[ಈ ಲೇಖನವನ್ನ ನಾನು
ಬರೆದದ್ದು ೧೯೯೦ರಲ್ಲಿ. ಇದನ್ನು ಲಂಕೇಶ್ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದರು.ಆ ನಂತರ
ಹೈದರಾಬಾದು ಬಹಳಷ್ಟು ಮಟ್ಟಿಗೆ ಶಾಂತವಾಗಿದೆ. ಆದರೆ, ಆ ನಂತರ ಇಂಥದೇ ಕಥೆಗಳು ದೇಶದ ಇತರ ಭಾಗದಲ್ಲಿ ಆದುವು.
ಬಾಬರೀ ಮಸೀದಿಯ ಪತನದ ನಂತರ ಮುಂಬಯಿಯಲ್ಲಿ ಆದ ಹತ್ಯಾಕಾಂಡ, ಮತ್ತು ಇತ್ತೀಚೆಗೆ ಗುಜರಾತಿನಲ್ಲಿ ಆದ ಘಟನಾವಳಿ.
ಹಿಂದಿನ ಗಲಭೆಗಳಿಗೂ ಇಂದಿನ ಗಲಭೆಗಳಿಗೂ ಒಂದು ಮೂಲಭೂತ ಹಾಗೂ ಆತಂಕಕಾರಿ ವ್ಯತ್ಯಾಸವಿದೆ. ಹಿಂದಿನ
ಗಲಭೆಗಳು,ಸ್ಥಾನಿಕವಾಗಿ ದನದ
ಬಾಲ, ಹಂದಿಯ ನುಗ್ಗುವಿಕೆಯಿಂದಾಗಿ,
ಮೊಹರಂ, ಗಣೇಶ ವಿಸರ್ಜನೆಯ ಸಮಯಕ್ಕೆ - ಯಾವುದಾದರೂ ಪ್ರಚೋದನೆಯ
ಫಲವಾಗಿ ನಡೆದರೆ, ಮುಂಬಯಿ, ಗೋಧ್ರಾ, ಅಹಮದಾಬಾದು ಬಾಹ್ಯ ಕಾರಣಗಳಿಗಾಗಿ, ಯೋಜಿತವಾಗಿ ನಡೆದಿವೆ. ಈಚೆಗೆ ಆದ ಮಕ್ಕಾ ಮಸೀದಿಯ
ಸ್ಫೋಟ ಈ ಯೋಜನೆಯನ್ನು ಇನ್ನೂ ದೂರಕ್ಕೆ ಒಯ್ಯುತ್ತದೆ. ಆದರೆ ಅದೃಷ್ಟವಶಾತ್ ಈ ಸ್ಫೋಟದಿಂದ ಮತೀಯ
ಗಲಭೆಗಳಾಗಲಿಲ್ಲ ಅನ್ನುವುದೇ ಸಮಾಧಾನದ ಮಾತು. ಇದರಿಂದ ಉಂಟಾಗುವ ಕೋಮುಗಳ ನಡುವಿನ ಕಂದರ ತುಂಬಿಸಲು
ಬೇಕಾಗಬಹುದಾದದ್ದು ಬರೇ ಹೃದಯಗಳ ಮಿಡಿತವಲ್ಲ. ಅದಕ್ಕಿಂತಲೂ ಹೆಚ್ಚಾಗಿ ರಾಜಕೀಯ ಮನಸ್ಸಾಕ್ಷಿ.
ಅದು ನಮ್ಮ ರಾಜಕೀಯ ಮನಃಪರಿಧಿಯಲ್ಲಿದೆಯೇ?]
A tooth for a tooth and an eye for an eye
ends in making the whole world blind.
-M K Gandhi
೧
`ಚರಿತ್ರೆಯಿಂದ ಪಾಠ
ಕಲಿಯದವರು ಅದನ್ನು ಪುನಃ ಜೀವಿಸುವ ಶಾಪ ಪಡೆಯುತ್ತಾರೆ' ಎಂದು ಹೇಳಿದ್ದು ತತ್ವಜ್ಞಾನಿ ಜಾರ್ಜ್ ಸಾಂತಾಯನ.
ಸಾಂತಾಯನನ ಮಾತಿನ ಸತ್ಯಾಸತ್ಯತೆ ಸ್ವಲ್ಪ ಕುತೂಹಲದ ವಿಷಯ.
ಚರಿತ್ರೆ:
`ಯಾವುದೇ
ಜನಾಂಗದಲ್ಲಿ ಕೋಮುಸೌಹಾರ್ದತೆಯನ್ನು ಮುಂದುವರೆಸಿ ಬರಲು ಕೆಲವು ವಿಶೇಷ ಕ್ರಮ ಕೈಗೊಳ್ಳುನ ಅಗತ್ಯ
ಬೀಳುತ್ತಿತ್ತು. ಇಂಥ ಒಂದು ಸಂದರ್ಭದಲ್ಲಿ ನಿಜಾಮನೇ ಸ್ವತಃ ಹೀಗೊಂದು ಕ್ರಮ ಕೈಗೊಳ್ಳುವ
ಪರಿಸ್ಥಿತಿ ಒದಗಿ ಬಂತು (ನಿಜಾಮ: ಮಹಬೂಬ್ ಅಲಿ ಪಾಷಾ - ೧೮೬೬-೧೯೧೧). ಅನೇಕ ಭಾರತೀಯ ಹಬ್ಬಗಳು
ಚಾಂದ್ರಮಾನ ಪಂಚಾಂಗಕ್ಕನುಸಾರವಾಗಿ, ವರ್ಷದ ಬೇರೆ ಬೇರೆ
ತಿಂಗಳುಗಳಲ್ಲಿ ಘಟಿಸುವುದುಂಟು. ಹೀಗಾಗಿ ಎರಡು ಭಿನ್ನ ಹಬ್ಬಗಳು ಒಂದೇ ದಿನ ಬೀಳುವ ಸಾಧ್ಯತೆಯೂ
ಉಂಟು. ಇಂಥ ಒಂದು ಕಾಕತಾಳೀಯ ಶಿಯಾ ಮುಸಲ್ಮಾನರ ದುಃಖಭರಿತ ಮೊಹರಂ ತಿಂಗಳಿಗೂ, ಸಂತೋಷದಿಂದ ಬಣ್ಣ ಎರಚುವ ಹೋಳಿ ಹುಣ್ಣಿಮೆಗೂ ನಡುವೆ
ಉಂಟಾಯಿತು.'
`ಮೊಹರಂ
ಮೆರವಣಿಗೆಯಲ್ಲಿ ಎದೆಬಡಿದುಕೊಳ್ಳುತ್ತಾ ಸಾಗುತ್ತಿದ್ದ ಮಹಬೂಬ್ ಅಲಿ ಪಾಷಾ - ದೂರದಲ್ಲಿ
ಸಂತೋಷದಿಂದ ಕುಣಿದು ಬರುತ್ತಿದ್ದ, ಬಣ್ಣಹೊತ್ತ,
ಮತ್ತ ಗುಂಪನ್ನು ಕಂಡರು.
ಪರಿಶುದ್ಧ 'ಆಲಂ'ಗಳ ಮೇಲೆ ಈ ಬಣ್ಣ ಬಿದ್ದರೆ ಏನಾಗಬಹುದೆಂದು ಊಹಿಸಿದ
ಮಹಬೂಬ್, ತಾವು
ಪಾಲ್ಗೊಳ್ಳುತ್ತಿದ್ದ ಮೆರವಣಿಗೆಯಿಂದ ಜಾರಿಕೊಂಡು, ಬಣ್ಣ ಎರಚುವ ಗುಂಪಿಗೆ ಸೇರಿಕೊಂಡರು. ಗುಂಪು ಅವರನ್ನು
ಗುರುತಿಸಿದ ಕೂಡಲೇ, ಮತ್ತೂ ಖುಷಿಯಿಂದ
ಹಾರಾಡತೊಡಗಿತು. ಮಹಬೂಬ್ ನಗುತ್ತಾ, ಕುಣಿಯುತ್ತಾ,
ಬಣ್ಣ ಎರಚುತ್ತಾ, ಅವರನ್ನು ವಿರುದ್ಧ ದಿಕ್ಕಿನಲ್ಲಿ ಒಯ್ದರು.'
ಹ್ಯಾರಿಯಟ್ ಲಿಂಟನ್
ಮತ್ತು ಮೋಹಿನಿ ರಾಜನ್ ಬರೆದಿರುವ ಪುಸ್ತಕದ ಒಂದು ತುಣುಕಿದು. ಅದೂ ಮಹಬೂಬ್ ಅಲಿ ಪಾಷಾರ
ವ್ಯಕ್ತಿತ್ವವನ್ನು ಕುರಿತದ್ದು. ಚರಿತ್ರೆಗೆ ಮುಖ್ಯವಲ್ಲದ, ಯಾರೂ ಮಹತ್ವವೇ ಕೊಡದ ತುಣುಕು. ಆದರೂ ಇಂದಿನ
ಪರಿಸ್ಥಿತಿಗೆ ತುಂಬಾ ಮುಖ್ಯವೆನ್ನಿಸುವ ತುಣುಕು.
