Wednesday, January 2, 2013

ರೂಮಿ ಟೋಪಿ


[ಈ ಲೇಖನವನ್ನ ನಾನು ೧೯೯೦ರಲ್ಲಿ ಬರೆದೆ. ಮೊದಲು ಇದನ್ನ ಎಲ್ಲಿ ಪ್ರಕಟಮಾಡುವುದೋ ತಿಳಿಯಲಿಲ್ಲ. ಆಗ ಬ್ಲಾಗ್ ಇದ್ದಿದ್ದರೆ ಆ ಸಮಸ್ಯೆಯೇ ನನಗೆ ಎದುರಾಗುತ್ತಿರಲಿಲ್ಲ! ಕಡೆಗೆ ಸುಮಾರು ಯೋಚನೆಯ ನಂತರ ಲಂಕೇಶ್‍ಗೆ ಕಳುಹಿಸಿದೆ. ಆದರೆ ಅಲ್ಲಿಂದ ಯಾವ ಜವಾಬಾಗಲೀ ಅಥವಾ ಪ್ರಕಟನೆಯ ಸೂಚನೆಯಾಗಲೀ ಬರಲಿಲ್ಲ. ಒಮ್ಮೆ ತಿರುಮಲೇಶ ನಾನು ಒಟ್ಟಿಗೆ ಬೆಂಗಳೂರಿನಲ್ಲಿರುವ ಸಂದರ್ಭ ಬಂತು ಆಗ ಇಬ್ಬರೂ ಲಂಕೇಶ್ ಅವರನ್ನು ಭೇಟಿಯಾಗಲು ಹೋಗಿದ್ದೆವು. ಮಾತಿನಲ್ಲಿ ಈ ಲೇಖನದ ಪ್ರಸ್ತಾಪ ಬಂತು. ಲಂಕೇಶ್ ಅದನ್ನ ನೋಡೇ ಇರಲಿಲ್ಲ. ಆದರೆ ತಕ್ಷಣ ಲೇಖನದ ಮತ್ತೊಂದು ಪ್ರತಿ ಕಳಿಸಲು ಹೇಳಿದರು. ಪ್ರಕಟವಾದಾಗ ಇದರ ಬಗ್ಗೆ ಟಿಪ್ಪಣಿಯನ್ನೂ ಬರೆದರು. ಆ ನಂತರ ಹೈದರಾಬಾದಿನ ಬಗ್ಗೆ ಹಲವು ಲೇಖನಗಳನ್ನು ಬರೆಯಲು ಲಂಕೇಶ್ ನನ್ನನ್ನು ಪ್ರೊತ್ಸಾಹಿಸಿದರು. ಲ್ಯಾಟಿನ್ ಅಮೆರಿಕನ್ ಸಾಹಿತ್ಯದ ಬಗ್ಗೆ ನನಗಿದ್ದ ಆಸಕ್ತಿ ತಿಳಿದ ನಂತರ ಅವರು ನನ್ನಿಂದ ಕೆಲವು ಕಥೆಗಳನ್ನು ಅನುವಾದ ಮಾಡಿಸಿದ್ದರು. ಈ ಲೇಖನವನ್ನು ಮತ್ತೆ ಇಲ್ಲಿ ಹಾಕುತ್ತಿರುವಾಗ ನನಗೆ ವಿಚಿತ್ರ ಭಾಷೆಯನ್ನು ಬಳಸಿ ರಾಜಕೀಯ ಸುದ್ದಿ ಬಿತ್ತರಿಸುತ್ತಿದ್ದ, ಬಾಪೂ ಚಿಂತನೆ- ತೇಜಸ್ವಿಯವರ ಪರಿಸರದ ಬಗೆಗಿನ ಕಾಲಂ ಹಾಕುತ್ತಿದ್ದ, ನೀಲು - ನಿಮ್ಮಿಯಂತಹ ಊಹಾಪೋಹ ವ್ಯಕ್ತಿಗಳನ್ನ ಸೃಷ್ಟಿಸಿದ್ದ, ಜಾಹೀರಾತೇ ತೆಗೆದುಕೊಳ್ಳದೆ ಪತ್ರಿಕೆಯನ್ನು ನಡೆಸಿದ, ಲಂಕೇಶ್ ಹಾಗೂ ಅವರ ಪತ್ರಿಕೆಯ ಬಗೆಗಿನ ಚಿತ್ರಗಳು ನನ್ನ ಮನದಲ್ಲಿ ಬರುತ್ತಿದೆ. ಬಹುಶಃ ಅವರ ಬಗ್ಗೆ ಮತ್ತೊಂದು ಲೇಖನವನ್ನೇ ಬರೆಯಬೇಕೇನೋ....]"ಹೈದರಾಬಾದ್ ನಾನು ಚೆನ್ನಾಗಿ ತಿಳಿದ, ಅರಿತ ಊರು. ಅದರ ಜೀವಂತಿಕೆ, ದುಃಖ, ಸುಂದರ ಅರಮನೆಗಳು, ಬಡವರ ಝೋಪಡಿಗಳು - ಎಲ್ಲ. ಈ ಊರಿನ ತುಂಬು ಚರಿತ್ರೆಯನ್ನು ಎಷ್ಟು ಹಿಂದಿನಿಂದ ಅವಲೋಕಿಸಿದರೂ - ಊರ ಜನರಿಂದ ನಗರವನ್ನು ಬಿಡಿಸಿ ನೋಡಲು ಸಾಧ್ಯವಿಲ್ಲ. ಇಲ್ಲಿನ ರಸ್ತೆಗಳ ಮೇಲೆಲ್ಲಾ ನಾನು ಅಲೆದಾಡಿದ್ದೇನೆ. ಇಲ್ಲಿನ ಮುಖ್ಯ ಗುರುತುಗಳೂ, ಇಮಾರತುಗಳೂ ನನಗೆ ತಿಳಿದಿತ್ತು. ಮತ್ತೆ ಈಗಲೂ ನೆನಪಿದೆ.
"ಕೆಲ ವರ್ಷಗಳ ಕಾಲ ಮುಂದುವರೆದು, ಅದರ ಅಂತ್ಯಕ್ಕೆ ಕಾರಣವಾದ ಎಲ್ಲ ಮುಖ್ಯ ಸಂಘಟನೆಗಳ ಸಕ್ರಿಯ ಪಾತ್ರಧಾರಿಯೂ ನಾನಾಗಿದ್ದೆ. ಒಂದು ಸಂಸ್ಕೃತಿಯ, ಒಂದು ಜೀವನ ಕ್ರಮದ, ನಾವೆಲ್ಲರೂ ಪ್ರೀತಿಸುವ ಈ ವಿಭಿನ್ನ ಅನನ್ಯತೆಯ, ಈ ಸಂಸ್ಕಾರವಂತ ಜೀವನದೊಂದಿಗೆ ನನ್ನ ನಿಕಟ ಸಂಬಂಧವಿತ್ತು.
"ಅಕಬರ ಶಹಜಹಾನರ ದರಬಾರಿನ ಕಡೆಯ ದೃಶ್ಯಗಳನ್ನೂ, ದೊಡ್ಡ ವೃಕ್ಷದ ಕಳಿತ ಹಣ್ಣುಗಳಂತೆ ಹಬ್ಬಿದ ತಾಜಮಹಲಿನ ಕೀರ್ತಿ, ತಾನಸೇನನ ರಾಗಮಾಧುರ್ಯ - ಇಂಥವನ್ನೆಲ್ಲ ಅಂತರ್ಗತ ಮಾಡಿಕೊಂಡಿದ್ದ, ನಾನು ಹುಟ್ಟಿ ಬೆಳೆದ ಈ ನಗರಕ್ಕೆ ಅನೇಕ ವರ್ಷಗಳ ನಂತರ ಬರುತ್ತಿರುವುದು ವಿಚಿತ್ರ ಖುಷಿಯ, ಪುಳಕದ ಅನುಭವವಾಗಿದೆ. ಆದರೆ ಈಗ ಎಲ್ಲವೂ ಬದಲಾಗಿದೆ; ಮುಖ್ಯ ಗುರುತುಗಳು ಇಲ್ಲವಾಗಿವೆ, ಖಾಲಿ ಜಾಗಗಳನ್ನು ವಿವೇಚನಾರಹಿತವಾಗಿ ಕಟ್ಟಡಗಳಿಂದ ತುಂಬಿದ್ದಾರೆ. ಹೊಸ ಮಳಿಗೆಗಳು, ಚಹಾ ದುಕಾನಗಳು, ಹೋಟೆಲುಗಳು, ಅಣಬೆಗಳಂತೆ ಎದ್ದುನಿಂತಿವೆ. ಹಿಂದೆ ನಾನು ಕಂಡದ್ದಕ್ಕಿಂತ ಹೆಚ್ಚು ಕಾರುಗಳು, ಹೆಚ್ಚು ರಿಕ್ಷಾಗಳು, ಹೆಚ್ಚು ಭಿಕ್ಷುಕರೂ, ಹಚ್ಚು ಸೈಕಲ್‌ಗಳೂ ರಸ್ತೆಯನ್ನ ತುಂಬಿದ್ದಾವೆ. ಹಳೆಯ ವಾತಾವರಣ ನಷ್ಟವಾಗಿದೆ. ಜೀವನದ ಗತಿ ಬದಲಾಗಿದೆ. ಜನ ತಮ್ಮ ವೈಯಕ್ತಿಕತೆಯನ್ನೂ ನಗರ ತನ್ನ ವ್ಯಕ್ತಿತ್ವವನ್ನೂ ಕಳೆದುಕೊಂಡಿದೆ. ಎಲ್ಲೆಲ್ಲೂ ವ್ಯಾಪಾರಿ ಮನೋಭಾವ ರಾಜ್ಯವಾಳುತ್ತಿದೆ. ಚಟುವಟಿಕೆ ವಿಪರೀತವಾಗಿ ಕಂಡರೂ ಸಂತೃಪ್ತಿ ಕಾಣುತ್ತಿಲ್ಲ."


