ಎಲ್ಲರ ನಂಬಿಕೆಗೆ ದ್ರೋಹ ಮಾಡಿರಬಹುದು ಆದರೆ ರಾಮಲಿಂಗ ರಾಜು ಕ್ರಿಮಿನಲ್ ಅಲ್ಲ ಎಂದು ತೆಲುಗು ಚಾನೆಲ್‌ಗಳು ನಡೆಸಿದ ಎಸ್.ಎಂ.ಎಸ್. ಪೋಲ್ ತಿಳಿಸಿದೆಯಂತೆ. ಇದೊಂದು ಆಸಕ್ತಿಯ ಸುದ್ದಿ! ಈ ರೀತಿಯ ಸಿಂಪತಿ ರಾಜುವಿಗೆ ಬರುವುದರಲ್ಲಿ ಅಷ್ಟು ಆಶ್ಚರ್ಯವಾಗಬಾರದೇನೋ. ಯಾಕೆಂದರೆ ಅವರು ಸತ್ಯಂ ವಧಾ ಮಾಡಿದ್ದಲ್ಲದೇ ಕನ್ನೇಶ್ವರ ಧರ್ಮಂ ಚರಾ ಮಾಡಿದ್ದಾರೆ! "ಇದರಿಂದ ನನಗೆ ಒಂದು ರೂಪಾಯಿಯ ಲಾಭವೂ ನನಗಾಗಿಲ್ಲ", ಎಂದ ಮೇಲೆ ಅವರು ಅಪರಾಧಿ ಹೇಗಾಗುತ್ತಾರೆ? ಆದರೆ ನಮ್ಮ ಪ್ರಶ್ನೆ "ನಿಮಗಂತೂ ಲಾಭವಾಗಿಲ್ಲ.. ಆದರೆ ಇದರಿಂದ ಯಾರಿಗೆ ಲಾಭವಾಯಿತು?" ಅನ್ನುವುದು.
ಈ ಸುದ್ದಿಯನ್ನು ಓದಿದ ಕೂಡಲೇ ಹಲವು ವರ್ಷಗಳ ಹಿಂದೆ ನಾನಿದ್ದ ಸಂಸ್ಥೆಗೆ ಹೊಸ ವಿದ್ಯಾರ್ಥಿಗಳನ್ನು ತೆಗೆದುಕೊಳ್ಳಲು ಸಂದರ್ಶನಗಳನ್ನು ನಡೆಸುತ್ತಿದ್ದಾಗ ನಡೆದ ಘಟನೆ ನನಗೆ ನೆನಪಾಗುತ್ತದೆ. ಮೂರು ಜನರ ಪ್ಯಾನಲ್ ಮುಂದೆ ಈ ಹುಡುಗ ಹಾಜರಾದ. ತಂದೆ ಐ.ಎ.ಎಸ್ ಅಧಿಕಾರಿ. ಮಾತನಾಡುತ್ತಿದ್ದಾಗ ಬುದ್ಧಿವಂತನಂತೆ ಕಾಣುತ್ತಿದ್ದ. ಅವನಿಗೆ ಹೆಚ್ಚಿನ ವಿಷಯಗಳ ಬಗ್ಗೆ ಅವಗಾಹನೆ ಇತ್ತು. ಆದರೆ ಅವನ ಸರ್ಟಿಫಿಕೇಟುಗಳನ್ನು ನೋಡಿದಾಗ ಅವನು ಎರಡು ಬಾರಿ ಫೇಲಾದದ್ದು ನಮಗೆ ಕಾಣಿಸುತ್ತಿತ್ತು. ಉತ್ತಮ ಸ್ಥರದಲ್ಲಿರುವ ತಂದೆ-ತಾಯಿ, ನೋಡಲು ಬುದ್ಧಿವಂತನಂತೆ ಕಾಣುವ ಹುಡುಗ, ಆದರೆ ವಿದ್ಯೆಗೆ ಬಂದಾಗ ಎರಡು ಬಾರಿ ಫೇಲು. ಇದರಲ್ಲಿ ತಂಗಪದಕಂ ಕಥೆ ನನಗೆ ಕಾಣಿಸಿತ್ತು. ಹೀಗಾಗಿ ಅವನ ಹಿನ್ನೆಲೆಯ ಬಗ್ಗೆ ಸಂದರ್ಶನದಲ್ಲಿ ಚರ್ಚಿಸಿದೆ. "ಸರ್ ನಾನು ನಮ್ಮಪ್ಪ ಅಮ್ಮನಿಗೆ ಕೆಟ್ಟ ಹೆಸರು ತಂದ ಮಗ, ನಾಟ್ ವರ್ಥಿ ಆಫ್ ಮೈ ಫಾದರ್" ಅಂದ. ಓದುತ್ತಾ ಓದುತ್ತಾ ನಾನು ’ದಾರಿ ತಪ್ಪಿದ ಮಗ’ನಾಗಿಬಿಟ್ಟೆ. ಅದರ ಅರಿವು ನನಗಿದೆ. ಹೀಗಾಗಿ ಈಗ ನಾನು ನನ್ನನ್ನು ತಿದ್ದಿಕೊಂಡು ಸರಿಯಾದ ದಾರಿಯಲ್ಲಿ ನಡೆಯಬೇಕೆಂದು ನಿರ್ಧರಿಸಿದ್ದೇನೆ" ಅಂದ. ನಾನು ಜೇಬಿನಿಂದ ಕರ್ಚೀಫು ತೆಗೆದು ನನ್ನ ಕಣ್ಣೊರೆಸಿಕೊಂಡೆ. ಆ ನಂತರ ಆ ಪ್ಯಾನೆಲ್ಲಿನಲ್ಲಿ ನಾನು ಕೇಳಿದ್ದು ಒಂದೇ ಪ್ರಶ್ನೆ "ನಿನ್ನ ಜೀವನದಲ್ಲಿ ನಿನಗೆ ಅತೀ ಮುಖ್ಯವಾದ ನೀತಿ ಯಾವುದು?" ಅಂದು ಮಾತ್ರ ಕೇಳಿದೆ. ಕ್ಷಣವೂ ಮಿಟುಕಾಡದೇ "ಪ್ರಾಮಾಣಿಕತೆ ಸರ್" ಅಂದ. ಅಲ್ಲಿಗೆ ನನ್ನ ಕಡೆಯಿಂದ ಅವನ ಸಂದರ್ಶನ ಮುಗಿದಿತ್ತು. ಮಿಕ್ಕವರು ಏನೇನೋ ಪ್ರಶ್ನೆ ಕೇಳಿದರು - ಅವನು ಅವನ ಸಾಮರ್ಥ್ಯಕ್ಕನುಸಾರವಾಗಿ ಜವಾಬು ಕೊಟ್ಟ. ಅವನು ಕೋಣೆಯಿಂದ ಹೊರಹೊರಟಾಗ ಅವನ ಬಗ್ಗೆ ಸ್ವಲ್ಪ ಹೊತ್ತು ಚರ್ಚೆ ನಡೆಯಿತಾದರೂ, ಅವನು ಬುದ್ಧಿವಂತ ಅನ್ನುವುದರಲ್ಲಿ ನಮಗ್ಯಾರಿಗೂ ಅನುಮಾನವಿರಲಿಲ್ಲ. ಸಂದರ್ಶನದಲ್ಲೂ ಚೆನ್ನಾಗಿಯೇ ಮಾಡಿದ್ದ. ಆದರೆ ಅವನ ಚರಿತ್ರೆಯನ್ನು ಅವನಿಗೆ ವಿರುದ್ಧವಾಗಿ ಹಿಡಿಯಬೇಕೋ, ಅಥವಾ ಅವನಿಗೆ ಮತ್ತೊಂದು ಅವಕಾಶಗಳನ್ನು ನಾವು ಕಲ್ಪಿಸಬೇಕೋ ಅನ್ನುವ ಚರ್ಚೆ ಬಿಸಿಯಾಗಿ ನಡೆಯಿತು. ಕಡೆಗೆ ಅವನಿಗೆ ನಮ್ಮ ಸಂಸ್ಥೆಯಲ್ಲಿ ಒಂದು ಸೀಟನ್ನು ಕೊಡಬೇಕು ಅನ್ನುವುದು ಎಲ್ಲರ ನಿರ್ಧಾರವಾಗಿತ್ತು.
ರಾಜುವಿನ ಕಥೆ ಇಂಥದ್ದೇ ಇರಬಹುದು. ಯಾರೂ ತಮ್ಮೆಡೆಗೆ ಕೈಯೆತ್ತಿ ಬೊಟ್ಟು ಮಾಡಿ ತೋರಿಸುವುದಕ್ಕೆ ಮೊದಲೇ ಕೈಎತ್ತಿದರೆ ಪ್ರಾಮಾಣಿಕತೆಯ ಒಂದು ಸಿಂಪಥಿ ಬಂದೇ ಬರುತ್ತದೆ. ಒಂದು ಥರದಲ್ಲಿ ಅಪರಾಧವನ್ನು ಒಪ್ಪಿಸಲು/ನಿರೂಪಿಸಲು ವ್ಯಯ ಮಾಡಬಹುದಾದ ಸಮಯ ಹಣ ಬುದ್ಧಿವಂತಿಕೆಯನ್ನು ರಾಜು ಬಚಾವು ಮಾಡಿದಹಾಗಾಯಿತು. ಇದೂ ಸಾಲದೆಂಬಂತೆ, ರಾಜುವಿನ ಜೀವನ ಐಷಾರಮದ್ದಲ್ಲ, ಆತ ಪುಸ್ತಕಗಳನ್ನು ಓದುತ್ತಿದ್ದ, ಹಂಚುತ್ತಿದ್ದ ಬುದ್ಧಿಜೀವಿ, ಮಿತಭಾಷಿ ಅನ್ನುವ ಎಲ್ಲ ವಿಷಯಗಳನ್ನೂ ಪರಿಗಣಿಸಿದರೆ ಆತನ ಬಗ್ಗೆ ಸುಲಭವಾಗಿ ಕರುಣೆ ಉಕ್ಕುತ್ತದೆ. "ನಾನು ಮಾಡಿದ್ದು ಪ್ರಾಮಾಣಿಕವಾದ ಕೆಲಸ, ಆದರೆ ನನ್ನ ಲೆಕ್ಕಾಚಾರ ತಪ್ಪಿ ನಾನು ಈ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದೇನೆ. ಲೆಕ್ಕಾಚಾರ ಸರಿಹೋಗಿದ್ದರೆ ಎಲ್ಲವೂ ಸರಿಯಾಗುತ್ತಿತ್ತು." ಎನ್ನುವುದು ರಾಜುವಿನ ವಾದ. ಬ್ಯಾಂಕಿನ ಮ್ಯಾನೇಜರು ಪ್ರತಿದಿನ ಬ್ಯಾಂಕಿನ ಹಣವನ್ನು ಕದ್ದು ಅದರಲ್ಲಿ ಸೈಡ್ ವ್ಯಾಪಾರ ಮಾಡಿ ಮುಂಜಾನೆ ಹಣವನ್ನು ವಾಪಸ್ಸಿಟ್ಟು, "ಹೀಗೆ ಆರ್ಜಿತವಾದ ಹಣದಲ್ಲಿ ಬಡವರಿಗೆ ವಿದ್ಯಾರ್ಜನೆಗೆ ಸಹಾಯ ಮಾಡುತ್ತಿದ್ದೆ" ಅಂದ ಕೂಡಲೇ ಅಪರಾಧದ ತೀವ್ರತೆ ಕಡಿಮೆಯಾಗುವುದೇ? "ಹೀಗೆ ಒಂದು ಸಂಜೆ ಹಣವನ್ನು ಒಯ್ಯುತ್ತಿದ್ದಾಗ ಅದು ಕಳುವಾಯಿತು, ನನ್ನ ಇರಾದೆಯಲ್ಲಿ ಯಾವುದೇ ತಪ್ಪಿರಲಿಲ್ಲ. ಈ ರೀತಿಯ ಚರ್ಯೆಯನ್ನು ನಾನು ಹಲವು ವರ್ಷಗಳಿಂದ ಮಾಡುತ್ತಿದ್ದೆ" ಅಂದಕೂಡಲೇ ಆತ ಅಪರಾಧಿಯಾಗದೆಯೇ ಉಳಿಯುತ್ತಾರೆಯೇ? ಒಂದು ಥರದಲ್ಲಿ ಕೊಳ್ಳೆ ಹೊಡೆವ ಡಕಾಯಿತನಿಗೂ, ನಗುನಗುತ್ತಾ ನಮ್ಮ ನಡುವೆಯಿರುವ "ಸಮಾಜದಲ್ಲಿ ಒಗ್ಗಿ ಒಂದಾಗಿರುವ" ಅಪರಾಧಿಗಳಿಗೂ ಇರುವ ವ್ಯತ್ಯಾಸ ಇದೇ ಇರಬಹುದು.