ಆದರೆ ಸಾಂತಾಯನನ
ಮಾತು ತಪ್ಪೇ? ಚರಿತ್ರೆಯಿಂದ ಪಾಠ
ಕಲಿಯದವರು, ಅದನ್ನೇ
ಜೀವಿಸುವುದಾದರೆ, ಇಂದಿಗೂ ಇಂಥ
ಸೌಹಾರ್ದಯುತ ಪರಿಸ್ಥಿತಿ ಮುಂದುವರೆಯಬೇಕಿತ್ತು. ಅಥವಾ ಚರಿತ್ರೆಯಿಂದ ಕಲಿತ ಪಾಠದ ಫಲವಾಗಿಯೇ
ಇಂದಿನ ಕೋಮುಗಲಭೆ ಹೈದರಾಬಾದಿನ ಜನಜೀವನದ ಅಂಗವಾಗಿದೆಯೇ? ಇತ್ತೀಚಿನ - ಅಂದರೆ - ನಲವತ್ತು ವರ್ಷಗಳ ಚರಿತ್ರೆಯಿಂದ
ಭಾರತ ಏನೂ ಕಲಿತಿಲ್ಲ ಎನ್ನಿಸುತ್ತದೆ. `ಕಳೆದ ನಲವತ್ತು
ವರ್ಷಗಳಲ್ಲಿ ಮತಕ್ಷೋಭೆಯ ವಿಚಾರದಲ್ಲಿ ಸರಕಾರದ ನಿಲುವು ಬದಲಾಗಿಲ್ಲ; ಅದಕ್ಕೆ ಅದರದೇ ಸೂತ್ರ; ವಿವಿಧ ರಾಜಕೀಯ ಪಕ್ಷಗಳು ಒಂದೆಡೆ ಸೇರಿ ಆತಂಕ ನೀಗಿಸುವ
ಮಾತಾಡುವುದು. ಇಲ್ಲೊಂದು ಶಾಂತಿಕೋರಿ ಮೆರವಣಿಗೆ, ಅಲ್ಲೊಂದು ಶಾಂತಿಗಾಗಿ ಮನವಿ. ಅಷ್ಟೇ.' ಎಂದು ಹೇಳುವ ಪಿ.ಎನ್.ಬೆಂಜಮಿನ್‌ರ ಮಾತು ಜಾರ್ಜ್ ಸಾಂತಾಯನನ ಮಾತಿಗೆ ದಾರ್ಶನಿಕ ಆಯಾಮ
ನೀಡಿಬಿಡುತ್ತದೆ. ಮೀರಠ್, ಮೊರಾದಾಬಾದ್,
ಬೀದರ್, ಜಮ್ಷೇದ್ಪುರ, ಅಲಿಘಡ, ಕಾನ್ಪುರ, ಅಹಮದಾಬಾದ್,
ಬರೋಡ, ಪಂಜಾಬ್, ಬಂಗಾಲ, ಮುಂಬೈ, ಹೈದರಾಬಾದ್. ಅಥವಾ
ಚರಿತ್ರೆಯಿಂದ ಪಾಠ ಕಲಿಯುವುದೇ ಆದರೆ - ಹೈದರಾಬಾದ್, ಹೈದರಾಬಾದ್, ಹೈದರಾಬಾದ್..........
ಇದೀಗ ನಾಲ್ಕುನೂರು
ವರ್ಷ ತುಂಬುತ್ತಿರುವ ಹೈದರಾಬಾದಿನ ಹುಟ್ಟು ಹಬ್ಬವನ್ನು ಇದಕ್ಕಿಂತ ರಂಗುರಂಗಾಗಿ ಆಚರಿಸುವುದಾದರೂ
ಹೇಗೆ? ನಗರಕ್ಕೊಂದು ರಕ್ತ ತಿಲಕ
ಬೇಡವೇ?
೧೫೯೧ರಲ್ಲಿ
ಹೈದರಾಬಾದ್ ನಗರ ಸ್ಥಾಪಿತವಾದದ್ದೇ, ಇಂದು
ಒಬ್ಬರನ್ನೊಬ್ಬರು ಇರಿದು ಸಾಯಿಸುತ್ತಿರುವ ಎರಡು ಕೋಮುಗಳ ನಡುವಿನ ಪ್ರೀತಿಯ ಸಂಕೇತವಾಗಿ ಎಂಬುದು ಕಾಕತಾಳೀಯವಲ್ಲ
- ಹಾಗೂ - ಮಹತ್ವದ ವಿಷಯು. ಅಂದಿನ ಅರಸು ಸುಲ್ತಾನ್ ಕುಲಿ ಕುತುಬ್ ಷಾಹ ಪಕ್ಕದಲ್ಲೇ ಇದ್ದ
ಚಿಚ್ಲಾಂ ಹಳ್ಳಿಯ ಸುಂದರಿ 'ಭಾಗಮತಿ'ಯ ಪ್ರೀತಿಯ ಸಂಕೇತವಾಗಿ ಈ ನಗರವನ್ನು ಸ್ಥಾಪಿಸಿದ. `ರಾಜ ಒಂದು ಅದ್ಭುತ ನಗರಿಯನ್ನು ನಿರ್ಮಿಸಬೇಕೆಂದಿದ್ದ.
ಸೌಂದರ್ಯ ಮತ್ತು ಘನತೆಯಲ್ಲಿ ಸ್ವರ್ಗಕ್ಕೆ ಸಮಾನವಾದ ನಗರವನ್ನ ನಿರ್ಮಿಸುವುದು ಅವನ ಕನಸಾಗಿತ್ತು.'
ಎಂದು ಹೈದರಾಬಾದಿನ ಸೆನ್ಸಸ್
ವರದಿಯಲ್ಲಿ ವಿವರಿಸಿದ್ದಾರೆ. ನಂತರ ಭಾಗಮತಿ ಹೈದರ್ಮಹಲ್ ಆದದ್ದು `ಭಾಗ್ಯನಗರ' ಹೈದರಾಬಾದ್ ಆದದ್ದು ಬೇರೆಯೇ ವಿಷಯ. ನಾಲ್ಕು ನೂರು
ವರ್ಷಗಳ ಈ ಚರಿತ್ರೆಯಲ್ಲಿ ಕುತುಬ್ ಷಾಹೀ ವಂಶಜರ ಅಂತ್ಯ - ಔರಂಗಜೇಬನ ಆಕ್ರಮಣದ ಫಲವಾಗಿ -
ಅಲ್ಪಾವಧಿ ಮೊಘಲರ ಆಳ್ವಿಕೆ, ಹಾಗೂ ನಂತರ ಬಂದ
ಅಸಫ್ ಜಾಹೀ ಆಳ್ವಿಕೆ. ಒಂದು ರಾಜ್ಯಕ್ಕಿರಬೇಕಾದ, `ಕೊಲೆ ಸುಲಿಗೆ ಅತ್ಯಾಚಾರ ಅಹಿಂಸೆ ಕ್ಷಾಮ ದಾಮರ ರೋಗ
ರುಜಿನ ಮಹಾಯುದ್ಧ' (ತಿರಮಲೇಶ್) ಎಲ್ಲವೂ
ಇದ್ದರೂ, ಜನರು - ಆಮ್ ಜನರು
- ಶಾಂತಿಯಿಂದ ಬಾಳುತ್ತಿದ್ದರು. ಈ ಶತಮಾನದಲ್ಲಿ, ಅಲ್ಲೊಂದು ಭುಗಿಲೆದ್ದ ರೈತಾಂಗ, ಇಲ್ಲೊಂದು ಮೂಸಿ
ನದಿಯ ನೆರೆ ಬಿಟ್ಟರೆ - ಜನ ಒಬ್ಬರನ್ನೊಬ್ಬರು ತಬ್ಬಿ ಬಾಳುತ್ತಿದ್ದರು. ಮುಸಲ್ಮಾನರು ನವಾಬನ
ಸೈನ್ಯದಲ್ಲಿ, ನ್ಯಾಯಪದ್ಧತಿಯಲ್ಲಿ,
ರಾಜಕಾರಣದಲ್ಲಿ, ವ್ಯಾಪಾರದಲ್ಲಿ. ಹಿಂದೂಗಳು ಉತ್ತುವ, ಬಿತ್ತುವ, ಬೆಳೆವ, ಲೆಕ್ಕಬರೆವ, ಮಂತ್ರಾಲೋಚನೆ
ಮಾಡುವ ಕೆಲಸದಲ್ಲಿ ನಿರತರಾಗಿದ್ದರು. ಇದೆಲ್ಲವೂ ಸ್ವಾತಂತ್ರಕ್ಕೆ ಮೊದಲು.
ಆದರೆ ೧೯೦೮ರಲ್ಲಿ
ಪುರಾನಾ ಪುಲ್‌ನೇ ಮುಳುಗಿಸಿದ ನದಿಯ ನೆರೆಯನೆಂತರ ಆ ಸೇತುವೆಯಡಿ ಬಹಳಷ್ಟು ನೀರು ಹರಿದಿದೆ.
ಎಷ್ಟೆಂದರೆ, ಇಂದು ಮೂಸಿ ನದಿ
ಬತ್ತಿ, ದೊಡ್ಡ ಕೆಟ್ಟ ಕೊಳಚೆ ಚರಂಡಿ
ಆಗಿರುವುದು ಕಾಣಸಿಗುತ್ತದೆ. ಅದರ ಹಿಂದೆಯೇ ನಾವು ನಾಗರೀಕತೆಯ ಬೆಳವಣಿಗೆಯನ್ನು ಕಾಣಬಹುದು.
೨
ಸ್ವಾತಂತ್ರಾನಂತರದ
ಹೈದರಾಬಾದ್ ಈಗ ಮತ್ತೆ ಭುಗಿಲೆದ್ದಿದೆ. ನೂರಾರು ಜನ ಯಾರೂ ಮಾಡದ ತಪ್ಪಿಗೆ ಪ್ರಾಣತ್ಯಾಗ
ಮಾಡಿದ್ದಾರೆ. ಅರ್ಥವಿಲ್ಲದ ಮತೀಯ ಗಲಭೆಯಲ್ಲಿ ಸತ್ತಿದ್ದಾರೆ, ಸಾಯುತ್ತಿದ್ದಾರೆ. ಎಂದಿನತೆ ಈ ಕೋಮುಗಲಭೆಯಲ್ಲಿ ಅರ್ಥ
ಸ್ಫುರಿಸುವುದಿಲ್ಲ. ಅರ್ಥಹೀನತೆಯಲ್ಲಿ ಅರ್ಥ ಹುಡುಕುವುದು ಕಷ್ಟದ ಕೆಲಸ. ಎಂದಿನಂತೆ ಈಗಲೂ
ಕರ್ಫ್ಯೂ ವಿಧಿಸಲಾಗಿದೆ. ಪೋಲೀಸರಿಗೆ ಸಹಾಯ ಮಾಡಲು ಸೈನ್ಯವೂ ಪ್ರವೇಶಿಸಿದೆ.
