ್ಕೆ ಸಂಬಂಧಿಸಿದ್ದು. ನನ್ನಂತಹ ಬ್ಲಾಗುಗಳನ್ನು ಇಂಗ್ಲೀಷಿನಲ್ಲಿ ಇತರರು ಅನೇಕರು ಬರೆಯುತ್ತಾರೆ. ಆದರೆ ಕನ್ನಡದ ಸಂದರ್ಭದಲ್ಲಿ ಈ ಸಂಖ್ಯೆ ಕಡಿಮೆ ಹೀಗಾಗಿ ಈ ಪುಟ್ಟಲೋಕದಲ್ಲಿ ಒಂದು ಬ್ಲಾಗು ಬರೆಯುವುದೂ ಒಂದು ದೊಡ್ಡ ಸುದ್ದಿಯಾಗಬಹುದು.

ಕನ್ನಡ ರಾಷ್ಟ್ರೀಯತೆಯ ಬೆನ್ನು ಹಿಡಿದು ನಮ್ಮ ಅಂಗಳವನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕಿಂತ, ವಿಶ್ವ ಸ್ಥರದಲ್ಲಿ ಕನ್ನಡದ ಸ್ಥಾನವನ್ನು ಬೃಹತ್ತಾಗಿಸುವ ಸವಾಲನ್ನು ನಾವು ಎದುರಿಸಬೇಕು. ಉದಾಹರೆಣೆಗೆ ಬೆಂಗಳೂರಿನಲ್ಲಿ ಅನ್ಯಭಾಷೆಯ ಸಿನೆಮಾಗಳು ಕೆಲ ವಾರಗಳ ನಂತರ ಬಿಡುಗಡೆಯಾಗಬೇಕೆನ್ನುವುದು ಅಂಗಳವನ್ನು ಉಳಿಸಿಕೊಳ್ಳುವ ಮಾತಾಯಿತು. ಆದರೆ ಆ ರೀತಿಯ ರಕ್ಷಾಕವಚ ಕನ್ನಡಕ್ಕೆ ಬೇಕೇ? ಅಥವಾ ಕನ್ನಡವನ್ನು ಕನ್ನಡನಾಡೆಂದು ಗೆರೆಗಳನ್ನು ಹಾಕಿ ನಿರ್ದೇಶಿಸಿರುವ ಭೂಖಂಡಗಳಾಚೆಗೆ ಒಯ್ಯಲು ಸಾಧ್ಯವೇ? ಸಿನೇಮಾ ರಂಗಕ್ಕೆ ಬಂದಾಗ ನನಗೆ ಎರಡು ರೀತಿಯ ಪ್ರತಿಕ್ರಿಯೆಗಳು ಕಾಣುತ್ತವೆ.

ಒಂದು: ಗುಜರಾತಿ ಚಿತ್ರರಂಗ ಸಂಪೂರ್ಣವಾಗಿ ಮುಚ್ಚಿಹೋಗಿದೆ ಅಂತಲೇ ಹೇಳಬಹುದು, ಇಪ್ಪತ್ತು ವರ್ಷಗಳ ಹಿಂದೆ ನಾನು ಇಲ್ಲಿಗೆ ಮೊದಲ ಬಾರಿಗೆ ಬಂದಾಗ ಅಸ್ರಾನಿ, ಕಿರಣ್ ಕುಮಾರ್, ಅರೂಣಾ ಇರಾಣಿ ನಟನೆಯ ಭರಪೂರ ಸಿನೇಮಾಗಳು ಬರುತ್ತಿದ್ದವು. ಈಗ ಎಲ್ಲೋ ತಿಂಗಳಿಗೊಂದು ಬಂದರೆ ಹೆಚ್ಚು. ಆದರೆ ಇಲ್ಲಿ ಗುಜರಾತಿ ರಾಷ್ಟ್ರೀಯತೆ, ಅಸ್ಮಿತೆ ನಾಶವಾಗಿದೆಯೇ? ಖಂಡಿತವಾಗಿಯೂ ಇಲ್ಲ. ಭಾಷೆ, ಬರಹ ಎಲ್ಲವನ್ನೂ ನೋಡಿದರೆ ತಮ್ಮ ಸಂಸ್ಕೃತಿಯನ್ನು ಅದ್ಭುತವಾಗಿ ಗುಜರಾತಿಗಳು ಕಾಪಾಡಿಕೊಂಡು ಬಂದಿದ್ದಾರೆ. ಸಿನೇಮಾ, ನಾಟಕ ಸಂಸ್ಕೃತಿಯ ಪುಟ್ಟ ಅಂಗಗಳಷ್ಟೆ. ಗುಜರಾತಿ ನಾಟಕಗಳು ಅಹಮದಾಬಾದಿಗಿಂತ ಮುಂಬೈನಲ್ಲಿ ಹೆಚ್ಚು ಓಡುತ್ತನ್ನುವುದು ಸೋಜಿಗದ ಮಾತೇ? ಆದ್ದರಿಂದ ಗುಜರಾತಿ ಸಿನೇಮಾದ ಸಾವು ಅಸ್ಮಿತೆಗೆ ಯಾವ ಧಕ್ಕೆಯನ್ನೂ ತಂದಿಲ್ಲ.