ನಮ್ಮ ಹುಡುಗನ ಕಥೆಗೆ ಮತ್ತೆ ಬರೋಣ. ಹುಡುಗ ಬಂದ. ಆದರೆ ಮೊದಲ ಟರ್ಮಿನಲ್ಲಿ ಪಾಠಮಾಡಿದಾಗ ನನಗೆ ಇದ್ದ ಮೂವತ್ತು ಕ್ಲಾಸುಗಳಲ್ಲಿ ಅವನು ಇಪ್ಪತ್ತರಲ್ಲಿ ಗೈರುಹಾಜರಾಗಿದ್ದ. ಆಗ ನಮಗಿದ್ದ ನಿಯಮದ ಪ್ರಕಾರ ಗೈರುಹಾಜರಾದ ಪ್ರತೀ ಕ್ಲಾಸಿಗೂ ಗ್ರೇಡಿನ ಒಂದು ಭಾಗವನ್ನು ಕತ್ತರಿಸಲಾಗುತ್ತಿತ್ತು. ಮೊದಲ ಟರ್ಮಿನ ಅಂತ್ಯದಲ್ಲಿ ಅವನಿಗೆ ನನ್ನ ವಿಷಯದಲ್ಲಿ ಡಿ ಬಂದಿತ್ತು. ಹೀಗಾಗಿ ಅವನು ತೊಂದರೆಯಲ್ಲಿದ್ದ. ಅದೇ ಕಥೆ ಇತರ ಕೆಲವು ವಿಷಯಗಳಲ್ಲೂ ಆಗಿತ್ತು. ನಿಯಮಾನುಸಾರ ಅವನನ್ನು ಸಂಸ್ಥೆಯನ್ನು ಬಿಟ್ಟುಹೋಗಲು ಹೇಳಬೇಕಿತ್ತು. ಖಾಸಗಿಯಾಗಿ ನಾನು ಅವನಲ್ಲಿಟ್ಟಿದ್ದ ನಂಬಿಕೆಗೆ ಘಾತಮಾಡಿದ್ದರಿಂದ ಅವನ ಬಗ್ಗೆ ನನಗೆ ಯಾವುದೇ ಕರುಣೆಯಿರಲಿಲ್ಲ. ಆ ಕ್ಷಣಕ್ಕೆ ಎಲ್ಲರೂ ಒಕ್ಕೊರಲಿನಲ್ಲಿ ಅವನನ್ನು ಆಚೆಗೆ ಕಳುಹಿಸಲು ತೀರ್ಮಾನ ಮಾಡಿದೆವು. ಅವನಿಗೆ ಪತ್ರವೂ ಹೋಯಿತು. ಆಗ ಆದದ್ದೇನು? ಹುಡುಗ ಹೋಗಿ ತನ್ನ ತಂದೆಯ ಕಾಲು ಹಿಡಿದ. ಅವನ ತಂದೆ ನಮ್ಮ ನಿರ್ದೇಶಕರ/ಚೇರ್ಮನ್ನರ ಕಾಲು ಹಿಡಿದರು. ಅವನಿಗೆ ಮತ್ತೊಂದು ಅವಕಾಶ ನೀಡಬೇಕೆಂಬ ತೀರ್ಮಾನವಾಯಿತು. ಹೀಗಾಗಿ ಅವನು ಮತ್ತೆ ಮೊದಲ ವರ್ಷಕ್ಕೆ ಬಂದು ಹೊಸದಾಗಿ ತನ್ನ ಜೀವನವನ್ನು ಪ್ರಾರಂಭಮಾಡಿದ. ಗಮ್ಮತ್ತಿನ ವಿಷಯವೆಂದರೆ ನಾನು ಕಲಿಸುತ್ತಿದ್ದ ಮ್ಯಾನೇಜ್‍ಮೆಂಟ್ ಎಕೌಂಟಿಂಗ್ ಎನ್ನುವ ವಿಷಯ ಬಿಕಾಂ ಮಾಡಿದ ವಿದ್ಯಾರ್ಥಿಗಳಿಗೂ ಜಟಿಲವಾದದ್ದು ಅನ್ನುವ ಪ್ರತೀತಿಯಿರುವಾಗ, ಅಂಥ ಯಾವುದೇ ಹಿನ್ನೆಲೆಯಿಲ್ಲದ ಈ ಹುಡುಗ ಗೈರುಹಾಜರಿಯ ದಂಡವಿಲ್ಲದಿದ್ದರೆ ಸುಲಭವಾಗಿ ಪಾಸಾಗುತ್ತಿದ್ದ.. ಅಂದರೆ ಅವನು ತರಗತಿಗೆ ಬಂದ ೧೦ ಕ್ಲಾಸುಗಳಲ್ಲಿ ಸಾಕಷ್ಟು ಕಲಿತಿದ್ದ ಅಂದ ಹಾಗಾಯಿತು.
