Sunday, December 30, 2012

ಕನಸು ಕಟ್ಟುವ ಕಾಲಭ್ರಮೆ. ಆಗತಾನೇ ಕ್ಯಾಂಪಸ್ಸಿನಿಂದ ಚೀಲ ಬೆನ್ನಿಗೆ ಹಾಕಿ ಹೊರಟ ಯುವಕನಿಗೆ ಲೋಕ ಬದಲಿಸುವ ಭ್ರಮೆ. ಗಾಂಧಿ ಕಂಡ ರಾಮರಾಜ್ಯದ ಕನಸನ್ನು ನಿಜವಾಗಿಸುವ ಭ್ರಮೆ. ಹಳ್ಳಿಗಳನ್ನು ಸ್ವಯಂಪೂರ್ಣ ಮಾಡುವ ಭ್ರಮೆ. ಷೂಮಾಕರನ ‘Small is Beautiful’ ಎಂಬ ವಿದೇಶೀ ಪುಸ್ತಕದಿಂದ ದೇಸೀ ಮಹಾತ್ಮಾ ಗಾಂಧಿಯನ್ನು ಗಾಂಧೀವಾದದ ಮಹತ್ವವ
ನ್ನು ಕಂಡುಕೊಂಡ ಯುವಕನ ಓದು ಅವನ ಮನಸ್ಥಿತಿಗೆ ಪೂರಕ. ಜತೆಗಾರರಿಗಿಂತ ಒಂದೈದಾರುನೂರು ಸಂಬಳ ಕಡಿಮೆಯಾದರೂ ‘ಸೇವೆ’ಯ ತೃಪ್ತಿ ಹೊಂದುವ ಭ್ರಮೆ. ಚಿಕ್ಕ ಸಂಸ್ಥೆಯೊಂದರ ಸಂಸಾರಕ್ಕೆ ದತ್ತು ಪುತ್ರನಾಗಿ ಅವನ ಪ್ರವೇಶ. ಕನಸು ಕಟ್ಟುವ ಕಾಲ ಅದು. ಕನಸಿಗರ ವಯಸ್ಸು ಅವನಿಗೆ. ಕಟ್ಟಲೇಬೇಕು. ಕಟ್ಟಿದ.ಆಂಧ್ರಪ್ರದೇಶದ ಶ್ರೀರಾಮಸಾಗರ ಅಣೆಕಟ್ಟು ನಿರ್ಮಾಣವಾಗಿ ಅಣೆಕಟ್ಟಿನಿಂದ ಕಾಲುವೆಗಳನ್ನು ಕಟ್ಟುವ ಕಾಲ. ಸರಕಾರ ಪರಿವರ್ತನೆ, ಹೆಚ್ಚಿನ ಉತ್ಪತ್ತಿಯ ದೊಡ್ಡ ದೊಡ್ಡ ಕನಸು ಕಟ್ಟುತ್ತದೆ. ಜನ ಮಳೆರಾಯನ ಹಾದಿ ಕಾಯದೇ ಕಾಯಕ ಮುಂದುವರೆಸುವ ಕನಸು ಕಟ್ಟುತ್ತಾರೆ. ಇವೆಲ್ಲಾ ಯುವಕನಿಗೆ ಕನಸು ಕಟ್ಟಲು ಪೂರಕ. ಪೋಚಂಪಾಡ್‌ನಿಂದ ಮೊದಲ ಹಂತದ ಕಾಲುವೆಗಳು ನಿರ್ಮಾಣವಾಗಿ ನಿಜಾಮಾಬಾದ್ ಜಿಲ್ಲೆಯಿಡೀ ಕಬ್ಬಿನಡಿ, ಸಿಹಿ ಸಕ್ಕರೆ ಕಾರ್ಖಾನೆಗಳಡಿ. ಕರೀಂನಗರ್ ಜಿಲ್ಲೆಯಲ್ಲಿ ಜನ ಮೊದಲ ಬಾರಿಗೆ ಹಸಿರಿನ ನಳನಳಿಕೆ ಕಾಣುತ್ತಿದ್ದಾರೆ. ಸಂತೋಷದ ಸಂಭ್ರಮದ ಈ ವಾತಾವರಣದ ನಡುವೆ ಯಾವ ಶಬ್ದವೂ ಇಲ್ಲದೇ ಬೃಹದಾಕಾರದ ರೈಸ್ ಮಿಲ್ಲುಗಳು ಎದ್ದು ನಿಂತಿವೆ. ಕೆಲವು ಆಂಧ್ರಮಾತೆಯ ಉದರಕ್ಕೆ ನೆಲ್ಲೂರು ಸಣ್ಣ ಸರಬರಾಜು ಮಾಡಿದರೆ, ಮಿಕ್ಕವು ಕೇರಳಕ್ಕೆ ಕುಸುಬಲಕ್ಕಿಯನ್ನು ಹೇರಳ ಸರಬರಾಜು ಮಾಡುವ ಬೃಹನ್ನಿರ್ಮಾಣಗಳು. ಗಂಟೆಗೆ ನಾಲ್ಕು ಟನ್ ಭತ್ತ ನುಂಗುವ - ಅಕ್ಕಿ ಹೊರಹಾಕುವ ಗಜಗರ್ಭಗಳು. ಮಹಾರಾಷ್ಟ್ರದಿಂದ ಬಂದ ದಾಂಡೇಕರ್, ತಮಿಳನಾಡಿನ ಬಿನ್ನಿ ಯಂತ್ರಗಳು - ಈ ಮಿಲ್ಲುಗಳು.

ಎರಡನೇ ಹಂತದ ಕಾಲುವೆಗಳ ನಿರ್ಮಾಣ ಪ್ರಾರಂಭವಾಗಿದೆ. ಮುಖ್ಯ ಕಾಲುವೆಗಳು ಸಣ್ಣ ನದಿಯ ಹಾಗೆ ತುಂಬಿ ಹರಿಯುತ್ತವೆ. ವಿತರಣಾ ಕಾಲುವೆಗಳ ಯೋಜನೆ ಸಿದ್ಧವಾಗುತ್ತಿದೆ. ಹನುಮಕೊಂಡದ ಹೊರವಲಯದಲ್ಲಿನ ಅಣೆಕಟ್ಟು ಯೋಜನೆಯ ಕಾರ್ಯಾಲಯದಲ್ಲಿ ಡ್ರಾಯಿಂಗ್ ಬೋರ್ಡುಗಳ ಮೇಲೆ ಕನಸಿಗೊಂದು ರೂಪ ಕೊಡುವ ಯತ್ನ ನಡಯುತ್ತದೆ. ರಾಜಮಾರ್ಗಗಳು ತಯಾರಾಗಿವೆ. ಒಳಮಾರ್ಗಗಳ ಬಗ್ಗೆ ಆಲೋಚನೆಗಳಿವೆ.


ನೀರು ಹರಿದಂತೆ ‘ಕಾಡಾ’ದವರು (CADA: Command Area Development Authority) ಅಲ್ಲಿ ಏನೇನು ಪೈರು ಬೆಳೆಸಬೇಕೆಂದು ನಿರ್ಧರಿಸುವರು. ಅದಕ್ಕೆಷ್ಟು ಬೆಳೆ ಸಾಲ ಕೊಡಬೇಕು, ಯಾವಯಾವ
 ಬೆಳೆಗಳಿಗೆ ಸಾಲ ಕೊಡಬೇಕೆಂದು ನಿರ್ಧರಿಸುವವರೂ ಅವರೇ. ಗುಜರಾತಿನ ಕ್ಯಾಂಪಸ್ಸಿನಿಂದ ಬಂದಿಳಿದ ಯುವಕ ಬೆನ್ನಚೀಲ ಇಳಿಸಿ ಕೈತೋಳು ಮಡಚಿಕೊಳ್ಳುತ್ತಾನೆ. ರಂಗಕ್ಕಿಳಿಯಲು ಅವನು ದೈಹಿಕ ತಯಾರಿ ನಡೆಸಿದ್ದಾನೆ. ಅಬೀದ್ಸ್ ಶಾಪಿಂಗ್ ಕಾಂಪ್ಲೆಕ್ಸ್‌ನ ಮೂರನೆಯ ಮಹಡಿಯ ಪುಟ್ಟ ಕಾರ್ಯಾಲಯದಲ್ಲಿ ಆತ ವಿಕಾಸಾಧಿಕಾರಿ. ಆ ಸಂಸ್ಥೆಯಲ್ಲೂ ಹೊಸ ಯೋಜನೆಗಳು ಸಿದ್ಧವಾಗುತ್ತಿವೆ. ಶ್ರೀರಾಮಸಾಗರದ ನೀರು ಬರುತ್ತಿದ್ದಂತೆ ಜನರನ್ನ ಸಂಘಟಿಸಬೇಕು. ಎಲ್ಲರನ್ನೂ ಸಮಾನ ವೇದಿಕೆಯ ಮೇಲೆ ನಿಲ್ಲಿಸಿ ಗ್ರಾಮಕ್ಕೊಂದು ಸಹಕಾರ ಸಂಘ ಸ್ಧಾಪಿಸಬೇಕು. ನೆಲ ಉತ್ತು, ಬೀಜ ಬಿತ್ತಿ, ಕಾಲುವೆಯ ನೀರು ಹರಿಸಿದರೆ, ಬೆಳೆದು ನಿಲ್ಲುವವು ರೈಸ್ ಮಿಲ್ಲುಗಳು - ಕರೀಂನಗರದಲ್ಲೂ, ವರಂಗಲ್ಲಿನಲ್ಲೂ. ಅವೂ ಉದರ ಪೋಷಣೆ ಮಾಡುವವು. ಫುಡ್ ಕಾರ್ಪೊರೇಷನ್ನಿನ ಗೋದಾಮು ಸೇರುವವು. ಅಲ್ಲಿ ಅಕ್ಕಿ ಇಲಿಗಳ ಬಾಯಿಗೆ ಸಿಕ್ಕಿ ಕರಗಲೂಬಹುದು. ಆದರೂ ಉತ್ಪಾದನಾ ಅಂಕಿ ಅಂಶಗಳನ್ನಂತೂ ಬೆಳೆಸುವವು. ಆದರೆ: ಕನಸಿನ ವರಂಗಲ್ ಜಿಲ್ಲೆಯ ಮಿಲ್ಲುಗಳು ತುಸುವೇ ಭಿನ್ನ. ಅದೇ ದಾಂಡೇಕರ್-ಬಿನ್ನಿ ಯಂತ್ರಗಳಾದರೂ ಮಾಲೀಕರು ಮಾತ್ರ ಬೇರೆ. ಉತ್ತುವ ಜನ, ಬಿತ್ತುವ ಜನ, ಕಳೆಕಿತ್ತುವ ಜನ, ಬೆಳೆ ಬೆಳೆವ ಜನ. ಹೌದು - ಬೆಳೆವ, ಬೆಳೆಯುತ್ತಿರುವ ಜನ - ಹಿಗ್ಗುತ್ತಿರುವ ಸಮುದಾಯದ ಜನ. ಈ ಎಲ್ಲ ಆಲೋಚನೆಗಳು ಮೈದುಂಬಿದಾಗ ಯುವಕ ಪುಳಕಗೊಳ್ಳುತ್ತಾನೆ. ತನ್ನಂತೆಯೇ ಇನ್ನೂ ಅನೇಕ ಕನಸಿಗರಿದ್ದಾರೆಂದು ಖುಷಿಪಡುತ್ತಾನೆ. ಎಲ್ಲರೂ ಸಾಮೂಹಿಕ ಕನಸು ಕಾಣುವುದನ್ನು ಕೇಳಿದ್ದೀರಾ? ಕಂಡಿದ್ದೀರಾ? ಕನಸು ಕಂಡಿದ್ದೀರಾ? ಸಾಮೂಹಿಕ ಕನಸು ಕಂಡಿದ್ದೀರಾ?