ಎರಡನೆಯ ಉದಾಹರಣೆ ಹಿಂದಿ ಸಿನೇಮಾಗಳದ್ದು. ಮೊದಲಿಗೆ ಹಾಲಿವುಡ್ ನಿಂದ ಕಥೆಗಳನ್ನು ಕದ್ದು ಸಿನೆಮಾ ಮಾಡುತ್ತಿದ್ದ ರಂಗ ಈಗ ಹಾಲಿವುಡ್ ಸಿನೆಮಾಗಳೊಂದಿಗೆ ಇಲ್ಲೇ ಅಲ್ಲದೆ ಅಂತರ್ರಾಷ್ಟ್ರೀಯ ಸ್ಥರದಲ್ಲೂ ಪೈಪೋಟಿ ನಡೆಸುತ್ತಿವೆ.. ಈಚೆಗೆ ಮೊರೊಕ್ಕೋಗೆ ಹೋದಾಗ ನನಗೆ ಸಿಕ್ಕ ಸ್ವಾಗತ ಹಾಗೂ ನನ್ನ ಅಸ್ತಿತ್ವ ಏನು ಗೊತ್ತೇ? ನಾನು ಶಾಹ್ ರುಖ್ ಖಾನ್ ದೇಶದವನು ಅನ್ನುವುದು!

ಇದೇ ವಾದವನ್ನು ಮುಂದುವರೆಸಿದರೆ ನಾವು ಬಯಸಬೇಕಾದ್ದು "ಮಣಿರತ್ನಂ ರವರ ಯುವಾ ದೇಶದಲ್ಲಿ ಬಿಡುಗಡೆಯಾದ ದಿನ ಕನ್ನಡನಾಡಿನಲ್ಲಿ ಬಿಡುಗಡೆಯಾಗ ಬಾರದು" ಎಂಬುದೋ ಅಥವಾ, ತಮ್ಮ ಜೀವನಕಾಲದ ಮೊದಲ ಚಿತ್ರವನ್ನು ಅನಿಲ್ ಕಪೂರ್ ನಾಯಕನನ್ನಾಗಿ ಹಾಕಿಕೊಂಡು ಕನ್ನಡದಲ್ಲಿ ಪಲ್ಲವಿ ಅನುಪಲ್ಲವಿ ತೆಗೆದ ಮಣಿರತ್ನಂ ಮತ್ತೆ ಕನ್ನಡದಲ್ಲಿ ಯಾಕೆ ಸಿನೇಮಾ ಮಾಡಬಾರದು? ಎಂಬ ಬಯಕೆಯನ್ನೋ? ಕಮಲಹಾಸನ್ - ಸಿಂಗೀತಂ ಶ್ರೀನಿವಾಸ ರಾವ್ ಜೋಡಿ ತಮ್ಮ ಪುಷ್ಪಕ ವಿಮಾನವೆಂಬ ಮೂಕಿ ಚಿತ್ರಕ್ಕೆ ಕನ್ನಡದ ಲೇಬಲ್ ಹಚ್ಚಿದವರು ಮತ್ತೆ ಯಾಕೆ ನಮ್ಮ ನಾಡಿಗೆ ಬರಲಿಲ್ಲ? ಇದಕ್ಕೆ ನಾವು ಉತ್ತರಗಳನ್ನ ಹುಡಿಕಾದಾಗ ಉದಾರ ಕನ್ನಡ ಅಸ್ಮಿತತೆ ನಮಗೆ ಕಾಣಿಸುತ್ತದೆ. ಆದರೆ ಬ್ರಿಗೇಡ್ ರಸ್ತೆಯ ಇಂಗ್ಲೀ ಷ್ ಫಲಕಗಳ ಮೇಲೆ ಕಪ್ಪು ತಾರು ಸುರಿದಾಗ ಈಗ ನಮಗೆ ಕಾಣಿಸುವುದು ಸಂಕುಚಿತ ಕನ್ನಡದ ಅಸ್ಮಿತತೆ.

ಉದಾರವಾದಿಗಳು ಎಂಬುದು ಕನ್ನಡಿಗರಿಗೆ ಸಹಜವಾಗಿ ಅಂಟಿರುವ ಪಟ್ಟಿ. ಅದೇ ನಮ್ಮ ಶಕ್ತಿ. ಭಾಷೆಯ ಬಗ್ಗೆ ಅತಿವ್ಯಾಮೋಹ ಹಾಗೂ ಸ್ವಲ್ಪ ಸಂಕುಚಿತ ಮನೋಭಾವದವರು, ಸಂಪ್ರದಾಯವಾದಿಗಳೆಂಬುದು ತಮಿಳುನಾಡಿಗೆ ಬಂದಿರುವ ಪಟ್ಟಿ. ನಾವು ಉದಾರವಾದಿಗಳಾಗಿ ಉಳಿಯಬಾರದೇ?