ಹೀಗಾಗಿಯೇ ರಾಮಲಿಂಗ ರಾಜುವಿನ ಹಿಂದಿನ ಸಾಧನೆಗಳನ್ನು ಪರಿಗಣಿಸಿದಾಗ ಆಂಧ್ರಪ್ರದೇಶದ ಜನತೆ ಆತನ ಬಗ್ಗೆ ಉದಾರವಾದ ಮಾತುಗಳನ್ನಾಡುವುದರಲ್ಲಿ ನಮಗೆ ಹೆಚ್ಚಿನ ಆಶ್ಚರ್ಯವಾಗಬಾರದು. ಐಟಿಯಲ್ಲಿ ಕರ್ನಾಟಕಕ್ಕೂ ಆಂಧ್ರಪ್ರದೇಶಕ್ಕೂ ಮೊದಲಿನಿಂದಲೂ ಹಣಾಹಣಿಯ ಪೈಪೋಟಿ ಇದ್ದೇ ಇದೆ. ನಮಗೆ ನಾರಾಯಣ ಮೂರ್ತಿ/ ಪ್ರೇಂಜಿ ಇಬ್ಬರಿದ್ದರೆ, ಅವರಿಗೊಬ್ಬನೇ ರಾಜು. ಚಂದ್ರಬಾಬುವಿನ ಕಾಲದಲ್ಲಿ ಆಂಧ್ರದ ಸರಕಾರ ಆತನನ್ನು ತಮ್ಮ ದೊಡ್ಡ ಸಾಧಕನಂತೆ ಬಿಲ್ ಕ್ಲಿಂಟನ್ ಹಾಗೂ ಬಿಲ್ ಗೇಟ್ಸ್ ಮುಂದೆ ತೋರಿಸಿದ್ದು ಉಂಟು. ಹೀಗಾಗಿ ರಾಜುವಿನ ಹೆಸರು ಒಂದು ರೀತಿಯಲ್ಲಿ ಹೈದರಾಬಾದಿನ ಸಿಲಿಕಾನ್ ಕನಸುಗಳ ಭಾಗವಾಗಿ ಹಾಸುಹೊಕ್ಕಾಗಿದೆ. ಅದಕ್ಕೇ ಅವರ ಬೀಳನ್ನೂ ಬಹುಶಃ ಜನರು ಒಪ್ಪಲು ಸುಲಭವಾಗಿ ತಯಾರಾತುವುದಿಲ್ಲವೇನೋ. ರಾಜು ಬಿಟ್ಟರೆ ಮತ್ತೊಬ್ಬ ಐಟಿ ದೊರೆ ಆಂಧ್ರಕ್ಕೆಲ್ಲಿ? ಅದರಲ್ಲೂ ಸತ್ಯಂ ಸಂಸ್ಥೆಯನ್ನು ಇನ್ಫಿ ಟೇಕೋವರ್ ಮಾಡಬೇಕು ಅನ್ನುವು ಕೆಲವು ಸಲಹೆಗಳು ಬರುತ್ತಿರುವಾಗ ಇದು ಆಶ್ಚರ್ಯದ ವಿಷಯವೇನೂ ಅಲ್ಲ. ಇದರಲ್ಲಿ ರಾಜುವಿನ ಬುದ್ಧಿವಂತಿಕೆಯೆಂದರೆ ತಮ್ಮನ್ನು ಅಪರಾಧಿಯೆಂದು ಯಾರಾದರೂ ಘೋಷಿಸುವುದಕ್ಕೆ ಮೊದಲೇ ತಮ್ಮ ತಪ್ಪೊಪ್ಪಿಗೆ ನೀಡಿರುವುದು. ಇದನ್ನೇ ನಾವು ಎನ್ ಮೈನಸ್ ವನ್ ಘಳಿಗೆ ಎನ್ನಬಹುದು.