ಮತ್ತೆ ಮತ್ತೆ
ಹೈದರಾಬಾದ್ ಭುಗಿಲೇಳುತ್ತಿದೆ ಎಂಬ ಪದಪ್ರಯೋಗಕ್ಕೆ ಕಾರಣ ಸ್ವಯಂವೇದ್ಯ. ಇದು ಇಂದು ನಿನ್ನೆಯ
ವಿಷಯವಲ್ಲ. ಹಾಗೂ ಹೈದರಾಬಾದಿಗೆ ಸೀಮಿತವಾದದ್ದೂ ಅಲ್ಲ. ಭಾರತ ವಿಭಜನೆಯೊಂದಿಗೆ, ತದನಂತರ ಲಭಿಸಿದ ಸ್ವಾತಂತ್ರದೊಂದಿಗೇ, ಜನರನ್ನು ಹಿಡಿವ, ಬಡಿವ, ಕಡಿವ, ಕೊಲ್ಲುವ
ಸ್ವಾತಂತ್ರವನ್ನು ನಾವು ಪಡೆದುಕೊಂಡುಬಿಟ್ಟಿದ್ದೇವೆ.
ಹೈದರಾಬಾದಿನಲ್ಲಿ
ಎಲ್ಲವೂ ಒಂದು ನಿಯಮಿತ ಪದ್ಧತಿಯಲ್ಲಿ ನಡೆದುಹೋಗುವುದು: ಒಗ್ಗಿಹೋದ ಜೀವನಕ್ಕನುಸಾರವಾಗಿ. ಎಷ್ಟು
ಒಗ್ಗಿಹೋದ ಮಾತೆಂದರೆ, ಪ್ರತೀ ವರುಷ
ನಡೆಯುವ ಗಣಪತಿ ವಿಸರ್ಜನೆಯ ಮೆರವಣಿಗೆಗೆ ನಾಲ್ಕಾರು ದಿನ ಮೊದಲು, ಬೋನಾಲು ಹಬ್ಬದ ಮುಂಚೆ, ಮೊಹರಂಗಿಂತ ಮುಂಚೆ, ಹಳೆಯ ನಗರದ ಜನ ಹಾಲಿವ ಪುಡಿ, ಈರುಳ್ಳಿ, ಆಲೂಗಡ್ಡೆ, ಅಕ್ಕಿ, ದಿನಸಿ, ದಾಸ್ತಾನು
ಮಾಡಿಕೊಳ್ಳುವಷ್ಟು ಒಗ್ಗಿದ ವಿಷಯ. ಮೂರು ಅಥವಾ ನಾಲ್ಕು ದಿನಗಳಲ್ಲಿ ಹಂತಹಂತವಾಗಿ ಸಡಿಲಗೊಳ್ಳುವ
ಕರ್ಫ್ಯೂ ಹಾಗೂ ಸುಧಾರಿತ ಪರಿಸ್ಥಿತಿಯಲ್ಲಿ ದೈನಂದಿಕಕ್ಕಿಳಿದುಬಿಡುವುದೂ
ಯಾಂತ್ರಿಕವಾಗಿಬಿಟ್ಟಿದೆ. ಎಷ್ಟು ಯಾಂತ್ರಿಕವೆಂದರೆ ಮತಕ್ಷೋಭೆಯಲ್ಲಿ ಹತ್ತಾರು ಜನ ಮರಣಿಸಿದಾಗ
ಮನಸ್ಸಿಗೆ ಅದೂ ಸಹಜವನ್ನಿಸಿ ತಲೆಯಾಡಿಸಿಬಿಡುವಷ್ಟು. ಇಂದು ಇಲ್ಲಿ ಕುಳಿತು `ಪಂಜಾಬಿನ ಇಂದನ ಸ್ಕೋರೆಷ್ಟು?' ಎಂದು ಸತ್ತವರ ಸಂಖ್ಯೆಯನ್ನೂ ನಗೆಚಟಾಕಿ ಮಾಡಿ
ಕೇಳುವಷ್ಟೇ ಅಮಾನವೀಯವಾಗಿ, ಜೀವನದ ಒಂದು
ಭಾಗವಾಗಿ, ಒಪ್ಪಿತ ಸತ್ಯವಾಗಿ
ನಿಂತುಬಿಟ್ಟಿದೆ.
ಹತ್ತು ಜನ
ಮರಣಿಸಿದರೆ, ಅದರಲೆಗಳು ಒಂದೆರಡು
ದಿನ ಇರುತ್ತವೆ. ನೂರು ಜನ ಮರಣಿಸಿದರೆ, ಒಂದೆರಡುವಾರ. ಇಂಥ
ಅರ್ಥಹೀನ ಜೀವನಾಶಯದ ನಂತರ ನಡೆವ ಕ್ರಿಯೆಗಳೂ ಅಷ್ಟೇ ಅರ್ಥಹೀನ ಅನ್ನಿಸುತ್ತದೆ. ಒಂದು ವಿಚಾರಣಾ
ಆಯೋಗ, ಒಂದಿಬ್ಬರ ರಾಜೀನಾಮೆ,
ಪತ್ರಿಕೆಗಳ ಅಬ್ಬರ - ಎಲ್ಲವೂ
ಎಂದಿನಂತೆ ಯಾಂತ್ರಿಕ. ಆಲ್ವಿನ್ ಟೋಫ್ಲರ್ ತಮ್ಮ ಪುಸ್ತಕ `ದಿ ಥರ್ಡ್ ವೇವ್' ನಲ್ಲಿ ಎರಡನೇ ಕೈಗಾರಿಕೀಕರಣದ ಅಲೆಯ ಬಗ್ಗೆ
ಚರ್ಚಿಸುತ್ತಾ ಅದರ ಪ್ರಮುಖ ಲಕ್ಷಣವನ್ನು "standardisation" ಎಂದು ಗುರುತಿಸುತ್ತಾರೆ. ಇಂದಿನ ಕೈಗಾರಿಕೀಕರಣದ
ಪರಿಸ್ಥಿತಿಯಲ್ಲಿ ನಡೆವ ಕೋಮುಗಲಭೆ, ಅದರ ಹಿನ್ನೆಲೆಯ
ರಾಜಕಾರಣ, ಅದರ ಫಲವಾಗಿ ನಡೆವ
ರಾಜಕಾರಣ - ಎಲ್ಲವೂ ಇಂಥ ಸ್ಟಾಂಡರ್ಡೈಸೇಷನ್ನಿಗೆ ಒಳಗಾಗಿದೆಯೇನೋ ಎನ್ನಿಸಿದಾಗ ಕಳವಳವುಂಟಾಗುವುದು.
ಇಂಥ ಸ್ಟಾಂಡರ್ಡೈಸೇಷನ್ನಿನ ಲಕ್ಷಣ: ಕೋಮುಗಲಭೆಯನ್ನು ನಿರೀಕ್ಷಿಸಿ ಹಾಲಿನ ಪುಡಿಯ ಡಬ್ಬವನ್ನು
ಕೊಳ್ಳುವುದರ ಮೂಲಕ ವ್ಯಕ್ತವಾಗುತ್ತದೆ. ಜತೆಗೆ ಪ್ರಸ್ತುತ ವ್ಯವಸ್ಥೆಯಲ್ಲಿ ಜನತೆ ನಂಬಿಕೆ
ಕಳಕೊಡದ್ದನ್ನೂ ಸೂಚಿಸುತ್ತದೆ, ಸಂಕೇತಿಸುತ್ತದೆ.
೩
ಹಾಗೆ ನೋಡಿದರೆ
ಹೈದರಾಬಾದಿನಲ್ಲಿ ನಾನಿದ್ದ ಹಿಮಾಯತನಗರ ಪ್ರಾಂತದಲ್ಲಿ ಬಿದ್ದ ಒಂದೇ ಒಂದು ಕರ್ಫ್ಯೂ ನನಗೆ ಅನೇಕ
ರೀತಿಯಿಂದ ಖುಷಿ ನೀಡಿತ್ತು. ಕರ್ಫ್ಯೂ ಹಬ್ಬವೆನ್ನುವುದು ವರ್ಷಕ್ಕೆರಡುದಿನವಾದರೂ ಇರಲೇಬೇಕೆಂದು
ನಾನಾಗ ಗೆಳೆಯರ ಬಳಿ ಹೇಳಿದ್ದುಂಟು. ಆ ಅಂದಿನ ಖುಷಿಗೆ ಕಾರಣಗಳು ಹಲವು:
ಒಂದು - ತೆಲಂಗಾಣದ
ಹಳ್ಳಿಗಳನ್ನೆಲ್ಲ ಮೋಟರ್‌ಬೈಕಿನ ಮೇಲೆ ಸುತ್ತಿ ಸುತ್ತಿ, ಸಾಂಕೇತಿಕ ಬೆನ್ನು ನೋವಿನಿಂದ ನರಳುತ್ತಿದ್ದ ನನಗೆ,
ಅದೇ ಆಗ ಬಿದ್ದ ಕರ್ಫ್ಯೂ -
ಅದೂ ಸಂಗಂ ಚಿತ್ರಮಂದಿರದಲ್ಲಿ `ವೇಟಗಾಡು' ಸಿನೇಮಾ ನೋಡುತ್ತಿದ್ದಾಗ ಹಾಕಿದ ಸ್ಲೈಡಿನ ಮೂಲಕ
ತಿಳಿದುಬಂದು ಗೊಂದಲಕ್ಕೆ ಕೆಡವಿ, ನನ್ನನ್ನು ಮನೆಯತ್ತ
ಓಡಿಸಿದ ಕರ್ಫ್ಯೂ ಒಂದು ವರವಾಗಿ - ಆಫೀಸಿನ ಹಂಗಿಲ್ಲದೇ, ಯಾರ ಭಿಡೆಗೂ ಒಳಗಾಗದೇ ಕಂಪಲ್ಸರಿಯಾಗಿ ಮೂರು ದಿನ ಆರಾಮ
ಮಾಡುವ, ಸ್ವತಂತ್ರ ಸೆರೆವಾಸ
ಅನುಭವಿಸುವ, ಅನೇಕ ದಿನಗಳಿಂದ
ಓದಲಾಗದೇ ಪೇರಿಸಿಟ್ಟಿದ್ದ ಪುಸ್ತಕಗಳನ್ನು ಓದುವ ಸುವರ್ಣಾವಕಾಶವನ್ನು ಕಲ್ಪಿಸಿಕೊಟ್ಟಿತು.
