Friday, November 23, 2012

ಸತ್ಯಂ ತಲ್ಲಣಗಳು


"ನೀವೆಲ್ಲರೂ ನಂಬಿರುವಂತೆ - ಹಾಗೂ ಕಂಪನಿಯ ಲೆಕ್ಕಪತ್ರದನುಸಾರವಾಗಿ ಇರಬೇಕಿದ್ದ ಏಳುಸಾವಿರ ಕೋಟಿ ರೂಪಾಯಿಗಳು ಇಲ್ಲ. ಆದರೆ ಇದರಿಂದ ನನಗೆ ಒಂದು ರೂಪಾಯಿಯ ಲಾಭವೂ ಆಗಿಲ್ಲ. ತಪ್ಪಾಯಿತು ಕ್ಷಮಿಸಿ". ಐದು ಪುಟಗಳ ದೊಡ್ಡ ಪತ್ರಬರೆದ ರಾಮಲಿಂಗ ರಾಜು ಹೇಳಿದ್ದರ ಮಜಕೂರು ಇಷ್ಟೇ. ಮಿಕ್ಕ ನಾಲ್ಕಾರು ಪುಟಗಳು ಏನೊಂದನ್ನೂ ವಿವರಿಸಲಾಗದ ಅನವಶ್ಯಕ ವಿವರಗಳು. ಹೀಗೆ ಹಣ ಮಾಯವಾಗುವುದರ ಸುಳಿವು ಯಾರಿಗೂ ಉಂಟಾಗಲಿಲ್ಲ. ಹಿಂದೆ ನಡೆದ ಅನೇಕ ಇಂತಹ ಭ್ರಷ್ಟ ನಡಾವಳಿಯಲ್ಲಿ ಈ ಇಂಥ ಪತನಕ್ಕೆ ಮುನ್ನ ಯಾವುದಾದರೂ ಸುದ್ದಿಯಿದ್ದೇ ಇರುತ್ತಿತ್ತು. ಅದು ಹರ್ಷದ್ ಮೆಹತಾ ಬಿಗ್ ಬುಲ್ ಆಗಿ ಉತ್ತುಂಗಕ್ಕೇರುತ್ತಿದ್ದ ಕಥೆಯೇ ಇರಬಹುದು, ಕೇತನ್ ಪಾರೀಕನ ಕಥೆಯೇ ಇರಬಹುದು, ಅಥವಾ ವಿಪರೀತವಾಗಿ ಬಿಸಿಯೇರಿದ್ದ ಆರ್ಥಿಕ ಸಂಸ್ಥೆಗಳ ಆಕರ್ಷಣೆಯ ಸಿ ಆರ್‍ ಬಿ ಸಂಸ್ಥೆಯಿಂದ ಪ್ರಾರಂಭವಾದ ಎನ್.ಬಿ.ಎಫ್.ಸಿ ಹಗರಣವೇ ಆಗಿರಬಹುದು.. ಇಲ್ಲವೇ ಡಾಟ್.ಕಾಂ ಕಂಪನಿಗಳು ಒಂದರ ನಂತರ ಒಂದು ಪತನಗೊಂಡ ಪರಿಯೇ ಇರಬಹುದು. ಎನ್ರಾನ್ ಸಂಸ್ಥೆ ಬಿದ್ದಾಗಲೂ ಆ ಸಂಸ್ಥೆಯ ಬಗ್ಗೆ ಮುಂಚೆಯೇ ಪ್ರಶ್ನೆಗಳನ್ನು ಕೇಳಿದವರೂ ಆ ಬಗ್ಗೆ ವಾದವಿವಾದಗಳೂ ಇದ್ದದ್ದು ಸಹಜವೇ. ಹಾಗೆ ನೋಡಿದರೆ ಪ್ರಶ್ನೆಗಳನ್ನೆದುರಿಸುತ್ತಲೇ ಬದುಕಿ ಬೆಳೆದಿರುವ ಭಾರತೀಯ ಸಂಸ್ಥೆಗಳಲ್ಲಿ ರಿಲಯನ್ಸ್ ಮತ್ತು ಐಸಿಐಸಿಐ ಬ್ಯಾಂಕಿನ ಹೆಸರುಗಳು ಪ್ರಮುಖವಾಗಿ ಕಾಣುತ್ತವೆ. ರಿಲಯನ್ಸ್ ಸಂಸ್ಥೆಯ ಬೆಳವಣಿಗೆಯ ಸಮಯದಲ್ಲಿ ಅರುಣ್ ಶೌರಿ ನೇತೃತ್ವದ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಅವರ ವಿರುದ್ಧ ಸಮರ ಸಾರಿದ್ದರೂ ಧೀರೂಭಾಯಿ ಅದನ್ನೆಲ್ಲ ಸಹಿಸಿ ನಗುತ್ತಲೇ ತಮಗೆ ತಿಳಿದ ಮಾರ್ಗದಲ್ಲಿ ಆ ಸಂಸ್ಥೆಯನ್ನು ಬೆಳೆಸಿದರು. ಐಸಿಐಸಿಐ ಬ್ಯಾಂಕಿನ ಬಗ್ಗೆ ಅನೇಕ ಅನುಮಾನದ ಗೊಣಗಾಟಿಕೆ ಮತ್ತು ಹೂಡಿಕೆದಾರರು ಒಂದೇಕಾಲಕ್ಕೆ ಹಣ ತೆಗೆದುಕೊಳ್ಳುವಂತಹ [ರನ್] ಘಟನೆಗಳು ಎರಡು ಬಾರಿ ಆದುವಾದರೂ, ರಿಜರ್ವ್ ಬ್ಯಾಂಕಿನ ಕೃಪಾಕಟಾಕ್ಷದಿಂದಾಗಿ ಆ ಬ್ಯಾಂಕು ಉಳಿದುಕೊಂಡಿತು. ಈ ಹಿನ್ನೆಲೆಯಲ್ಲಿ ಸತ್ಯಂ ಸಂಸ್ಥೆಯ ಪತನ ನಿಜಕ್ಕೂ ಅನಿರೀಕ್ಷಿತ, ಅನಪೇಕ್ಷಿತ, ಆದರೆ ಬಹುಶಃ ಅನಿವಾರ್ಯ ಘಟನೆಯಾಗಿದೆ!