ನಿಜ. ಜಹೀರ್ ಅಹಮದ್ ನೀನು ಹೇಳಿದ್ದು ನಿಜ. ನಿನ್ನ ವಾಕ್ಯಗಳು ೧೯೫೬ರಷ್ಟು ಹಳೆಯದಾದರೂ ಚಿರಂತನ ಸತ್ಯ. ಅದು ಹೈದರಾಬಾದಿಗಷ್ಟೇ ವರ್ತಿಸುವುದಿಲ್ಲ - ಯಾವುದೇ ನಾಗರಿಕತೆಗೆ, ಯಾವುದೇ ಕಾಲದಲ್ಲಿ ವರ್ತಿಸಬಹುದಲ್ಲವೇ? ಹಾಗೆ ನೋಡಿದರೆ ನಾನು ನಿನ್ನಂತೆ ಖಾಲಿ ಜಾಗಗಳನ್ನೂ ದೊಡ್ಡ ಇಮಾರತುಗಳನ್ನೂ ಹುಡುಕಿ ಹೊರಟವನಲ್ಲ. ನಾನು ಹುಡುಕಿದ್ದು ಒಂದು ಸಣ್ಣ ರೂಮಿಟೋಪಿಯನ್ನು. ಆಗಾಗ ಹಿಂದಿ ಸಿನೇಮಾದಲ್ಲಿ ಅರೆಹುಚ್ಚು ಹಿಡಿದ ವಿದೂಷಕನ ತಲೆಯ ಮೇಲಿದ್ದ ಕುಚ್ಚು ಟೋಪಿಯನ್ನು. ಅದು ಕೆಲ ಸಿನೇಮಾಗಳಲ್ಲಿ ಛದ್ಮವೇಷ ಧರಿಸಿದ ನಾಯಕನ ತಲೆಯಮೇಲೂ ಕಾಣುತ್ತಿತ್ತು. `ಅಮರ್ ಅಕ್ಬರ್ ಆಂಥೊನಿ' ಚಿತ್ರದಲ್ಲಿ ರಿಷಿ ಕಪೂರನ ತಲೆಯ ಮೇಲೆ ಕಂಡದ್ದು ಈ ರೂಮಿ ಟೋಪಿಯನ್ನೇ. ಕುಳ್ಳನಾದ ರಿಷಿಕಪೂರನಿಗೆ, ಉದ್ದಕ್ಕೆ ತಲೆಯ ಮೇಲೆ ನಿಲ್ಲುವ ಕೆಂಪು ಬಣ್ಣದ ಈ ಕುಚ್ಚಿನ ಮಕ್ಮಲ್ ಟೋಪಿ ಹೊಂದುತ್ತದೆ. ಆದರೆ ಇದೇ ರೂಮಿ ಧರಿಸಿ `ತಯಾಬಲಿ ಪ್ಯಾರ್ ಕಾ ದುಷ್ಮನ್ ಹಾಯ್ ಹಾಯ್' ಎಂದೂ ಖೋಜಾಗಳೊಂದಿಗೆ ನರ್ತಿಸುವಾಗ ರೂಮಿಗೆ ಬಂದ ಗತಿಯ ಬಗ್ಗೆ ನಾನೂ ಚಿಂತಿತನಾದದ್ದುಂಟು. 

"ತನ್ನ ಕಾಮ್ರೇಡುಗಳಿಂದ ಸುತ್ತುವರೆಯಲ್ಪಟ್ಟಿದ್ದ ಗೋಟ್ವಾಲ್ಡ್‌ನ ಪಕ್ಕದಲ್ಲಿ ಕ್ಲೆಮೆಂಟಿಸ್ ನಿಂತಿದ್ದ. ಸುತ್ತಲೂ ಹಿಮಪಾತವಾಗುತ್ತಿದ್ದುದರಿಂದ ಹವೆ ತುಂಬಾ ತಣ್ಣಗಿತ್ತು. ಗೋಟ್ವಾಲ್ಡ್‌ನ ತಲೆ ಟೋಪಿಯಿಲ್ಲದೇ ಖಾಲಿಯಾಗಿತ್ತು. ಇದನ್ನು ಕಂಡ ವಿಶಾಲ ಹೃದಯದ ಕ್ಲೆಮೆಂಟಿಸ್, ತನ್ನ ತಲೆಯ ಮೇಲಿದ್ದ ಉಣ್ಣೆಯ ಟೋಪಿಯನ್ನ ತೆಗೆದು ಗೋಟ್ವಾಲ್ಡ್‌ನ ತಲೆಯ ಮೇಲಿರಿಸಿದನು. 

"ಕಾಮ್ರೇಡುಗಳಿಂದ ಸುತ್ತುವರೆಯಲ್ಪಟ್ಟು, ತಲೆಯ ಮೇಲೆ ಉಣ್ಣೆ ಟೋಪಿ ಧರಿಸಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಿದ್ದ ಗೋಟ್ವಾಲ್ಡ್‌ನ ಚಿತ್ರದ ಲಕ್ಷೋಪಲಕ್ಷ ಪ್ರತಿಗಳನ್ನು ತೆಗೆದು, ಪಾರ್ಟಿಯ ಪ್ರಚಾರ ವಿಭಾಗದವರು, ಎಲ್ಲೆಲ್ಲೂ ಹಚ್ಚಿದರು. ಕಮ್ಯುನಿಸ್ಟ್ ಚಕೋಸ್ಲವಾಕಿಯಾದ ಚರಿತ್ರೆ ಈ ಬಾಲ್ಕನಿಯ ಮೇಲೆ ಹುಟ್ಟಿತು. ಪೋಸ್ಟರುಗಳಿಂದ, ಶಾಲಾಪುಸ್ತಕಗಳಿಂದ, ಮ್ಯೂಸಿಯಂಗಳಿಂದ, ಈ ಚಿತ್ರದ ಪರಿಚಯ ಅಲ್ಲಿನ ಪ್ರತಿ ಶಿಶುವಿಗೂ ಇತ್ತು.