ಕಡೆಗೂ ಸೋತದ್ದು ಮೃಗವೇ, ಅಥವಾ ಹಾಗೆಂದುಕೊಂಡುದು
ನಾನು. ಆ ಸೆಟೆದ ಮೈ ಕ್ರಮೇಣ ನುಸುಲಾಗಿ
ಹೊರಟುಹೋಯಿತು ಬೆಕ್ಕು ಬೆಕ್ಕಿನ ಗತಿಯಲ್ಲಿ.
ಹೀಗೆ ನನ್ನ ದೃಷ್ಟಿ ಒಮ್ಮೆಲೆ ಖಾಲಿಯಾದಾಗ
ಅನಿಸಿತು ನನಗೆ - ಒಪ್ಪಿಕೊಳ್ಳಬಹುದಿತ್ತು ನಾನು
ಬೆಕ್ಕಿಗೆ ಬೆಕ್ಕಿನ ಸ್ವಾಭಿಮಾನ. ಅಷ್ಟಕ್ಕೂ ನಾನು ಗಳಿಸಿದ್ದೇನು?
ಗೆದ್ದರೆ ಗೆಲ್ಲಬೇಕು ಬಾಹುಬಲಿಯಂತೆ -
ಬಿಟ್ಟುಕೊಡುವುದರಿಂದ.
ಒಂದು ಬೆಕ್ಕಿನ ಕಣ್ಣುಗಳಲ್ಲಿ ಇಷ್ಟೊಂದು ವಿಷಾದವಿರುತ್ತದೆ
ಎಂದು ನನಗೆ ಗೊತ್ತಿರಲಿಲ್ಲ"
[ತಿರುಮಲೇಶ್, ಮುಖಾಮುಖಿ ಕವಿತೆಯಿಂದ]



ಈ ಸಂದರ್ಭದಲ್ಲಿ ಬೆಂಗಳೂರು-ಬ್ಯಾಂಗಳೂರ್ ಚರ್ಚೆಯನ್ನು ಎಳೆದು ತರುವುದು ಉಚಿತವೆನ್ನಿಸುತ್ತದೆ. ಬೆಂಗಳೊರಿನ ಪುನರ್ನಾಮಕರಣದಿಂದ ನಾವು ಸಾಧಿಸ ಬಹುದದ್ದು ಏನು? ಅನಂತಮೂರ್ತಿಯವರ ಪ್ರಕಾರ ಅದರ ಉದ್ದೇಶ ಇಂತಿದೆ: “The intention is that even a foreigner who visits the city will use a Kannada-sounding word by calling the city Bengalooru. The 'u' vowel distinguishes our language, just like the 'o' in Kolkata is distinct to Bengali. By adding the 'u,' even words like chair-u and table-u become Kannada," ನಿಜ. ಆದರ ಅನಂತಮೂರ್ತಿಯವರು ಬೆಂಗಾಲಿಗಳಿಗೆ ಸಂತೋಷವಾಗುವ ರೀತಿಯಲ್ಲಿ ಕೋಲ್ಕೊತಾ ದ ಹೆಸರನ್ನು ಉಚ್ಚರಿಸಬಲ್ಲರೇ? ಆಯಾ ಭಾಷೆಯ ಲಾಜಿಕ್ಕಿನ ಪ್ರಕಾರ ಪದ/ಹೆಸರುಗಳ ಪ್ರಯೋಗವಾಗುತ್ತದೆ. ಉದಾಹರಣೆಗೆ, ಕನ್ನಡದಲ್ಲಿ ನಾವು ದೆಹಲಿ ಎಂದು ಕರೆಯುವ ಊರು ಹಿಂದಿಯಲ್ಲಿ ದಿಲ್ಲಿ, ಇಂಗ್ಲೀಷಿನಲ್ಲಿ ಡೆಲ್ಲಿ ಆಗಿ ಉಳಿದಿಲ್ಲವೇ.. ಅಥವಾ ಕನ್ನಡದಲ್ಲಿ ಮದರಾಸು, ಕಲಕತ್ತಾ, ಎನ್ನುವ ನಾವೇ ಇಂಗ್ಲೀಷಿಗೆ ಹೋದಾಗ ಮೆಡ್ರಾಸ್, ಕ್ಯಾಲ್ಕಟ್ಟಾ ಅನ್ನುವುದಿಲ್ಲವೇ? ಯಾವ ಕನ್ನಡ ಬರಹದಲ್ಲಿ ಬೆಂಗಳೂರು ಬ್ಯಾಂಗೊಲೂರ್ ಆಗಿದೆ. ಅದೇ ರೀತಯಲ್ಲಿ ಇಂಗ್ಲೀಷಿನಲ್ಲಿ ಬೆಂಗಳೂರು ಎನ್ನುವುದು ಪೆಕರು ಪೆಕರಾಗಿ ಕಾಣುವುದಲ್ಲವೇ? ಹೀಗಿದ್ದಾಗ ನಮ್ಮ ಅಸ್ಮಿತತೆಯನ್ನು ಬೆಂಗಳೂರಿನ ಪುನರ್ನಾಮಕರಣದಿಂದ ಕಂಡುಕೊಳ್ಳಬೇಕೇ?