ಸತ್ಯಂ ಸಂಸ್ಥೆಯ ಒಗಟನ್ನು ಬಿಡಿಸಲು ಹಲವು ದಿನಗಳೇ ಹಿಡಿಯಬಹುದು. ಅದರ ಮುನ್ಸೂಚನೆಗಳನ್ನು ಕಂಡುಕೊಳ್ಳುವುದು ಕಷ್ಟದ ವಿಷಯವೇ ಆಗಿತ್ತು. ರಾಮಲಿಂಗ ರಾಜು ಅವರ ಖಾಸಗೀ ವ್ಯಕ್ತಿತ್ವದ ಬಗ್ಗೆ ಈ ವರೆಗೂ ಯಾವ ಪ್ರಶ್ನೆಗಳೂ ಎದ್ದಿರಲಿಲ್ಲ. ಆತ ಹೆಚ್ಚು ಮಾತನಾಡಿದವರಲ್ಲ. ಪತ್ರಿಕೆಗಳಲ್ಲಿ ವಿಪರೀತವಾಗಿ ಕಾಣಿಸಿಕೊಂಡವರಲ್ಲ. ವಿಜಯ ಮಲ್ಯಾರ ಹಾಗೆ ಐಷಾರಾಮಕ್ಕೆ ಹೆಸರಾದವರೂ ಅಲ್ಲ. ಬದಲಿಗೆ ಹೈದರಾಬಾದಿನ ವಾಲ್ಡೆನ್ ಪುಸ್ತಕದಂಗಡಿಯಲ್ಲಿ ಆಗಾಗ ಬಂದು ಒಂದು ರಾಶಿ ಪುಸ್ತಕಗಳನ್ನು ಕೊಂಡು ಅದನ್ನು ತಾವು ಓದುವುದಲ್ಲದೇ ತಮ್ಮ ಉದ್ಯೋಗಿಗಳಿಗೂ ಹಂಚಿ ಓದಿಸುತ್ತಿದ್ದ ವ್ಯಕ್ತಿ. ಡಾಟ್ ಕಾಮ್ ಉತ್ತುಂಗದಲ್ಲಿ ೨೫ ಲಕ್ಷಗಳ ವ್ಯಾಪಾರವಿದ್ದ ಇಂಡಿಯಾ ವರ್ಲ್ಡ್ ಡಾಟ್ ಕಾಂ ಸಂಸ್ಥೆಯನ್ನು ೫೦೦ ಕೋಟಿಗಳಿಗೆ ಕೊಂಡಾಗ ಅನೇಕರು ಹುಬ್ಬೇರಿಸಿದ್ದರಾದರೂ, ಆಗಿನ ಕಾಲದಲ್ಲಿ ಅದನ್ನು ವಿಚಿತ್ರ ಎಂದು ಪರಿಗಣಿಸುವವರು ಹೆಚ್ಚಿರಲಿಲ್ಲ. ಅದರ ವಿಪರೀತ ಪರಿಣಾಮ ಸತ್ಯಂ ಸಂಸ್ಥೆಯ ಮೇಲೆ ಆದಂತಿರಲಿಲ್ಲ. ಸಾಫ್ಟ್ ವೇರಿನ ಸುಲ್ತಾನರಾದ ಇನ್ಫಿ, ವಿಪ್ರೋ, ಟಿಸಿಎಸ್‍ಗೂ ಸತ್ಯಂಗೂ ಇದ್ದ ಒಂದು ಭಿನ್ನತೆಯೆಂದರೆ ಸತ್ಯಂ ಸಂಸ್ಥೆ ಸಿಫಿಯ ಮೂಲಕ ಇಂಟರ್‌ನೆಟ್ ಸೇವೆಯ ಮಾರ್ಗವನ್ನು ಕ್ರಮಿಸಿತು. ಟಾಟಾ ಸಂಸ್ಥೆಯವರು ವಿ.ಎಸ್.ಎನ್.ಎಲ್ ಕೂಳ್ಳುವುದರ ಮೂಲಕ ಆ ರಂಗವನ್ನು ಪ್ರವೇಶಿಸಿದರೂ ಅದನ್ನು ಟಿ.ಸಿ.ಎಸ್.ನಿಂದ ಭಿನ್ನವಾಗಿರಿಸಿದ್ದರು. ಜೊತೆಗಿ ವಿ.ಎಸ್.ಎನ್.ಎಲ್ ಬರೇ ಇಂಟರ್‌ನೆಟ್ ಸೇವೆಗೆ ಮೀಸಲಾಗಿಯೂ ಇರಲಿಲ್ಲ.

ಸತ್ಯಂ ಸಂಸ್ಥೆಗೆ ಅನೇಕ ಪುರಸ್ಕಾರಗಳೂ ಬಂದಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಸಂಸ್ಥೆಯಲ್ಲಿನ ಉತ್ತಮ ನಡವಳಿಕೆಗಾಗಿ "ಕಾರ್ಪೊರೇಟ್ ಗವರ್ನೆನ್ಸ್"ಗೇ ಮೀಸಲಾದ ಗೋಲ್ಡನ್ ಪೀಕಾಕ್ ಪುರಸ್ಕಾರವನ್ನು ಎರಡು ಬಾರಿ ಆ ಸಂಸ್ಥೆ ಪಡೆದಿತ್ತು. ರಾಜು ಆ ವಿಷಯದ ಬಗ್ಗೆ ಉತ್ಸಾಹದಿಂದ ಮಾತನಾಡುತ್ತಿದ್ದರು. ಹೀಗಾಗಿ ಆ ಸಂಸ್ಥೆಯಬಗ್ಗೆ ಅನುಮಾನ ಇರುವುದಕ್ಕೆ ಕಾರಣಗಳೇ ಇರಲಿಲ್ಲ. ಸತ್ಯಂ ಸಂಸ್ಥೆಯ ಸಂಬಳಗಳು ಐಟಿ ಸಂಬಳಗಳ ಸ್ಥರದಲ್ಲೇ ಇದ್ದುವಂತೆ. ಅವರ ಆಸ್ತಿ, ಬಿಲ್ಡಿಂಗು, ಮಿಕ್ಕ ಖರ್ಚುಗಳೂ ಇತರ ಸಂಸ್ಥೆಗಳಿಗಿಂತ ಭಿನ್ನವಾಗಿದ್ದುವು ಎಂದು ಹೇಳಲು ಕಷ್ಟವೇ. ಆಮದನಿಯೂ ಅದೇ ಮಟ್ಟದಲ್ಲಿ ಇದ್ದಿರಬೇಕು. ಸತ್ಯಂ ಸಂಸ್ಥೆಯ ಸೇವೆಯನ್ನು ಪಡೆಯುತ್ತಿದ್ದವರಲ್ಲಿ ದೊಡ್ಡ ಸಂಸ್ಥೆಗಳ ಹೆಸರುಗಳಿಗೆ ಬರವೇನೂ ಇರಲಿಲ್ಲ. ಹೀಗಾಗಿ ಎಲ್ಲ ಸಂಸ್ಥೆಗಳ ಸ್ಥರದಲ್ಲೇ ಲಾಭವನ್ನೂ ಸಹಜವಾಗಿ ಸತ್ಯಂ ಪಡೆಯಬೇಕಿತ್ತು. ಆದರೆ ಆ ಲಾಭಗಳು ಕಳೆದ ಹಲವು ವರ್ಷಗಳಿಂದ ಆರ್ಜಿತವಾಗುತ್ತಿರಲಿಲ್ಲ ಎಂದು ರಾಜು ಹೇಳಿದ್ದಾರೆ. ಇದನ್ನು ಹೇಗೆ ನಂಬುವುದು? ಜೊತೆಗೆ ಈ ಸ್ಥರದಲ್ಲಿ ಲಾಭ ಬರುತ್ತಿರಲಿಲ್ಲವೆಂದರೆ ಯಾರಿಗೂ ತಿಳಿಯದಿರುತ್ತದೆಯೇ? ಅರ್ಥಾತ್ ಲಾಭ ಬಂದಿರಬೇಕು. ಹಣ ಇದ್ದಿರಬೇಕು. ಅದು ಎಲ್ಲೋ ಹೊರಕ್ಕೆ ಹರಿದಿರಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹೀಗೆ ಉತ್ತುಂಗದಲ್ಲಿರುವ, ಎಲ್ಲರ ನಂಬಿಕೆ-ಗೌರವಗಳನ್ನು ಸಂಪಾದಿಸಿರುವ ಒಬ್ಬ ವ್ಯಕ್ತಿ ಇಂಥ ಪತನದ ದಾರಿ ಹಿಡಿಯಲು ಏನು ಕಾರಣಗಳಿರಬಹುದು? ಪ್ರತಿದಿನದ ಊಟ, ಬಟ್ಟೆ, ಓಡಾಡಲು ಕಾರು, ಇರಲು ಒಂದು ಮನೆ, ಒಂದು ತಲೆಮಾರಿನ ಖರ್ಚಿಗಾಗುವಷ್ಟು ಹಣ, ಅಥವಾ ಎರಡು ತಲೆಮಾರುಗಳಿಗೆ.. ಅಥವಾ... ಒಬ್ಬ ವ್ಯಕ್ತಿಯ ಆರ್ಜನೆಯ ಮಿತಿಯೆಲ್ಲಿ? ಹಾಗೆ ನೋಡಿದರೆ ಇದು ಧನಾರ್ಜನೆಯ ಆಟವಲ್ಲವೇ ಅಲ್ಲವೇನೋ, ಬದಲಿಗೆ ಯಾವುದೋ ಸಾಧನೆಯ ಬೆನ್ನು ಹತ್ತಿ ನಡೆವ ನಶೆಯಿರಬಹುದು. ಸಚಿನ್ ಟಿಂಡೂಲ್ಕರನಿಗೆ ರನ್‌ಗಳನ್ನು ಸಂಪಾದಿಸುತ್ತಲೇ ಜಗತ್ತಿನ ಎಲ್ಲ ರಿಕಾರ್ಡುಗಳನ್ನೂ ಮುರಿಯುವ ಬಯಕೆಯಿದ್ದಂತೆ, ಜಗತ್ತಿನಲ್ಲಿ ಅತಿವೇಗವಾಗಿ ಓಡಿ ರಿಕಾರ್ಡು ಸ್ಥಾಪಿಸಿದ ಉಸೇನ್ ಬೋಲ್ಟಿಗೆ ತನ್ನ ರಿಕಾರ್ಡನ್ನೇ ಮುರಿಯುವ ಬಯಕೆಯಿದ್ದಂತೆ, ಅಥವಾ ಸತತವಾಗಿ ಒಂದು ವಾರ ಸೈಕಲ್ ಚಲಾಯಿಸಿ ಲಿಮ್ಕಾ/ಗಿನ್ನೆಸ್ ಪುಸ್ತಕಗಳಲ್ಲಿ ಅಮರರಾಗುವ ಬಯಕೆಯಿದ್ದಂತೆ, ಉತ್ತಮ ಧಂಧೆ ಮಾಡುವ, ಭಾರತೀಯ ಶ್ರೀಮಂತರ ಯಾದಿಯಲ್ಲಿ ಸ್ಥಾನ ಪಡೆಯಬೇಕೆಂಬುದೂ ಒಂದು ನಶೆಯಿರಬಹುದು. ಹೀಗಾಗಿ ನಮಗೆ ನಾವೇ ಇಟ್ಟುಕೊಂಡ ಗುರಿಯನ್ನು ಯಾವುದೇ ಪರಿಸ್ಥಿತಿಯಲ್ಲಿ ನಾವು ಸಾಧಿಸಲೇ ಬೇಕೆಂದು ಹೊರಟ ಅತೃಪ್ತ ಆತ್ಮಗಳ ಪತನ ಈ ನಶೆಯಿಂದಾಗಿಯೇ ಆಗುವುದೋ ಏನೋ.

ಕಿಂಗ್ಶುಕ್ ನಾಗ್ ಪ್ರಕಾರ ರಾಜುಗೆ ಇದ್ದ ಪ್ರೀತಿ ಮಣ್ಣಿನದ್ದು. ಹೀಗಾಗಿಯೇ ಅವರು ಮೇಡ್ಚಲ್ ಸುತ್ತಮುತ್ತ ಭೂಮಿಯನ್ನು ಕೊಳ್ಳುತ್ತಲೇ, ತಮ್ಮ ನೆಲದ ಮೇಲಿನ ಪ್ರೀತಿಯನ್ನು ತೋರಿಸುತ್ತಲೇ ಹೋದರಂತೆ. ರಾಜು ಐಟಿಗೆ ಬರುವುದಕ್ಕೆ ಮುನ್ನ ರಿಯಲ್ ಎಸ್ಟೇಟಿನ ಧಂಧೆಯಲ್ಲಿದ್ದರು. ಈಚೆಗೆ ಆ ಬಗೆಗಿನ ಪ್ರೀತಿಯನ್ನು ಮೈಟಾಸ್ ಸಂಸ್ಥೆಗಳ ಮೂಲಕ ತೋರಿಸಿದ್ದರು. ಇದ್ದಕ್ಕಿದ್ದ ಹಾಗೆ ಜಮೀನಿನ ಬೆಲೆಗಳು ಬೀಳಲು ಪ್ರಾರಂಭವಾಗಿ ತಮ್ಮ ಸುತ್ತಲಿನ ನೆಲ ಕುಸಿಯತೊಡಗಿದಾಗ ಕನಸುಗಳು ಛಿದ್ರವಾಗಿ ಸತ್ಯದ ಧಕ್ಕೆ ಸತ್ಯಂ-ರಾಜುವಿಗೆ ಆಯಿತೇ? ಈಗ ಮುಂದೇನು? ಅವರ ಸುತ್ತಮುತ್ತಲಿದ್ದವರ ಗತಿಯೇನು? ಅವರಿಗಾಗಿ ಡೆಡ್‍ಲೈನುಗಳೆಂದು ಹಗಲು-ರಾತ್ರೆ ಕೆಲಸ ಮಾಡಿದವರ ಕನಸುಗಳ ಗತಿಯೇನು? ಬರೇ "ನನ್ನನ್ನು ಕ್ಷಮಿಸಿ, ನಾನು ರಾಜೀನಾಮೆ ಕೊಡುತ್ತಿದ್ದೇನೆ, ದೇಶದ ಕಾನೂನಿಗೆ ನನ್ನನ್ನು ಒಪ್ಪಿಸಿಕೊಳ್ಳುತ್ತಿದ್ದೇನೆ" ಅಂದರೆ ಸಾಕೇ? ಅಲ್ಲಿಗೆ ರಾಜುವಿನ ಜವಾಬ್ದಾರಿ ಮುಗಿಯಿತೇ? ಹೈದರಾಬಾದಿನಲ್ಲೇ ಅಡಗಿ ಯಾರಿಗೂ ತಮ್ಮ ಮುಖ ತೋರಿಸಲಾಗದ ಪರಿಸ್ಥಿತಿಯಲ್ಲಿರುವ ರಾಜುವಿನ ಮನಸ್ಸಿನಲ್ಲಿ ತಮ್ಮ ಅದ್ಭುತ ಜೀವನವನ್ನು ಹಿಟ್ ವಿಕೆಟ್ ಮಾಡಿಕೊಂಡ ರೀತಿಯನ್ನು ಕಂಡು ಚಕಿತರಾಗಿ ದಿಗ್ಭ್ರಾಂತರಾಗಿರಬಹುದು.