"ನಾಲ್ಕು ವರ್ಷಗಳ ನಂತರ 'ದ್ರೋಹ' ದ ಆರೋಪವನ್ನ ಕ್ಲೆಮೆಂಟಿಸ್ ಮೇಲೆ ಹೇರಿ, ಅವನನ್ನ ನೇಣಿಗೇರಿಸಿದರು. ಕೂಡಲೇ ಪ್ರಚಾರ ವಿಭಾಗದವರು ಚರಿತ್ರೆಯಿಂದ, ಮತ್ತು ಸಹಜವಾಗಿ ಎಲ್ಲ ಚಿತ್ರಗಳಿಂದಲೂ ಅವನನ್ನು ಅಳಿಸಿಹಾಕಿದರು. ಅಂದಿನಿಂದ ಗೋಟ್ವಾಲ್ಡ್ ಆ ಬಾಲ್ಕನಿಯ ಮೇಲೆ ಒಂಟಿಯಾಗಿ ನಿಂತಿದ್ದಾನೆ. ಒಮ್ಮೆ - ಒಂದೊಮ್ಮೆ ಕ್ಲೆಮೆಂಟಿಸ್ ನಿಂತಿದ್ದ ಜಾಗವನ್ನು ಅರಮನೆಯ ಖಾಲಿ ಗೋಡೆ ಆಕ್ರಮಿಸಿದೆ. ಕ್ಲೆಮೆಂಟಿಸ್‌ನ ಅವಶೇಷವೆಂದರೆ... ಗೋಟ್ವಾಲ್ಡ್ ತಲೆಯಮೇಲಿನ ಉಣ್ಣೆಟೋಪಿ ಮಾತ್ರ."
ಹೀಗೆ ಬರೆದದ್ದು ಮಿಲನ್ ಕುಂದೆರಾ. ಚರಿತ್ರೆಗೂ ಟೋಪಿಗೂ ನಿಕಟ ಸಂಬಂಧ ಗುರುತಿಸಲೇ ಕುಂದೆರಾ ಇದನ್ನ ಬರೆದನೆನ್ನಿಸುತ್ತದೆ. ಚರಿತ್ರೆ ಎಲ್ಲವನ್ನೂ ಅಳಿಸಿಹಾಕಿ ಬರೇ ಉಣ್ಣೆಟೋಪಿಯನ್ನು ಚೋಕೋಸ್ಲವಾಕಿಯಾದಲ್ಲಿ ಉಳಿಸಿದರೆ ಇಲ್ಲಿ ಅದೇ ಚರಿತ್ರೆ ರೂಮಿಯನ್ನ ಅಳಿಸಿಹಾಕಿಬಿಟ್ಟಿತು. ಈಗೀಗ ಸಿನೇಮಾದಲ್ಲೂ ಆ ಟೋಪಿ ಕಾಣದಾಗಿದೆ. ಛದ್ಮವೇಷ ಧರಿಸಲು ನಾಯಕ ಮುದಿ ಫಾರಸಿಯಾಗುತ್ತಾನೆ, ಸರದಾರಜಿಯಾಗುತ್ತಾನೆ, ಶ್ರೀಮಂತ ಅರಬನಾಗುತ್ತಾನೆ, ಒಮ್ಮೊಮ್ಮೆ ಅರಬನಲ್ಲದ ಮುಸಲ್ಮಾನನೂ ಆಗುತ್ತಾನೆ... ಆದರೂ ರೂಮಿ ಟೋಪಿ ಮಾತ್ರ ಧರಿಸುವುದಿಲ್ಲ.
ಸಹಜವೇ ಇದ್ದೀತು. ಒಂದಾನೊಂದು ಕಾಲುದಲ್ಲಿ ಹೈದರಾಬಾದಿನ ಮದೀನಾ ಮಾರ್ಕೆಟ್‌ನ ಸಂಪಾದನೆಯನ್ನು ಮುಸಲ್ಮಾನ ಜನಾಂಗದ ಬಡವರಿಗೆಂದೇ - ಅದೂ ಮದೀನಾದ ಬಡವರಿಗೆಂದೇ ಪ್ರತ್ಯೇಕವಾಗಿಟ್ಟು ಅರೇಬಿಯಾಕ್ಕೆ ಕಳುಹಿಸುತ್ತಿದ್ದರೆಂದು ಪ್ರತೀತಿ. ಅದೇ ಕಾರಣಕ್ಕೆ ಆ ಮಾರುಕಟ್ಟೆಗೆ `ಮದೀನಾ ಮಾರ್ಕೆಟ್' ಎಂಬ ಹೆಸರೂ ಉಂಟಾಯಿತು. ಆದರೆ ಅದು ಹಿಂದೆ - ಅರೇಬಿಯಾಕ್ಕೆ ತೈಲ ಇನ್ನೂ ಸಿಕ್ಕಿರದ, ಅರೇಬಿಯಾ ಬಡವಾಗಿದ್ದ ಕಾಲದಲ್ಲಿ. ಆಗ ಹತ್ತಿರದ ಹೈದರಾಬಾದಿನಲ್ಲಿ ಜನ ಗತ್ತಿನಿಂದ ರೂಮಿಟೋಪಿ ಧರಿಸುತ್ತಿದ್ದರು. ಈಗ ಅರೇಬಿಯಾದ ಸರದಿ - ಹೊಸದಾಗಿ ಕಂಡ ತೈಲ ನಿಕ್ಷೇಪದಿಂದ ಅರೆಬಿಯಾ ಶ್ರೀಮಂತ ನಾಡು. ಶ್ರೀಮಂತ ನಿಜಾಮನಾಳ್ವಿಕೆ ಕಳೆದುಕೊಂಡ ಹೈದರಾಬಾದು ಬಡ ಭಾರತದ ಭಾಗ. ಈಗ ಬಡ ಹೈದರಾಬಾದೀ ಹುಡುಗರು ಅರೇಬಿಯಾದಲ್ಲಿ ದುಡಿದು ಇಲ್ಲಿಗೆ ಹಣ ಕಳಿಸುವರು. ಅರೇಬಿಯಾದವರು ಋಣಭಾರದಿಂದ ಮುಕ್ತರಾಗುವರು. ರೂಮಿಯ ಪರವೆಯೇ ಇಲ್ಲದ ಅರಬ್ಬೀ ದೇಶದವರು ಸಿನೇಮಾದಲ್ಲೂ ಪ್ರಾಮುಖ್ಯತೆ ಪಡೆದಿರುವುದು ಆಶ್ಚರ್ಯವೇನೂ ಅಲ್ಲ. 
ಹಾಗೆ ನೋಡಿದರೆ ರೂಮಿ ಸಂಪೂರ್ಣವಾಗಿ ಅದೃಶ್ಯವಾಗಿದೆಯೆಂದು ಹೇಳುವುದಕ್ಕೂ ಆಗುವುದಿಲ್ಲ. ಭಾರತ ವಿಭಜನೆಯ ಕಾಲದಲ್ಲಿ ಪಾಕಿಸ್ತಾನಕ್ಕೆ ಹೋದ ನಮ್ಮ ಸೋದರರು ಅದನ್ನ ಇನ್ನೂ ಧರಿಸುವರು. ಜೊತೆಗೆ ಪಾಕಿಸ್ತಾನದಲ್ಲಿಯೇ ಬೆಳೆದವರೂ ಧರಿಸುವರು. ತುರ್ಕಿ ಮತ್ತು ತುರ್ಕಿಯ ರಾಜಧಾನಿ ಇಸ್ತಾಂಬುಲ್ ರೂಮಿಗೆ ಖ್ಯಾತಿ ಪಡೆದಿದೆ. ಅಫಘಾನಿಸ್ತಾನ, ಇರಾನ್ ಮತ್ತು ಇರಾಕ್ ದೇಶಗಳ ಹಲವು ಭಾಗಗಳಲ್ಲಿ ನಮಗೆ ರೂಮಿ ಕಾಣಸಿಗಬಹುದು. ಆದರೆ ಇಲ್ಲಿ ಹೈದರಾಬಾದಿನಲ್ಲಿ ಮಾತ್ರ ಟೋಪಿಯಿಲ್ಲದ ಮುಸಲ್ಮಾನರಿಂದ ಹಿಡಿದು, ಉಣ್ಣೆಯ ಟೋಪಿಯ, ಮಕ್ಮಲ್ ಟೋಪಿಯ, ಕಡೆಗೆ ಗಾಂಧಿ ಟೋಪಿಯ ಮುಸಲ್ಮಾನರವರೆಗೆ ಎಲ್ಲರನ್ನೂ ಕಾಣುತ್ತೇವಾದರೂ ರೂಮಿಟೋಪಿ ಧರಿಸಿದವರು ಮಾತ್ರ ವಿರಳ. ಹಿಂದಿನ ದಿನಗಳಲ್ಲಿ ಮುಸಲ್ಮಾನರನ್ನು ಪ್ರತಿನಿಧಿಸಲು ಕನ್ನಡ ನಾಟಕಗಳಲ್ಲೂ ರೂಮಿಟೋಪಿಯ ಬಳಕೆ ಆಗುತ್ತಿದ್ದುದು ನೆನಪಾಗುತ್ತದೆ. ಆದರೆ ಅದು ಹಿಂದೆ. ಈಗ ನಮ್ಮ ಸಿನೇಮಾಗಳಲ್ಲಿ ಖ್ಯಾತಿ ಗಳಿಸಿರುವ ದಿರಿಸು - ನಿಲುವಂಗಿಗೆ ಹೊಂದುವ ವಸ್ತ್ರದಿಂದ ಶಿರಮುಚ್ಚುವುದು. ರೂಮಿ ಇಲ್ಲ. ಇರಲಿ.