ಜಾಗತೀಕರಣದಿಂದ ಕನ್ನಡಕ್ಕೆ ಏನಾಗುತ್ತಿದೆ ಎಂಬುದು ಆಸಕ್ತಿಯ ಪ್ರಶ್ನೆ, ಮತ್ತು ಇದನ್ನ ಕನ್ನಡ ರಾಷ್ಟ್ರೀಯತೆಗೆ ಕೊಂಡಿಹಾಕಿ ನೋಡಬಹುದೇ? ಜಾಗತೀಕರಣವನ್ನು ಉದಾರಮನೋಭಾವದಿಂದ ನೋಡಿದಾಗ ಹೆಚ್ಚಿನ ಅನುಕೂಲವಾಗಬಹುದು. ಬ್ರಿಗೇಡ್ ರಸ್ತೆಯ ಕೆಂಟಕಿ ಫ್ರಾಯ್ಡ್ ಚಿಕನ್ ಅಂಗಡಿಯನ್ನು ನಾಶ ಮಾಡುವುದರಿಂದ ಕನ್ನಡದ/ಭಾರತೀಯ ಅಸ್ಮಿತತೆಯನ್ನು ಕಾಪಾಡಿಕೊಂಡೆವೇ? ಇದಕ್ಕೂ ನಾನು ಅಹಮದಾಬಾದಿನದೇ ಉದಾಹರಣೆ ಕೊಡುತ್ತೇನೆ. ಇಲ್ಲಿಗೆ ಪೀಡ್ಜಾ ಹಟ್ ನ ಮೊದಲ ಅಂಗಡಿ ಬಂದಾಗ, ಅದು ಪ್ರಾರಂಭಮಾಡಿದ್ದು ಸಂಪೂರ್ಣ ಶಾಖಾಹಾರಿ ಹಾಗೂ ಜೈನ್ ಪೀಡ್ಜಾ ಕೊಡುವುದರ ಮೂಲಕ. ಅಂದರೆ, ಅವರು ಗುಜರಾತಿ ಅಸ್ಮಿತತೆಯನ್ನು ಗುರುತಿಸಿದ್ದರು. ಸಾಗರ್ ರತ್ನಾ ಎಂಬ ಉಡುಪಿ ಹೋಟೆಲು ಎರಡು ತಿಂಗಳಲ್ಲೇ ಮುಚ್ಚಿಹೋಯಿತು ; ಕಾರಣ ಉತ್ತಮ ಚೀಸ್ ಮಸಲಾ ದೋಸಾ ಆಗಲೀ ಜೈನ್ ದೋಸಾ ಆಗಲೀ ಮಾಡದೇ ಇದ್ದದ್ದು. ನಮ್ಮ ಅಸ್ಮಿತತೆಯನ್ನ ಪ್ರಕಟಿಸಲು ಇಂಗ್ಲೀಷಿನ ಬೋರ್ಡುಗಳಿಗೆ ಟಾರು ಹಚ್ಚಬೇಕಾದ ಅವಶ್ಯಕತೆ ನಮಗೆ ಇಲ್ಲ.