ಮೇಂಡು ರಾಮ್ ಮೋಹನ್ ರಾವ್ರಾಜುವಿನ ಕಥೆ ಹಾಗಿರಲಿ. ಅದರ ಜೊತೆಜೊತೆಗೇ ಇರುವ ಮೇಂಡು ರಾಮ್ ಮೋಹನ್ ರಾವ್ [ಅಥವಾ ನಾವೆಲ್ಲರೂ ಪ್ರೀತಿಯಿಂದ ಸಂಬೋಧಿಸುತ್ತಿದ್ದ ಎಂ.ಆರ್] ಅವರ ಗತಿ ನೋಡಿ - ಸತ್ಯಂ ಸಂಸ್ಥೆಯ ಬೋರ್ಡಿನಲ್ಲಿ ಸ್ವತಂತ್ರ ನಿರ್ದೇಶಕರಾಗಿದ್ದ ಎಂ.ಆರ್ ಸತ್ಯಂನಿಂದ ರಾಜೀನಾಮೆ ಕೊಟ್ಟಿದ್ದಲ್ಲದೇ ತಾವು ಮುಖ್ಯಸ್ಥರಾಗಿದ್ದ ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್‌ನ ಕೆಲಸವನ್ನೂ ಕಳೆದುಕೊಳ್ಳಬೇಕಾಯಿತು. ನಾನು ಐಐಎಂಬಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಎಂ.ಆರ್ ನಮಗೆ ಪಾಠ ಮಾಡುತ್ತಿದ್ದರು. ಆಗಿನ ದಿನಗಳಲ್ಲಿ ಆರು ತಿಂಗಳು ನ್ಯೂಯಾರ್ಕ್ ಮತ್ತು ಆರು ತಿಂಗಳು ಭಾರತದಲ್ಲಿರುತ್ತಿದ್ದ ಎಂ.ಆರ್ ತಮ್ಮ ಪ್ರವಚನದ ವಿಷಯವಾದ ಆಪರೇಷನ್ಸ್ ರಿಸರ್ಚ್ ಮತ್ತು ಗಣಿತ ಶಾಸ್ತ್ರದಲ್ಲಿ ಮೇಧಾವಿ ಅನ್ನುವುದರಲ್ಲಿ ಅನುಮಾನವಿರಲಿಲ್ಲ. ಹೆಚ್ಚು ಮಾತನಾಡದೇ ಸದಾ ಹಸನ್ಮುಖಿಯಾಗಿರುತ್ತಿದ್ದ ಎಂ.ಆರ್.ಗೆ ಬಹುಶಃ ಗಣಿತದಲ್ಲಿ ಮಂದಮತಿಯಾಗಿದ್ದ ನನ್ನಂತಹ ವಿದ್ಯಾರ್ಥಿಗಳಿಗೆ ಪಾಠಮಾಡುವುದೂ ಚಡಪಡಿಕೆಯ ವಿಷಯವಾಗಿತ್ತೆನ್ನಿಸುತ್ತದೆ, ಹೀಗಾಗಿ ನಾಲ್ಕಾರು ಬುದ್ಧಿವಂತರನ್ನು ಹೆಕ್ಕಿ ಅವರನ್ನುದ್ದೇಶಿಸಿ ಪಾಠ ಮಾಡುತ್ತಿದ್ದರು - ನಾವುಗಳೆಲ್ಲಾ ಆ ಬುದ್ಧಿವಂತರಿಂದ ಹಾಸ್ಟೆಲಿನಲ್ಲಿ ಕಲಿಯುತ್ತಿದ್ದೆವು. ಎಂ.ಆರ್. ಯಾವಾಗಲೂ ತಮ್ಮ ಪೇಪರುಗಳು, ಗಣಿತ ತಿಳಿದ ತಮ್ಮ ಕೆಲವೇ ಜನರ ಮಿತ್ರವೃಂದದ ನಡುವೆಯಿರುತ್ತಿದ್ದರು. ಒಂದು ಥರದಲ್ಲಿ ಆತ ಮ್ಯಾನೇಜ್‌ಮೆಂಟು, ಕಂಪನಿಗಳು, ಸ್ಟ್ರಾಟಜಿ, ವ್ಯೂಹ, ಮಾರುಕಟ್ಟೆ -- ಈ ಎಲ್ಲದರಿಂದ ಹಾಗೂ ಐಐಎಂನ ಆಂತರಿಕ ರಾಜಕೀಯದಿಂದಲೂ ದೂರವಾಗಿ ಇದ್ದುಬಿಟ್ಟಿದ್ದರು. ಅದೇ ಕಾಲದಲ್ಲಿ ಅವರು ನಮಗಿಂತ ಕೆಲವೇ ವರ್ಷಗಳು ಕಿರಿಯನಾಗಿದ್ದ ತಮ್ಮ ಮಗನ ಸಾವನ್ನೂ ನೋಡಬೇಕಾಯಿತು. ಈ ಎಲ್ಲ ಹಿನ್ನೆಲೆಯನ್ನು ನಾನು ಹೇಳುತ್ತಿರುವುದಕ್ಕೆ ಕಾರಣವಿಷ್ಟೇ. ಎಂ.ಆರ್. ಯಾವುದೇ ಸಂಸ್ಥೆಯ ಬೋರ್ಡಿನಲ್ಲಿ ಕೂತು ಅದರ ಸ್ಟ್ರಾಟಜಿಯ ಬಗ್ಗೆ ಚರ್ಚಿಸುವುದನ್ನು ನನಗೆ ಊಹಿಸಲಿಕ್ಕೂ ಸಾಧ್ಯವಿಲ್ಲ. ಹಾಗೆ ನೋಡಿದರೆ ಎಂ.ಆರ್.ಗೆ ಇದ್ದ ಗೆಳೆಯರಲ್ಲಿ ಅತ್ಯಂತ ಸಮೀಪದವರೆಂದರೆ ಐಐಎಸ್ಸಿಯ ಕಂಪ್ಯೂಟರ್ ವಿಭಾಗದ ವಿಜಯ ಚಂದ್ರು ಅವರಾಗಿದ್ದರು.