ರೂಮಿ ಟೋಪಿಯ ಜತೆಜತೆಗೇ ಅದನ್ನು ಹಿಂಬಾಲಿಸಿ ನಡೆದದ್ದು ಹೈದರಾಬಾದಿನ ನವಾಬಗಿರಿ. ಬದಲಾದ ಸಂದರ್ಭದ ಅನಿವರ್ಯತೆಗೆ ಇದು ಒಳಗಾಯಿತು. ಕಡೆಯ ನವಾಬನಾದ ಮೀರ್ ಉಸ್ಮಾನ್ ಅಲಿ, ಅಸಫ್ ಜಾಹಿ ಮನೆತನದ ಏಳನೆಯ ನವಾಬನು. ಅವನು ಬದುಕಿರುವಾಗ ಬಿಟ್ಟದ್ದು ನವಾಬಗಿರಿಯಾದರೆ, ಸಾವಿನಲ್ಲಿ ೫೪ ಮೊಮ್ಮಕ್ಕಳನ್ನೂ, ೯೪ ಮರಿಮಕ್ಕಳನ್ನೂ - ಅವನ ಒಡವೆ, ವಸ್ತ್ರ ಆಸ್ತಿಪಾಸ್ತಿಗಳಿಗಾಗಿ ಕಾದಾಡಲು ಬಿಟ್ಟು ಹೋದನು.
ಮೀರ್ ಉಸ್ಮಾನ್ ಅಲಿ: ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಖ್ಯಾತಿ ಗಳಿಸಿದವನು. ಅತ್ಯಂತ ಜುಗ್ಗನೆಂದೂ ಪ್ರಖ್ಯಾತನಾದವನು. ಕಮ್ಯುನಿಸ್ಟರ ಕುಮ್ಮಕ್ಕಿನೆಂದಿಗೆ ಆಯುಧಗಳನ್ನೆತ್ತಿ ಬಂಡೆದ್ದ ರೈತರನ್ನು ಕಂಡು ಕಂಗೆಟ್ಟವನು. ಭಾರತ ದೇಶದೊಂದಿಗೂ ಪಾಕಿಸ್ತಾನದೊಂದಿಗೂ ಸೇರದೇ ಸ್ವತಂತ್ರವಾಗಿಯೇ ಹೈದರಾಬಾದನ್ನು ಆಳುತ್ತೇನಂದು ಹಠ ಹಿಡಿದವನು. ಕಡೆಗೆ ಭಾರತ ದೇಶದ ಸೈನ್ಯಕ್ಕೆ ಶರಣಾಗಿ ಸಂವಿಧಾನದಡಿ ಸೇರಲು ಒಪ್ಪಿದವನು. ಕೆಲ ಕಾಲ ರಾಜಪ್ರಮುಖನೆಂದು ಅಲಂಕಾರದ ಪದವಿಯನ್ನ ಧರಿಸಿ, ಕಡೆಗೆ ಅದನ್ನೂ ತ್ಯಜಿಸಿ ಒಂಟಿತನದಲ್ಲಿ, ಹಿಂದಿನ ಎಲ್ಲ ನಿಜಾಮರನ್ನು ಸಮಾಧಿ ಮಾಡಿದ್ದ ಮಕ್ಕಾ ಮಸೀದಿ ಬಿಟ್ಟು ನಗರ ಮಧ್ಯದ ಕಿಂಗ್ ಕೋಠಿಯಲ್ಲಿ ಚಿರನಿದ್ರೆ ಮಾಡುತ್ತಿರುವವನು.
ಈ ಇಂಥ ನಿಜಾಮನು ಅನೇಕ ಬೇರೆ ಬೇರೆ ಕೆಲಸಗಳನ್ನು ಮಾಡಿದ್ದನು. ಇಂದು ಇಂಗ್ಲೀಷಿನಲ್ಲಿ ಲಭ್ಯವಿರುವ ಕುರಾನ್‌ನ ತರ್ಜುಮೆಗಳಲ್ಲಿ ಅತ್ಯಂತ ಜನಪ್ರಿಯವಾದ ಪಿಕ್ಟಾಲ್‌ರ "The meaning of glorious Koran"ನ ಭಾಷಾಂತರವೂ ಉಸ್ಮಾನ್ ಅಲಿಯ ಪ್ರಮೇಯವಿಲ್ಲದೇ ನಡೆಯಲಿಲ್ಲ - ಕಡೆಗೆ ಪಿಕ್ಟಾಲ್ ತನ್ನ ಭಾಷಾಂತರವನ್ನು ನಿಜಾಮನಿಗೇ ಅರ್ಪಿಸಿಬಿಟ್ಟ.
ಹೀಗಿದ್ದ ಉಸ್ಮಾನ್ ಅಲಿ ೧೯೧೮ರಲ್ಲಿ ನಗರ ಮಧ್ಯದಲ್ಲಿ ೨೦೦೦ ಎಕರೆಗಳ ವಿಸ್ತೀರ್ಣದಲ್ಲಿ ಉಸ್ಮಾನಿಯಾ ವಿಶ್ವವಿದ್ಯಾಲಯವನ್ನು ನಿರ್ಮಿಸಿದನು. ಕೇವಲ ೨೨೫ ವಿದ್ಯಾರ್ಥಿಗಳೊಂದಿಗೆ ಪ್ರಾರಂಭವಾದ ಈ ಸಂಸ್ಥೆ, ಉರ್ದು ಮಾಧ್ಯಮದಲ್ಲಿ ಉನ್ನತ ಶಿಕ್ಷಣ ಕೊಡುತ್ತಿದ್ದ ಏಕೈಕ ಸಂಸ್ಥೆಯಾಗಿತ್ತು. ಇದೆಲ್ಲಾ ಹೈದರಾಬಾದು ಭಾರತದ ಸಂವಿಧಾನದಡಿ ಸೇರುವುದಕ್ಕೆ ಹಿಂದಿನ ಮಾತು. ಸ್ವಾತಂತ್ರ ಬಂದ ಮೇಲೆ ಉರ್ದು ಓದದಿರುವ ಸ್ವಾತಂತ್ರವೂ ಪ್ರಾಪ್ತವಾಯಿತಲ್ಲವೇ?
"ಹಿಸಾಟರಿಯಾಗ್ರಫಿ ಬರೆಯುವುದು ಮಸುಷ್ಯನ ಚರಿತ್ರೆಯನ್ನಲ್ಲ, ಸಮಾಜದ ಚರಿತ್ರೆಯನ್ನು. ೧೯೬೮ರಲ್ಲಿ ರಷ್ಯಾಚಕೋಸ್ಲವಾಕಿಯಾವನ್ನು ಆಕ್ರಮಿಸಿಕೊಂಡನಂತರದ ಕೆಲ ವರ್ಷಗಳಲ್ಲಿ ಜನರನ್ನು ನಿರಂತರ ಭಯದಲ್ಲಿಟ್ಟು ರಾಜ್ಯಭಾರ ನಡೆಸುವುದಕ್ಕೆ ನಾಂದಿಯೆಂಬಂತೆ -- ಒಂದು ಯೋಜಿತ ಕಾರ್ಯಕ್ರಮದಡಿ, ಅಲ್ಲಿನ ಎಲ್ಲ ನಾಯಿಗಳನ್ನೂ ಸಾಮೂಹಿಕವಾಗಿ ಮುಗಸಿಬಿಡುವ ಕಾರ್ಯಕ್ರಮ ನಡೆಯಿತು. ಇದು ಚರಿತ್ರಕಾರರಿಗೆ ಮುಖ್ಯವಲ್ಲದ - ಅವರು ಸಂಪೂರ್ಣವಾಗಿ ಮರೆತ ಘಟನೆ. ರಾಜಕೀಯ ಶಾಸ್ತ್ರದ ವಿದ್ಯಾರ್ಥಿಗೂ ಮುಖ್ಯವಲ್ಲದ ಘಟನೆ. ಆದರೆ ಮಾನವಶಾಸ್ತ್ರದಲ್ಲಿ ಇದು ಅತ್ಯಂತ ಮುಖ್ಯವಾಗಬಲ್ಲ ಸಂಗತಿ."
ಮತ್ತೆ ಮಿಲನ್ ಕುಂದೆರಾ ಮತ್ತು ಚಕೋಸ್ಲವಾಕಿಯಾದ ಚರಿತ್ರೆಯ ಶರಣು ಪಡೆಯುವುದು ಅನಿವಾರ್ಯ. ಹೈದರಾಬಾದಿನ ಚರಿತ್ರೆಯ ಪುಟಗಳನ್ನು ತಿರುವಿಹಾಕಿದರೆ, ವಿಲಾಸಜೀವನದ ಪ್ರಖ್ಯಾತಿ ಎದ್ದು ಕಾಣುತ್ತದೆ. ಆದರೆ, ಸಂಸ್ಕೃತಿ ಅದಕ್ಕಿಂತ ಕಡಿಮೆ ಖ್ಯಾತಿ ಪಡೆಯದ, ಕಡಿಮೆ ಮಹತ್ವದ್ದೇನೂ ಅಲ್ಲದ ವಿಷಯ.
೮೮ ಪ್ರತಿಶತ ಹಿಂದೂ ಜನರಿದ್ದ ಈ ನಾಡಿನಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಆಳ್ವಿಕೆ, ಆಮದಾದ ಧರ್ಮ, ಅದರೊಂದಿಗೇ ಹೇರಿ, ರಕ್ತಗತವಾಗಿಹೋಗಿದ್ದ ಉರ್ದು ಭಾಷೆ ಮತ್ತು ರಾಜ್ಯದಲ್ಲಿದ್ದ ವಿಚಿತ್ರ ಜಾಗೀರುದಾರಿ ಪದ್ಧತಿ. ವಿಪರೀತ ಐಶ್ವರ್ಯ ಹೊಂದಿದ ರಾಜವರ್ಗ, ಜತೆಜತೆಗೆ ಕಲೆ, ಸಂಸ್ಕೃತಿಗಳ ಬೀಡೂ ಆಗಿತ್ತು.
ಈ ಜಾಗೀರುದಾರೀ ಪದ್ಧತಿ ಯಾವ ದಾರಿಯಲ್ಲಿ ಬಂತು? ಅಲ್ಪ ಕಾಣಿಕೆಗೆ ಸಾವಿರಾರು ಎಕರೆಗಳ ಜಾಗೀರು ಸಿಗುತ್ತಿದ್ದುದು ಖರೆ. ಭೂಮಿ ಸ್ವಂತದ್ದಾದರೂ, ಮರಗಳಲ್ಲಿ ಬೆಳೆವ ಫಲ ಪಡೆಯುತ್ತಿದ್ದ ಹಣ್ಣುಗಳು ನಿಜಾಮನದೆಂದು ವಾದಿಸಿ, ಫಲ ಪಡೆಯುತ್ತಿದ್ದ ಜಾಗೀರುದಾರರ ಕಥೆಗಳೂ ಅನೇಕ ಪ್ರಚಲಿತವಾಗಿವೆ. ಶೋಷಣೆಯೂ ಜೀವನದ ಒಂದು ಭಾಗವಾಗಿ ಶತಮಾನಕ್ಕಿಂತಲೂ ಹೆಚ್ಚಿನ ಕಾಲದಿಂದ ತಾಂಡವವಾಡುತ್ತಿತ್ತು.
ಶತಮಾನಗಳು ನಡೆದುಬಂದ ಇತಿಹಾಸದ ಪದ್ಧತಿಯನ್ನು ಬದಲಿಸಲು ಎಷ್ಟು ದಿನ ಬೇಕಾಗಬಹುದು? ರೂಮಿಟೋಪಿಯ ಕುಚ್ಚು ಕತ್ತರಿಸಲು ಬೇರೇನೂ ಬೇಕಿಲ್ಲ - ಒಂದು ಕತ್ತರಿಯಷ್ಟೇ ಸಾಕು - ಹೆಚ್ಚು ಸಮಯವೂ ಬೇಕಿಲ್ಲ, ಎಂಬುದನ್ನ ಹೈದರಾಬಾದ್ ನಮಗೆ ಕಲಿಸಿತು.
೧೯೪೮ರ ವೇಳೆಗೆ ಒಂದೆಡೆ ರೈತಾಂಗ ಶಸ್ತ್ರಾಸ್ತ್ರ ಹೊತ್ತ ಬಂಡೆದ್ದರು. ಮತ್ತೊಂದೆಡೆ ಸರದಾರ್ ಪಟೇಲರ ಆದೇಶಾನುಸಾರವಾಗಿ ಭಾರತದೇಶದ ಪಡೆಗಳು (ಆಗಿನ್ನೂ ಭಾರತಕ್ಕೆ ಸೇರಿರದ) ಹೈದರಾಬಾದನ್ನು ಆಕ್ರಮಿಸಿದವು. (ಚರಿತ್ರೆಯ ಪುಸ್ತಕಗಳು ಈ ಸೈನಿಕ ಕಾರ್ಯಾಚರಣೆಯನ್ನು Police Action ಎಂದು ಕರೆದರೂ, Operation Polo ಎಂಬುದು ಸೈನ್ಯದವರು ಇದಕ್ಕೆ ಇತ್ತಿದ್ದ ಹೆಸರು). ಭಾರತದ ಪ್ರಭುತ್ವ ಏರ್ಪಾಟಾದ ನಂತರದ ಕೆಲ ದಿನಗಳಲ್ಲೇ - ೧೯೪೯ ರಲ್ಲಿ - ಜಹಗೀರುದಾರಿ ಪದ್ಧತಿ ಕಾನೂನು ಪುಸ್ತಕಗಳ ಪ್ರಕಾರ ರದ್ದಾಯಿತು. ಅದರೊಂದಿಗೇ ರೂಮಿಟೋಪಿಗಳೂ ಕಾಣೆಯಾಗುತ್ತಾ ಬಂದುವು. ಆದರೆ ರೂಮಿಟೋಪಿಗಳು ಪ್ರತಿನಿಧಿಸಿದ್ದು ಜರಗೀರುದಾರಿ ಪದ್ಧತಿಯನ್ನೇ ಅಥವಾ ಅದಕ್ಕಿಂತ ಮಿಗಿಲಾದ ಮುಖ್ಯ ಸಂಗತಿಯನ್ನೇ? ಈ ಪ್ರಶ್ನೆಯನ್ನ ನಾವೆಲ್ಲರೂ ಕೇಳಬೇಕು.
ಈ ಎಲ್ಲ ನಡೆದಾಗ ಜನರಿಗೇನಾಯಿತು? ಇಲ್ಲಿನ ಸಮಾಜ ಹೇಗೆ ಇದಕ್ಕೆ ಒಗ್ಗಿಕೊಂಡಿತು ಅಥವಾ ಒಗ್ಗಲಿಲ್ಲ? ಇಲ್ಲಿದ್ದ ಮುಸಲ್ಮಾನರಿಗನೇಕರಿಗೆ ಪಾಕಿಸ್ತಾನಕ್ಕೆ ಹೋಗಿ ಅಲ್ಲೇ ಖಾಯಂ ಆಗಿ ನೆಲೆಸುವ ಅವಕಾಶ ಒದಗಿಬಂದಾಗ ಹೋದವರು ಯಾರು? ರಜಾಕಾರರ ನಾಯಕ ಕಾಸಿಂ ರಿಜ್ವಿಯಂತಹವರು ಅಂಜಿಕೆಯಿಂದ ಪಲಾಯನ ಮಾಡಿದರೇ? ಮಧ್ಯಮವರ್ಗ, ವ್ಯಾಪಾರೀ ವರ್ಗದವರು, ಬುದ್ಧಿಜೀವಿಗಳು, ವಕೀಲರು, ಕವಿಗಳು, ಕಾರಕೂನರು.... ವಲಸೆ ಹೋದವರು, ಹೋಗಲೆತ್ನಿಸಿದವರು, ಹೋಗಲಿಚ್ಛಿಸಿ ಹೋಗಲಾಗದವರು, ಹೋಗದೇ ಉಳಿದವರು..ಯಾರು? ಅಸಫ್‌ಜಾಹಿ ಕಾನೂನು ಪದ್ಧತಿಯಲ್ಲಿ ಪರಿಣಿತರಾದ ವಕೀಲರು ಏಕಾ‌ಏಕಿ ನಿರುದ್ಯೋಗಿಗಳಾದರು. ಬದಲಾವಣೆಯೆಂದರೆ ಬದಲಾವಣೆ - ನಿಜಾಮನ ಖಾಸಗೀ ಸೈನ್ಯದಲ್ಲಿದ್ದವರ ನೌಕರಿ ಏನಾಯಿತು? ಹಿಂದೂ ಮುಸ್ಲಿಂ ಎಂಬ ಭೇದವಿಲ್ಲದೇ, ಜೀವನ ಹೊರೆಯಲೆಂದೇ ಉರ್ದು ಭಾಷೆ ಕಲಿತಿದ್ದವರು - ಬೀದಿಗಾದರೇ? ಈ ಕಾಲದಲ್ಲಿ ರಿಕ್ಷಾ ಚಾಲಕರ (ಸೈಕಲ್ ರಿಕ್ಷಾ) ಸಂಖ್ಯೆ ಮತ್ತು ವೇಶ್ಯೆಯರ ಸಂಖ್ಯೆ ಬೆಳೆದು ನಿಂತಿತೆಂದು ಪ್ರತೀತಿ.