ಹೊರನಾಡಿನಲ್ಲಿರುವ ನಮಗೆ ಅಂತರ್ಜಾಲ ಹೊಸ ಓದುಗರನ್ನು ಕಂಡುಕೊಳ್ಳುವುದಕ್ಕೆ, ಭೌಗೋಳಿಕ ಸೀಮೊಲ್ಲಂಘನೆ ಮಾಡುವುದಕ್ಕೆ ಅದ್ಭುತ ಅವಕಾಶಗಳನ್ನು ನೀಡಿದೆ. ಕನ್ನಡತನದ ಮರುಹುಟ್ಟಿಗೆ ಇದು ಪ್ರಯೋಜನಕಾರಿಯಾಗಿದೆ. ನಮಗೆ ತಕ್ಷಣಕ್ಕೆ ಸಿಗದಿರಬಹುದಾದ ಮುದ್ರಿಸಿದ ಪ್ರತಿಗಳು ಮುಗಿದ ಕೆಲ ಪುಸ್ತಕಗಳು ಅಂತರ್ಜಾಲದ ಮೂಲಕ ನಮಗೆ ಸಿಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಉದಾಹರಣೆಗೆ ನ್ಯೂಯಾರ್ಕ್ ಅಥವಾ ಅಹಮಾದಾಬಾದಿನಲ್ಲಿ ಕೂತಿರುವ ವ್ಯಕ್ತಿಗೆ ಅನಂತಮೂರ್ತಿಯವರ ಅವಸ್ಥೆ ಕಾದಂಬರಿ ಅಂತರ್ಜಾಲದ ಮೂಲಕ ಕನ್ನಡಸಾಹಿತ್ಯ.ಕಾಂ ನಲ್ಲಿ ಸುಲಭದಲ್ಲಿ ಸಿಗುತ್ತದೆ. ಅನಿಕೇತನರಾಗಿರುವ ನಮ್ಮ ಅನಂತಮೂರ್ತಿ ಎಷ್ಟು ಅವಶ್ಯಕವೊ ಬಿಸಿಬೇಳೆಭಾತ್ ಮಾಡುವ ವಿಧಾನವನ್ನೂ ತಿಳಿದುಕೊಳ್ಳುವುದೂ ಅಷ್ಟೇ ಮುಖ್ಯವಾಗಿರಬಹುದು. ಇದಕ್ಕೆಲ್ಲಾ ಅಂತರ್ಜಾಲ ಒಳ್ಳೆಯ ಮಾರ್ಗವನ್ನೊದಗಿಸಿಕೊಡುತ್ತದೆ. [ಅನಿವಾಸಿಯಾಗಿರುವ ನನಗೆ ಬಿಸಿಬೇಳೆಬಾತ್ ಮಾಡುವ ವಿಧಾನ ಈ ರೀತಿಯಾದ್ದು - ಅಂಗಡಿಗೆ ಹೋಗಿ ಎಂ.ಟಿ.ಆರ್ ಬಿಸಿಬೇಳೆಯ ಒಂದು ಪ್ಯಾಕ್ ಕೊಳ್ಳಿ. ಮನೆಗೆ ಬಂದು ನೀರು ಕುದುಸಿ ಅದರಲ್ಲಿ ಪ್ಯಾಕನ್ನು ಅದ್ದಿ. ಫಾಯಿಲ್ ಪ್ಯಾಕನ್ನ ಕತ್ತರಿಸಿ ತಟ್ಟೆಗೆ ಭಾತನ್ನು ಹಾಕಿ ತಿನ್ನಿ]. ಕನ್ನಡ ಫಾಂಟನ್ನು ಯುನಿಕೋಡ್ ಮೂಲಕ ಉಪಯೋಗಿಸುವ ಅವಕಾಶ ಬಂದಮೇಲೆ ಕನ್ನಡ ಹೆಚ್ಚೆಚ್ಚು ಅಂತರ್ಜಾಲದಲ್ಲಿ ಕಾಣಿಸುತ್ತಿದೆ. ಮುಂಚೆ ಬರೇ ಪಿ.ಡಿ.ಎಫ್ ಫೈಲುಗಳಲ್ಲಿ ಕನ್ನಡ ಲಭ್ಯವಿತ್ತು. ಈಗ ಎಚ್.ಟಿ.ಎಂ.ಎಲ್ ಫಾರ್ಮಾಟಿನಲ್ಲಿಯೂ ಕನ್ನಡವನ್ನ ಅಪ್ಲೋಡ್ ಮಾಡಬಹುದಾದ್ದರಿಂದ ಅದರ ಉಪಯೋಗ ಹೆಚ್ಚಿದೆ. ವಿಭಿನ್ನ ಚರ್ಚೆಗಳು ವಿಚಾರಗಳು ಅಂತರ್ಜಾಲದಲ್ಲಿ ಸಂಪದ, ವಿಕಿಪೀಡಿಯಾ, ಥಟ್ಸ್ ಕನ್ನಡ, ಕನ್ನಡಸಾಹಿತ್ಯ.ಕಾಂ ನಂತಹ ಸೈಟುಗಳ ಮೂಲಕ, ಸೃಜನ ಕನ್ನಡಿಗ,ಮಜಾವಾಣಿ, ಅಗಸೆಯ ಅಂಗಳ, ಜೀವಸಂಶಯ ನಂತಹ ಬ್ಲಾಗುಗಳ ಮೂಲಕ ಕನ್ನಡದ ಅಸ್ಮಿತತೆಯನ್ನು ಒಂ ರೀತಿಯಿಂದ ಕಾಪಾಡಲು, ಬೆಳೆಸಲು ಪೂರಕವಾಗಿವೆ.