ಮೇಲಾಗಿ ರಜೆಯ ದಿನಗಳು ಕೈಗೊಳ್ಳಬೇಕಾದ ಯಾವ ಸಾಮಾಜಿಕ ಒತ್ತಡಗಳೂ ನನ್ನ ಮೇಲಿರಲಿಲ್ಲ.
ಎರಡು - ಒಂದೇ
ಕೋಣೆಯಲ್ಲಿ ಒಂಟಿಯಾಗಿ ಬದುಕುತ್ತಾ, ಅಲಂಕಾರ್ ಹೊಟೇಲಿನಲ್ಲಿ
ಖಾರದ ಆಂಧ್ರದೂಟ ಮಾಡುತ್ತಿದ್ದ ನನಗೆ, ನನ್ನ ಕೋಣೆಯ ಮಾಲೀಕ
ಹಲವು ವಿಧಗಳಿಂದ ಕಿರಿಕಿರಿ ಕೊಡುವ ಮನುಷ್ಯನಾಗಿದ್ದ. ಅಡುಗೆ ಕೋಣೆಯೂ ಇರುವ ಬೇರೊಂದು ಪೋರ್ಷನ್
ಖಾಲಿ ಮಾಡಿಸಿ ಕೊಡುತ್ತೇನೆಂದು ಮಾತು ಕೊಟ್ಟು ಅದು ಖಾಲಿಯಾಗಿಲ್ಲವೆಂಬ ನೆವದಲ್ಲಿಯೇ ನಾನಿದ್ದ
ಗವಿಗೆ ಮುನ್ನೂರು ರೂಪಾಯಿ ಕೀಳುತ್ತಿದ್ದ ಈ ನರ - ಓನರನನ್ನು ನಾನು ಖಳನೆಂದು ಪರಿಗಣಿಸಿ,
ಅದೇ ವಠಾರದಲ್ಲಿದ್ದೂ ಅವನತ್ತ
ತಿರುಗಿಯೂ ನೋಡದಿದ್ದ ಅಂಥ ಸಮಯದಲ್ಲಿ - ಅವನ ಅಂತಃಕರಣ ಮಾನವೀಯತೆಗಳನ್ನು ಅರಿಯಲು ಈ ಕರ್ಫ್ಯೂ
ಸಹಕಾರಿಯಾಗಿತ್ತು. ಕರ್ಫ್ಯೂ ಇದ್ದಷ್ಟೂ ದಿನ ಸಮಯಕ್ಕನುಸಾರವಾಗಿ, ಕರಾರುವಾಕ್ಕಾಗಿ, ಅವನ ಮನೆಯಿಂದ ರುಚಿಯಾದ ಊಟ ಕಳುಹಿಸಿಕೊಟ್ಟಿದ್ದ.
ಹೀಗೆ ದ್ವೇಷದಲ್ಲಿ
ಭುಗಿಲೆದ್ದ ಕೋಮುಗಲಭೆ ನನಗೆ ಪ್ರೀತಿಯನ್ನರಿಯಲು ಸಹಕಾರಿಯಾಯಿತು. ಆದರೆ ಈ ಜ್ಞಾನೋದಯಕ್ಕೆ ನಾನು
ಹದಿನೇಳು ಜನರ ಬಲಿ ತೆಗೆದುಕೊಂಡಿದ್ದೆ. ಅದೇ ಸಮಯದಲ್ಲೇ ಮನೆಗೆ ಪತ್ರಿಕೆ ಹಾಕುತ್ತಿದ್ದ ಹುಡುಗ
ಪತ್ರಿಕೆ ಹಾಕದೇ, ಹೊರಗೆ ಮೂರರಷ್ಟು
ಬೆಲೆ ಕೊಟ್ಟುಕೊಳ್ಳಬೇಕಾಗಿ ಬಂದಾಗ ಅವನ ಸಮಯಸಾಧಕತನದ ಬಗ್ಗೆ ಸಿಟ್ಟೂ ಉಂಟಾಗಿತ್ತು.
ದೂರದರ್ಶನವೆಂಬ ಮಾಧ್ಯಮದ ಪ್ರಾಮುಖ್ಯತೆ ತಿಳಿದದ್ದೂ ಆಗಲೇ. ಅವರ "The situation
is tense but under control" (ಪರಿಸ್ಥಿತಿ
ಆತಂಕಕಾರಿಯಾದರೂ ಹದ್ದುಬಸ್ತಿನಲ್ಲಿದೆ) ಎಂಬ ಗಿಣಿಪಾಠ ಮನಸ್ಸಿಗೆ ಎಷ್ಟೋ ನೆಮ್ಮದಿಯನ್ನು
ನೀಡಿತ್ತು.
ಇಂದಿರಾಗಾಂಧಿಯ
ಸಾವಿನ ನಂತರ, ಎರಡು ದಿನಗಳಕಾಲ
ದುಪ್ಪಟ್ಟು ಬೆಲೆಕೊಟ್ಟು ವಾರ್ತಾಪತ್ರಿಕೆ ಕೊಂಡಾಗ, ಒಬ್ಬರ ಸಾವಿನ ಮೇಲೂ ಲಾಭಗಳಿಸಲು ಹೊರಟ ಮನುಷ್ಯನ
ನೀಚತನದ ಬಗ್ಗೆ ಸಿಟ್ಟು ಉಕ್ಕಿತ್ತು. ಆದರೆ ಹೀಗೆ, ಹದಿನೇಳು ಜನರ ಸಾವಿನ ಫಲವಾಗಿ ಪ್ರೀತಿಯನ್ನರಿತ,
ಮೂರು ದಿನ ರಜೆ ಸಿಕ್ಕಿತೆಂದು
ಖುಷಿ ಪಡುವ ನನ್ನ ಪ್ರವೃತ್ತಿ ಇಂಥದೇ ಮಾವನರಲ್ಲೊಬ್ಬನಾಗಿ, ಎಲ್ಲರ ನಡುವೆ, ಎಲ್ಲರ ಹಂಗೆ ನಿಲ್ಲಿಸಿಬಿಡುತ್ತದೆ. ಈ ಕರ್ಫ್ಯೂ
ವೃತ್ತಾಂತದ ಕೂಡಲೇ ನಾನು ಅಡುಗೆ ಕೋಣೆಯಿದ್ದ ಬೇರೊಂದು ಮನೆ ನೋಡಿಕೊಂಡೆನೆಂಬುದು ಬೇರೆಯದೇ ವಿಷಯ.
೪
ಕೋಮುಗಲಭೆಯ ಮೂಲ
ಹುಡುಕುವುದು ಬಹಳ ಸುಲಭ, ಸರಳ.
`ಕಾನೂನು
ವ್ಯವಸ್ಥೆಗೆ ಇರುವ ಶತ್ರುಗಳು ಎರಡು: ಸಂಪೂರ್ಣ ಸತ್ಯ ಮತ್ತು ಇಡಿಯಾದ ಸುಳ್ಳು. ಸತ್ಯದ ಅರಿವಾದಾಗ
ಕ್ರಾಂತಿಯಾಗುತ್ತದೆ. ಸುಳ್ಳನ್ನೇ ಉಣಿಸಿದಾಗ ಅರ್ಥಹೀನ ಗಲಭೆಯಾಗುತ್ತದೆ.' ಎಂದು ಎಂ.ಜೆ.ಅಕಬರ್ ಬರೆದಿದ್ದರು. ಈ ಸಾವುನೋವುಗಳ
ಚರಿತ್ರೆ ಇಂಥ ಗಾಳಿಮಾತುಗಳ ಸುಳ್ಳುಗಳ ಹುಸಿ ಸುದ್ದಿಗಳ ಭದ್ರ ಬುನಾದಿಯ ಮೇಲೆ ನಿರ್ಮಿತವಾಗಿರುತ್ತವೆ.
ಮೊರಾದಾಬಾದ್‌ನಲ್ಲಿ
ಆದ ಕೋಮು ಗಲಭೆಗೆ, ನಮಾಜಿನ ಸಮಯದಲ್ಲಿ
ಮಸೀದಿಯೊಳಕ್ಕೆ ನುಗ್ಗಿದ ಹಂದಿಯೇ ಕಾರಣ ಎಂದು ಒಂದು ಕಾರಣವನ್ನು ಹುಡುಕುವುದು ಸುಲಭ. ಅಥವಾ `ಹಿಂದೂಗಳೇ ಆ ಹಂದಿಯನ್ನು ಮಸೀದಿಯೊಳಕ್ಕೆ ತಳ್ಳಿದರಂತೆ'
ಎಂದು ಸುದ್ದಿ ಹಬ್ಬಿಸುವಷ್ಟೇ
ಸರಳ ಆ ಗಲಭೆಯನ್ನು ಸಂಕೀರ್ಣಗೂಳಿಸುವುದು.