ಮತ್ತೆ ಈ ಹುಡುಗನ ವಿಷಯಕ್ಕೆ ಬರೋಣ. ಹುಡುಗನಿಗೆ ಮತ್ತೊಂದು ಅವಕಾಶ ಬಂತು. ಈ ಬಾರಿ ಅವನು ಮೊದಲ ಟರ್ಮಿನಲ್ಲಿ ಸರಿಯಾಗಿಯೇ ಮಾಡಿದ. ನಮ್ಮ ನಿಯಮಾನುಸಾರ ವಿದ್ಯಾರ್ಥಿಗಳು ದೂರದ ಹಳ್ಳಿಗಳಲ್ಲಿ ೧೦ ವಾರಕಾಲ ವಾಸ್ತವ್ಯ ಹೂಡಿ ಗ್ರಾಮೀಣ ಬದುಕನ್ನು ಹತ್ತಿರದಿಂದ ನೋಡಿ ದಾಖಲಾತಿ ಮಾಡಬೇಕಿತ್ತು. ಜೊತೆಗೆ ಕೆಲವು ಇತರ ಕೆಲಸಗಳನ್ನೂ ಮಾಡಬೇಕಿತ್ತು. ಆದರೆ ಅವನಿರಬೇಕಿದ್ದ ಬಿಹಾರದ ಹಳ್ಳಿಯಲ್ಲಿ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ನನ್ನ ಸಹೋದ್ಯೋಗಿಯೊಬ್ಬರು ಹೋದಾಗ ತಿಳಿದದ್ದೇನು? - "ಸರ್ ಅವರು ಇಲ್ಲೇ ಇದ್ದಾರೆ, ಆದರೆ ಆಗಾಗ ಹೊರಗೆ ಹೋಗುತ್ತಿರುತ್ತಾರೆ. ವಾರಾಂತ್ಯದಲ್ಲಿ ಪಟ್ನಾಗೆ ಹೋಗುತ್ತಾರೆ. ಈ ದಿನ ಸಿನೇಮಾ ನೋಡಲು ಹೋಗಿದ್ದಾರೆ." ಮತ್ತೆ ಆ ಹುಡುಗ ಸಿಕ್ಕಿಬಿದ್ದಿದ್ದ! ಮತ್ತೆ ಅವನ ನಡವಳಿಕೆ ಚರ್ಚೆಗೆ ಬಂತು. ಅವನನ್ನು ಮತ್ತೆ ಹೊರಹಾಕಬೇಕಿತ್ತು ಅಥವಾ ಇನ್ನೊಂದು ಅವಕಾಶ ನೀಡಬೇಕಿತ್ತು!! ಕಡೆಗೆ ನಾವು ನಿರ್ಧರಿಸಿದ್ದು ಹೀಗೆ: ಅವನು ತನ್ನ ವಿದ್ಯೆಯನ್ನು ಮುಂದುವರೆಸಬಹುದು, ಆದರೆ ಎರಡು ವರ್ಷಗಳ ನಂತರ ಅವನಿಗೆ ಡಿಗ್ರಿ ಕೊಡುವುದಕ್ಕೆ ಬದಲು, ಮತ್ತೆ ಅವನನ್ನು ಹಳ್ಳಿಗೆ ಕಳಿಸ ಬೇಕು, ಈ ಭಾಗವನ್ನು ಅವನು ಸರಿಯಾಗಿ ಮುಗಿಸಿದ ಮೇಲೆಯೇ ಅವನಿಗೆ ಡಿಗ್ರಿ ನೀಡಬೇಕು. ಹೀಗೆ ಎರಡು ವರ್ಷದ ಕಾರ್ಯಕ್ರಮದಲ್ಲಿ ಶಾಮೀಲಾದ ಅವನಿಗೆ ನಾಲ್ಕನೆಯ ವರ್ಷದ ಅಂತ್ಯದಲ್ಲಿ ಡಿಗ್ರಿ ಸಿಗುವುದಿತ್ತು....