ಇಲ್ಲೂ ಕನ್ನಡ ರಾಷ್ಟ್ರೀಯತೆಯ ಒಂದು ವಿಷಯವನ್ನ ಎತ್ತಬಹುದು. ಕಂಪ್ಯೂಟರ್ ನಲ್ಲಿ ಕನ್ನಡ ಉಪಯೋಗಿಸಲು ಇರುವ ಪರಿಕರಗಳು ವಿವಿಧ. ಬರಹ [ಅದಕ್ಕೂ ಮುಂಚೆ ಸೇಡಿಯಾಪು], ಅಗಸ್ತ್ಯ, ಶ್ರೀಲಿಪಿ, ಐ-ಲೀಪ್ ಹೀಗೆ ವಿವಿಧ ರೀತಿಯ ಮಂಚಗಳು ಲಭ್ಯವಿದೆ. ಇವುಗಳಲ್ಲೆಲ್ಲಾ ಕನ್ನಡ ಭಾಷೆಯ ಮನೋಸ್ಥಿತಿಗೆ ಹೊಂದುವ, ಕನ್ನಡಭಾಷೆಯ ಉಪಯೋಗದ ರೂಪುರೇಖೆಗಳನ್ನು ಅರ್ಥಮಾಡಿಕೊಂಡು ತಯಾರಾದ ಕೀಲಮಣೆ ಸರ್ಕಾರಿ ಸಂಸ್ಥೆ ರೂಪಿಸಿದ ಐ.ಲೀಪ್ ಮಾತ್ರ. ಇದನ್ನ ಕಂಡುಕೊಂಡವರು, ಗಂಭೀರವಾಗಿ ಪರಿಗಣಿಸಿ ಕೀಲಿಮಣೆಯನ್ನ ಕರಗತ ಮಾಡಿಕೊಂಡವರು, ತಿರುಮಲೇಶ ಮತ್ತು ನಾನು ಮಾತ್ರ ಅನ್ನಿಸುತ್ತದೆ. ತಿರುಮಲೇಶ ಕರಗತ ಮಾಡಿಕೊಂಡದ್ದಲ್ಲದೇ ಅದೇ ಅಂತರ್ಜಾಲಕ್ಕೊ ಮಾನದಂಡವಾಗಬೇಕೆಂದು ವಾದಿಸಿ ಕನ್ನಡಪ್ರಭದಲ್ಲಿ ಲೇಖನ ಬರೆದದ್ದೂ ಉಂಟು. ಆದರೆ ಕಡೆಗೆ ಅಂತರ್ಜಾಲಕ್ಕೆ ಯೂನಿಕೋಡ್ ಮೂಲಕ ಒಗ್ಗಿಸಿದ್ದು 'ಬರಹ' ವನ್ನು. ಬರಹದ ಸಮಸ್ಯೆ ಎಂದರೆ ಅದು ಕನ್ನಡ ಪದಗಳನ್ನು ಇಂಗ್ಲಿಷ್ ಸ್ಪೆಲ್ಲಿಂಗೆ ಮೂಲಕ (ಫೊನೆಟಿಕ್ ಟ್ರಾನ್ಸ್ ಲಿಟರೇಷನ್) ಅಚ್ಚು ಮಾಡುತ್ತದೆ. ಖಂಡಿತವಾಗಿಯೂ ಇದು ಕನ್ನಡ ಅಸ್ಮಿತತೆಗೆ ಪೂರಕವಾದದ್ದಲ್ಲ. ಅದು ನಮ್ಮ ಭಾಷೆಯ ನುಡಿಕಟ್ಟನ್ನು ಗುರುತಿಸದೇ ಬೇರೆ ಭಾಷೆಯ ಮೂಲಕ ಕನ್ನಡವನ್ನು ಪ್ರವೇಶ ಮಾಡಲು ಒತ್ತಾಯ ಮಾಡುತ್ತದೆ. ಆದರೆ ಕಡೆಗೆ ಸೋತದ್ದು ತಿರುಮಲೇಶ ಮತ್ತು ನಾನು. ಇಬ್ಬರೂ ಜಗತ್ತಿನ ಒತ್ತಾಯದ ಮೇರೆಗೆ 'ಬರಹ' ಕ್ಕೆ ಶರಣಾಗಿದ್ದೇವೆ. ನಾವು ಮಾಡಿಕೊಂಡ ಈ ಕಾಂಪ್ರಮೈಸ್ ನಲ್ಲಿ ನಮಗೆ ನಷ್ಟವಾಗಿದೆ. ಆದರೆ ಕನ್ನಡಕ್ಕೆ ಒಟ್ಟಾರೆ ಉಪಯೋಗವೇ ಆಗಿದೆ ಅನ್ನಬೇಕು. ಯಾಕಂದರ ಕನ್ನಡದ ಹೊಸ ಕೀಲಿಮಣೆಯನ್ನು ಎಲ್ಲರೂ ಕಲಿಯಬೇಕಾಗಿ ಬಂದಿದ್ದರೆ ಕನ್ನಡ ಅಂತರ್ಜಾಲದಲ್ಲಿ ಸುಲಭವಾಗಿ ಹಬ್ಬುತ್ತಿರಲಿಲ್ಲವೇನೋ..