ಉತ್ತು ಬಿತ್ತುವ ಜನ ಹೆಚ್ಚಿನಂಶ ನಿರಕ್ಷರಿಗಳು. ವಿಧಿಲಿಖಿತವೇನು, ಮಾನವಲಿಖಿತವೇನು - ಅವರಿಗೆಲ್ಲವೂ ಒಂದೇ. ಇಷ್ಟು ದೊಡ್ಡ ಮಿಲ್ ನಿರ್ಮಾಣವಾದರೆ, ಅದರ ಲೆಕ್ಕ ಪತ್ರ ನೋಡುವವರು ಯಾರು? ತಾಂತ್ರಿಕತೆಯ ನಿಗಾ ವಹಿಸುವುದು ಯಾರು? ಅವರಿಗೆ ಭೂಮಿಯ ಮೇಲೆ ನೇಗಿಲಿನಲ್ಲಿ ಬರೆದು ಮಾತ್ರ ಗೊತ್ತು. ಮಿಕ್ಕದ್ದು ತಮ್ಮ ಕೈಮೀರಿದ್ದು. ಇದಕ್ಕವರು ಮಾನಸಿಕ ಸಿದ್ಧತೆ ನಡೆಸಿಲ್ಲ. ಯುವಕನಂತಹ ಕೆಲವರು ಅವರಿಗೆ ಧೈರ್ಯನೀಡಬೇಕಾದ ಜನ. ಎರಡು ತಿಂಗಳ ಹಿಂದೆ ತನಗೆ ಪದವಿ ದೊರೆತ ಘಟಿಕೋತ್ಸವದಲ್ಲಿ ವಿದ್ಯಾಸಂಸ್ಥೆಯ ಚೇರ್ಮನ್ನರ ಭಾಷಣ ಯುವಕನಿಗೆ ನೆನಪಾಗುತ್ತದೆ. ಮೂವ್ವತ್ತು ಸಾವಿರ ಗುಜರಾತೀ ರೈತರ ಸಮ್ಮುಖದಲ್ಲಿ ಐವತ್ತೈದು ವಿದ್ಯಾರ್ಥಿಗಳನ್ನು ನಿಲ್ಲಿಸಿ ‘ಇವರೆಲ್ಲಾ ನಿಮ್ಮ ಸೇವಕರು, ನಿಮಗಾಗಿ ದುಡಿಯಲೆಂದೇ ತರಬೇತಿ ಪಡೆದವರು‘ ಎಂದು ಹೇಳಿದ್ದು, ನಂತರ ಆ ರೈತರು ಅವರನ್ನು ಅಭಿಮಾನದಿಂದ ತಬ್ಬಿದ್ದು, ಮೈದಡವಿದ್ದು, ಎಲ್ಲ ನೆನಪಾದಾಗ ಯುವಕನಿಗೆ ಹೊಸ ಹುರುಪು. ಅವನ ಸ್ನೇಹಿತರನೇಕರು ’ಬಂಡವಾಳಶಾಹಿ’ ಗಳ ಬಾಲಬಡುಕರಾಗಿರುವುದನ್ನ ಆತ ಅರಿತಿದ್ದಾನೆ. ಆದರೆ ತನ್ನಷ್ಟು ನೆಮ್ಮದಿ ಅವರಿಗಿಲ್ಲವೆಂದು ಆತ ವ್ಯಂಗ್ಯದಿಂದ ತನ್ನೊಳಗೇ ನಗುತ್ತಾನೆ. ವ್ಯಕ್ತಿಕೇಂದ್ರಿತ ಬದುಕಿಗೂ ಸಮೂಹಕೇಂದ್ರಿತ ಬದುಕಿಗೂ ವ್ಯತ್ಯಾಸವನ್ನು ಕಂಡುಕೊಳ್ಳಲು ಯುವಕ ಪ್ರಾರಂಭಿಸಿದ್ದಾನೆ.

ಯುವಕ ಬೆಳೆದದ್ದು ನಗರದಲ್ಲಿ. ಸ್ಪಂದನಗಳೂ ನಗರದವೇ. ಓದುತ್ತಿದ್ದಾಗ ಕಡ್ಡಾಯವೆಂದು, ಒಂದಿಷ್ಟು ಹಳ್ಳಿಗಳನ್ನು ಕಂಡಿದ್ದಾನೆ. ಹಳ್ಳಿಗಳೆಂದರೆ ಒಂದು ಬಗೆಯ ಕತೂಹಲ, ತುಸು ಆಸಕ್ತಿ ಹಾಗೂ ಅವರಿಗೆ ’ಉಪದೇಶ’ ನೀಡುವ ’ಭ್ರಮೆ’ ಅವನಿಗೆ. ಈಗಂತೂ ತೆಲಂಗಾಣದ ಹಳ್ಳಿಗಳೆಲ್ಲಾ ಅವನ ಕಾಲಡಿಯಲ್ಲಿ. ಮೋಟರ್‌ಬೈಕ್ ಒದೆಯುವುದು ಬಾಕಿ, ಗೇರ್ ಹಾಕುವುದೇ ಕೆಲಸ - ಬೇಕಾದೆಡೆಗೆ ಹೋಗಬಹುದು. ಯಾರ ಹಂಗೂ ನಿರ್ಬಂಧವೂ ಇಲ್ಲ. ತನಗೆ ತಾನೇ ರಾಜ.ಯುವಕ ಸೇರಿದ್ದು ಒಂದು ಸ್ವಯಂ ಸೇವಾ ಸಂಸ್ಥೆಗೆ. ಈ ಸಂಸ್ಥೆಗಳನ್ನ ಎನ್.ಜಿ.ಓಸ್. (NGOs: Non-Governmenetal Organisations) ಎಂದು ಕರೆಯುವುದು ವಾಡಿಕೆ. ಈ ಹೆಸರು ಹಿರಿಯ ಜನಾಂಗದಲ್ಲಿ ಬಳಕೆಯಲ್ಲಿದೆ. ಆದರೆ ಯುವತಲೆಮಾರು ಹೊಸ ಹೆಸರೊಂದನ್ನು ಹುಟ್ಟುಹಾಕಿದೆ. ಚಿದಾನಂದ ದಾಸ್‌ಗುಪ್ತರಿಗೆ ಈ ಹೆಸರ ಮಹಿಮೆ ಗುಪ್ತವಾಗಿಯೇ ಉಳಿದಿದೆಯಂತೆ. ಅವರು ತಮ್ಮ ಅಂಕಣವೊಂದರಲ್ಲಿ ಹೊಸ ಹೆಸರ ವೈಚಿತ್ರ್ಯವನ್ನು ಉಲ್ಲೇಖಿಸಿದ್ದರು. ಹೊಸ ಪೀಳಿಗೆಯವರ ಹೊಸ ನಾಮಕರಣ ‘ವೊಲಾಗ್ಸ್’ ಎಂದು (Volags: Voluntary Agencies) ಹೆಚ್ಚಿನ ವೊಲಾಗ್ಸ್ ಕೆಲಸಗಾರರು ಹೆಗಲಿಗೆ ಚರ್ಮದ ಚೀಲ ನೇತುಹಾಕಿಕೊಂಡು ಸಿಗರೇಟು ಹಚ್ಚಿ, ಜೀನ್ಸ್‌ಧಾರಿಗಳಾಗಿ ಲೋಕೋದ್ಧಾರದ ಕೆಲಸಕ್ಕಾಗಿ ಹೊರಡುತ್ತಾರೆ. ಅವರಿಗೂ ಭ್ರಮೆಗಳು.