ಈಬಾರಿ
ಹೈದರಾಬಾದಿನಿಂದ ಬಂದ ವದಂತಿಗಳು - ಅವೂ ಅಷ್ಟೇ ಆತಂಕಕಾರಿಯಾದವು. ಒಂದು - ಮ್ಯುನಿಸಿಪಾಲಿಟಿ
ಸರಬರಾಜು ಮಾಡುವ ನೀರಿನಲ್ಲಿ ವಿಷ ಬೆರೆಸಲಾಗಿದೆ, ಹೀಗಾಗಿ, ಒಂದು ಪ್ರಾಂತದ ಇಡೀ
ಜನರು ಸಾಯುವುದು ಖಚಿತ ಎಂಬ ವದಂತಿಯಿತ್ತಂತೆ. ಅಂದು ಯಾರ್ಯಾರು ನಿರ್ಜಲ ಉಪವಾಸ ಮಾಡಿರಬಹುದೋ
ಊಹಿಸುವುದು ಕಷ್ಟ. ಅಥವಾ ಇನ್ನೊಂದು - ಗೌಲೀಗೂಡಾ ಪ್ರಾಂತದಲ್ಲಿ ಯಾವುದೋ ಮಸೀದಿಯ ಆವರಣದಲ್ಲಿ
ನಿರ್ಮಾಣಕ್ಕೆಂದು ಅಗೆಯುತ್ತಿದ್ದಾಗ ಒಂದು ಶಿವಲಿಂಗ ಉದ್ಭವವಾಯಿತೆಂಬ ವದಂತಿ - ಅದೇ ಮತಕ್ಷೋಭೆಯ
ಬೀಜವೆಂಬ ಊಹೆ - ಸುಳ್ಳಿರಬಹುದು. ಸುಳ್ಳಿರಲೇಬೇಕು. ಆದರೂ ರಾಮಜನ್ಮಭೂಮಿಯ ಹಿನ್ನೆಲೆಯಲ್ಲಿ - ಈ
ವದಂತಿ ಆಶ್ಯರ್ಯದ್ದು ಅಲ್ಲವಾದರೂ, ತೀವ್ರ
ಆತಂಕಕಾರಿಯಾದದ್ದು.
`ಮೆರವಣಿಗೆ ಎರಡನೇ
ಮಸೀದಿಯ ತಿರುವಿಗೆ ತಲುಪಿದಾಗ ರಕ್ತ ಒಸರುತ್ತಿದ್ದ ದನದ ಬಾಲದ ತುಂಡೊಂದು ಪಲ್ಲಕಿಯ ಮೇಲೆ
ಬಿತ್ತಂತೆ...' (ಪ್ರಗತಿಪಥ ಅಥವಾ
ದನದ ಬಾಲ, ಬೊಳುವಾರು ಮಹಮದ
ಕುಂಞಯವರ ಕಥೆ)
ಸುಳ್ಳಿನ ಆಧಾರದ
ಮೇಲೆ ರಾಜ್ಯವಾಳುವುದು ಪ್ರಜಾಸ್ವಾಮ್ಯದ ಲಕ್ಷಣಗಳಲ್ಲಿ ಒಂದಾಗಿಹೋಗುತ್ತಿರುವ ಕಾಲವನ್ನು ನಾವು
ತಲುಪಿದ್ದೇವೆ. ಪ್ರಜಾಸ್ವಾಮ್ಯ ಅತ್ಯಂತ ಸರಳ ವಿಧಾನ. ಮುಖ್ಯಮಂತ್ರಿಯೊಬ್ಬರನ್ನು
ಗದ್ದುಗೆಯಿಂದಿಳಿಸಲು ಆತನ ಪಕ್ಷದವರು, ಆತನಲ್ಲಿ ಅವಿಶ್ವಾನ
ಪ್ರಕಟಪಡಿಸಿದರೆ ಸಾಕು. ಆದರೆ ನಿಜಜೀವನದಲ್ಲಿ ಪ್ರಜಾಸ್ವಾಮ್ಯ ರಾಜಕಾರಣದ ಒತ್ತಡಗಳು ಬೇರೆಯೇ
ರೀತಿಯಾದವು. ಇಲ್ಲಿ ಎಲ್ಲವೂ ಮುಸುಕಿನೊಳಕೆ ಗುದ್ದಾಟ. ಪ್ರಹಾರ ಮಾಡಿದ್ದು ಯಾರು, ಏಟು ತಿಂದದ್ದು ಯಾರು ಎಂದು ತಿಳಿಯುವುದರಲ್ಲೇ ಕಾಳಗ
ಮುಗಿದು, ಮಂದಿನ ಕಾಳಗಕ್ಕೆ
ತಯಾರಿ ನಡೆದಿರುತ್ತದೆ. ಮುಖ್ಯಮಂತ್ರಿ, ಪ್ರಧಾನಮಂತ್ರಿಗಳು
ಜನರಿಂದ ನೇರವಾಗಿ ಆಯ್ಕೆಯಾಗದಿದ್ದಷ್ಟೂ ದಿನ, ಪ್ರಜಾಸ್ವಾಮ್ಯ ಪಗಡೆಯಾಟಕ್ಕೆ ಆಸ್ಪದವಿದ್ದಷ್ಟೂ ದಿನ ಸುತ್ತು ಬಳಸಿನ ರಾಜಕಾರಣ
ಮುಂದುವರೆಯುವುದು. ಇಂಥ ರಾಜಕಾರಣದ ಒಂದು ದಾಳವಾಗಿ ಮತಕ್ಷೋಭೆಯೂ ಬಳಸಲ್ಪಡುವುದು. ಮತ್ತು ಎಲ್ಲ
ಮತಕ್ಷೋಭೆಯ ಅಂತ್ಯವೂ ಹಿಂದೆ ಹೇಳಿದ ಸ್ಟಾಂಡರ್ಡೈಸೇಷನ್ನಿಗೆ ಅನುಸಾರವಾಗಿ, ಒಂದೇ ರೀತಿಯಲ್ಲಿರುವುದು:
'ರಾತ್ರಿ
ಹನ್ನೊಂದಕ್ಕೆ ಪೋಲೀಸರು ಬರುವ ಮೊದಲು ನಾಲ್ಕು, ಆ ಬಳಿಕ ಐದು ಜನರು ಸತ್ತರೆಂದು ಮರುದಿನದ ಪತ್ರಿಕೆಯಲ್ಲಿ ಪ್ರಿಂಟಾಗುತ್ತದೆ. ಒಂಭತ್ತು
ಅಂಗಡಿಗಳು ಇಡಿಯಾಗಿ ಮತ್ತು ಇಪ್ಪತ್ತೇಳು ಅಂಗಡಿಗಳು ಭಾಗಶಃ ನಾಶವಾಗಿದೆಯೆಂದು ಪೋಲೀಸ್ ವರದಿ
ಹೇಳುತ್ತದೆ. ಬಂಧಿತರಲ್ಲಿ ಹೆಚ್ಚಿನವರು ಹೊರಗಿನಿಂದ ಬಂದವರೆಂದು ಜನರಾಡಿಕೊಳ್ಳುತ್ತಾರೆ.
ಸತ್ತವರಿಗೆ ತಲಾ ಎರಡು ಸಾವಿರ ಮತ್ತು ಗಾಯಗೊಂಡವರಿಗೆ ತಲಾ ಎರಡು ನೂರು ಪರಿಹಾರ ಧನ
ಘೋಷಿತವಾಗಿದೆ. ಪರಿಸ್ಥಿತಿ ಶಾಂತವಾಗಿದೆಯೆಂದು ಪ್ರದೇಶ ಸಮಾಚಾರದಲ್ಲಿ ಹುಡುಗಿಯೊಬ್ಬಳು ಇಂಪಾಗಿ
ಹೇಳಿದ್ದಾಳೆ.'
`ಜೈ ಹಿಂದ್'
(ಪ್ರಗತಿಪಥ ಅಥವಾ
ದನದ ಬಾಲ, ಬೊಳುವಾರು)
೫
ಕೋಮುಗಲಭೆಯ ಮೂಲ
ಹುಡುಕುವುದು ಅಷ್ಟೇನೂ ಸರಳವಲ್ಲ:
ಇಂಥ ಗಲಭೆಗಳಿಗೆ
ಆರ್ಥಿಕ ಮೂಲಗಳಿರುತ್ತವೆ. ಬಡತನ ತಾಂಡವನಾಡುತ್ತಿರುವ ಹಳೇ ನಗರ ಪ್ರಾಂತದಲ್ಲೇ ಇದು ನಡೆಯುವುದು
ಕೌತುಕಪೂರ್ಣ. ಬಡತನದ ಜತೆಜತೆಗೇ ಅಲ್ಲಿನ ಸಣ್ಣ ಪುಟ್ಟ ಗಲ್ಲಿಗಳ ಭೂಗೋಳದ ಬೆಂಬಲವೂ ಇಂಥ
ಗಲಭೆಗಿದೆ. ಮತ್ತು ಇದಕ್ಕೆ ಚರಿತ್ರೆಯ ಮೂಲವೂ ಇದೆ. ಯಾಕೆ ಹೆಚ್ಚಿನಂಶ ಕೋಮು ಗಲಭೆಗಳು
ಸ್ವಾತಂತ್ರಾನಂತರ ನಡೆದವು? ಭಾರತೀಯ
ಮುಸಲ್ಮಾನರನ್ನು ಪಾಕಿಸ್ತಾನ ಪರ ಎಂದು ನೋಡುವ ದೃಷ್ಟಿಕೋನದಲ್ಲಿ, ಈ ಸಣ್ಣ ಆದರೆ ಅಪಾಯಕಾರಿ ಸಂಕೇತದಲ್ಲಿ ಇದು
ಅಡಕವಾಗಿದೆ. ಪಾಕಿಸ್ತಾನವೆಂಬ ದೇಶ ಮತೀಯ ಆಧಾರದ ಮೇಲೆ ರೂಪಿತಗೊಂಡ ದುರಂತದ ಮೇಲೆ ಈ ಸೌಧ
ನಿರ್ಮಿತವಾಗಿದೆ. ಹೈದರಾಬಾದಿನ ಅಂದಿನ ಪ್ರಧಾನ ಮಂತ್ರಿ ಮೀರ್ ಲಿಯಾಕ್ ಅಲಿ ಪಾಕಸ್ತಾನಕ್ಕೆ ವಲಸೆ
ಹೋದದ್ದು. ರಜಾಕಾರರ ನಾಯಕ ಕಾಸಿಂ ರಿಜ್ವಿ - ಇಲ್ಲಿ ರಕ್ತ ತಾಂಡವವಾಡಿದ ನಂತರ, ಶಿಕ್ಷೆಗೊಳಪಡದೆಯೇ ಪಾಕಿಸ್ತಾನಿ ಆಶ್ರಯ ಪಡೆದದ್ದು
ಹೈದರಾಬಾದೀ ನೆನಪಿನಿಂದ ಅಳಿಸಿಹಾಕಲು ಸಾಧ್ಯವಾಗಿಲ್ಲ. ಪಾಕಿಸ್ತಾನದ ವಿರುದ್ಧ ಕ್ರಿಕೆಟ್
ಮ್ಯಾಚಿನಲ್ಲಿ ಅಜರುದ್ದೀನ್ ಸರಿಯಾಗಿ ಆಡದಿದ್ದರೆ ನನಗೆ ಆತಂಕವಾಗುವುದುಂಟು: ಆತನನ್ನೂ
ಪಾಕಿಸ್ತಾನ ಪರ ಎಂದು ಕರೆವ ಮೂಲಭೂತವಾದಿಗಳು ಹೈದರಾಬಾದಿನಲ್ಲಿ ವಿಪುಲ ಸಂಖ್ಯೆಯಲ್ಲಿದ್ದಾರೆ. [ಈ
ಲೇಖನ ಮೊದಲು ಬರೆದಾಗ, ಅಜರುದ್ದೀನ್ ತಮ್ಮ
ಆಟದ ಉತ್ತುಂಗದಲ್ಲಿದ್ದರು. ಬೆಟಿಂಗಿನ ವಿವಾದ ಏನೇ ಇರಲಿ, ಪಾಕಿಸ್ತಾನದ ವಿರುದ್ಧದ ಮ್ಯಾಚುಗಳಲ್ಲಿ ಅಜರುದ್ದೀನರ
ರಿಕಾರ್ಡು ಮಾತ್ರ ಭಾರತದ ಪ್ರತಿ ಅವರ ದೇಶಭಕ್ತಿಯ ಬಗ್ಗೆ ಅನುಮಾನಕ್ಕಾಸ್ಪದ ನೀಡದಿರುವ ಹಾಗಿದೆ.