ಹೊರನಾಡಿನಲ್ಲಿರುವುದರಿಂದ ನನಗೆ ಕನ್ನಡವನ್ನು ಭಾವತೀವ್ರತೆಗಳಿಲ್ಲದೆಯೇ ನೋಡುವ ಅವಕಾಶ ಸಿಕ್ಕಿದೆ. ಅದು ಒಂದು ಥರದ ಭಾಗ್ಯವೆಂದೇ ಹೇಳಬೇಕು. ಆದರೆ ಬೆಂಗಳೂರಿನಲ್ಲಿ ನಡೆಯುವ ಸುದ್ದಿಗಳು ಇಲ್ಲಿಗೆ ತಲುಪುವುದಿಲ್ಲ. ಆಗಾಗ ಬೆಂಗಳೂರಿಗೆ ಬಂದಾಗ ಯಾರೋ ತೀರಿಕೊಂಡ ಸುದ್ದಿಯೋ, ಯಾರಿಗೋ ಅವಾರ್ಡು ಬಂದ ಸುದ್ದಿಯೋ ತಿಳಿಯುತ್ತದೆ. ಉದಾಹರಣೆಗೆ ನಾನು ಬೆಂಗಳೂರಿನಲ್ಲಿ ಇದ್ದಾಗ ಮುಖ್ಯವೆನ್ನಿಸುವ ಸುದ್ದಿಯಾದ ಕನ್ನಡ ಸಾಹಿತ್ಯ ಅಕಾದಮಿಯ ಪ್ರಸ್ತುತ ಅಧ್ಯಕ್ಷರು ಯಾರು ಎಂಬ ಪ್ರಶ್ನೆ ನನಗೀಗ ಅರ್ಥಹೀನವಾಗಿ ಕಾಣುತ್ತದೆ [ಯಾರೆಂಬುದು ನನಗೆ ತಿಳಿದೂ ಇಲ್ಲ]. ಲಾಸ್ಟ್ ಹೊರೈಜನ್ ಕಾದಂಬರಿಯಲ್ಲಿ ಶಾಂಗ್ರಿಲಾಗೆ ವಾರ್ತಾಪತ್ರಿಕೆಗಳು ತಿಂಗಳು ಕಳೆದು ಬರುವುದರಿಂದ ಏನಾದರೂ ತೊಂದರೆಯೇ ಎಂಬ ಚರ್ಚೆಯಾಗುತ್ತದೆ. ಕಡೆಗೆ ಅಲ್ಲಿನ ಬೌದ್ಧಭಿಕ್ಷು ಹೇಳುವುದಿಷ್ಟು .. ತಕ್ಷಣ ತಿಳಿಯಬೇಕಾದ ಸುದ್ದಿಯಾದರೆ ಅದು ವಾರ್ತಾಪತ್ರಿಕೆಯಿಂದಲೇ ತಿಳಿಯಬೇಕೆಂದೇನೂ ಇಲ್ಲ. ಹೇಗೋ ನಮಗೆ ತಿಳಿಯುತ್ತದೆ. ಮಿಕ್ಕ ವಿಷಯಗಳು ತಿಂಗಳ ನಂತರ ತಿಳಿದರೆ ನಷ್ಟವೇನೂ ಇಲ್ಲ. ಹೊರನಾಡಿಗನಾಗಿ ಈ ಇಂಥ ಸುಖೀ ಸ್ಥಿತಿಯಲ್ಲಿ ನಾನಿದ್ದೇನೆ.

ಕನ್ನಡಿಗರ ಅಸ್ಮಿತತೆಯಿರುವುದು "ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ" ಎನ್ನುವುದರಲ್ಲಿದೆ. ಈ ಅಡ್ಜಸ್ಟ್ ಮೆಂಟಿನಲ್ಲಿ ಮಿಲಿಟೆಂಟ್ ರಾಷ್ಟ್ರೀಯತೆಯನ್ನು ತುಂಬುವುದರಲ್ಲಿ ನನಗೆ ಅರ್ಥ ಕಾಣಿಸುತ್ತಿಲ್ಲ. ಈ ಬರಹವನ್ನು ಮುಗಿಸುತ್ತಾ 'ನಷ್ಟವಾಗುತ್ತಿರುವ ಭಾಷೆ' - ಯಿಡ್ಡಿಶ್ ನಲ್ಲಿ ಕಾದಂಬರಿಗಳನ್ನು ಬರೆದ ಸಿಂಗರ್ ನ ಕೆಲ ಸಾಲುಗಳ ಕನ್ನಡಾನುವಾದ ಇಲ್ಲಿ ಕೊಡುವುದು ಸಮಂಜಸವೇನೋ...