ಯುವಕ ‘ತ್ಯಾಗ’ದ ಒಂದು ಸಂಕೇತ ಸಾಧನೆಯೆಂಬಂತೆ - ವೊಲಾಗ್ ಸೇರಿದ. ಮುಂದೆ ವೊಲಾಗ್ ಸೇರುವುದು, ಸೈದ್ಧಾಂತಿಕ ತಕರಾರುಗಳಾಗಿ ಅದನ್ನು ಬಿಡುವುದು, ಸ್ವಂತ ವೊಲಾಗ್ ಪ್ರಾರಂಭಿಸುವುದು, ಹೊಸ ಭ್ರಮೆಗಳನ್ನು ನಿರ್ಮಿಸುವುದು, ವಿದೇಶೀಯರ ನೆರವು ಪಡೆಯುವುದು - ಎಲ್ಲವೂ ಒಂದು ಥರದ ಫ್ಯಾಷನ್ ಆಗಲಿತ್ತು. ಅಥವಾ ಆಗಲೇ ಆಗಿದ್ದಿರಬಹುದು - ಆದರೆ ಯುವಕನಿಗೆ ಅದರ ಅರಿವಿರಲಿಲ್ಲ.

ಯುವಕ ಸೇರಿದ ಸಂಸ್ಥೆಗೆ ವಿದೇಶೀ ಸಂಸ್ಥೆಗಳಿಂದ ಅನುದಾನ ಬರುತ್ತದೆ. ಅವನ ಸಂಬಳವೇ ಯಾವ ಕೆನಡಾದ ಡಾಲರುಗಳೋ, ಜರ್ಮನಿಯ ಮಾರ್ಕೋ, ಇಂಗ್ಲೆಂಡಿನ ಪೌಂಡೋ ಆಗಿದ್ದಿರಬಹುದು. ಅದು ಎಷ್ಟರ ಮಟ್ಟಿಗೆ ಸ್ವಾಗತಾರ್ಹ ಎಂದು ಹಲವು ಬಾರಿ ಯೋಚಿಸಿದ್ದೂ ಉಂಟು. ಯಾರಾದರೂ ಸುಮ್ಮನೆ ಹಣವನ್ನು ಕೊಡುವುದೇಕೆ? ಇದು ಚಿಂತನಗೊಳ್ಳಬೇಕಾದ ವಿಷಯ. ಹಣ ಕೊಟ್ಟವರಿಗೆ, ಇನ್ನೇನೋ ಬೇರೆ ಲಾಭವಿರಬೇಕು ಇಲ್ಲವೇ ಸಹಜವಾಗಿ (ನೇರವಾಗಿ ಅಲ್ಲದಿದ್ದರೂ) ಆ ಲಾಭ ಬರುತ್ತದೆ. ಇದು ಕಾವ್ಯನ್ಯಾಯ. ಇದನ್ನು ಹುಡುಕುವುದು ಆಸಕ್ತಿಯ ಕಾಯಕ. ಹಾಗೆ ನೋಡಿದರೆ, ಆತ ಪದವಿ ಪಡೆದ ಸಂಸ್ಥೆಗೆ ಸ್ವಿಸ್ ಹಣ ಬಂದಿತ್ತು. ಅವನ ವಿದ್ಯಾಭ್ಯಾಸದ ಖರ್ಚನ್ನೂ ಅವರೇ ವಹಿಸಿದ್ದಿರಬಹುದು. ಹಿಂದೆ ಯುವಕ ಯುವಕನಾಗುವುದಕ್ಕೆ ಮೊದಲು, ಅಂಬೆಗಾಲಿಕ್ಕುತ್ತಿದ್ದ ಕಾಲದಲ್ಲಿ ಅಮುಲ್ ಸಂಸ್ಥೆಗೆ ವಿದೇಶದಿಂದ ಮುಫತ್ತಾಗಿ ಹಾಲಿನ ಪುಡಿ, ಬೆಣ್ಣೆ ಬಂತು. ಅದನ್ನು ಭಾರತದಲ್ಲಿ ಮಾರಾಟಮಾಡಿ, ಬಂದ ಹಣದಿಂದಲೇ ಅಲ್ಲಿನ ಕಾರ್ಖಾನೆ ನಿರ್ಮಾಣವಾದುದು. ಆ ಪರಂಪರೆ ಇಂದಿಗೂ ಮುಂದುವರೆದಿದೆ. ಯುವಕ ತನ್ನ ಕಾಯಕದಲ್ಲಿ ಅಂಬೆಗಾಲಿಕ್ಕುತ್ತಿದ್ದಾನೆ. ಈಗಲೂ ಆಪರೇಷನ್ ಫ್ಲಡ್ ಎಂಬ ಹೆಸರಿನಲ್ಲಿ ದೇಶದೊಳಕ್ಕೆ ಹಾಲಿನ ಪ್ರವಾಹ ಘನ ರೂಪದಲ್ಲಿ ಹರಿದು ಬಂದಿತ್ತು. ಅದರ ಮಾರಾಟದ ಹಣದಿಂದ, ಅದೇ ವಿದೇಶಿ ಯಂತ್ರಗಳನ್ನು ಕೊಳ್ಳಲಿ ಎಂಬುದೇ ಅವರ ಉದ್ದೇಶವೆಂದು ಕ್ಲಾಡ್ ಆಲ್ವರಿಸ್ ಹೇಳಿದ್ದರು. ಜತೆಗೆ ಯುರೋಪಿನಲ್ಲಿ ಮಾರಾಟವಾಗದೇ ಉಳಿದಿರುವ ಬೆಣ್ಣೆಯ ಬೆಟ್ಟಗಳನ್ನು ಇಲ್ಲಿಗೆ ಅಟ್ಟಿದ್ದಾರೆಂಬ ಸುದ್ದಿಯೂ ಇದೆ. ಸಾಲದ್ದಕ್ಕೆ ಈ ಬೆಣ್ಣೆಯ ಬೆಟ್ಟಗಳು ಅಣುವಿಕಿರಣಕ್ಕೆ ಒಳಗಾಗಿರುವುದರಿಂದ ಆರೋಗ್ಯಕ್ಕೂ ಹಾನಿಕರವಂತೆ. ಇವೆಲ್ಲಾ ಯುವಕನ ಕಿವಿಯ ಮೇಲೆ ಆಗಿಂದಾಗ್ಗೆ ಬೀಳುವ ಸುದ್ದಿಗಳು. ಯುವಕನೂ ಅನುಮಾನಿಸುತ್ತಾನೆ. ಯಾರಾದರೂ ಸುಮ್ಮನೆ ನೂರು ರೂಪಾಯಿ ಕೊಟ್ಟರೆ, ಅದರ ಹಿಂದಿನ ಉದ್ದೇಶದ ಬಗ್ಗೆ ಅನುಮಾನ ಬರುವುದಿಲ್ಲವೇ? ವ್ಯಕ್ತಿಗೆ ಅನ್ವಯಿಸುವ ಅವಮಾನ, ಸಮೂಹಕ್ಕೆ, ಸಮಾಜಕ್ಕೆ, ದೇಶಕ್ಕೆ ಯಾಕೆ ಅನ್ವಯವಾಗುವುದಿಲ್ಲ?

ವಿದೇಶೀ ಅನುದಾನದ ಉಸಿರಾಟದ ನೆರವಿನಲ್ಲಿ ದಿನವೂ ಇಂಥ ಸಂಸ್ಥೆಗಳು ಅಣಬೆಗಳಂತೆ ಹುಟ್ಟಿಕೊಳ್ಳುತ್ತಿವೆ. ಹಬ್ಬಿಕೊಳ್ಳುತ್ತಿವೆ ಸಹ. ಅನುದಾನ ಕೊಡಿಸುವ ದಳ್ಳಾಳಿಗಳು - ಮೂರು ವರ್ಷಗಳಲ್ಲಿ ಸ್ವಯಂಪೂರ್ಣ ಆಗುತ್ತೇವೆಂಬ ಘೋಷಣೆಗಳು - ಹೀಗೆಯೇ. ಚಟುವಟಿಕೆಗಳು ಬೆಳೆಯುತ್ತವೆ. ಉದಾತ್ತ ಉದ್ದೇಶಗಳಲ್ಲಿ ಒಪ್ಪಂದಗಳು ಕಾಣಸಿಗುತ್ತವೆ. ಒಟ್ಟಂದ ಕೆಡುತ್ತದೆ. ಕ್ರಮೇಣ ಉದಾತ್ತತೆ ಕರಗುತ್ತದೆ. ಸೋಜಿಗದ ವಿಷಯ - ಆದರೂ ದಿನನಿತ್ಯದ ಸತ್ಯ.