ಅವರು 
ಅವನ ಅನೇಕ ಹೆಂಡಂದಿರಿದ್ದರಲ್ಲ
ಅವರೇನಾದರು? 
ಅವರೆ? ಕೆಲವರು ಅವರವರ ಹುಟ್ಟೂರಿಗೆ
ಹೊರಟು ಹೋದರು. ಇನ್ನು ಯಾರನ್ನೋ
ಆಶ್ರಯಿಸಿದರು. ಕೆಲವರು ಚಾರ್‌ಮಿನಾರಿನ
ಸಮೀಪ ಮಾಲೆಗಳನ್ನು ಕಟ್ಟಿ ಮಾರತೊಡಗಿದರು.
ಹಳೇನಗರದ ಧೂಳು ಎಲ್ಲಾ ಹೂವುಗಳ ಮೇಲೂ
ಕುಳಿತಿದೆ.
ಕೆಲವರು ನರ್ತಕಿಯರಾದರು. ಸ್ಪರ್ಶಕ್ಕೆ ನಾಚಿದರು.
ನಿಜಕ್ಕೂ ಪ್ರೇಮಿಸಿದರು. ಬೇರೆ ರೀತಿಯಿಂದ
ಬೇರೆ ಜನರೆದುರು ಹಾಡಿದರು. ಆಗಿಂದಾಗ್ಗೆ ಸತ್ತ
ಇವರ ಗೋರಿಯನ್ನು ಯಾರೂ ಕಟ್ಟಿಸಲಿಲ್ಲ.
ಇನ್ನು ಕೆಲವರು ಕೊನೆಯಿಲ್ಲದ ಗಲ್ಲಿಗಳಾದರು
ನೀವು ಮೆಟ್ಟುವ, ನೀವು ಹುಡುಕುವ.'
ತಿರುಮಲೇಶ್ ಕೇಳಿದ ಪ್ರಶ್ನೆಯನ್ನೇ ನಾನೂ ಕೇಳುತ್ತಿದ್ದೇನೆ. ಕಣ್ಣಿಗೆ ಕಾಣುವುದನ್ನೂ ಮೀರಿ ನಿಂತ ಅರ್ಥ ಈ ಎಲ್ಲಕ್ಕೂ ಇವೆ ಎನ್ನಿಸಿರುವುದರಿಂದ.
ಈ ಎಲ್ಲವೂ ನಡೆಯುತ್ತಿದ್ದಾಗ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಯಾರೂ ಕಾಣದಂತಹ ನಿಧಾನ ಬದಲಾವಣೆ ಆಗುತ್ತಿತ್ತು. ಎಲ್ಲಿಯ ಉರ್ದು? ಉರ್ದು ಮಾಧ್ಯಮದಲ್ಲಿ ಶಿಕ್ಷಣ ಅಂತಿರಲಿ - ಭಾಷಗೇ ಕೊಡಲಿಯಿಟ್ಟ ಪರಿಸ್ಥಿತಿಉದ್ಭವವಾದಂತಾಯಿತು. ೧೯೫೪ರಲ್ಲಿ ದರ್-ಆಲ್-ತರ್ಜುಮಾಗೆ ಬೆಂಕಿ ಬಿದ್ದದ್ದು ಚರಿತ್ರೆಗೆ ತಿಳಿದ ವಿಷಯ. ವಿಶ್ವದ ಎಲ್ಲ ಪ್ರಮುಖ ಪುಸ್ತಕಗಳನ್ನು ಉರ್ದುವಿಗೆ ತರ್ಜುಮೆ ಮಾಡಬೇಕೆಂದು ಹುಟ್ಟುಹಾಕಿದ್ದ ಈ ವಿಭಾಗದಲ್ಲಿ ಬೇರೆ ಭಾಷೆಗಳದ್ದಲ್ಲದೇ ಅಮೂಲ್ಯ ಅರಬ್ಬೀ ಗ್ರಂಥಗಳೂ ಇದ್ದುವೆಂದು ಪ್ರತೀತಿ. ಇಂಥ ದರ್-ಆಲ್-ತರ್ಜುಮಾಗೆ ಬಿದ್ದ ಬೆಂಕಿ ಸುಟ್ಟದ್ದು ಬರೇ ಪುಸ್ತಕಗಳನ್ನಷ್ಟೇ ಅಲ್ಲ.