ಅವರ ಬ್ಯಾಟಿಂಗಿನ ಅತ್ಯಂತ ಕಡಿಮೆ ಸರಾಸರಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ದೇಶಗಳ ವಿರುದ್ಧವಾಗಿದೆ.
ಈ ಬೆಟಿಂಗ್ ಪ್ರಕರಣ ಪಾಕಿಸ್ತಾನದ ವಿರುದ್ಧದ ಮ್ಯಾಚುಗಳಿಗೆ ಸಂಬಂಧಿಸಿದಂತೆ ಉಂಟಾಗಿದ್ದರೆ
ಹೈದರಾಬಾದಿನಲ್ಲಿ ಆತನ ಗತಿಯೇನಾಗುತ್ತಿತ್ತೋ ನನಗೆ ಊಹಿಸಲೂ ಭಯವಾಗುತ್ತದೆ.]
ನಾನು ಮಾತನಾಡಿದ
ಅನೇಕ ಯುವಕರಲ್ಲಿ, ಅದರಲ್ಲೂ
ವಿದ್ಯಾವಂತ ಯುವಕರಲ್ಲಿ ಭಾರತವಿಭಜನೆಗೆ ಕಾರಣರೆನ್ನಲಾದ ಗಾಂಧಿ, ಮತ್ತು ತತ್ಫಲವಾಗಿ ಮುಸ್ಲಿಂ ಜನಾಂಗದ ಬಗ್ಗೆ ತೀವ್ರ
ದ್ವೇಷ ಇರುವುದನ್ನ ಕಂಡಿದ್ದೇನೆ. ಇವರೆಲ್ಲರಿಗೂ ವೈಯಕ್ತಿಕ ನೆಲೆಯಲ್ಲಿ ಮುಸ್ಲಿಂ
ಗೆಳೆಯರಿದ್ದಾರೆ. ಆದರೆ ಆ ಕೋಮಿನ ಬಗ್ಗೆ ನಿಲುವು ಸ್ಪಷ್ಟವಾಗಿದೆ. ಹೀಗೆ, ಸ್ವತಃ ಕೋಮು ಗಲಭೆಯಲ್ಲಿ ಪಾಲ್ಗೊಳ್ಳದ ಆದರೂ ಗಲಭೆಯ
ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವ, ಪರೋಕ್ಷ ಬೆಂಬಲದ
ಒಂದು ದೊಡ್ಡ ಗುಂಪು ಹೈದರಾಬಾದಿನಲ್ಲಿದೆ. ಇವರು ಬಹುಶಃ ಇಂಥ ಗಲಭೆಯನ್ನ ತಮ್ಮ ಮನೆಯ ಮುಂದೆ
ನೋಡಲು ಇಷ್ಟಪಡುವುದಿಲ್ಲ. ಬಹುಶಃ ಯಾರಾದರೂ ತೊಂದರೆಯಲ್ಲಿ, ಅಪಾಯದಲ್ಲಿದ್ದರೆ, ಕೋಮಿನ ಪ್ರಮೇಯವಿಲ್ಲದೇ ಆಶ್ರಯವನ್ನೂ ನೀಡಬಲ್ಲರು.
ಆದರೂ ಅವರ ಆಲೋಚನೆ ಇಂಥ ಆತಂಕಕಾರಿ ದಿಕ್ಕಿನಲ್ಲಿ ಇದೆ.
ನನ್ನ ಗೆಳೆಯ ಪವನ್
ಅವರು ಸಣ್ಣಂದಿನಲ್ಲಿ ಭಾರತ-ಪಾಕಿಸ್ತಾನದ ಹಾಕಿ ಇಲ್ಲವೇ ಕ್ರಿಕೆಟ್ ಮ್ಯಾಚ್ ನಡೆದಾಗ ಏನು
ಮಾಡುತ್ತಿದ್ದರೆಂದು ಹೇಳುತ್ತಾರೆ. ಅವರು, ಹುಡುಗರೆಲ್ಲ ಸೇರಿ ಹನುಮಂತನ ಗುಡಿಯಿಂದ ತಾಯತ್ತು ತಂದ ರೇಡಿಯೋದ ಮುಂದಿಡುತ್ತಿದ್ದರಂತೆ.
ಪಾಕಿಸ್ತಾನ ಗೆಲ್ಲಬೇಕೆಂದು ಮುಸ್ಲಿಮರೂ ತಾವೀಜ್ ತಂದಿಡುತ್ತಿದ್ದರಂತೆ. ಇಂದು ಪವನ್ ಈ
ಎಲ್ಲವನ್ನೂ ಮೀರಿ ನಿಂತಿರುವುದು - ಅವರ ಸ್ವಂತ ಆಲೋಚನೆಯಿಂದ, ಮತ್ತು ವೈಯಕ್ತಿಕ ನೆಲೆಯಲ್ಲಿ. ಆದರೆ ಪವನರ ಎಷ್ಟು
ಮಂದಿ ಗೆಳೆಯರು ಇಂದು ತಾಯತ್ತು ತಾವೀಜು ತಂದಿಡಲು ತಹತಹಿಸುತ್ತಿರಬಹುದು?
ಕೋಮುಗಲಭೆಗೆ
ವರ್ತಮಾನದ, ಭವಿಷ್ಯದ ಮೂಲಗಳೂ
ಇವೆ. ತಮ್ಮ ಕಣ್ಣೆದುರಿಗೇ ತಂದೆತಾಯಿಯರು ಕ್ರೂರವಾಗಿ ಬಲಿಯಾದದ್ದನ್ನ ಸಣ್ಣ ಮಕ್ಕಳು
ಮರೆಯುವುದಿಲ್ಲ. ಇಲ್ಲಿ ಹಂತಕ ಅನಾಮಧೇಯನಾದ್ದರಿಂದ ಹಂತಕನ ಕೋಮಿನೆಡೆಗೆ ದ್ವೇಷ ತಿರುಗುವುದು.
ಮಕ್ಕಳು ಈ ಘಟನೆಯನ್ನು ಮರೆಯಬೇಕೆಂದರೂ ಸಮಾಜ ಮರೆಯಗೊಡುವುದಿಲ್ಲ. ಸೇಡಿನ ಕಥೆಗಳೇ ಪ್ರಧಾನವಾಗಿ,
ಕಾನೂನು ಮುರಿದಾದರೂ ಸೇಡು
ತೀರಿಸಿಕೊಳ್ಳುವಂತಹ ಭಾರತೀಯ ಸಿನೇಮಾಗಳನ್ನು ಉಣ್ಣುವ ಮಕ್ಕಳು ಪ್ರೀತಿಯ ಮನೋಭಾವವನ್ನು
ಬೆಳೆಸಿಕೊಳ್ಳುವುದಾದರೂ ಹೇಗೆ? ಕಡೆಗೂ ಪ್ರೀತಿಯ
ಅಂಶವೇನಾದರೂ ಇದ್ದರೆ, ಅದು ಸಿನೇಮಾದ
ಹೀರೋಯಿನ್‍ಗೆ ಮಾತ್ರ ಮೀಸಲಾಗುತ್ತದೆಯೇ ಹೊರತು, ಇತರರಿಗೆ ಅದರಲ್ಲಿ ಪಾಲೆಲ್ಲಿ?