ಹೀಗಿದ್ದ ಎಂ.ಆರ್. ಕೆಲವರ್ಷಗಳ ನಂತರ ಐಐಎಂನ ನಿರ್ದೇಶಕರಾದಾಗ ಬಹಳಷ್ಟು ಮಂದಿ ಅವಾಕ್ಕಾದರು. ಅವರನ್ನು ನಿರ್ದೇಶಕರನ್ನಾಗಿ ಸರಕಾರ ಆಯ್ಕೆ ಮಾಡಿದ್ದು ಒಂದು ಆಶ್ಚರ್ಯವಾದರೆ, ಅದನ್ನು ಅವರು ಒಪ್ಪಿದ್ದು ಮತ್ತೊಂದು ಆಶ್ಚರ್ಯವಾಗಿತ್ತು. ಆ ನಂತರ ಎಂ.ಆರ್ ಬಗ್ಗೆ ಇದ್ದ ಜೋಕೆಂದರೆ - ನಿರ್ದೇಶಕ ಎಂ.ಆರ್.ಗೂ ಪ್ರೊಫೆಸರ್ ಎಂ.ಆರ್.ಗೂ ವ್ಯತ್ಯಾಸವೇನು ಅನ್ನುವ ಪ್ರಶ್ನೆ - ಅದಕ್ಕೆ ಉತ್ತರ ಎಂ.ಆರ್. ಪ್ರೊಫೆಸರ್ ಆಗಿದ್ದಾಗ ಕಾರಿನ ಮುಂದಿನ ಸೀಟಿನಲ್ಲಿ ಕೂತು ತಮ್ಮ ಕಾರನ್ನು ತಾವೇ ಚಲಾಯಿಸುತ್ತಿದ್ದರು, ಈಗ ಹಿಂದೆ ಕೂಡುತ್ತಾರೆ. ಅರ್ಥಾತ್ ಎಂ.ಆರ್ ಆಡಳಿತಕ್ಕಿಂತ ಗಣಿತ ಮತ್ತು ಆಪರೇಷನ್ ರಿಸರ್ಚಿನಲ್ಲಿಯೇ ಹೆಚ್ಚಿನ ಆಸಕ್ತಿ ತೋರುತ್ತಿದ್ದರು. ಆ ಸಮಯದಲ್ಲಿ ಗಣಿತ ಶಾಸ್ತ್ರದ ಪ್ರಮುಖ ಪ್ರಶಸ್ತಿಯಾದ ಫುಲ್ಕರ್‍ಸನ್ ಪ್ರಶಸ್ತಿ ಎಂ.ಆರ್. ಪಾಲಿಗೆ ದಕ್ಕಿತ್ತು. ಐಐಎಂನಿಂದ ನಿವೃತ್ತರಾದಾಗ ಮತ್ತೆ ಎಂ.ಆರ್ ಜೀವನವನ್ನು ಆರಾಮವಾಗಿ ಕಳೆಯುತ್ತಾರೆಂದು ಎಣಿಸಿದ್ದವರಿಗೆ ಆಶ್ಚರ್ಯ ಕಾದಿತ್ತು. ಆತ ಹೊಸದಾಗಿ ಪ್ರಾರಂಭವಾದ ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್‍ನ [ಡೀನ್] ಮುಖ್ಯಸ್ಥರಾಗಿ ಕೆಲಸ ಕೈಗೊಂಡರು. ಹೀಗೆ, ಏನನ್ನೂ ಬಯಸದೆಯೇ ತಮ್ಮ ಗಣಿತದಲ್ಲಿ ಮುಳುಗುತ್ತಾರೆಂದು ಎಣಿಸಿದ್ದ ಎಂ.ಆರ್.ಗೂ ಕುರ್ಚಿಯ, ಅದರ ಮೇಲೆ ಕೂಡುವ ವ್ಯಾಮೋಹ ಇತ್ತೆನ್ನುವುದು ನಮಗೆ ವಿಚಿತ್ರ ರೀತಿಯಲ್ಲಿ ತಟ್ಟಿದ ಸತ್ಯ. ಸತ್ಯಂ ರಾಜುವಿಗೂ ಈ ಥರದ ಯಾವುದೋ ನಶೆಯಿದ್ದಿರಬಹುದು. ಎಂ.ಆರ್. ಅವರ ಬಳಿ ಕಾಣದೇ ಸುಪ್ತವಾಗಿದ್ದಂತಹ ಈ ನಶೆ ಅವರನ್ನು ಬಲಿತೆಗೆದುಕೊಂಡಿರಬಹುದು.
ನಾನು ಎಂ.ಆರ್. ಬಗ್ಗೆ ದೀರ್ಘವಾಗಿ ಬರೆದದ್ದಕ್ಕೆ ಕಾರಣವಿದೆ. ಈ ಇಂಥ ಎಂ.ಆರ್ ಸತ್ಯಂ ಸಂಸ್ಥೆಯ ಬೋರ್ಡಿನ ಸ್ಥಾನವನ್ನು ಒಪ್ಪಿದ್ದು ಅವರು ನಿರ್ದೇಶಕರ ಸ್ಥಾನ/ಡೀನ್ ಸ್ಥಾನ ಒಪ್ಪಿದಂತೆಯೇ, ಒಂದು ಪೊಳ್ಳು ಘನತೆಗಾಗಿ ಇದ್ದಿರಬಹುದು. ಇಂಥಹ ಪೊಳ್ಳು ಘನತೆಗೆ ನಾವೆಲ್ಲರೂ ಆಗಾಗ ಬಲಿಯಾಗುತ್ತೇವೆ. ಈ ಘನತೆಯ ನಡುವೆ ಅವರು ಸತ್ಯಂ ಬೋರ್ಡಿನಲ್ಲಿ ಸ್ಥಾನ ಪಡೆದದ್ದಲ್ಲದೇ ಆ ಸಂಸ್ಥೆಯ ಆಡಿಟ್ ಕಮಿಟಿಯ ನೇತೃತ್ವವನ್ನೂ, ಹಾಗೂ ಕೆಲದಿನಗಳ ಹಿಂದೆ ಸತ್ಯಂ ಸಂಸ್ಥೆ ಪ್ರಯತ್ನಿಸಿದ ಮೈಟಾಸ್ ಸಂಸ್ಥೆಯ ವಿಲೀನವನ್ನು ಚರ್ಚಿಸಿದ ಬೋರ್ಡ್ ಮೀಟಿಂಗಿನ ನೇತೃತ್ವವನ್ನೂ ಆತ ವಹಿಸಿದ್ದರು. ಈಗ ಎಲ್ಲ ದಿಕ್ಕುಗಳಿಂದಲೂ ಸ್ವತಂತ್ರ ನಿರ್ದೇಶಕರ ಪಾತ್ರದ ಬಗ್ಗೆಗಿನ ಅನುಮಾನಗಳು ಬರುತ್ತಿರುವ ಸಂದರ್ಭದಲ್ಲಿ ಎಂ.ಆರ್. ಅವರ ತಲೆದಂಡವನ್ನು ಕೇಳುವುದು ಸಹಜವೇ ಆಗಿದೆ. ಆದರೆ ಫುಲ್ಕರ್‍ಸನ್ ಪ್ರಶಸ್ತಿ ಪಡೆದ ಘನ ಗಣಿತಜ್ಞನ ಕಾರ್ಯಕಾಲದ ಅಂತ್ಯ ಈ ಕಪ್ಪುನಿಶಾನೆಯಿಂದ ಪೂರ್ಣಗೊಳ್ಳಬೇಕಿತ್ತೇ? ಸ್ವತಂತ್ರ ನಿರ್ದೇಶಕರಿಗೆ ಏನೂ ತಿಳಿದಿರಲಿಲ್ಲವೆಂದು ರಾಜು ಹೇಳುತ್ತಾರೆ. ಅದು ಹೇಗೆ? ಹಾಗಾದರೆ ಸ್ವತಂತ್ರ ನಿರ್ದೇಶಕರು ಆ ಸ್ಥಾನದಲ್ಲಿ ಇದ್ದದ್ದಾದರೂ ಏಕೆ ಎನ್ನುವ ಪ್ರಶ್ನೆಯು ಸಹಜವಾಗಿ ಉದ್ಭವವಾಗುತ್ತದೆ. ಆದರೆ ಕಂಪನಿಯ ಬೋರ್ಡಿನಲ್ಲಿ ಸ್ವತಂತ್ರ ನಿರ್ದೇಶಕನಾಗಿ ಕೂತು ಅನುಭವವಿರುವುದರಿಂದ ಎಂ.ಆರ್ ಈ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರಬಹುದಾದ ಪರಿಸ್ಥಿತಿಯ ಹಿನ್ನೆಲೆಯನ್ನು ನಾನು ಊಹಿಸಬಲ್ಲೆ. [ಹಾಗೆಂದು ಎಂ.ಆರ್.ಗೆ ಏನೂ ಗೊತ್ತಿಲ್ಲವೆಂದು ನಾನು ಖಚಿತವಾಗಿ ಹೇಳುತ್ತಿಲ್ಲ, ಆದರೆ ಆ ಸ್ಥಾನದ ಪರಿಮಿತಿಗಳನ್ನು ವಿವರಿಸಲು ಪ್ರಯತ್ನಿಸುತ್ತಿದ್ದೇನೆ ಅಷ್ಟೇ]. ಬಹುಶಃ ಮೈಟಾಸ್ ವಿಲೀನದ ವಿಷಯ ಬರುವುದಕ್ಕೆ ಮೊದಲು ರಾಜು ಮತ್ತು ಸಂಸ್ಥೆಗೆ ಸಂಬಂಧಿಸಿದ ಜನ ಎಂ.ಆರ್. ಮತ್ತು ಇತರ ನಿರ್ದೇಶಕರ ಮುಂದೆ ಈ ವಿಲೀನದಿಂದ ಸಂಸ್ಥೆಗೆ ಆಗಬಹುದಾದ ಲಾಭದ ಬಗ್ಗೆ ವಿವರಿಸಿರಲಿಕ್ಕೂ ಸಾಕು. ಅವರ ವಾದಸರಣಿಯನ್ನು ಊಹಿಸಬೇಕಾದರೆ ಅದು ಹೀಗಿದ್ದಿರಬಹುದು:
ಸತ್ಯಂ ೫೦೦೦ ಕೋಟಿಗಳಿಗೂ ಹೆಚ್ಚಿನ ಹಣವನ್ನು ಕೈಯಲ್ಲಿ ಹಿಡಿದು ಕೂತಿದೆ [ಸೆಪ್ಟಂಬರ್ ಲೆಕ್ಕ ಇದನ್ನು ತೋರಿಸುತ್ತಿತ್ತು, ಆದರೆ ಆ ಹಣ ನಿಜಕ್ಕೂ ಇಲ್ಲವೆಂಬುದು ಎಂ.ಆರ್. ಮತ್ತು ಇತರ ನಿರ್ದೇಶಕರಿಗೆ ತಿಳಿದಿರಲಿಲ್ಲವೆನ್ನುವುದನ್ನು ಈ ಕ್ಷಣಕ್ಕೆ ನಂಬೋಣ]
ಮೈಟಾಸ್ ಮನೆಗಳುಈ ಹಣವನ್ನು ಇಲ್ಲವೇ ಷೇರುದಾರರಿಗೆ ಡಿವಿಡೆಂಡ್ ರೂಪದಲ್ಲಿ ವಾಪಸ್ಸು ಮಾಡಬೇಕು, ಇಲ್ಲವೇ ಅದನ್ನು ಎಲ್ಲಾದರೂ ಹೂಡಬೇಕು. ಹಣವನ್ನು ಹೂಡಲು/ ಕೊಳ್ಳಲು ಒಳ್ಳೆಯ ಸಾಫ್ಟ್ ವೇರ್ ಸಂಸ್ಥೆಗಳು ಕಾಣುತ್ತಿಲ್ಲ. ಆದರೆ ರಿಯಲ್ ಎಸ್ಟೇಟಿನಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣಬಹುದು. ಜೊತೆಗೆ ಸತ್ಯಂ ಸಂಸಾರದವರೇ ನಡೆಸುತ್ತಿರುವ ಮೈಟಾಸ್ ಸಂಸ್ಥೆಗಳು ಇವೆ. ಅವುಗಳ ಕೈಯಲ್ಲಿ ಒಳ್ಳೆಯ [ಹೈದರಾಬಾದ್ ಮೆಟ್ರೋವನ್ನೊಳಗೊಂಡು] ಯೋಜನೆಗಳಿವೆ. ಹೀಗಾಗಿ ಈ ಸಂಸ್ಥೆಗಳನ್ನು ಹೊರಗಿನವರಿಂದ ಬೆಲೆ ಕಟ್ಟಿಸಿ ವಿಲೀನಗೊಳಿಸುವುದರಲ್ಲಿ ಅರ್ಥವಿದೆ. ಆದರೆ ಮೈಟಸ್ ಸಂಸ್ಥೆ ನಮ್ಮದೇ ಆದ್ದರಿಂದ ಆ ಮೀಟಿಂಗಿನಲ್ಲಿ ನಾವು ಪಾಲ್ಗೊಳ್ಳುವುದಿಲ್ಲ. ನೀವೇ ಅದರ ನಾಯಕತ್ವ ವಹಿಸಬೇಕು ಎಂದೆಲ್ಲಾ ಹೇಳಿ ಗಣಿತಜ್ಞ ಎಂ.ಆರ್. ಅವರನ್ನು ಒಪ್ಪಿಸಿರಬಹುದು. ಎಂ.ಆರ್. ಈ ವಾದಸರಣಿಯನ್ನು ನಂಬಿರಲಿಕ್ಕೂ ಸಾಕು. ಹೀಗೆ ಸ್ವತಂತ್ರ ನಿರ್ದೇಶಕರ ಬಳಿ ಬರುವ ಮಾಹಿತಿ ಮ್ಯಾನೇಜ್‍ಮೆಂಟಿನವರು ಕೊಡುವುದೇ ಆಗಿರುತ್ತದೆ ಎನ್ನುವುದನ್ನು ನಾವು ಮನಗಾಣಬೇಕು.