ಈ ಎಲ್ಲ ಬದಲಾವಣೆಗಳೂ ಹೈದರಾಬಾದಿನ ಜನರನ್ನ ಕಂಗೆಡಿಸಿತು. ಭಾಷಾವಾರು ಪ್ರಾಂತ್ಯ ವಿಭಜನೆಯಲ್ಲಿ ಹಳೆಯ `ಹೈದರಾಬಾದ್ ಸ್ಟೇಟ್'ಗೆ ಸೇರಿದ ಅನೇಕ ಸ್ಥಳಗಳು ಕರ್ನಾಟಕ, ಮಹಾರಾಷ್ಟ್ರಗಳ ನಡುವೆ ಹಂಚಿಹೊದುವು. ಹೈದರಾಬಾದ್ ನಗರ ಮತ್ತು ಸುತ್ತಮುತ್ತಲ ಇತರ ಪ್ರಾಂತಗಳು ವಿಶಾಲಾಂಧ್ರದಲ್ಲಿ ಸೇರಿದುವು. ಉರ್ದು ಭಾಷಯಲ್ಲಿಯೇ ಕಲಿತ ವೀರೇಂದ್ರ ಪಾಟಿಲರೂ ಕರ್ನಾಟಕದ ರಾಜಕೀಯಕ್ಕೆ ಹೈದರಾಬಾದ್ ಸ್ಟೇಟ್‌ನ ಈ ಪಾಲಿನಿಂದಲೇ ಬಂದವರು. ಆನಂತರವೇ ಕನ್ನಡ ಕಲಿತರು. ಹಾಗೆಯೇ ಆಂಧ್ರದ ಚೆನ್ನಾರೆಡ್ಡಿಯೂ ವೈದ್ಯಕೀಯ ಶಿಕ್ಷಣ ಪಡೆದದ್ದು ಉರ್ದು ಮಾಧ್ಯಮದಲ್ಲಿ.
ಭಾಷಾವಾರು ವಿಭಜನೆಯಲ್ಲಿ ಪ್ರತೀ ರಾಜ್ಯಕ್ಕೂ ತನ್ನದೇ ರಾಜ್ಯಭಾಷೆ ದಕ್ಕಿತು. ಕರ್ನಾಟಕಕ್ಕೆ ಕನ್ನಡ, ಆಂಧ್ರಪ್ರದೇಶಕ್ಕೆ ತೆಲುಗು, ಮಹಾರಾಷ್ಟಕ್ಕೆ ಮರಾಠಿ. ಆದರೆ ಇಲ್ಲಿ ನೆಲೆನಿಂತ ಉರ್ದು ಹೋದದ್ದೆಲ್ಲಿಗೆ? 
"ರಾಜ್ಯಕ್ಕೆ ಒಂದು ಭಾಷೆ ಸಿಕ್ಕಿದ್ದೇನೋ ನಿಜ... ಆದರೆ ಸಂವಿಧಾನ ಗುರುತಿಸುವ ಪ್ರತೀ ಭಾಷೆಗೂ ಒಂದು ರಾಜ್ಯ ದೊರೆಯಿತೇ?"ಎಂದು ರಶೀದುದ್ದೀನ್ ಖಾನ್ ಪ್ರಶ್ನಿಸುತ್ತಾರೆ. ಡೋಗ್ರಿ ಭಾಷೆಯೇ ಪ್ರಮುಖವಾದಿ ಜಮ್ಮು ಕಾಶ್ಮೀರದಲ್ಲಿ ಉರ್ದು ರಾಜ್ಯ ಭಾಷೆ. ಒಂದು ಕಾಲದಲ್ಲಿ ಪಂಜಾಬಿನಲ್ಲಿ ಉರ್ದುವಿನ ಬಳಕೆ ಹೆಚ್ಚಾಗಿ ಇರುತ್ತಿತ್ತು. ಲಖನೋ ಅಲಹಾಬಾದ್‌ಗಳು ಉರ್ದು ಸಂಸ್ಕೃತಿಯ ಕೇಂದ್ರಗಳಾಗಿದ್ದುವು. ಆದರೆ ಇಂದು? ಲಖನೋ ಒಂದೆಡೆಗಿರಲಿ, ಉರ್ದುವನ್ನು ಪೋಷಿಸಿದ ಹೈದರಾಬಾದಿನ ಸ್ಥಾನ ಏನು?
೧೯೪೮: ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ ಉರ್ದು ಮಾಧ್ಯಮ ಇಲ್ಲವಾಯಿತು.
೧೯೫೬: ಹೈದರಾಬಾದ್ ಸ್ಟೇಟ್ ಇಲ್ಲವಾಯಿತು.
"ಈ ಸಮಯದಲ್ಲಿ ಸಂಸ್ಕೃತಿ ಸಾಹಿತ್ಯದ ಹರಿಕಾರರನೇಕರು ಪಾಕಿಸ್ತಾನಕ್ಕೆ ವಲಸೆ ಹೋದರು. ಇಲ್ಲಿ ಬಿತ್ತಿದ ನಾಟಕರಂಗದ ಬೀಜ ಸಿಬ್ತೆ ಹಸನ್, ಇಬ್ರಹೀಂ ಜಲೀಸ್ ಮತ್ತು ಖ್ವಾಜಾ ಮೊಯಿನುದ್ದೀನರ ಮೂಲಕ ಪಾಕಿಸ್ತಾನದಲ್ಲಿ ಬೆಳೆದು ಫಲ ನೀಡಲಿತ್ತು." ಎಂದು ಅಕಬರ್ ಅಹಮದ್ ಹೇಳಿದ್ದು ನಿಜವೇ ಇರಬೇಕು. ಪಾಕಿಸ್ತಾನದಲ್ಲಿ ಇಂದಿಗೂ ರೂಮಿ ಟೋಪಿ ಧರಿಸುವವರನ್ನ ಕಾಣಬಹುದಂತೆ.
"ಸರಕಾರ" ಎಂಬುದು ಒಂದು ವ್ಯಕ್ತಿಯೂ ಅಲ್ಲ, ಒಂದು ಸಮಾಜವೂ ಅಲ್ಲ. ಯಾರಿಗೂ ಜವಾಬುದಾರಿ ಹೊರಿಸಲಾಗದ, ಯಾರನ್ನೂ ಬೊಟ್ಟೆತ್ತಿ ತೋರಿಸಲಾಗದ ಒಂದು ವಿಚಿತ್ರ ವ್ಯವಸ್ಥೆ. ಸರಕಾರದ ಮಟ್ಟಿಗೆ ಭಾಷೆ, ಸಂಸ್ಕೃತಿ ಎಂದರೆ ಅದು ತನ್ನ ಸಂಸ್ಕೃತಿ ಇಲಾಖೆಯ ಮೂಲಕ ನಡೆಸುವ ಅಪನಾ ಉತ್ಸವ, ಭಾರತ ಉತ್ಸವಗಳು ಮಾತ್ರ. ದರ್-ಅಲ್-ತರ್ಜುಮಾಗೆ ಬಿದ್ದ ಬೆಂಕಿಯಾಗಲೀ, ವಿಶ್ವವಿದ್ಯಾಲಯದಲ್ಲಿ ಹೇಳಹೆಸರಿಲ್ಲದೇ ರೂಮಿಟೋಪಿಯಾದ ಉರ್ದು ಭಾಷೆಯಾಗಲೀ ಚಿಂತೆಯ ವಿಷಯವೇ ಆಗುವುದಿಲ್ಲ. ಬದಲಿಗೆ ಫೆಸ್ಟಿವಲ್ ಆಫ್ ಫ್ರಾನ್ಸ್ ಮೂಲಕ ಹೊಸ ಸಂಸ್ಕೃತಿಗಳ ಆಘ್ರಾಣಯತ್ನ ನಡೆಯುತ್ತಿರುತ್ತದೆ.
ಇಲ್ಲಿ ಹೈದರಾಬಾದ್ ಪ್ರಾಂತದಲ್ಲಿ `ರೋಜಿರೋಟಿ'ಗಾಗಿ ಭಾಷೆ ಕಲಿತ ಜನ ಹೊಸ ರಾಜ್ಯಭಾಷಯೆ ಪ್ರಹಾರದಡಿ ಸಿಲುಕಿ ಕ್ರಮಕ್ರಮೇಣ ಬದುಕಿನ ಮುಖ್ಯವಾಹಿನಿಯಿಂದ ದೂರವಾಗಿ ಈ ಉರಿನಲ್ಲೇ ಒಂದು ದ್ವೀಪವಾಗುತ್ತಾರೆ.
ಹೌದು, ಸಂಸ್ಕೃತಿಯ ಕೇಂದ್ರವಾಗಿದ್ದ ಉಸ್ಮಾನಿಯಾ ಈಗೆಲ್ಲಿ?
`ನಿಮ್ಮ ಹೊಟೇಲಿನಲ್ಲಿ ರುಬ್ಬುಗುಂಡೆಲ್ಲಿ?'
`ಇಲ್ಲ ಇಲ್ಲಿ ಎಲ್ಲಾ ಎಲೆಕ್ಟ್ರಿಕ್ಕೇ!'
`ನಾನು ಎಂ.ಎ. ಎಲ್.ಎಲ್.ಬಿ, ಎಷ್ಟೇ ಉಸ್ಮಾನಿಯಾ ವಿಶ್ವವಿದ್ಯಾಲಯದ ಪದವೀಧರನಾದರೂ ಪಾತ್ರೆ ತೊಳೆಯುವುದು ಚೆನ್ನಿರುವುದಿಲ್ಲವೇನೋ..'
ಹೊಟೇಲಿನ ಬಿಲ್‌ಗೆ ಹಣ ಸಾಲದ ಯಂಡಮೂರಿ ವೀರೇಂದ್ರನಾಥರ ಕಥಾನಾಯಕ ಆಡುವ ಮಾತುಗಳಿವು. 
ಹಿಂದೆ ಕೇಳಿದ ಪ್ರಶ್ನೆಯನ್ನೇ ಬೇರೆ ಧ್ವನಿಯಲ್ಲಿ, ಬೇರೆ ಅರ್ಥದಲ್ಲಿ ಕೇಳಬೇಕನ್ನಿಸುತ್ತದೆ -