ಯುವಕ ಸೇರಿದ ಸಣ್ಣ ಗುಂಪಿನ ಉದ್ದೇಶ ಸಹಕಾರ ಸಂಘಗಳಡಿ ಜನರನ್ನು ಸಂಘಟಿಸುವುದು. ಹಳ್ಳಿಗೊಂದು ಸಹಕಾರ ಸಂಘ ಹುಟ್ಟಿ, ಸಮುದಾಯದ ಪ್ರತಿ ಮನೆಯ ಕದತಟ್ಟಿ, ಬೆಳ್ಳಿತಟ್ಟೆಯಲ್ಲಿ ಅವರಿಗವಶ್ಯವಾದ ಸೇವೆಯನ್ನು ಒದಗಿಸುವ ಉದಾತ್ತ ಉದ್ದೇಶದ್ದು. ಮುಂಜಾನೆ ಎದ್ದಾಗಿನಿಂದ ಬೇಕಾಗುವ ಹಲ್ಲುಪುಡಿಯಿಂದಾದಿಯಾಗಿ, ಜಮೀನಿನಲ್ಲಿ ಬಿತ್ತಲು ಬೀಜ, ಉತ್ತಲು ನೇಗಿಲು, ನೀರಿಗೆ ಪಂಪು, ಸಂಗ್ರಹಿಸಲು ಸಂಪು. ಅದಕ್ಕೆ ಸಾಲ, ಬೆಳೆಗೆ ಬೆಲೆ, ಅವರದೇ ಮಿಲ್ಲು - ಎರಡು ಹೊತ್ತಿನ ಊಟಕ್ಕೆ ಬೇಕಾದ್ದೆಲ್ಲವೂ ಒಂದೇ ಸಂಸ್ಥೆಯಡಿ. ಆ ಸಂಸ್ಥೆಯ ಮಾಲೀಕರಾದರೂ ಯೂರು? ಈ ಎಲ್ಲ ಸೇವೆ ಪಡೆವ ಅದೇ ವ್ಯಕ್ತಿ. ಯುವಕ ತಾನು ಓದಿರುವ ಅರ್ಥಶಾಸ್ತ್ರ, ಸಮಾಜಶಾಸ್ತ್ರದ ಪಾಠಗಳನ್ನು ತಿರುವಿ ಹಾಕುವನು. ‘ಸಹಕಾರ’ದಷ್ಟು ಅವನಿಗೆ ಏನೂ ರುಚಿಸುವುದಿಲ್ಲ. ಅದರ ಬಯಕೆ ಅವನನ್ನು ಬಿಟ್ಟದ್ದಲ್ಲ - ಉಪಯೋಗಿಯೇ ಮಾಲೀಕ, ಉಪಯೋಗಿಸುವವರಿಗೆ ಲಾಭ, ಸರ್ವಸಮಾನತೆ, ಸಂಘಗಳ ನಡುವೆ ಸಹಕಾರ - ರೋಶ್‌ಡೇಲ್ ಪಯೋನಿಯರ್‌ಗಳು ಇಂಗ್ಲೆಂಡಿನಲ್ಲಿ ಹುಟ್ಟಿಸಿದ ಈ ವಿಚಿತ್ರ ಸಂಸ್ಥೆಯ ಸೂತ್ರಗಳು ಅವನನ್ನ ಸೆಳೆದಿವೆ. ಇವೆಲ್ಲಾ ಎಷ್ಟು ಸಮಂಜಸ, ಎಷ್ಟೊಂದು ಅರ್ಥಪೂರ್ಣ ಎಂದು ಅದನ್ನು ಗಂಭೀರವಾಗಿ ಪರಿಶೀಲಿಸಿದ ಯಾರಿಗಾದರೂ ಅನಿಸಿಯೇ ಅನ್ನಿಸುವುದು. ಕ್ರಿಯಾರೂಪದಲ್ಲಿ ಭ್ರಮನಿರಸನಕ್ಕೆ ಅವಕಾಶವಿದೆ. ಕಾರಣ: ಸಹಕಾರದ ಚಾರಿತ್ರ್ಯ ಪವಿತ್ರವಾಗಿಲ್ಲ. ಸಿಕ್ಕಸಿಕ್ಕವರೆಲ್ಲಾ ಅದರ ರುಚಿ ನೋಡಿ ಮಾನ ಸೂರೆಮಾಡಿ, ಗದ್ದುಗೆಗೇರಿದವರು. ಮಹಾರಾಷ್ಟ್ರದ ಸಕ್ಕರೆ ಸಹಕಾರಿಗಳ ರಾಜಕೀಯ ಅಷ್ಟೇನೂ ಸಿಹಿಯಾದುದಲ್ಲ. ಗುಜರಾತಿನ ಹಾಲಿನ ಹಾಲಾಹಲವನ್ನು ಯುವಕ ಕಂಡಿದ್ದಾನೆ. ಆದರೂ, ಈ ಯಾವುದರಲ್ಲೂ ನಂಬಿಕೆ ಕಳೆದುಕೊಳ್ಳುವಂತಹ ಸಿನಿಕತೆ, ವಯೋಸಹಜವಾಗಿ ಅವನಿಗಿನ್ನೂ ಪ್ರಾಪ್ತವಾಗಿಲ್ಲ.

ಸಂಸ್ಥೆಯ ಸಂಸಾರದ ಬಗ್ಗೆ ಯುವಕನಿಗೆ ಹೆಮ್ಮೆ. ಅಲ್ಲಿನ ಪ್ರಾಮಾಣಿಕತೆ, ಉದ್ದೇಶಗಳ ಉದಾತ್ತತೆ, ಜನರ ಮುಕ್ತತೆ, ಅವನ ಮುಗ್ಧತೆ, ರಾತ್ರೆಯಿಡೀ ನಿರ್ಮಲ್‌ನಿಂದ ಬಸ್ ಪ್ರಯಾಣ ಮಾಡಿಬಂದ ಅಧಿಕಾರಿ ಬೆಳಿಗ್ಗೆ ಒಂಭತ್ತಕ್ಕೆ ಆಫೀಸಿನ ಬಾಗಿಲು ತೆರೆವ ವೇಳೆಗೆ ಸರಿಯಾಗಿ ಹಾಜರಾಗುವುದು, ಬೆಳಿಗ್ಗೆ ಹಾಕಿಸಿದ ಪೆಟ್ರೋಲಿನ ಬಿಲ್ ಐದು ನಿಮಿಷಗಳಲ್ಲಿ ಮರುಪಾವತಿಯಾಗುವುದು, ಇಂಥ ವಿಷಗಳನ್ನು ಹಿಂದೆಂದೂ ಕಂಡಿಲ್ಲ. ಕೇಳಿಯೂ ಇಲ್ಲ. ಈಗ ಹಣ ಎಣಿಸುವಾಗ ಖುಷಿಗೊಳ್ಳದಿರುವುದಾದರೂ ಹೇಗೆ? ಮೇಜಿನ ಬಳಿ ಬಂದು ಕೂರುತ್ತಿದ್ದಂತೆ ಗಟ್ಟುದುದ್ದೆನಪಲ್ಲಿಯ ವೆಂಕಟ್ರಾಮಾರೆಡ್ಡಿಯೋ, ಕಾಪುಲಕನಪರ್ತಿಯ ಸೂರ್ಯಾರಾವೋ ಬಂದು, ಮೀಸೆ ಚಿಗುರದ ಇವನ ಬಳಿ ರೈಸ್ ಮಿಲ್ ಸ್ಥಾಪನೆಯ ಬಗ್ಗೆ, ಅಕ್ಕಿ ಮಾರಾಟದ ಬಗ್ಗೆ, ಸರಕಾರಿ ಲೆವಿಯಬಗ್ಗೆ ಚರ್ಚಿಸುವುದು. ಅವರ ಸರಕಾರ ಸಂಘದ ಮೂರು ವರ್ಷದ ಪ್ರಣಾಲಿ ತಯಾರಿಸಿಕೊಡಲು ಸಹಾಯ ಕೋರುವುದು - ಇವನಿಗೆ ಹೆಮ್ಮೆಯ ವಿಷಯ. ಇದ್ಯಾವುದೂ ಇಲ್ಲವೆಂದರೆ, ಮುಲುಕನೂರಿನ ತರಬೇತಿ ಕೇಂದ್ರದಲ್ಲಿ ತನ್ನ ವಯಸ್ಸಿನಷ್ಟು ಅನುಭವವಿರುವ ಬೆಳ್ಳಿಕೂದಲ ವಿದ್ಯಾರ್ಥಿಗಳಿಗೆ ಸಹಕಾರ ಸಿದ್ಧಾಂತದ ಪಾಠ. ಯಾರಿಗುಂಟು ಯಾರಿಗಿಲ್ಲ ಇಂಥಹ ಅವಕಾಶ?

ಕನಸಿನ ವಿಸ್ತಾರವಾದ ಸಾಮ್ರಾಜ್ಯ - ಅಲ್ಲಿನ ಸಮುದ್ರದಲ್ಲಿ ಮುಳುಗುವುದು, ತೇಲುವುದು, ಏಳುವುದು, ಈಜಾಡುವುದು, ಸುಸ್ತಾಗುವುದು.ಆಂಧ್ರಪ್ರದೇಶ ರಾಜಕೀಯವಾಗಿಯೂ ಕನಸು ಕಟ್ಟುವ ಕಾಲ ಅದು. ಅನೇಕ ವರ್ಷಗಳ ಕಾಂಗ್ರೆಸ್ ಆಳ್ವಿಕೆಯ ನಂತರ, ಮುಖ್ಯಮಂತ್ರಿಗಳನ್ನು ಪಗಡೆಯಾಡಿದ ಕೇಂದ್ರದ ವಿದ್ಯಮಾನಗಳ ನಂತರ ದೇವಸ್ವರೂಪನೆಂದು ಪರಿಗಣಿಸುವ, ಆತ್ಮಾಭಿಮಾನದ ಮಾತಾಡುವ ತಮ್ಮದೇ ಮುಖ್ಯಮಂತ್ರಿಯನ್ನು ಜನ ಪಡೆದರು. ಸಹಜವಾಗಿ ಜನ ಕನಸುಕಟ್ಟತೊಡಗಿದರು. ಆ ನಂತರ ರಾಜ್ಯದ ಕನಸಿಗೂ ಯುವಕನ ಕನಸಿಗೂ ಒಂದೇ ಗತಿ ಪ್ರಾಪ್ತವಾಗಲಿತ್ತೆಂಬುದು ದೂರದ ವಿಷಯ. ಇಂಥ ಬದಲಾವಣೆಗಳಾದಾಗ ಕನಸುಗಳೂ ಮಾರ್ಪಾಡಾಗುತ್ತವೆ. ಆಗ ಪಕ್ಕದ ತಮಿಳುನಾಡಿನಲ್ಲೂ, ದೂರದ ಅಮೆರಿಕೆಯಲ್ಲೂ ಬಣ್ಣದ ಜನಕ್ಕೆ ದೆಸೆ ತಿರುಗಿತ್ತು. ರಾಮರಾಯರ ರಾಮರಾಜ್ಯದ ವಾಗ್ದಾನಕ್ಕೆ ರಾಮಚಂದ್ರನ್ ಅವರೇ ಪ್ರತಿಮೆ. ರಾಜಕೀಯದ ಅಣ್ಣ. ರಾಜಕೀಯದಲ್ಲಿ ಗುರು. ಎಂ.ಜಿ.ಆರ್‌ಗೆ, ಎನ್.ಟಿ.ಆರ್ ಎಂಬ ಹೆಸರೂ ಪ್ರಾಸಬದ್ಧ. ಆ ರಾಜ್ಯದಂತೆಯೇ ಇಲ್ಲೂ ರೂಪಾಯಿಗರ್ಧ ಕಿಲೋ ಅಕ್ಕಿ, ಮಧ್ಯಾಹ್ನದ ಮುಫತ್ತು ಊಟ, ಮೇಲೆ ದೊಡ್ಡ ಕಟೌಟ್‌ಗಳು, ಆಮೇಲೆ ನಾಟಕೀಯ ಭಾಷಣಗಳು. ಎಲ್ಲವೂ ಆತನಡಿಜಾಡಿನಲ್ಲಿಯೇ. ಅಧಿಕಾರ ವಹಿಸಿಕೊಂಡ ಎರಡೇ ವರ್ಷಗಳಲ್ಲಿ ರಾಜ್ಯಪಾಲ ರಾಮಲಾಲರ ಕರಾಮತ್ತು. ಮುಖ್ಯಮಂತ್ರಿ ವಜಾ. ಪ್ರಜಾಸತ್ತೆ ಸತ್ತೇಹೋಯಿತೆಂಬ ಬೊಬ್ಬೆ. ಜನಚಳವಳಿ. ಬೃಹತ್ ಸಂಖ್ಯೆಯ ಬೆಂಬಲ, ಅಧಿಕಾರ, ವಿಧಾನಸಭೆಯ ವಿಸರ್ಜನೆ. ಪ್ರಜಾಪ್ರಭುತ್ವದ ಪ್ರಭುತ್ವ.