ಜನ ನನ್ನನ್ನು ಯಾವಾಗಲೂ ಕೇಳುವುದುಂಟು 'ನೀನು ಸಾಯುತ್ತಿರುವ ಭಾಷೆಯಲ್ಲಿ ಯಾಕೆ ಬರೆಯುತ್ತೀಯ?' ಅದಕ್ಕೆ ವಿವರಣೆಯನ್ನು ಕೆಲ ಶಬ್ದಗಳಲ್ಲಿ ಕೊಡಬಯಸುತ್ತೇನೆ.
ಮೊದಲಿಗೆ ನಾನು ಭೂತ ದೆವ್ವಗಳ ಬಗ್ಗೆ ಬರೆಯುತ್ತೇನೆ. ದೆವ್ವಗಳಿಗೆ ಸಾಯುತ್ತಿರುವ ಭಾಷೆಗಿಂತ ಸಮರ್ಪಕವಾದ ಬೇರೊಂದು ಭಾಷೆಯಿಲ್ಲವೆನ್ನಿಸುತ್ತದೆ. ದೆವ್ವಗಳಿಗೆ ಯಿಡ್ಡಿಶ್ ಅಂದರೆ ತುಂಬಾ ಇಷ್ಟ ಹಾಗೂ ನನಗೆ ತಿಳಿದ ಮಟ್ಟಿಗೆ ಅವುಗಳು ಈ ಭಾಷೆಯನ್ನು ಮಾತನಾಡುತ್ತವೆ ಕೂಡಾ.
ಎರಡನೆಯದಾಗಿ ನಾನು ದೆವ್ವಗಳಷ್ಟೆ ಅಲ್ಲ ಸತ್ತವರ ಪುನರಾಗಮನದಲ್ಲೂ ನಂಬಿಕೆಯಿಟ್ಟವನು. ಭೂಮಿಯಲ್ಲಿ ದಫನಾಗಿರುವ ಮಿಲಿಯಾಂತರ ಯಿಡ್ಡಿಶ್ ಜನರ ಶವಗಳು ಒಂದುದಿನ ಎದ್ದು ಬಂದಾಗ ಕೇಳುವ ಮೊದಲ ಪ್ರಶ್ನೆಯೆಂದರೆ "ಈಚೆಗೆ ಯಾವುದಾದರೂ ಹೊಸ ಯಿಡ್ಡಿಶ್ ಪುಸ್ತಕ ಪ್ರಕಟವಾಗಿದೆಯೇ?' ಅನ್ನುವುದು. ಆಗ ಅವರುಗಳಿಗೆ ಯಿಡ್ಡಿಶ್ ಇನ್ನೂ ಜೀವಂತವಾಗಿ ಪ್ರಕಟಗೊಳ್ಳುತ್ತದೆ. ಮೂರನೆಯದಾಗಿ, ೨೦೦೦ ವರ್ಷಗಳ ಕೆಳಗೆ ಹೀಬ್ರೂವನ್ನೂ ದಿವಂಗತ ಮಾಡಲಾಗಿತ್ತು. ಆದರೆ ವಿಚಿತ್ರವಾಗಿ ಅದಕ್ಕೆ ಪುನರ್ಜೀವನ ಸಿಕ್ಕಿತು. ಇಂದು ಹೀಬ್ರೂಗೆ ಅದದ್ದೇ ನಾಳೆ ಯಿಡ್ಡಿಶ್ ಗೂ ಆಗಬಹುದು (ಈ ಚಮತ್ಕಾರ ಹೇಗಾದೀತು ಎನ್ನುವಬಗ್ಗೆ ನನಗೆ ಕಿಂಚಿತ್ತೂ ತಿಳಿಯದು ಅನ್ನುವುದನ್ನ ಒಪ್ಪುತ್ತೇನೆ).

ಇದಕ್ಕಿಂತ ಹೆಚ್ಚಾಗಿ ನಾನು ಯಿಡ್ಡಿಶ್ ಬಿಟ್ಟುಕೊಡದಿರಲು ನಾಲ್ಕನೆಯ ಪುಟಾಣಿಕಾರಣವಿದೆ. ಅದು ಹೀಗೆ: ಯಿಡ್ಡಿಶ್ ಸಾಯುತ್ತಿರುವ ಭಾಷೆಯಿರಬಹುದು, ಆದರೆ ನನಗೆ ಚೆನ್ನಾಗಿ ಬರುವ ಭಾಷೆ ಅದೊಂದು ಮಾತ್ರ. ಯಿಡ್ಡಿಶ್ ನನ್ನ ತಾಯಿನುಡಿ ಹಾಗೂ ತಾಯಿಗೆ ಎಂದೆಂದಿಗೂ ಸಾವಿರುವುದಿಲ್ಲ..[ಇಂಗ್ಲೀಷಿನಲ್ಲಿ ಮಾಡಿದ ಈ ಭಾಷಣದ ಮೂಲ ಇಲ್ಲಿದೆ]

ಕನ್ನಡದ ಬಗ್ಗೆ ಆತಂಕಗೊಳ್ಳಲು ನನಗಾಗಲೀ ಅನಂತಮೂರ್ತಿಯವರಿಗಾಗಲೀ ಕಾರಣವಿಲ್ಲವೇನೋ.




No comments:

Post a Comment