ಸಂಸ್ಕೃತಿಯ ಕೇಂದ್ರವಾಗಿದ್ದ ಉಸ್ಮಾನಿಯಾ ಈಗೆಲ್ಲಿ?ಒಂದು ಭಾಷೆಯ ನಿಧನಕ್ಕೆ ಹೆಚ್ಚು ಸಮಯ ಹಿಡಿಯುವುದಿಲ್ಲ ಎಂಬುದಕ್ಕೆ ಹೈದರಾಬಾದಿನ ಚರಿತ್ರೆ ಒಂದು ಉದಾಹರಣೆಯಾಗಿ ನಿಲ್ಲುವುದು. ಶತಮಾನದ ಚರಿತ್ರೆ ಬದಿಗೊತ್ತಿ, ಇಲ್ಲಿ ಉರ್ದುವಿನಿಂದಲೇ ಜೀವಿಸುತ್ತಿದ್ದ ಅನೇಕರಿದ್ದರು (ಹಾಗೂ ಆ ಪರಂಪರೆಗೆ ಸೇರಿದವರು ಇನ್ನೂ ಸಾಕಷ್ಟು ಮಂದಿ ಇದ್ದಾರೆ). ಕನಿಷ್ಠ ದ್ವಿತೀಯ ರಾಜ್ಯಭಾಷೆಯ ಸ್ಥಾನವನ್ನಾದರೂ ಉರ್ದುವಿಗೆ ಕೊಡಿರೆಂದು ಜನ ಕೇಳಿದ್ದರು. ಜಾಕಿರ್ ಹುಸೇನರು ೨೦ ಲಕ್ಷ ಜನರ ಹಸ್ತಾಕ್ಷರವಿದ್ದ ಮನವಿಪತ್ರವನ್ನು ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದರಿಗೆ ನೀಡಿದ್ದೂ ಉಂಟು. ನಂತರ ಜಾಕಿರ್ ಹುಸೇನರೇ ಮನವಿಪತ್ರ ಸ್ವೀಕರಿಸುವ ಆ ಹುದ್ದೆಯನ್ನ ಅಲಂಕರಿಸಿದ್ದೂ ಉಂಟು. ಉರ್ದುವಿನಲ್ಲೇ ವಿದ್ಯಾಭ್ಯಾಸ ಮಾಡಿದ್ದ ಪಿ.ವಿ.ನರಸಿಂಹಾ ರಾವು, ಚೆನ್ನಾರೆಡ್ಡಿಗಳಂತಹ ಮುಖ್ಯಮಂತ್ರಿಗಳೂ ಈ ರಾಜ್ಯಕ್ಕೆ ಆಗಿ ಹೋದರು. ಏನೊಂದೂ ಪ್ರಯೋಜನ ನೀಡಲಿಲ್ಲ.

ಸಂಸ್ಕೃತಿಯೊಂದರ ಮುಖ್ಯ ಕೇಂದ್ರವಾಗಬಹುದಾಗಿದ್ದ - ಸಾಹಿತ್ಯ ನಿರ್ಮಾಣದಲ್ಲಿ ಪ್ರಮುಖಪಾತ್ರ ವಹಿಸಬಹುದಾಗಿದ್ದ - ಲಖನೋವಿನಂತಹ ನಜಾಕತ್ ನಗರಕ್ಕೆ ಸರಿಸಮನಾಗಿ, ಸವಾಲಾಗಿ ನಿಲ್ಲಬಹುದಿದ್ದ ಅವಕಾಶ ಈ ಅಲ್ಲೋಲಕಲ್ಲೋಲದಿಂದ ತಪ್ಪಿಹೋಯಿತೇ? ಹೈದರಾಬಾದಿನಲ್ಲಿ ಪ್ರಚಲಿತವಿರುವ ಉರ್ದು, ಹಿಂದಿ, ತೆಲುಗು ಮಿಶ್ರಿತ ಭಾಷೆ ಏನು ಸೂಚಿಸುತ್ತದೆ? ರಾಜಸ್ತಾನಿ ಸಮಾಜದವರು, ಮಾರವಾಡಿ ಸಂಘದವರು ನಡೆಸುವ ಅದ್ಧೂರಿಯ "ಮುಷಾಯಿರಾ"ಕ್ಕೆ ನೂರಾರು ರೂಪಾಯಿನ ಟಿಕೇಟು ಖರೀದಿಸಿ, ಕವಿಗಳು ಪ್ರಾಸಬದ್ಧವಾಗಿ ಹೇಳುವ ಜೋಕುಗಳನ್ನು ಖುಷಿಯಿಂದ ಆಲಿಸುವ ಜನ ಯಾರು? ಈ ಸಾವಿರಾರು ರೂಪಾಯಿ ಖರ್ಚು ಮಾಡಿ ಏರ್ಪಡಿಸಿರುವ 'ಮುಷಾಯಿರಾ'ದಲ್ಲಿ ಭಾಗವಿಸಿರುವ ಕವಿಗಳಲ್ಲಿ ಹೈದರಾಬಾದ್ ಮೂಲದವರೆಷ್ಟು?
ದರ್-ಅಲ್-ತರ್ಜುಮಾ, ಉಸ್ಮಾನಿಯಾ ವಿಶ್ವವಿದ್ಯಾಲಯ, ಉರ್ದು ಮಾಧ್ಯಮದ ಉನ್ನತ ವ್ಯಾಸಂಗ, ಏನೆಲ್ಲಾ ತಮ್ಮ ಬೇರುಗಳನ್ನು ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ದೊರೆತ ಸ್ವಾತಂತ್ರಕ್ಕೆ ಸಂತೋಷ ಪಡಬೇಕೇ? `ಉರ್ದುವನ್ನು ನಿಜಾಮನ ವಂಶದವರು ತೆಲುಗರ ಮೇಲೆ ಹೇರಿದ್ದರು - ಈಗ ಮತ್ತೆ ಹಿಂದಿನ ಸ್ಥಿತಿಗೇ ಹೋಗಿ, ಸಮತೋಲನ ಬಂದಿದೆ.' ಎಂದು ವಾದಿಸುವವರಿದ್ದಾರೆ. ಆದರೆ ಇದು ಇಷ್ಟು ಸರಳವಾಗಿ "ಸೇಡಿ"ನ ಮನೋಭಾವದಲ್ಲಿ ನೋಡುವ ವಿಷಯ ಎಂದೆನಿಸುವುದಿಲ್ಲ.
ಇಲ್ಲೇ ಈ ನೆಲದಲ್ಲೇ ಬೆಳೆಯಬಹುದಿದ್ದ ಇಕ್ಬಲ್ ಅಥವಾ ಗಾಲಿಬ್ ಪಾಕಿಸ್ತಾನಕ್ಕೆ ವಲಸೆ ಹೋಗಿರಬಹುದೇ? ಅಥವಾ ಇಲ್ಲೇ ಉಳಿದು, ಉರ್ದು ಪೂರ್ಣ ಕಲಿಯದೇ, ತೆಲುಗನ್ನೂ ಅಭ್ಯಾಸ ಮಾಡಲಾಗದೇ ಒಂದು ದ್ವೀಪವಾಗಿ ನಿಂತಿರಬಹುದೇ? ಒಬ್ಬಳು ಜೀಲಾನೀ ಬಾನೋ, ದಿವಂಗತ ಮುಕ್ದೂಂ ಮೊಯಿನುದ್ದೀನ್ ಮಾತ್ರವಷ್ಟೇ ಹೈದರಾಬಾದಿಗೆ ಸಾಕೇ? ಈ ಎಲ್ಲ ಪ್ರಶ್ನೆಗಳೂ ರೂಮಿಟೋಪಿಗಳಾಗಿ ತಲೆಯ ಮೇಲೆ ಕುಳಿತುಕೊಳ್ಳುತ್ತವೆ. ಉತ್ತರ ಹುಡುಕುವಷ್ಟರಲ್ಲೇ ಮಾಯವಾಗುತ್ತವೆ. ಮತ್ತೆ ವ್ಯವಸ್ಥಿತವಾಗಿ ಹಿಂದಿಯನ್ನು ವಿವಿಧ ರೀತಿಗಳಿಂದ ರಾಷ್ಟ್ರದ ಮೇಲೆ ಹೇರುತ್ತಿರುವ ಈ ಸಂದರ್ಭದಲ್ಲಿ ಇದು ಕೇವಲ ಚರಿತ್ರೆಯ ಪ್ರಶ್ನೆಯಾಗಲೀ, ಹೈದರಾಬಾದಿನ ಪ್ರಶ್ನಯಾಗಿಯಾಗಿ ಆಗಲೀ ಉಳಿಯುವುದಿಲ್ಲ.