ಈ ಎಲ್ಲ ವಿದ್ಯಮಾನಗಳು ನಡೆದಾಗ ಯುವಕನಂತೆಯೇ ಸಹಕಾರ ಸಂಘಗಳೂ ಮೂಕ ಪ್ರೇಕ್ಷಕರು. ಈ ಪಾಪದ ಸಂಸ್ಥೆಯ ಪಾಲಕವರ್ಗದ ಅಧಿಕಾರಾವಧಿ ತೀರಿತ್ತು. ಅವಕ್ಕೆ ಚುನಾವಣೆಗಳೇ? ಅಧಿಕಾರಾವಧಿಯ ವಿಸ್ತರಣೆಯೇ? ಶೇಷಪ್ರಶ್ನೆಗಳು.

ಸರಕಾರ ತನ್ನ ಕನಸಿನರಮನೆಯಲ್ಲಿ ಸರಕಾರಿಗಳ ಕನಸಿಗೆ ಭಂಗ ತಂದಿತ್ತು. ಪಾಲಕವರ್ಗಗಳು ರದ್ದು. ಸರಕಾರದಧಿಕಾರಿಗಳು ಸಂಘಗಳ ನಿರ್ವಹಣೆ ವಹಿಸುಕೊಳ್ಳುವಂತೆ ಸುಗ್ರೀವಾಜ್ಞೆ. ಇದೂ ರಾಷ್ಟ್ರಪತಿ ಆಳ್ವಿಕೆಯಂತೆಯೇ. ಅಣ್ಣ, ಗುರುವಿನ ತಮಿಳುನಾಡಿನಲ್ಲಿ ಹದಿನೈದು ವರ್ಷಗಳಿಂದ ಚುನಾವಣೆ ಇಲ್ಲದ ಸ್ಥಿತಿ, ಆಂಧ್ರದ ಹಾದಿ ಯಾವುದು? ಈ ಅಣ್ಣನ ದೃಷ್ಟಿ ಎತ್ತ? ಮತ್ತೆ ಸಹಕಾರಿಗಳ ನಡುವೆ ಗುಸುಗುಸು. ಒಂದೆರಡು ಕ್ಷೀಣದನಿಯ ಬೊಬ್ಬೆಗಳು. ರಾಜ್ಯಕ್ಕೆ ಪ್ರಜಾಪ್ರಭುತ್ವ ಬೇಕು ಸರಿ...... ಆದರೆ ಸಹಕಾರಿಗಳಿಗೆ ಏಕಿಲ್ಲ?

ಯುವಕ ಕೆಲಸ ಮಾಡುತ್ತಿದ್ದ ಸಂಸ್ಥೆಯವರಿಗೆ ರಾಜ್ಯ ಮುಳುಗಿದರೂ ಸಹಕಾರ ಉಳಿಯಬೇಕೆಂಬ ಆಸೆ. ಉದ್ದೇಶದಲ್ಲಿ ಅಷ್ಟು ಏಕಾಗ್ರತೆ. ಸಂಸ್ಥೆ ಜಾಗೃತವಾಯಿತು. ಕನಸೆಲ್ಲಿ, ನನಸೆಲ್ಲಿ? - ಶ್ರೀರಾಮಸಾಗರ ನಿದ್ರಿಸಿತು. ಪ್ರಜಾಪ್ರಭುತ್ವವನ್ನು ಕಾಪಾಡುವ ಕೆಲಸ ಆರಂಭವಾಯಿತು. ರಾಜಮಾರ್ಗವೂ ಒಂದೇ, ಒಳಮಾರ್ಗವೂ ಒಂದೇ. ಸಿಟಿಜನ್ಸ್ ಫಾರ್ ಡೆಮಾಕ್ರಸಿಗೆ ಪತ್ರ. ಸಹಿಯ ಶಾಯಿ ಒಣಗುವಷ್ಟರಲ್ಲಿಯೇ ಪ್ರಧಾನ ಮಂತ್ರಿಗಳಿಗೆ ಪತ್ರ. ನಡುವೆ ಎಷ್ಟೋ ಡೊಡ್ಡ ವ್ಯಕ್ತಿಗಳಿಗೆ. ಪತ್ರಿಕೆಗಳ ಸಂಪಾದಕರಿಗೆ ಪತ್ರಗಳು. ದಿನನಿತ್ಯ ಸಭೆಗಳು. ಮುಂದಿನ ದಾರಿಯ ಆಲೋಚನೆ, ಚಳುವಳಿಯ ತಯಾರಿ, ಶಾಸಕರೊಂದಿಗೆ ಸಮಾಲೋಚನೆ, ಪಿತೂರಿ, ಹಣದ ವ್ಯವಸ್ಥೆ... ಜನರನ್ನು ಸಂಘಗಳಡಿ ಸಂಘಟಿಸುವ ಕೆಲಸ ಹೋಗಿ, ಪ್ರಜಾಸತ್ತೆಯ ರಕ್ಷಕರಾಗಿ ಸಂಘಟಿಸುವ ಕೆಲಸ. ವಿಕಾಸದ ಕಾರ್ಯ ನಿಂತು ರಣಧೀರರ ಕಾರ್ಯಾರಂಭ. ಬ್ರಿಟನ್ನಿನಲ್ಲಿ ಸಹಕಾರಿಗಳಿಗಾಗಿ ಒಂದಿಷ್ಟು ಸಂಸತ್ ಸೀಟುಗಳನ್ನು ಕಾಯ್ದಿರಿಸಿದ್ದಾರಂತೆ, ಇಲ್ಲಿ ಯಾಕಿಲ್ಲ? ಇದ್ದಿದ್ದರೆ ಅಲ್ಲೂ ಗಲಭೆ ಎಬ್ಬಿಸಲು ಅನುಕೂಲವಿರುತ್ತಿತ್ತು ಎಂಬತಹ ವಿಚಿತ್ರ ಆಲೋಚನೆಗಳು.
ವೆಂಕಟ್ರಾಮಾರೆಡ್ಡಿಯವರೂ, ಸೂರ್ಯಾರಾಯರೂ, ಈಗ ಸಂಸ್ಥೆಗೆ ಬರುವುದು ಕಡಿಮೆ. ಸರಕಾರದ ಅಧಿಕಾರಿಯ ಪರವಾನಗಿ ಲಭಿಸುವುದು ಕಷ್ಟ. ಈಗೆಲ್ಲಾ ಸರಕಾರಿ ಲೆಕ್ಕ, ಸರಕಾರಿ ಪ್ರಣಾಲಿ, ಸರಕಾರಿ ಕಾರುಬಾರು. ಅನೇಕರಿಗೆ ಇದು ಖುಷಿ. ಕೆಲವರಿಗೆ ಕಣ್ಣುರಿ. ಮಿಕ್ಕವರಿಗೆ ದುಃಖ.

ಕೆನಡಾದ ಒಂದು ಸಂಸ್ಥೆ ಕನಸಿನೊಳನುಗ್ಗಲು ಪ್ರಯತ್ನಿಸಿತು. ತಾನೇ ಒಂದು ಕನಸಾಗಿ ನಿಲ್ಲಲು, ಪ್ರಜಾಪ್ರಭುತ್ವದ ಉಳಿವಿಗಾಗಿ ಹಣ ಕಳಿಸಲು ಸಿದ್ಧ ಎಂದು ಅಲ್ಲಿಂದ ತಾರು. ಇಲ್ಲಿನ ಪರಿಸ್ಥಿತಿ ತಾರುಮಾರು. ಯುವಕನಿಗೆ ಭೀತಿ. ಪ್ರಜಾಪ್ರಭುತ್ವದ ಕಳಕಳಿ ಏನೇ ಇರಲಿ, ಎಷ್ಟೇ ಇರಲಿ, ನಮ್ಮಂತರಂಗಕ್ಕೆ ಪ್ರವೇಶಿಸಲು ಇವರು ಯಾರು? ಬಲವಂತವಾಗಿ ಏಕೆ ಕನಸು ಕಟ್ಟಿಸಬೇಕು? ಹೀಗೊಂದು ಸೈದ್ಧಾಂತಿಕ ಚಡಪಡಿಕೆ. ಅದೃಷ್ಟಕ್ಕೆ ಆ ಹಣ ಬೇಡವೆಂದು ಸಂಸ್ಥೆಯಿಂದ ಪತ್ರ ಹೋಯಿತು. ಇಲ್ಲವಾದಲ್ಲಿ ಯುವಕ ತನ್ನ ಕನಸಿನ ಆ ಅಧ್ಯಾಯವನ್ನು ಮುಚ್ಚಲು ತಯಾರಿದ್ದ. ರಾಜೀನಾಮೆಯನ್ನ ಮನಸ್ಸಿನಲ್ಲಿಯೇ ಬರೆದಿಟ್ಟಿದ್ದ.