ಆಡಿಟ್ [ಲೆಕ್ಕ ಪರಿಶೋಧನೆಯ] ವಿಷಯದಲ್ಲೂ ಇದು ನಿಜ. ಲೆಕ್ಕ ಪರಿಶೋಧಕರು ಕೊಡುವ ಲೆಕ್ಕದ ಆಧಾರದ ಮೇಲೆ ಆಡಿಟ್ ಕಮಿಟಿ ತನ್ನ ಚರ್ಚೆಯನ್ನು ನಿರ್ವಹಿಸುತ್ತದೆ. ಇಲ್ಲಿ ಕೇಳಬೇಕಾದ ಪ್ರಶ್ನೆಯೆಂದರೆ ಲೆಕ್ಕ ಪರಿಶೋಧಕರೂ ಹಾಗೂ ಆಡಿಟ್ ಕಮಿಟಿಯವರೂ ಮ್ಯಾನೇಜ್‍ಮೆಂಟಿನವರ ಗೈರು ಹಾಜರಿಯಲ್ಲಿ ಲೆಕ್ಕಪತ್ರದ ಚರ್ಚೆ ನಡೆಸಿದರೇ? ಪರಿಶೋಧಕರು ತಮ್ಮ ಗ್ರಹಿಕೆಯನ್ನು ಪ್ರಾಮಾಣಿಕವಾಗಿ ಕಮಿಟಿಗೆ ಒಪ್ಪಿಸಿದರೇ? ಈ ಎಲ್ಲವೂ ಹಲವು ಘಂಟೆಗಳ ಕಾಲದಲ್ಲಿ ನಡೆಯಬೇಕೆನ್ನುವುದನ್ನು ನಾವು ಗಮನದಲ್ಲಿಡಬೇಕು. ಲೆಕ್ಕಪತ್ರವನ್ನು ಜಾಹೀರುಮಾಡುವ ದಿನ ಅನೇಕರು ಅದಕ್ಕಾಗಿ ಕಾಯುತ್ತಿರುತ್ತಾರೆ. ಲೆಕ್ಕ ಪತ್ರದ ಆಧಾರದ ಮೇಲೆ ಕಂಪನಿಯ ಷೇರಿನ ದರ ಏರುವುದೂ ಇಳಿಯುವುದರ ಪ್ರಕ್ರಿಯೆಯಾಗಬಹುದು. ಹೀಗಾಗಿ ಕಂಪನಿಯ ಪರಿಣಾಮ ಹೆಚ್ಚುಕಾಲ ನಿರ್ದೇಶಕರ ಕೈಯಲ್ಲಿ ಇರುವುದಕ್ಕೆ ಅವರ ಕೈಯಿಂದ ಜಾರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿಯೇ ಮಿಕ್ಕೆಲ್ಲ ಕಾಗದ ಪತ್ರಗಳನ್ನು ಮುಂಚಿತವಾಗಿ ನಿರ್ದೇಶಕರಿಗೆ ಕಳಿಸಿದರೂ ಲೆಕ್ಕಪತ್ರ ಮಾತ್ರ ದಸ್ತಕತ್ತಿನ ದಿನ ಮೇಜಿನ ಮೇಲೆ ಪ್ರತ್ಯಕ್ಷವಾಗುತ್ತದೆ. ಸಾಲದ್ದಕ್ಕೆ ಪತ್ರಿಕಾಗೋಷ್ಠಿಯ ಸಮಯದ ಮುಂಚೆ ಎಲ್ಲವನ್ನೂ ಚರ್ಚಿಸಿ ಮುಗಿಸಬೇಕು. ಹೀಗಾಗಿ ನಿರ್ದೇಶಕರಿಗೆ ಏನಾದರೂ ಮಾಡಬೇಕೆಂದರೂ ಸಮಯವಿರುವುದಿಲ್ಲ. ಸಾಮಾನ್ಯವಾಗಿ ಈ ಲೆಕ್ಕವನ್ನು ಪರಿಶೋಧಕರು ಕೂಲಂಕಶವಾಗಿ ನೋಡಿರುತ್ತಾರಾದ್ದರಿಂದ, ಅವರ ಮಾತಿನ ಆಧಾರದ ಮೇಲೆ ಎಲ್ಲವೂ ಪಾಸಾಗುತ್ತದೆ. ಆದರೆ ಬೇಲಿಯೇ ಹೊಲವನ್ನು ಮೇಯ್ದರೆ? ಹೈದರಾಬಾದಿನಲ್ಲಿ ಪ್ರಾರಂಭವಾಗಿ ಕುಸಿದು ಬಿದ್ದ ಗ್ಲೋಬಲ್ ಟ್ರಸ್ಟ್ ಬ್ಯಾಂಕಿನ ಲೆಕ್ಕ ಪರಿಶೋಧಕರಾದ ಪ್ರೈಸ್ ವಾಟರ್‌ಹೌಸ್ ಸಂಸ್ಥೆಯೇ ಸತ್ಯಂನ ಪರಿಶೋಧಕರಾಗಿದ್ದರು ಅನ್ನುವುದರಲ್ಲಿ ಮರ್ಮವಿದೆಯೇ?

ಕೃಷ್ಣ ಪಾಲೆಪುಯಾವುದೇ ಕಾನೂನು ಮನುಷ್ಯನ ನಿಯತ್ತನ್ನು ನಿಯಂತ್ರಿಸುವುದಿಲ್ಲ. ನಿಯತ್ತೇ ನೆಟ್ಟಗಿಲ್ಲದಿದ್ದಾಗ ಕಾನೂನು ಮಾಡುವುದು ಪೋಸ್ಟ್ ಮಾರ್ಟೆಂ ಮಾತ್ರ. ಸತ್ಯಂ ಕಾಂಡದಲ್ಲಿ ಬಹುಶಃ ನಿಯತ್ತು ನೆಟ್ಟಗಿರಲಿಲ್ಲವೇನೋ. ಹೀಗಾಗಿ ರಾಜು ತಾವು ಮುಳುಗುತ್ತಲೇ, ಎಂ.ಆರ್. ಅಂತಹ ಮೇಧಾವಿಗಳನ್ನೂ ತಮ್ಮೊಡನೆ ಕರೆದೊಯ್ಯುತ್ತಿದ್ದಾರೆ. ಹಾಗೆಯೇ ಕೃಷ್ಣ ಪಾಲೆಪು ಎನ್ನುವ ಹಾರ್ವರ್ಡ್ ಪ್ರೊಫೆಸರರ ಪಾತ್ರವೂ ಕುತೂಹಲದ್ದು. ಪಾಲೆಪು ಸತ್ಯಂ ಬೋರ್ಡಿನಲ್ಲಿರುವುದಲ್ಲದೇ ಆ ಸಂಸ್ಥೆಗೆ ಕನ್ಸಲ್ಟಿಂಗ್ ಸೇವೆಗಳನ್ನೂ ಒದಗಿಸಿದ್ದರಂತೆ. ಇದೂ ವಿಚಿತ್ರವಾದ ಪರಿಪಾಠ. ಪಾಲೆಪು ಬೋರ್ಡಿನಲ್ಲಿರುತ್ತಲೇ ಹೇಗೆ ದೊಡ್ಡ ಮೊತ್ತದ ಕನ್ಸಲ್ಟಿಂಗ್ ಪಡೆಯಲು ಸಾಧ್ಯ? ಹೀಗೆ ನಡೆದಾಗ "ಕಾರ್ಪೊರೇಟ್ ಗವರ್ನೆನ್ಸ್" ಗಾಗಿ ಪ್ರಶಸ್ತಿ ಬರುವುದು ವಿರೋಧಾಭಾಸವೇ ಸರಿ! ಅಮೆರಿಕದ ಕಾನೂನಿನನುಸಾರ ಪಾಲೆಪು ಅವರನ್ನು "ಸ್ವತಂತ್ರ" ನಿರ್ದೇಶಕರು ಎಂದು ಹೇಳುವುದು ಸಾಧ್ಯವಿಲ್ಲ. ಈಗ ಅಮೆರಿಕದಲ್ಲಿ ಹಾಕಿರುವ ಕೇಸುಗಳ ಭಾರದಲ್ಲಿ ಪಾಲೆಪು ಮುಳುಗಿ ಅದನ್ನು ಹೋರಾಡುವುದರಲ್ಲೇ ಮುಂದಿನ ಹಲ ವರ್ಷಗಳನ್ನು ಖರ್ಚು ಮಾಡಬೇಕಾಗುತ್ತದೆ.