ಈ ಎಲ್ಲದರ ನಡುವೆ ನಮ್ಮಲ್ಲಿ ಪರಕೀಯವಾಗಿ ಉಳಿದು ದ್ವೀಪ ಕಟ್ಟಿಕೊಂಡ ಜನರೂ ಜೀವಿಸುತ್ತಿದ್ದಾರೆ. ಪಾಕಿಸ್ತಾನಕ್ಕೆ ವಲಸೆ ಹೋದ ತಮ್ಮ ಅಕ್ಕ, ತಂಗಿ, ಅಣ್ಣ, ಚಾಚಾ, ಮಾಮಾಗಳಿಗಾಗಿ ಪ್ರಾರ್ಥನೆ ಮಾಡುವ ಜನ, ಅವರ ನಮಾಜಿನಲ್ಲಿ ನಮ್ಮನ್ನೂ ಸೇರಿಸುವ ಜನಾಂಗ, ಭೀತಿಯಿಂದ ಇಲ್ಲೇ ಜೀವಿಸುತ್ತಿದ್ದಾರೆ. ಹಳೆಯ ನೆನಪಿಗೆಂದು ಅವರು ಆಗಾಗ ರೂಮಿಟೋಪಿ ಧರಿಸುತ್ತಾರೆ.

ಇಲ್ಲಿನ ಮುಸಲ್ಮಾನರ ಸಮಸ್ಯೆ ದೇಶದ ಬೇರೆಡೆಯ ಅಲ್ಪಸಂಖ್ಯಾತರ ಸಮಸ್ಯಗಿಂತ ಭಿನ್ನವಾದದ್ದು. ಮುಖ್ಯವಾಹಿನಿಯಲ್ಲಿಬೆರೆತುಹೋಗಿದ್ದ ಇತರರಿಗೂ, ಕಾಸಿಂ ರಿಜ್ವಿಯ ಜತೆ ಸೇರಿ ಇಲ್ಲಿನ ಬಹುಸಂಖ್ಯಾತರ ವಿರುದ್ಧ ತೆಲಂಗಾಣಾ ರೈತ ಹೋರಾಟದಲ್ಲಿ ರಜಾಕಾರರಾಗಿ (ರಜಾಕಾರ್: ಸ್ವಯಂಸೇವಕ, ಕಡೆಗೂ ಖಡ್ಗ ಹಿಡಿದು ಹೋರಾಡುವ ಮೂಲಭೂತವಾದಿಳೆಲ್ಲರೂ ತಮ್ಮನ್ನು ಸ್ವಯಂಸೇವಕರೆಂದು ಕರೆದುಕೊಳ್ಳುವುದರಲ್ಲಿ ಏನಾದರೂ ನಿಗೂಢ ಅರ್ಥವಿರಬಹುದೋ?) ಹೋರಾಡಿದ ಈ ಜನಾಂಗಕ್ಕೂ ವ್ಯತ್ಯಾಸ ಇರುವುದು ಸಹಜ. ಇದೇ ಜನ ಭಾರತದ ಸೈನ್ಯದ ವಿರುದ್ಧವೂ ಹೋರಾಡಲೆತ್ನಿಸಿದವರು. ತಮ್ಮ ಬಂಧುಬಾಂಧವರಲ್ಲನೇಕರು ಪಾಕಿಸ್ತಾನಕ್ಕೆ ಹೋದದನ್ನು ಕಂಡು, ನಿಂತವರು. ತಮ್ಮವರೇ ಪರಕೀಯರಾಗುವುದನ್ನು ಹಾಗೂ ಇಲ್ಲಿ ತಾವೇ ಪರಕೀಯರಾಗಿ ಉಳಿಯಬೇಕಾದ ಪರಿಸ್ಥಿತಿಯ ವಿರೋಧಾಭಾಸವನ್ನ ಕಂಡ ಜನರಿವರು. ಬಹುಶಃ ಮತಕ್ಷೋಭೆಯ ಬೀಜಾಂಕುರ, ಸಂಸ್ಕೃತಿ, ಚರಿತ್ರೆಯನ್ನು ಒಂದೇ ಏಟಿಗೆ ಅಳಿಸಿಹಾಕಿದ ರೀತಿಯಲ್ಲಿ, ಅವರು ಗೋಡೆ ಬದಿಗೆ ಒತ್ತಲ್ಪಟ್ಟ ರೀತಿಯಲ್ಲಿ, ಅವರ ಪರಕೀಯಭಾವದಲ್ಲಿ ಉಂಟಾಗುತ್ತದೆ ಅನ್ನಿಸುತ್ತದೆ.

ರೂಮಿಟೋಪಿಯ ಮೇಲೆ, ಯಾವ ಕಾರಣಕ್ಕಾಗಿ, ಎತ್ತಲಿಂದ ಆಕ್ರಮಣ ಆಯಿತು ಎನ್ನುವುದು ಗೂಢ ಸಂಗತಿ. ಆದರಿಂದು ಹೈದರಾಬಾದ್ ಬದಲಾದ ಜಾಗ. ಬದಲಾದ ಸಂಸ್ಕೃತಿಯ ಪ್ರತೀಕವನ್ನು ಅಕಬರ್.ಎಸ್.ಅಹಮದ್ ಚಿತ್ರಿಸುತ್ತಾರೆ:
"ನೌಬತ್ ಪಹಾಡ್‌ನ ಮೇಲೆ, ಅದನ್ನು ಕಟ್ಟಿದವರ ಹೆಸರಿಗನುಸಾರವಾಗಿ "ಬಿರ್ಲಾ ಮಂದಿರ" ಎಂದುಕರೆಯಲ್ಪಡುವ ಈ ಮಂದಿರ ಇಡೀ ಹೈದರಾಬಾದನ್ನು ಆವರಿಸಿದೆ. ಒಂದು ಸಾವರ ಟನ್‌ಗಳ ಅಮೃತಶಿಲೆಯಿಂದ ಈ ಮಂದಿರವನ್ನು ನಿರ್ಮಿಸಿದವರು - ತಾಜಮಹಲ್ ನಿರ್ಮಿಸಿದರೆಂದು ಹೇಳಲ್ಪಡುವ ರಾಜಾಸ್ತಾನದ ಕುಶಲಕರ್ಮಿಗಳು. ರಾತ್ರೆಯ ವೇಳೆ ಹಾಸುವ ತೀಕ್ಷ್ಣಬೆಳಕು ಅದರಮೇಲೆ ಚೆಲ್ಲಿ ಅದು ಅನೇಕ ಮೈಲುಗಳ ದೂರಕ್ಕೂ ಕಾಣುತ್ತದೆ. ರಾತ್ರೆಯ ಕತ್ತಲಲ್ಲಿ ಪ್ಯಾರಿಸ್‌ನ 'sacre coeur'ನಂತೆ ಕಾಣುವ ಈಇಮಾರತು ನಗರವನ್ನೇ ಆಳುತ್ತದೆ. ಇದಕ್ಕೆ ಭಿನ್ನವಾಗಿ ನಗರದ ಹೃದಯವಾಗಿದ್ದ ಚಾರ್‌ಮಿನಾರ್ ಜೀವಂತ ಪ್ರತಿಮೆಯಾಗಿರದೇ, ಗಾಲಾಟೆ, ವಾಹನಗಳು, ಜನಜಂಗುಳಿಯ ನಡುವೆ ಪ್ರವಾಸಿಗಳ ಆಸಕ್ತಿಯಾಗಿ, ಪುರಾತತ್ವ ಇಲಾಖೆಗೆ ಸಂಸ್ಕೃತಿಯ ಪ್ರತೀಕವಾಗಿ, ಅನಾಥವಾಗಿ ನಿಂತಿದೆ."

ಆಗಸ್ಟ್, ೧೯೯೦


No comments:

Post a Comment