ಸಂಸ್ಥಯ ಕೆಲಸಕಾರ್ಯ ಈಗ ಒಂದೇ. ಸರಕಾರದೊಂದಿಗೆ ಹೋರಾಟ. ಪ್ರಜಾಪ್ರತಿನಿಧಿಗಳನ್ನು ಗದ್ದಿಗೆಗೇರಿಸುವುದು ಬಿಟ್ಟು ಬೇರೇನೂ ಕಾರ್ಯಕ್ರಮ ಕಾಣುತ್ತಿಲ್ಲ. ಸರಕಾರಿ ಕೆಂಪುಪಟ್ಟಿಯೊಂದಿಗೆ ಏಗುವುದು ಸುಲಭದ ಕೆಲಸವಲ್ಲ. ಯಾವಾಗಲೂ ‘ಕೋ’ ಎನ್ನುತ್ತಿದ್ದ ಕೋ-ಆಪರೇಟಿವ್‌ಗಳಿಗೆ ಈಗ ಬೇಕಿರುವುದು ಪ್ರಜಾಸ್ವಾಮ್ಯದ ಭಿಕ್ಷೆ. ‘ತಾ’ ಎನ್ನುತ್ತಾರವರು. ಸರಕಾರ ತಾರಮ್ಮಯ್ಯ.

ಈ ಮಧ್ಯೆ ನ್ಯಾಯಾಲಯದ ಬಾಗಿಲು ತಟ್ಟಿದ್ದೂ ಆಯಿತು. ಜತೆಗೆ ಜನಾಂದೋಳನ. ಕರೀಂನಗರದಲ್ಲಿ ರ್‍ಯಾಲಿ ಮಾಡಿಸಬೇಕು. ಗೋಡೆ ಗೋಡೆಯ ಮೇಲೆ ನಮ್ಮ ಗೋಡೆಯ ಹಾಡು. ಸರಕಾರಿಗಳಿಗೆ ಅವರದೇ ಪಾಡು. ಪೋಸ್ಟರ್ ಚಳವಳಿ. ವರಂಗಲ್ ವೆಂಕಟೇಶ್ವರ ರಾಯರ ಸಹಾಯದಿಂದ ಅಲ್ಲಿ ಏನಾದರೂ ಸಾಧ್ಯ. ಮಲ್ಲೆಬೋಯಿನಪಲ್ಲಿಯ ಮಾಸಿರೆಡ್ಡಿ ಚಳುವಳಿಗೆಂದು ಕೈತೋಳು ಮಡಚಿದ್ದಾರೆ. ಚೈತನ್ಯ ರಥದೋಪಾದಿಯಲ್ಲಿ ನಿರ್ಮಾಣಗೊಂಡ ಸಹಕಾರಿ ರಥದಲ್ಲಿ ಮಾಸಿರೆಡ್ಡಿಯ ಅಭಿಯಾನ ಆರಂಭ. ಊರೂರಲ್ಲಿ ರ್‍ಯಾಲಿ. ಜಿಲ್ಲಾ ಕಲೆಕ್ಟರರ ಕಛೇರಿಗೆ ಲಗ್ಗೆ. ಮೆರವಣಿಗೆ, ಮನವಿ ಪತ್ರ ಸಲ್ಲಿಗೆ. ಮಧ್ಯೆ ಮಧ್ಯೆ ನ್ಯಾಯಾಲಯದಲ್ಲಿ ಹಾಜರಿ. ಶಾಸಕರಿಗೆ ಪ್ರತಿದಿನ ಪತ್ರ. ಪತ್ರಿಕೆಗಳಿಗೆ ಲೇಖನಗಳ ಸುರಿಮಳೆ, ಆಗಾಗ ಒಂದು ಪತ್ರಿಕಾ ಗೋಷ್ಠಿ. ಸಂಸ್ಥೆ ಚುನಾವಣಾ ಕಾಲದ ರಾಜಕೀಯ ಕಾರ್ಯಾಲಯವಾಗಿದೆ. ಎಲ್ಲೆಲ್ಲೂ ಪೋಸ್ಟರು - ಅದರ ಹಿಂದೆ ಅಂಟು. ಈ ಬೀದಿಜಗಳ ನಡೆವಾಗ ಯುವಕ ಅಂಟದ ಅಪರಂಜಿ. ಜಿಲ್ಲೆಗಳಲ್ಲಿ ಒಂದೆರಡು ರ್‍ಯಾಲಿಗಳಲ್ಲಿ ಜಯಭೇರಿ. ಒಂದೈದಾರು ವಿಫಲ. ಹೈದರಾಬಾದಿನಲ್ಲಿ ಉಪವಾಸ ಸತ್ಯಾಗ್ರಹ ಮಾಡಬೇಕೆಂಬ ಯೋಚನೆ. ಕೈಗೆ ಕೋಳ ತೊಟ್ಟು ಬಾಯಿಗೆ ಬಟ್ಟೆಕಟ್ಟಿಕೊಂಡು ಮೆರವಣಿಗೆ ಮಾಡಬೇಕೆಂಬಂತಹ ದಿವ್ಯ ಆಲೋಚನೆಗಳು.

ಯುವಕ ತನ್ನ ಪ್ರಸ್ತುತ ಗೊಂದಲದಲ್ಲಿ ಸಿಲುಕಿ ಸ್ವಲ್ಪ ಒದ್ದಾಡುತ್ತಿದ್ದ. ಅವನು ಯಾವುದರಲ್ಲೂ ಹೃದಯ ತೊಡಗಿಸಲಾರ. ಸರಕಾರವನ್ನು ವಿರೋಧಿಸುವುದು ಸಂಸ್ಥೆಗೊಂದು ಚಟವಾಗಿತ್ತು. ಸರಕಾರದ ನಿಲುವೇ ಬೇರೆ - ಸಹಕಾರಿ ಕಾನೂನಿನಲ್ಲಿ ಕ್ರಾಂತಿಕಾರಕ ಬದಲಾವಣೆ ತರಬೇಕೆಂಬ ಆಲೋಚನೆ. ಆ ಬಗ್ಗೆ ಒಂದು ಸುಗ್ರೀವಾಜ್ಞೆಯೂ ಹೊರಟಿತು. ಸಂಸ್ಥೆ ಸೂಚಿಸಿದ್ದ ಅನೇಕ ಬದಲಾವಣೆಗಳೂ ಅದರಲ್ಲಿ ಇದ್ದುವು. ಅನೇಕ ಆಶಯಗಳು ಕಾನೂನಿನ ರೂಪ ಪಡೆಯಲಿತ್ತು. ಕನಸು ನನಸಾದರೆ ಆಘಾತವಾಗುವುದೇ? ಒಂದೆರಡು ಭಾಗಗಳು ನನಸಾದವು. ಸಂಸ್ಥೆ ಅದನ್ನೂ ವಿರೋಧಿಸಿ ಹೊಸ ಕನಸುಗಳ ನಿರ್ಮಾಣ ಪ್ರಾರಂಭಿಸಿತು. ಪತ್ರಿಕೆಗಳಲ್ಲಿ ಮತ್ತೆ ಲೇಖನಗಳ ಸರಮಾಲೆ. ಸಂಸ್ಥೆಯ ಚೇರ್ಮನ್ನರ ಲೇಖನ ವಿರೋಧಿಸಿ ಯುವಕ ಸಂಪಾದಕರಿಗೆ ಪತ್ರ ಬರೆದ. ಸಂಸ್ಥೆಯೊಳಗೆ ಕೋಲಾಹಲ... ಹೊರಗೆ ಸರಕಾರದೊಂದಿಗೆ ಬೀದಿಜಗಳ. ಒಳಗೆ ಶೀತಲ ಸಮರ. ಪ್ರಜಾಸತ್ತೆಯ ಹೋರಾಟ ಬಿರುಸಿನಿಂದ ನಡೆಯುತ್ತಿದ್ದಾಗ, ನಿಧಾನವಾಗಿ ಶ್ರೀರಾಮಸಾಗರದ ಎರಡನೇ ಹಂತದ ನೀರು ಒಳದಾರಿಯಲ್ಲಿ ಹರಿಯುತ್ತಿತ್ತು. ಸರಕಾರದ ಆ ಅಂಗವೇ ಬೇರೆ, ಹೋರಾಟದ ಈ ಅಂಗವೇ ಬೇರೆ. ಸಂಸ್ಥೆಯ ಅಂಗಾಂಗಗಳೆಲ್ಲವೂ ಒಂದೇ. ಸರಕಾರ ಗಲಿವರ. ಸಂಸ್ಥೆ ಲಿಲಿಪುಟ್ಟ. ಪುಟ್ಟ ಲಿಲಿಪುಟ್ಟ. ಉಫ್ ಎಂದು ಊದಿದರೆ ಹಾರಿಹೋಗುವ ಸೊಳ್ಳೆ. ಹಚಾ ಎಂದರೆ ಹೆದರುವ ದುಂಬಿ.