ಸ್ವತಂತ್ರ ನಿರ್ದೇಶಕರು ಸಂಸ್ಥೆಯಲ್ಲಿ ಏನು ಮಾಡಬಹುದು? ಹೆಚ್ಚೆಂದರೆ ನಾಲ್ಕಾರು ಬೋರ್ಡ್ ಮೀಟಿಂಗುಗಳಿಗೆ ಹೋಗಿ, ಒಂದೆರಡು ಕಮಿಟಿಗಳಲ್ಲಿ ಕೂತು ಬರಬಹುದು. ಉದಾಹರಣೆಗೆ ತಮ್ಮ ಸಂಸ್ಥೆ ತನ್ನ ದಾಖಲೆಗಳನ್ನು ಸಮಯಕ್ಕನುಸಾರವಾಗಿ ರಿಜಿಸ್ಟ್ರಾರಿಗೆ ಸಲ್ಲಿಸಿದೆ, ಜನತೆಯಿಂದ ಯಾವ ಹೂಡಿಕೆಗಳನ್ನೂ ತೆಗೆದುಕೊಂಡಿಲ್ಲ ಎನ್ನುವ ಪತ್ರವನ್ನು ಪ್ರತೀ ವರ್ಷ ಈ ನಿರ್ದೇಶಕರು ಸಲ್ಲಿಸಬೇಕು. ಆ ಪತ್ರಕ್ಕೆ ಆಧಾರ ಸಂಸ್ಥೆಯಿಂದ ಇವೆಲ್ಲ ನಡೆದಿದೆ ಅನ್ನುವ ಘೋಷಣಾ ಪತ್ರವಾಗಿರುತ್ತದೆ. ಆ ಘೋಷಣಾ ಪತ್ರವೇ ಸುಳ್ಳಾದರೆ? ಎಷ್ಟರ ಮಟ್ಟಿಗೆ ನಿರ್ದೇಶಕರು ಈ ಎಲ್ಲವನ್ನೂ ಪರಿಶೀಲಿಸಬಲ್ಲರು?

ಸ್ವತಂತ್ರ ನಿರ್ದೇಶಕರು ಎಷ್ಟು ಸ್ವತಂತ್ರರು ಅನ್ನುವುದೂ ಒಂದು ಪ್ರಶ್ನೆ. ಹಲವು ಲಕ್ಷಗಳ ಸಿಟ್ಟಿಂಗ್ ಫೀಸು ಮತ್ತು ಸತ್ಯಂ ಕೇಸಿನಲ್ಲಿ ಪಾಲೆಪುಗೆ ನೀಡುತ್ತಿದ್ದ ಕೋಟಿಗಟ್ಟಲೆ ಕಂಸಲ್ಟೆನ್ಸಿಯನ್ನು ಬಿಟ್ಟುಕೊಡಬೇಕಾಗಿ ಬರಬೇಕಾದ ಪರಿಸ್ಥಿತಿಯನ್ನು ಉಂಟುಮಾಡಬಹುದಾದ ಕಷ್ಟದ ಪ್ರಶ್ನೆಗಳನ್ನು ಈ ನಿರ್ದೇಶಕರು ಯಾಕೆ ಕೇಳುತ್ತಾರೆ? ಅವರಿಗೆ ಸಿಟ್ಟಿಂಗ್ ಫೀಸು ಕೊಡದಿದ್ದಲ್ಲಿ ಇಲ್ಲಿ ಸಮಯ ವ್ಯಯ ಮಾಡಲು ಇರಬಹುದಾದ ಪ್ರೇರಣೆಯಾದರೂ ಏನು? [ಸತ್ಯಂ ವಿಷಯಕ್ಕೆ ಬಂದಾಗ - ಇಡೀ ವಿಶ್ವದಲ್ಲಿ ಕೆಲಸ ಮಾಡುವ ಸಂಸ್ಥೆಯ ಸ್ವತಂತ್ರ ನಿರ್ದೇಶಕರು - ವಿನೋದ್ ಧಾಮ್ ಹೊರತುಪಡಿಸಿ - ಎಲ್ಲರೂ ತೆಲುಗರೇ ಆಗಿದ್ದರೆನ್ನುವುದು ಕೇವಲ ಕಾಕತಾಳೀಯವಿರಬಹುದು] ಈ ಗೋಜಲನ್ನು ಬಿಡಿಸುವುದು ಸುಲಭದ ಮಾತಲ್ಲ. ಮುಂದಿನ ದಿನಗಳಲ್ಲಿ ಸ್ವತಂತ್ರ ನಿರ್ದೇಶಕರ ಪಾತ್ರದ ಚರ್ಚೆ ದೀರ್ಘವಾಗಿ ನಡೆಯುವುದಿದೆ.

ಈ ಕಾಂಡ ಇಲ್ಲಿಗೇ ಮುಗಿಯುವುದಿಲ್ಲ. "ಪಿಕ್ಚರ್ ಅಭೀ ಬಾಕಿ ಹೈ ಮೇರೆ ದೋಸ್ತ್..." ಆದರೆ ಈ ಕಾಂಡ ಯಾವುದೋ ಉತ್ತುಂಗಕ್ಕೇರುವ ನಶೆಯನ್ನು ಹೊತ್ತ ಜನರ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ. ಮೊದಲಿಗೆ ನಾನು ಟೆಂಡೂಲ್ಕರ್ ರನ್‍ಗಳನ್ನು ಸಂಪಾದಿಸುವ ನಶೆಯ ಬಗ್ಗೆ ಹೇಳಿದೆ. ಆ ನಶೆಯಿಂದ ಯಾರಿಗೂ ನಷ್ಟವಿಲ್ಲ, ಬದಲಿಗೆ ನಾವೆಲ್ಲಾ ಆ ಖುಷಿಯ ಭಾಗವಾಗಿ ಆನಂದಿಸುತ್ತೇವೆ. ಆದರೆ ರಾಜುವಿನ ನಶೆ - ಅದೇನೇ ಇದ್ದರೂ - ಐವತ್ತಮೂರು ಸಾವಿರ ಉದ್ಯೋಗಿಗಳ ಬದುಕಿನಲ್ಲಿ ಆತಂಕವನ್ನು ಉಂಟುಮಾಡಿ - ಎಂ.ಆರ್. ಅಂತಹ ಮೇಧಾವಿಗಳ ಜೀವನವನ್ನು ಊಹಿಸಿಯೇ ಇರದ ರೀತಿಯಲ್ಲಿ ಘಾತಗೊಳಿಸಿಬಿಟ್ಟಿದೆ. ಒಬ್ಬನ ನಶೆಗೆ ಇಷ್ಟೊಂದು ಜನ ಬೆಲೆ ತೆತ್ತಬೇಕಿರುವುದಕ್ಕಿಂತ ವಿಷಾದಕರ ವಿಷಯ ಬೇರೇನೂ ಇಲ್ಲ.





No comments:

Post a Comment