ಈ ಸಮಸ್ಯೆಯ ಆಯಾಮ
ಇಲ್ಲಿಗೇ ಮುಗಿಯುವುದಿಲ್ಲ. ಇಷ್ಟಕ್ಕೇ ಸೀಮಿತವಾಗುವುದಿಲ್ಲ. ಜಾತಿ ಮತದ ಹೆಸರಿನಲ್ಲಿ ಕೊಂದವನೂ,
ಸತ್ತವನೂ - ಅವರವರ
ಕೋಮಿನಲ್ಲಿ, ಅವರವರ
ಮೊಹಲ್ಲಾದಲ್ಲಿ 'ಜನಪದ ನಾಯಕ'ರಾಗುವುದರಿಂದ, ಹೀರೋಗಳಾಗುವುದರಿಂದ, ಸತ್ತರೆ 'ವೀರಮರಣ'ವನ್ನು ಅಪ್ಪುವುದರಿಂದ - ಈ ಕೊಲ್ಲುವ ಕಡಿವ ಜನಕ್ಕೆ ಪಾಪಭಾವನೆಯೂ ಕಾಡುವುದಿಲ್ಲ. ಬದಲಿಗೆ
ಹೆಚ್ಚು ಜನರನ್ನು ಕೊಂದಷ್ಟೂ ಹೆಚ್ಚಿನ ಘನತೆ ಅವನಿಗೆ ಪ್ರಾಪ್ತವಾಗುವುದು. ಕಾವ್ಯನ್ಯಾಯದ
ಮಾತಿನಲ್ಲಿ ಆತ್ಮಸಾಕ್ಷಿ ಎಂದೂ ಪ್ರಮುಖ ಪಾತ್ರ ವಹಿಸುವುದಿಲ್ಲ. ಕ್ರೌರ್ಯಕ್ಕೆ ಸಾಮಾಜಿಕ
ಮಾನ್ಯತೆ, ಇಂಥದೇ
ಪ್ರಕ್ರಿಯೆಯಲ್ಲಿ ದೊರೆಯುವುದು.
ಇನ್ನೂ ಒಂದು
ಆಯಾಮವನ್ನು ಈ ಗಲಭೆಗಳಿಗೆ ಒದಗಿಸಬಹುದು:
ಜನರೆಲ್ಲಾ
ಸುಖಶಾಂತಿಯಿಂದ ಜೀವನ ನೆಡೆಸುತ್ತಾರೆಂದರೆ ಶಸ್ತ್ರಾಸ್ತ್ರ ತಯಾರಿಸುವ ಉದ್ದಿಮೆದಾರರು ಜೀವನ
ಮಾಡುವುದು ಹೇಗೆ? `ಶಸ್ತ್ರಾಸ್ತ್ರ
ಉತ್ಪಾದನೆ ಬಹಳ ದುಬಾರಿಯ ಕೆಲಸವಾದ್ದರಿಂದ, ಉತ್ಪಾದಕ - ಗ್ರಾಹಕಬರುವನೆಂಬ ನಿರೀಕ್ಷೆಯಲ್ಲಿ ಆರಾಮವಾಗಿ ಕುಳಿತುಕೊಳ್ಳುವಂತಿಲ್ಲ.
ಕಾರ್ಖಾನೆಯಿಂದ ಪ್ರತಿದಿನ ಉತ್ಪಾದನೆಯ ಶಬ್ದ ಹೊಮ್ಮಿಸಲು, ಸಾವಿರಾರು ಕೆಲಸಗಾರರನ್ನು ನೌಕರಿಯಲ್ಲಿ ಮುಂದುವರೆಸಲು,
ಅವನು ಬೇಡಿಕೆಯನ್ನು
ಸೃಷ್ಟಿಸಬೇಕಾಗುತ್ತದೆ. ಹೀಗಾಗಿ ಗನ್ ಕೊಳ್ಳುವ ಗ್ರಾಹಕರನ್ನು, ಈಗಾಗಲೇ ತನ್ನಲ್ಲಿರುವ ಗನ್ ಬಿಸಾಡುವಂತೆ, ಅಥವಾ ಇನ್ನೂ ಉತ್ತಮವೆಂದರೆ ಭದ್ರತೆಯ, ರಕ್ಷಣೆಯ ಹೆಸರಿನಲ್ಲಿ ಎರಡು ಗನ್ಗಳನ್ನು, ಸಾಧ್ಯವಾದರೆ ಹತ್ತು ಗನ್ಗಳನ್ನು ಕೊಳ್ಳುವಂತೆ
ಪ್ರಚೋದಿಸಬೇಕು.' ಎಂದು
ಆರ್.ಕೆ.ಲಕ್ಷ್ಮಣ್ ತಮ್ಮ ಲೇಖನವೊಂದರಲ್ಲಿ ಹೇಳುತ್ತಾರೆ. `ಈ ಬಾರಿ ಗಲಭೆಯಲ್ಲಿ ಉಪಯೋಗಿಸಿದ ಶಸ್ತ್ರಾಸ್ತ್ರದ
ಪ್ರಮಾಣ ಆತಂಕಕಾರಿಯಾದದ್ದು.' ಎಂದು ಬೆಂಜಮಿನ್
ಹೇಳುತ್ತಾರೆ. ಹೀಗೆ ಶಸ್ತ್ರಾಸ್ತ್ರ ಕೊಂಡವರು ಅದರ ಉಪಯೋಗಕ್ಕೆ ಅವಕಾಶ ಕಾಯುತ್ತಿರುವಾಗ ಶಾಂತಿ
ಸೌಹಾರ್ದತೆಯ ಮಾತುಗಳು ನಿಜಕ್ಕೂ ದೂರವಾಗಿಯೇ ಉಳಿಯುವುದು. ಮತ್ತು ಶಸ್ತ್ರಾಸ್ತ್ರ ಉಪಯೋಗಿಸುವ
ವಾತಾವರಣದಲ್ಲಿ ಏನಿಲ್ಲದಿದ್ದರೂ ಲಾಠಿ ಕಲ್ಲು ಕೊಳ್ಳಿಯ ಮೊರೆ ಹೋಗುವುದು ಸಹಜವೂ ಕೂಡಾ.
ಮತ್ತೂ ಒಂದು
ಆಯಾಮವನ್ನು ಈ ಕೋಮುಗಲಭೆಗೆ ನೀಡಬಹುದಾದರೆ ಅದು ಪೋಲೀಸರದು. ಮೊರಾದಾಬಾದ್‌ನಲ್ಲಿ, ಮೀರಠ್‌ನಲ್ಲಿ ನಡೆದ ಕೋಮುಘರ್ಷಣೆಗೆ ಪೋಲೀಸರ ಕಾಣಿಕೆ
ಕಡಿಮೆಯದ್ದೇನೂ ಅಲ್ಲ. ಈ ಬಾರಿ ಹೈದರಾಬಾದಿನಿಂದ ಬಂದಿರುವ ವರದಿಗಳೂ ಆತಂಕ ಹುಟ್ಟಿಸುತ್ತವೆ.
ಕಾನ್ಸ್ಟೇಬಲ್ ಒಬ್ಬ ಎಸಿಪಿಯನ್ನು ಗುಂಡಿಕ್ಕಿ ಕೊಂದದ್ದು ಅವರ ಅಂತರಂಗದ ನಿರ್ಮಿತಿಯೇ
ಶುದ್ಧವಾಗಿಲ್ಲ ಎಂಬುದನ್ನು ಸೂಚಿಸುತ್ತದೆ. ಇಂಥ ಪೋಲೀಸ್ ಪಡೆ ಪಡೆದಿರುವ ನಾವು ಅವರಿಂದ ರಕ್ಷಣೆ
ನಿರೀಕ್ಷಿಸುವುದು ದೂರದ ಮಾತಾಗುವುದು. ಪೋಲೀಸರು ಗಲಭೆಯಲ್ಲಿ ಪಾಲ್ಗೆಳ್ಳಬೇಕೆಂದೇನೂ ಇಲ್ಲ.
ನಡೆಯುತ್ತಿರುವ ಗಲಭೆಯನ್ನು ತಡೆಯದಿದ್ದರೂ ಸಾಕು. ಬೆಂಕಿಗೆ ತುಪ್ಪ ಸುರಿದಷ್ಟು ಕೆಲಸ
ನಡೆಯುವುದು. ಬೆಂಜಮಿನ್ ಹೇಳುತ್ತಾರೆ: `ಈಗ ನಡೆದ ಈ
ದುರಂತಕ್ಕೆ ಮುಸ್ಲಿಂ ಮೂಲಭೂತವಾದಿಗಳು ಕಾರಣರಲ್ಲ, ಆರೆಸ್ಸೆಸ್ಸೂ ಅಲ್ಲ. ರಾಜಕಾರಣಿಗಳೂ ಅಲ್ಲ.
ಪತ್ರಕರ್ತರೂ ಅಲ್ಲ. ಗೂಂಡಾಗಳೂ ಅಲ್ಲಿ. ನಿಜ ಅವರೆಲ್ಲರದೂ ಒಂದು ಸಣ್ಣ ಪಾತ್ರವಿದ್ದಿರಬಹುದು.
ಆದರೆ ಈ ಎಲ್ಲವನ್ನೂ ತಡೆಗಟ್ಟಬಲ್ಲ ಶಕ್ತಿಯಿದ್ದೂ ತಡೆಗಟ್ಟದ ಪೋಲೀಸರೇ ಇದಕ್ಕೆಲ್ಲ ಕಾರಣ.'
[ಇತ್ತೀಚೆಗೆ
ಅಹಮದಾಬಾದಿನಲ್ಲಿ ನಡೆದ ಗಲಭೆಯಲ್ಲಿ, ಪೋಲೀಸರ ಪಾತ್ರದ
ಬಗ್ಗೆ ಮತ್ತೆ ಪ್ರಶ್ನೆಗಳೆದ್ದಿವೆ. ಸಾಲದ್ದಕ್ಕೆ ಮೊದಲ ಬಾರಿಗೆ ಒಂದು ಕೋಮಿಗೆ ಸೇರಿದವರು ಹೆದರಿ
ತಮ್ಮ ಸಮವಸ್ತ್ರದ ಮೇಲೆ ಹಾಕಬೇಕಿದ್ದ ಹೆಸರಿನ ವಿವರವನ್ನು ಹಾಕಲಿಲ್ಲ ಎಂಬುದು ಪರಿಸ್ಥಿತಿಯ
ಗಂಭೀರತೆಯನ್ನ ಸೂಚಿಸಬೇಕು. ಈಗಿನ ಗೋಧ್ರಾ-ಅಹಮದಾಬಾದ್ ಕಾಂಡವನ್ನ ಗಮನಿಸಿದರೆ, ಹೈದರಾಬಾದಿನ ಚರಿತ್ರೆ ಸ್ವರ್ಗದ ವಿವರಣೆಯಂತೆ ಕಂಡರೂ
ಆಶ್ಚರ್ಯವಿಲ್ಲ.]