ಈ ಯುದ್ಧ ನಡೆವಷ್ಟು ಕಾಲ ಬೇರೊಂದು ಸಂಘಟನೆಯ ಪ್ರಶ್ನೆಯೇ ಇಲ್ಲ. ವರಂಗಲ್ ಜಿಲ್ಲೆ ಕ್ರಮಕ್ರಮವಾಗಿ ಹಸಿರ ಹೊದಿಕೆ ಎಳೆದುಕೊಳ್ಳುತ್ತಿತ್ತು. ಕರೀಂನಗರದಲ್ಲಿ ಬಿತ್ತಿದ ರೈಸ್‌ಮಿಲ್ಲಿನ ಬೀಜ, ಇಲ್ಲಿಯೂ ಚಿಗುರೊಡೆದಿತ್ತು. ಗಂಟೆಗೆರಡು, ನಾಲ್ಕು ಟನ್‌ಗಳ ಬತ್ತ ಅಕ್ಕಿಯಾಗುತ್ತಿತ್ತು... ಕುಸುಬಲಕ್ಕಿಯೂ. ಒಂದೆರಡು ವರ್ಷಗಳನಂತರ ತೌಡಿನೆಣ್ಣೆ, ಹೊಟ್ಟಿನ ಇಟಿಗೆ ಕಾರ್ಖಾನೆಗಳು ಎದ್ದು, ಸಹಕಾರಿ ಕನಸುಗಳನ್ನು ಬಂಡವಾಳಶಾಹಿಗಳು ಕೊಂಡುಕೊಳ್ಳಲಿದ್ದರು. ಜಪಾನೀ ತಂತ್ರಜ್ಞಾನದೊಂದಿಗೆ ವಿಶಾಖಪಟ್ಟಣದಲ್ಲಿ ತೌಡಿನಿಂದ ಅಡುಗೆ ಎಣ್ಣೆ ತೆಗೆವ ಕಾರ್ಖಾನೆಯೂ ಸ್ಥಾಪನೆಯಾಗಲಿತ್ತು. ಕರೀಂನಗರದ, ವರಂಗಲ್‌ನ ತೌಡು ಅಲ್ಲಿಗೆ ಹೋಗಬಹುದು - ಅಥವಾ ಕಾರ್ಖಾನೆಯೇ ಇಲ್ಲಿಗೆ ಬರಬಹುದು. ಒಂದಿಷ್ಟು ಹಣ ಜಪಾನಿಗೆ ಹರಿಯುವುದು, ಒಂದಿಷ್ಟು ಬಂಡವಾಳ ತೊಡಗಿಸಿದವರಿಗೆ. ಸಂಸ್ಥೆಗೆ ಮಾತ್ರ ವಿದೇಶದಿಂದ ವರ್ಷ ವರ್ಷ ಹಣ ಹರಿಯುವುದು. ಶ್ರೀರಾಮಸಾಗರದ ಕಾಲುವೆಗಳಲ್ಲಿ ಹರಿವ ಹಣ ಎತ್ತ ಸಾಗುವುದು? ಸ್ವಾವಲಂಬನೆಯ ಘೋಷಣೆ ಮಾತ್ರ ಕಿವಿಯ ಮೇಲೆ ರಾಚುವವು.

ಇತ್ತ ಪ್ರಜಾಸತ್ತೆಯ ರಕ್ಷಣೆಯ ಚಳುವಳಿ ಏನಾಯಿತು? ಸ್ಪಷ್ಟ ಉತ್ತರವಿಲ್ಲ. ಸರಕಾರದ ವಿರುದ್ಧ ಹಕ್ಕಿಗಾಗಿ ಹೋರಾಡಬೇಕಾದ ಸಹಕಾರಿಗಳನೇಕರು ಆಳುವ ಪಕ್ಷದ ಸದಸ್ಯರು. ಆಳುವವರ ಆಡಿಯಾಳುಗಳು. ಅಣ್ಣನ ಕೆಂಗಣ್ಣು ಬಿದ್ದರೆ? ಸೈದ್ಧಾಂತಿಕ ನೆಲೆಯಲ್ಲಿ ಅಣ್ಣನನ್ನೂ ಎದುರಿಸುವ ಎದೆಗಾರಿಕೆ ಕೆಲವರಿಗೆ. ಆದರೆ ಒಟ್ಟಾರೆ ಪರಿಣಾಮ?

ಮುಂದೆ ಯುವಕ ಆ ಸಂಸ್ಥೆಯಿಂದ ಹೊರಬೀಳಲಿದ್ದ. ಆ ನಂತರದ ಕೆಲವು ತಿಂಗಳುಗಳಲ್ಲಿ ಸಹಕಾರಿ ಚುನಾವಣೆಗಳು ಭಾರೀ ತಯಾರಿಯೊಂದಿಗೆ ನಡೆಯಲಿದ್ದುವು. ಪ್ರಜಾಸತ್ತೆಯ ಪುನರುತ್ಥಾನವಾಗಲಿತ್ತು. ಇಂಥ ಚುನಾವಣೆಯಲ್ಲಿ ಯುವಕನ ಸಂಸ್ಥೆಯವರೂ ಒಂದಿಷ್ಟು ರಾಜಕೀಯ ಮಾಡಲಿದ್ದರು. ಸಂಸ್ಥೆಯ ಸದಸ್ಯ ಸಂಘಗಳಲ್ಲಿ ಅತ್ಯಂತ ಪ್ರತಿಷ್ಠಿತವಾದ ಸಂಸ್ಥೆಯ ನಾಯಕರು ನಿಧನರಾದಾಗ, ಅಲ್ಲಿನ ಕಾರ್ಯದರ್ಶಿ (ಸಂಸ್ಥೆಯವರ ಅಭಿಪ್ರಾಯದಲ್ಲಿ ಸರಕಾರದ ಬಾಲಬಡುಕ) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿರುವ ಸುದ್ದಿ ಹಬ್ಬಲಿತ್ತು. ಅದೇ ಪ್ರತಿಷ್ಠಿತ, ಆದರೆ ದಿವಂಗತ ನಾಯಕರ ಮಗ ಆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದ.

ರಾಜಮಾರ್ಗಗಳಿಗೂ ಒಳಮಾರ್ಗಗಳಿಗೂ ವ್ಯತ್ಯಾಸವಿದೆಯಷ್ಟೆ. ರಾಜ್ಯಮಟ್ಟದಲ್ಲಿ ಪ್ರಜಾಸತ್ತೆಯ ಪ್ರಶ್ನೆ ಎದ್ದಾಗ ಅದು ರಾಜಮಾರ್ಗದ್ದಾಗುತ್ತದೆ. ಜನಬೆಂಬಲ ದೊರೆಯುತ್ತದೆ. ಆದರೆ ಒಳಮಾರ್ಗದ್ದು ಕಡಿದಾದ ಹಾದಿ. ಗುರಿ ತಲುಪಲು ಇನ್ನಷ್ಟು ಸಮಯ ಹಿಡಿಯುತ್ತದೆ. ರಾಜ್ಯಮಟ್ಟದಲ್ಲಿ ಪ್ರಜಾಸತ್ತೆಯ ಪುನರುತ್ಥಾನಕ್ಕೆ ಮೂರು ತಿಂಗಳು ಸಾಕಾಯ್ತು. ಸರಕಾರಿಗಳಿಗೆ ಎರಡು ವರ್ಷಗಳೇ ಬೇಕಾದುವು. ಒಳಮಾರ್ಗದಲ್ಲಿ ಅಲ್ಲಲ್ಲಿ ನಿಂತು ಒಪ್ಪಂದ ಮಾಡಿಕೊಳ್ಳುವುದು ಅನಿವಾರ್ಯ. ಇನ್ನು ವಂಶಪಾರಂಪರ್ಯದ ಕಥೆ ಬೇರೆ. ಇಲ್ಲಿ ಹುಟ್ಟಿಗೂ ಸಾಮರ್ಥ್ಯಕ್ಕೂ ಜಟಾಪಟಿ. ಯಾವುದು ಗೆಲ್ಲುವುದು? ಹುಟ್ಟಿನೊಂದಿಗೆ ಸಾಮರ್ಥ್ಯವೂ ಬರಬಾರದೇಕೆ? ಇದಕ್ಕೆಲ್ಲಾ ಕಾಲರಾಯನದೇ ಉತ್ತರ.ಸ್ವಯಂ ಸೇವಾ ಸಂಸ್ಥೆಗಳನ್ನು ಜನರು ಅನುಮಾನದಿಂದ ನೋಡುತ್ತಾರೆಂದು ಯುವಕ ಅರಿತಿದ್ದಾನೆ. ತನ್ನನ್ನು ಆ ಸಂಸ್ಥೆಯಲ್ಲಿ ತೊಡಗಿಸಿಕೊಂಡರೂ ಅನುಮಾನಗಳು ತೀರಿಲ್ಲ. ಯಾವ ಫೋರ್ಡನೋ ರಾಕೆಫಲ್ಲರನೋ ಭಾರತೀಯ ಸಮುದಾಯವನ್ನು ಉದ್ಧರಿಸಲು ಯತ್ನಿಸಬೇಕಾದರೂ ಏಕೆ? ವಿಕಸಿತ ದೇಶಗಳು ವಿಕಾಸಶೀಲ ದೇಶಗಳನ್ನು ತಮ್ಮೊಡನೆ ಕರೆದೊಯ್ಯದಿದ್ದರೆ ಅವೂ ಉದ್ಧಾರವಾಗುವುದಿಲ್ಲ. ಹೀಗಾಗಿ ಈ ಅನುದಾನಗಳು ಎಂದು ಗಾಲ್‌ಬ್ರೆತ್ ವಾದಿಸಿದ್ದಾರಂತೆ. ಯುವಕ ಗಾಲ್‌ಬ್ರತ್‌ರನ್ನು ಇನ್ನೂ ಓದಿಲ್ಲ. ಈ ಯಾವುದೂ ಸ್ಪಷ್ಟವಾಗಿ ಅರ್ಥವಾಗದಿದ್ದರೂ, ಎಲ್ಲವೂ ನಿರಂತರತೆಯ ಒಂದು ಭಾಗ ಎಂದು ಯುವಕ ಅರಿತಿದ್ದಾನೆ. ಇದ್ದಕ್ಕಿದ್ದಂತೆ ಯುವಕನಿಗೆ ಕನಸೊಡೆದ ಅನುಭವವಾಗುತ್ತದೆ. ‘ಬಂಡವಾಳಶಾಹಿ’ಗಳ ಬಾಲಬಡುಕರಾದ ತನ್ನ ಗೆಳೆಯರು ಸುಖವಾಗಿದ್ದಾರೆನ್ನಿಸುತ್ತದೆ. ಅವರಲ್ಲಿ ಹಣವಾದರೂ ಇದೆ! ದೂರದ ಬೆಟ್ಟ ನುಣ್ಣಗೆ.