ರಾಜುವಿನ ಬಗ್ಗೆ ಒಳ್ಳೆಯ ಮಾತುಗಳು ಎಲ್ಲಿಂದ ಬರುತ್ತಿವೆ, ಅವುಗಳ ಆಶಯವೇನು? "ಅಯ್ಯೋ ಪಾಪ, ಪ್ರಾಮಾಣಿಕವಾಗಿ ತನ್ನ ತಪ್ಪೊಪ್ಪಿಕೊಂಡ ರಾಜುವನ್ನು ಕ್ರಿಮಿನಲ್ ಎಂದು ಕರೆಯುವುದು ಸಮಂಜಸವಲ್ಲ.. ಆತ ಸತ್ಯಂ ಸಂಸ್ಥೆಯನ್ನು ತನ್ನ ಮಗುವಿನಂತೆ ಬೆಳೆಸಿದ್ದಾರೆ, ಸಾಲದ್ದಕ್ಕೆ ತನ್ನ ಸಂಸ್ಥೆ ಬೈರ್ರಾಜು ಫೌಂಡೇಷನ್ ಮೂಲಕ ೧೦೮ ಆಂಬ್ಯುಲೆನ್ಸ್ ಸೇವೆಯನ್ನು ಪ್ರಾರಂಭಿಸಿದ್ದಾರೆ. ತಪ್ಪು ಮಾಡಿರುವುದಾಗಿ ಸರಿಯಾದ ಸಮಯದಲ್ಲಿ ಒಪ್ಪಿದ್ದಾರೆ. ಈ ಥರದ ವ್ಯಕ್ತಿ ಕ್ರಿಮಿನಲ್ ಹೇಗಾಗಬಹುದು? ಈತನನ್ನು ಅನುಕಂಪದಿಂದ ನೋಡಬೇಕು....
ಹೌದು ನಿಜ.. ಆ ಹುಡುಗನ ಕಥೆಯೇನಾಯಿತು? ಮೂರನೆಯ ವರ್ಷದ ಅಂತ್ಯಕ್ಕೆ ಅವನ ಒಟ್ಟರೆ ನಡವಳಿಕೆ ಸರಿಯಾಗಿಯೇ ಇತ್ತು. ಘಟಿಕೋತ್ಸವದ ಮುನ್ನ ನನ್ನ ಸಹೋದ್ಯೋಗಿಯೊಬ್ಬರು ಅವನನ್ನು ಮತ್ತೆ ಹಳ್ಳಿಗೆ ಕಳಿಸುವದು ಅವಶ್ಯಕವಾದರೂ ಡಿಗ್ರಿ ತಡೆಹಿಡಿಯುವುದು ಸಮಂಜಸವೇ ಅನ್ನುವ ಪ್ರಶ್ನೆ ಚರ್ಚಿತವಾಯಿತು. ಯಾಕೆ? ಮೂಲತಃ ಹುಡುಗ ಒಳ್ಳೆಯವನು ಮಧ್ಯೆ ದಾರಿ ತಪ್ಪಿದ್ದ. ಈಗ ಅವನಿಗೆ ಒಬ್ಬಳು ಗರ್ಲ್ ಫ್ರೆಂಡ್ ಇದ್ದಾಳೆ ಅವಳು ಅವನನ್ನು ಹದ್ದುಬಸ್ತಿಗೆ ತಂದಿದ್ದಾಳೆ, ಅವನಿಗೆ ಮತ್ತೊಂದು ಅವಕಾಶ ನೀಡಬೇಕು - ಹುಡುಗನ ಭವಿಷ್ಯ ಹಾಳಾಗುವುದಕ್ಕೆ ನಾವು ಕಾರಣವಾಗಬಾರದು ಎನ್ನುವುದು ನನ್ನ ಸಹೋದ್ಯೋಗಿಯ ವಿಚಾರವಾಗಿತ್ತು. ಅಷ್ಟು ಹೊತ್ತಿಗೆ ಆ ಹುಡುಗನ ಬಗ್ಗೆ ನನಗೇನೊ ಅನುಕಂಪವಿರಲಿಲ್ಲ. ನಾನು ನನ್ನ ವಿಚಾರವನ್ನು ಮಂಡಿಸಿದೆ. ಅವನ ಸಂದರ್ಶನದ ದಿನ ನಾನು ಅವನನ್ನು ನಂಬಿ ಮೋಸ ಹೋದ ವಿಚಾರವನ್ನು ತಿಳಿಸಿದೆ. ಆದರೆ ನನ್ನ ವಿರೋಧ ವಿರೋಧವಾಗಿಯೇ ಉಳಿಯಿತು. ಅವನು ಘಟಿಕೋತ್ಸವದಲ್ಲಿ ಡಿಗ್ರಿ ಪಡೆದ. ಅವನ ಗೆಳತಿ ಅನ್ನಿಸಿಕೊಂಡ ಹುಡುಗಿಯನ್ನು ಮದುವೆಯಾದ. ಆ ಘಟಿಕೋತ್ಸವದ ನಂತರ ಅವನು ನಾವು ಕಂಡಿದ್ದ ಆ ಹುಡುಗನೇ ಎನ್ನುವ ಪ್ರಶ್ನೆ ಕೇಳುವ ಹಾಗೆ ಸಭ್ಯಸ್ಥನಾಗಿ ವರ್ತಿಸುತ್ತಿದ್ದಾನೆ. ಮೊದಲಿಗೆ ಅವನನ್ನು ನಮ್ಮ ಸಂಸ್ಥೆಯ ಒಳಗೆ ಕರೆತರುವುದರಲ್ಲಿ ನಾನು ತಪ್ಪು ಮಾಡಿದ್ದೆ. ಕಡೆಗೆ ಅವನ ಡಿಗ್ರಿಯನ್ನು ತಡೆಹಿಡಿಯಬೇಕೆಂದು ವಾದಿಸಿ ಮತ್ತೆ ತಪ್ಪು ಮಾಡಿದ್ದೆ.
ಹೀಗಾಗಿ ’ಪ್ರಾಮಾಣಿಕ’ ಕ್ರಿಮಿನಲ್‍ಗಳಿಗೆ ಎಷ್ಟು ಅವಕಾಶ ಕೊಡಬೇಕು, ಯಾವಾಗ ಕ್ಷಮಿಸಬೇಕು, ಎಷ್ಟು ಭೂತಕಾಲವನ್ನು ಪರಿಗಣಿಸಬೇಕು, ಎಷ್ಟು ಭವಿಷ್ಯದ ಬಗ್ಗೆ ನಾವು ಕಣ್ಣಿಡಬೇಕು ಎಂದು ತಿಳಿಯದೇ ಕಕ್ಕಾಬಿಕ್ಕಿಯಾಗಿದ್ದೇನೆ. ರಾಜುವಿನವಿಷಯದಲ್ಲಿ ಆತನ ಪರವಾಗಿ ಆಂಧ್ರ [ಎಸ್.ಎಂ.ಎಸ್ ಕಳಿಸಿದ] ೯೦ ಪ್ರತಿಶತ ಜನತೆ ಓಟು ಮಾಡಿರುವುದರಲ್ಲೂ ಅರ್ಥವನ್ನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿರುವೆ!! ಆದರೆ ರಾಜು ತಮ್ಮ ತಪ್ಪೊಪ್ಪಿಗೆಯನ್ನು ಒಂದು ವಾರ ಮುಂದಕ್ಕೆ ಹಾಕಿದ್ದರೆ... ಅವರನ್ನು ಪೋಲೀಸರು ಮೊದಲಿಗೆ ಹಿಡಿದಿದ್ದರೆ... ಜನತೆಯ ಅಭಿಪ್ರಾಯ ಏನಾಗುತ್ತಿತ್ತು? ಈ ಎನ್ ಮೈನಸ್ ವನ್ ಕ್ಷಣದಿಂದ ರಾಮಲಿಂಗ ರಾಜುವಿಗೆ ಆಗಿರುವ ಫಾಯಿದೆ ಎಷ್ಟು? ಗೊತ್ತಿಲ್ಲ.....
No comments:
Post a Comment