೬
ಹಿಂದೆ ಬಂಗಾಳದಲ್ಲಿ
ಮತೀಯ ಗಲಭೆ ನಡೆದಾಗ, ಅದನ್ನು ತಡೆಯಲು
ಮಹಾತ್ಮಾ ಗಾಂಧಿ ಉಪವಾಸ ಮಾಡಿದ್ದರು. ಇಂದೂ ಆರಿಫ್ ಮಹಮದ್ ಖಾನ್, ಎನ್.ಟಿ.ರಾಮಾರಾವು ಉಪವಾಸ ಮಾಡಿದ್ದಾರೆ. ಅವರ ಜತೆಗೇ
ಇಡೀ ನಗರವೇ ಗಲಭೆ ನಡೆದಾಗ ದುಃಖದಿಂದ ಉಪವಾಸ ಮಾಡಬೇಕಾದ ಪರಿಸ್ಥಿತಿ ಒದಗಿ ಬರುತ್ತದೆ. ಮಹಾತ್ಮರು
ಮಾಡಿದ ಉಪವಾಸದ ಫಲವಾಗಿ ಕೋಮು ಗಲಭೆ ನಿಂತಿತು. ಆರಿಫ್ ಉಪವಾಸ ಮಾಡುತ್ತಲೇ ಇದ್ದಾರೆ. ಆಗ್ರಾ,
ಅಲೀಘಡ, ಕಾನ್ಪುರ, ಅಲಹಾಬಾದ್ ಹೊತ್ತಿ ಉರಿಯುತ್ತಲೇ ಇದೆ. ಮಹಾತ್ಮರು
ಮಾಡಿದ ಉಪವಾಸಕ್ಕೂ ಇಂದು ಶ್ರೀಸಾಮಾನ್ಯರು ಮಾಡುತ್ತಿರುವ ಉಪವಾಸಕ್ಕೂ ಒಂದು ಮೂಲಭೂತ
ವ್ಯತ್ಯಾಸವಿದೆ. ಗಾಂಧೀಜಿ ಉಪವಾಸವನ್ನು ಸ್ವತಃ ತಾವಾಗಿಯೇ ಕೈಗೊಂಡಿದ್ದರು. ಕರ್ಫ್ಯೂ
ಪರಿಣಾಮವಾಗಿ ಸಾಮಾನ್ಯ ಪ್ರಜೆ ಏನೂ ತಿನ್ನಲಾಗದೇ ಬಲವಂತದ ಉಪವಾಸ ಮಾಡುತ್ತಿದ್ದಾನೆ.
[ಅಹಮದಾಬಾದಿನಲ್ಲಿ
ಶಾಂತಿಕೋರಿ ಸುಮ್ಮನೆ ಧರಣಿ ಕುಳಿತ ನಮ್ಮ ಸಂಸ್ಥೆಯ (ಇಂಡಿಯನ್ ಇನ್ಸ್ಟಿಟ್ಟೂಟ್ ಆಫ್
ಮ್ಯಾನೇಜ್ಮೆಂಟ್) ಪ್ರತಿನಿಧಿಗಳನ್ನು ಹೆದರಿಸಿ, ಬೆದರಿಸಿ ಅವರ ಧರಣಿಯನ್ನ ಲಾಠಿ ತೋರಿಸಿ ನಿಲ್ಲಿಸುವ ಪರಿಸ್ಥಿತಿ ಬಂದಿತೆಂದರೆ, ವಿಷಯದ ವಿಷದ ತೀವ್ರತೆಯನ್ನ ಊಹಿಸಬಹುದು.]
ಸತ್ಯ. ಸತ್ಯ
ಕಠೋರವಾದದ್ದು. ಅದನ್ನು ಕಾಣಲು ಯಾರೂ ಸಿದ್ಧರಿಲ್ಲ. ಹೀಗಾಗಿಯೇ ಆ ಉಜ್ವಲತೆಯ ಮರೆಯಲ್ಲಿ ಕಣ್ಣು
ಮುಚ್ಚಿ ಕುಳಿತಿದ್ದೇವೆ. ಮತಕ್ಷೋಭೆಯಿಂದ ಲಾಭಗೊಳ್ಳುವ ಮಂದಿ ಅನೇಕರಿರುವಾಗ ಅದನ್ನು ತೆಡೆಯುವುದು
ಹೇಗೆ? ಏಕೆಂದರೆ ಮತಕ್ಷೋಭೆಯ ಕಾರಣ
ಸಂಕೀರ್ಣ.
ಹಿಂದೂಗಳೂ
ಕಾರಣವಲ್ಲದ, ಮುಸ್ಲಿಮರೂ
ಕಾರಣವಲ್ಲದ, ಹಂದಿ, ದನದ ಬಾಲದಂತಹ ಕ್ಷುಲ್ಲಕ ಕಾರಣಗಳಿಗೆ ನೂರಾರು ಜನ
ಬಲಿಯಾಗುತ್ತಿರುವುದು ವಿಪರ್ಯಾಸದ ವಿಷಯ. ಹಿಂದೆ ಲೋಕಕಲ್ಯಾಣಕ್ಕಾಗಿ ಪ್ರಾಣಿಗಳನ್ನು ಬಲಿ
ಕೊಡುತ್ತಿದ್ದುದುಂಟು. ಈಗ ಪ್ರಾಣಿಗಳ ಕಾರಣವಾಗಿ ನರಮೇಧ ನಡೆಯುತ್ತಿದೆ. `ನಾಗರೀಕತೆ` `ಪ್ರಗತಿಪಥ'ದಲ್ಲಿದೆ.
ಬ್ರೆಜಿಲ್ನಲ್ಲಿ
ಸಣ್ಣ ಮಕ್ಕಳನ್ನು - ಬಡತನದಿಂದ ಕಳ್ಳತನಕ್ಕೆ, ಮಾದಕ ವಸ್ತುಗಳ ರವಾನೆಗೆ ಇಳಿದ - ಈ ಸಣ್ಣಮಕ್ಕಳನ್ನು ಜುವೆನೈಲ್ ಸೆಂಟರುಗಳಲ್ಲಿ
ಇಟ್ಟುಕೊಳ್ಳಲಾಗದ ಬಡತನದ ಪರಿಸ್ಥಿತಿ ಬಂದು, ಅವರಿಗೆ ದಿಕ್ಕು ತೋರಿಸಲಾಗದ ದುರಂತ ಪರಿಸ್ಥಿತಿಯಲ್ಲಿ - ಅವರನ್ನೆಲ್ಲ ಬೀದಿಗೆ
ಹರಿಯಬಿಟ್ಟಿದ್ದಾರಂತೆ. ಅವರ ಕಳುವಿನ ಕಾಟದಿಂದ ಪೀಡಿತರಾದ ಜನ ನಲವತ್ತು ಡಾಲರುಗಳಷ್ಟು ಬೆಲೆ
ಕೊಟ್ಟು ಮಕ್ಕಳನ್ನು ಮುಗಿಸುವುದಕ್ಕೆ ಜನರನ್ನು ನಿಯಮಿಸಿದ್ದಾರಂತೆ. ಇದು ಅಮ್ನೆಸ್ಟಿ
ಇಂಟರ್ನ್ಯಾಷನಲ್ನಿಂದ ಬಂದಿರುವ ಸುದ್ದಿ. ಬಡತನ ತಾಂಡವವಾಡುತ್ತಿರುವ ನಮ್ಮ ದೇಶದಲ್ಲೂ, ಮಾನವ ಜೀವನದ ಮೌಲ್ಯ ಇಳಿಮುಖವಾಗುತ್ತಿದೆ. ಇಂಥ
ಪರಿಸ್ಥಿತಿಯಲ್ಲಿ ಹೈದರಾಬಾದಿನಲ್ಲೂ, ಭಾರತದ
ಇತರೆಡೆಗಳಲ್ಲೂ ಅಷ್ಟು ಕಡಿಮೆ ಬೆಲೆಗೆ ಜನರಜೀವ ಹರಾಜಾಗುತ್ತಿರುವ ಪರಿಸ್ಥಿತಿ
ದೂರವಿಲ್ಲವೆನ್ನಿಸಿ ಹೃದಯ ಮಿಡಿಯುತ್ತದೆ.
ಒಡೆದ ಹೃದಯಕ್ಕೆ
ಯಾವ ಫೆವಿಕಾಲೂ ಮದ್ದಲ್ಲ. ಬದಲಿಗೆ ಒಡೆದ ಹೃದಯವನ್ನು ಅಂತರಂಗದಿಂದ ಮಿಡಿದ ಹೃದಯವೇ
ಜೋಡಿಸಬಲ್ಲದು. ಇದು ಒಂದೆರಡು ದಿನದ ಮಾತಲ್ಲ. ಒಂದೆರಡು ತಲೆಮಾರಿನಷ್ಟುಕಾಲ ನಡೆಯಬೇಕಾದ ಸ್ಪಂದನ.
ಅಂಥ ಹೃದಯಗಳು ನಮ್ಮಲ್ಲಿವೆಯೇ? ಆ ಕಾಲಾವಕಾಶ
ನಮ್ಮಲ್ಲಿದೆಯೇ? ನನಗಾಗಲೇ ಮತ್ತೊಂದು
ಕೋಮುಗಲಭೆಯ ಕಿಡಿಗಳು ಕಾಣಿಸತೊಡಗಿವೆ.
No comments:
Post a Comment