ಇಂಥ ಮನಸ್ಥಿತಿಯಲ್ಲಿ, ರಾಜಕೀಯ ಬೀದಿಜಗಳ ನಡೆಯುತ್ತಿದ್ದಾಗ ಒಂದುದಿನ ಯುವಕ ತೋಳಿಲ್ಲದ ಟೀಷರ್ಟ್ ತೊಟ್ಟು ಆಫೀಸಿಗೆ ಹೋಗುತ್ತಾನೆ. ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗಿರುವ ಸಂಸ್ಥೆಯ ಉದ್ಯೋಗಿಯ ಈ ಬಟ್ಟೆ ತುಂಬಾ ಆಧುನಿಕವೆನಿಸಿ ಅವನ ಬಾಸ್ ರೇಗುತ್ತಾಳೆ. ಆಕೆಗೆ ಉಡುಪಿನ ಬಗ್ಗೆ ಸ್ವಲ್ಪ ಕಾಳಜಿ ಹೆಚ್ಚು. ಯುವಕ ತಣ್ಣಗೆ ಉತ್ತರಿಸುತ್ತಾನೆ: ‘ಹೆಂಗಸರಾದ ನೀವು ತೋಳಿಲ್ಲದ ರವಿಕೆ ತೊಡುವುದಾದಲ್ಲಿ ನಾನು ಯಾಕೆ ತೋಳಿಲ್ಲದ ಟೀಷರ್ಟ್ ತೊಡಬಾರದು? ಇಲ್ಲಿ ನಿಮ್ಮ ಫಮಿನಿಸ್ಟ್ ಸಮಾನತೆ ಕೆಲಸಮಾಡುವುದಿಲ್ಲವೇ?‘ ಈ ಘಟನೆ ನಡೆದ ಎರಡುವಾರಗಳೊಳಗಾಗಿ ಯುವಕ ರಾಜೀನಾಮೆ ಕೊಡುತ್ತಾನೆ. ಆ ನಂತರ ಅವನೆಂದೂ ತೋಳಿಲ್ಲದ ಟೀಷರ್ಟ್ ತೊಟ್ಟೇ ಇಲ್ಲ.

ಯುವಕ ಭ್ರಮನಿರಸನಗೊಂಡನೇ?

ಆ ಪರಿಸ್ಥಿತಿಯಲ್ಲಿ ಸಂಸ್ಥೆಯ ಲಗಾಮು ಅವನ ಕೈಯಲ್ಲಿದ್ದಿದ್ದರೆ ಅವನೇನು ಮಾಡುತ್ತಿದ್ದ? ಯಕ್ಷ ಪ್ರಶ್ನೆಗಳು. ಈ ಎಲ್ಲ ಸಂಗತಿಗಳು ನಡೆದು ನಾಲ್ಕು ವರ್ಷಗಳಾಗಲಿಕ್ಕೆ ಬಂತು. ಈಗಲೂ ಯುವಕ ಆ ದಿನಗಳನ್ನು ಭಾವುಕತೆಯಿಂದ ನೆನಪು ಮಾಡಿಕೊಳ್ಳುತ್ತಾನೆ. ಪ್ರೀತಿಯಿಂದ. ಹೆಮ್ಮೆಯಿಂದ.

ಜೀವನದ ಆ ಎರಡು ವರ್ಷಗಳು ಖಂಡಿತವಾಗಿಯೂ ನಷ್ಟವಾಗಿಲ್ಲ. ಇಂದಿಗೂ ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಅಧ್ಯಯನ, ಸಹಕಾರಗಳ ಗೀಳು ಹಚ್ಚಿಕೊಂಡಿರುವ ಯುವಕ ಭ್ರಮನಿರಸನಗೊಂಡಿರಲಾರ. ಆದರೆ ಆ ಪರಿಸ್ಥಿತಿಯ ಹೊರನಿಂತು ನಿರ್ಭಾವುಕನಾಗಿ ಆ ಸಂದರ್ಭ, ವಿದ್ಯಮಾನಗಳನ್ನು ವಿಶ್ಲೇಶಿಸುವ ಶಕ್ತಿ ಯುವಕನಿಗಿನ್ನೂ ಪ್ರಾಪ್ತವಾಗಿಲ್ಲ. ಆ ಸಂಸ್ಥೆಯೊಂದಿಗಿನ ಸಂಪರ್ಕವೂ ಕಡಿದಿಲ್ಲ. ಅಲ್ಲೂ ಏನೋ ಇದೆ..... ಅದು ಏನೆಂಬ ಕುತೂಹಲ. ಸಾಮಾಜಿಕ ಬದಲಾವಣೆ, ಸರ್ವಸಮಾನತೆಗಳು ಉಟೋಪಿಯನ್ ಕನಸುಗಳೆಂಬುದು ಅವನಿಗೆ ಗೊತ್ತು. ಆದರೆ ಅವನು ಇಂಥ ಕನಸು ಕಟ್ಟುವ ಕಾಲದಲ್ಲಿದ್ದಾನೆ. ಅಮೃತಾ ಪ್ರೀತಂ ಹೇಳಿದಂತೆ - ಅನ್ಯಾಯ ಉಗುರಿನಂತೆ ಬಳೆಯುತ್ತಿರುತ್ತದೆ. ಅದನ್ನು ಆಗಾಗ ಕತ್ತರಿಸಬೇಕು. ಆದರೆ ಅನ್ಯಾಯವೇ ಇಲ್ಲದಂತೆ ಮಾಡುವುದು ಶಕ್ಯವಿಲ್ಲ. ಯುವಕನ ಮೇಲೂ ಈ ಮಾತುಗಳ ಪ್ರಭಾವವಿದೆ. ಸಮಾಜದ ನವನಿರ್ಮಾಣದ ಕನಸುಗಳೂ ಇವೆ. ಆದರೆ ಕೇವಲ ಉಗುರು ಕತ್ತರಿಸುವಷ್ಟರ ಮಟ್ಟಿಗೆ ಮಾತ್ರ ಅದು ಸೀಮಿತ.

ಸಂಸ್ಥೆ? ಸಂಸ್ಥೆಗೇನಾಯಿತು? ರಾಮರಾಯರು ಹೋಗಿ ಚೆನ್ನಾರೆಡ್ಡಿ ಬಂದಾಯಿತು. ಆನಂತರ ಜನಾರ್ಧನರೆಡ್ಡಿ. ಮತ್ತೆ ಸಹಕಾರ ಸಂಘಗಳಿಗೆ ಒಂದು ವರ್ಷದ ಕಾಲದಿಂದ ಚುನಾವಣೆಯಿಲ್ಲ. ಹಾಗೂ ಇಬ್ಬರನ್ನೂ ಸಮಾನ ಶತ್ರುಗಳೆಂದು ಪರಿಗಣಿಸುವ ಸಂಸ್ಥೆ ಮತ್ತೆ ಹೋರಾಡುತ್ತಿದೆ. ಯುವಕನ ಜಾಗದಲ್ಲಿ ಮತ್ತೊಬ್ಬ ಯುವಕ ಇದ್ದಾನೆ. ಆತನೂ ಶ್ರೀರಾಮಸಾಗರದ ಕನಸು ಕಟ್ಟುತ್ತಿದ್ದಾನೆ. ಇದು ಬಹುಶಃ ಮರುಕಳಿಸುವ ವೃತ್ತಾಂತ.
ಎಲ್ಲ ಕಾಲದಲ್ಲೂ ಶೋಷಕರು ಶೋಷಿತರು, ಲಂಬುಗಳು ಕುಳ್ಳರು, ಬೆಳ್ಳರು ಕಪ್ಪರು, ಶ್ರೀಮಂತರು ಬಡವರು, ಬುದ್ಧಿವಂತರು ದಡ್ಡರು ಇರುತ್ತಾರೆಂಬ ಸತ್ಯವನ್ನು ಯುವಕ ಅರಿತಿದ್ದಾನೆ. ತನ್ನ ವೈಫಲ್ಯಗಳನ್ನು ಕಂಡುಕೊಳ್ಳುವ ಯತ್ನ, ತನ್ನ ಹಾದಿಯನ್ನು ಸ್ಪಷ್ಟಗೊಳಿಸಿಕೊಳ್ಳುವ ಪ್ರಯತ್ನವನ್ನು ಅವನು ಆಗಾಗ ಮಾಡುತ್ತಾನೆ.

ಹಾಗೂ:
ಈ ಯತ್ನದಲ್ಲಿ ಯಾವಾಗಲಾದರೂ ನಡಸುವ ಆತ್ಮಶೋಧದ ಫಲವಾಗಿಯೇ ಯುವಕ ಈ ಪ್ರಬಂಧ ಬರೆದಿದ್ದಾನೆ. ಅಷ್ಟೇ.

ಡಿಸೆಂಬರ್ ೧೯೮೮.
No comments:

Post a Comment